ಕಾವೇರಿ ಜಲ ವಿವಾದಕ್ಕೆ (Cauvery dispute) ಸಂಬಂಧಿಸಿ ರಾಜ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕೂಡಾ ನ್ಯಾಯ ಮರೀಚಿಕೆಯಾಗಿದೆ. ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶ ಮತ್ತು ಅದನ್ನು ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಗುರುವಾರ ನಡೆದ ಮಹತ್ವದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಜತೆಗೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಇದು ರಾಜ್ಯದ ಪಾಲಿಗೆ ಅತಿ ದೊಡ್ಡ ಹಿನ್ನಡೆ. ಎಲ್ಲ ಹಂತಗಳಲ್ಲಿ ಹಿನ್ನಡೆ ಅನುಭವಿಸಿದ ರಾಜ್ಯ ಕಡೆಪಕ್ಷ ಸುಪ್ರೀಂ ಕೋರ್ಟ್ ಆದರೂ ರಾಜ್ಯದ ಪರ ನಿಲ್ಲಬಹುದು ಎಂಬ ಆಶಾವಾದ ಹೊಂದಿತ್ತು. ಆದರೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಜಲ ತಜ್ಞರು, ನ್ಯಾಯ ತಜ್ಞರೇ ಇರುವ ಪ್ರಾಧಿಕಾರ ತೀರ್ಮಾನ ಸರಿಯಾಗಿಯೇ ಇರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಕರ್ನಾಟಕದ ಪಾಲಿಗೆ ನ್ಯಾಯದ ಬಾಗಿಲನ್ನು ಮುಚ್ಚಿದೆ.
ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನ್ಯಾಯವಾಗಿದೆ. ಮೊದಲನೆಯದು, ಸುಪ್ರೀಂ ಕೋರ್ಟ್ ಕರ್ನಾಟಕದ ಕುಡಿಯುವ ನೀರಿನ ಪರಿಸ್ಥಿತಿಯನ್ನು ಗಮನಿಸಿಯೇ ಇಲ್ಲ. ʻʻನಮಗೆ ಈಶಾನ್ಯ ಮುಂಗಾರಿನ ಭಾಗ್ಯ ಇಲ್ಲ. ಆದರೆ ತಮಿಳುನಾಡಿಗೆ ಇನ್ನೂ ಈಶಾನ್ಯ ಮಳೆ ಬರುವುದು ಬಾಕಿ ಇದೆ. ನಮಗೆ ಕುಡಿಯುವ ನೀರಿನ ಅಗತ್ಯ ಇದೆ. ಅದರ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆʼʼ ಎಂದು ನಮ್ಮ ವಕೀಲರು ಹೇಳಿದ್ದನ್ನು ಕೋರ್ಟ್ ಕಿವಿಗೆ ಹಾಕಿಕೊಂಡಿಲ್ಲ. ಈ ನಡುವೆ, ಕರ್ನಾಟಕದ ರೈತರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ಮಾಡಿದ ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲೂ ಪೀಠ ನಿರಾಕರಿಸಿದೆ. ರಾಜ್ಯದ ಪರಿಸ್ಥಿತಿ ಕ್ಲಿಷ್ಟವಾಗಿದೆ. ಸುಪ್ರಿಂ ತೀರ್ಪು ಪಾಲನೆ ಮಾಡಿದ್ದೇ ಆದರೆ ದಿನಕ್ಕೆ 5 ಸಾವಿರದಂತೆ 15 ದಿನಕ್ಕೆ 75 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಲಿದೆ. 11 ಸಾವಿರ ಕ್ಯೂಸೆಕ್‌ಗೆ 1 ಟಿಎಂಸಿಯಂತೆ 50 ಸಾವಿರ ಕ್ಯೂಸೆಕ್‌ಗೆ ಸುಮಾರು 7 ಟಿಎಂಸಿ ನೀರು ಖಾಲಿಯಾಗಲಿದೆ. ಈಗ ಕೆಆರ್‌ಎಸ್‌ನಲ್ಲಿರುವ ನೀರು 20 tmc. ಇದರಲ್ಲಿ 5 tmc ಡೆಡ್ ಸ್ಟೋರೇಜ್. ಉಳಿದ 13 tmcಯಲ್ಲಿ 5 tmc ನೀರು ತಮಿಳುನಾಡಿಗೆ ಬಿಟ್ಟರೆ ನಮ್ಮ ಬಳಕೆಗೆ ಕೇವಲ 8 tmc ನೀರು ಉಳಿಯಲಿದೆ. ಈ 8 tmcಯಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ನಗರಗಳ ಜನರಿಗೆ ಕುಡಿಯುವ ನೀರಿಗೆ ತಿಂಗಳಿಗೆ 2 tmc ನೀರು ಬೇಕು. 8 ಟಿಎಂಸಿಯಲ್ಲಿ ನಾಲ್ಕು ತಿಂಗಳಿಗಷ್ಟೇ ನೀರು ಬಳಕೆ ಸಾಧ್ಯ. ಇದು ಕೇವಲ ಕುಡಿಯುವ ನೀರಿನ ಲೆಕ್ಕಾಚಾರ. ನೀರಾವರಿಯ ಯಾವ ಲೆಕ್ಕವನ್ನೂ ಇದು ಒಳಗೊಂಡಿಲ್ಲ. ಇದರ ಜತೆಗೆ ಕೆಆರ್‌ಎಸ್‌ನಿಂದ ಈಗಾಗಲೇ ಸಾಕಷ್ಟು ಹೊರಹರಿವು ಇದೆ. ಈ ಮೂಲಕ ಕಳೆದುಹೋಗುವ ನೀರಿನ ಲೆಕ್ಕ ಕೊಟ್ಟಿಲ್ಲ. ಅದೆಲ್ಲವನ್ನೂ ಸೇರಿಸಿದರೆ ಕೆಆರ್‌ಎಸ್ ಬರಿದಾಗುವುದು ಖಚಿತ.
ʼʼCWRC ಮತ್ತು CWMA ಎರಡರಲ್ಲೂ ಜಲ, ಕೃಷಿ ತಜ್ಞರು ಇದ್ದಾರೆ. ಬರ, ಮಳೆ ಕೊರತೆ ಆಧರಿಸಿ ತೀರ್ಮಾನ ಕೈಗೊಂಡಿದ್ದಾರೆ. ಸರಾಸರಿ ಒಳಹರಿವು ಕಡಿಮೆ ಆಗಿದೆ. ಸಂಕಷ್ಟ ಪರಿಸ್ಥಿತಿ ಈಗಲೂ ಇದೆ. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆʼʼ ಎಂದು ನ್ಯಾಯಮೂರ್ತಿಗಳು ಟಿಪ್ಪಣಿ ಮಾಡಿದರೂ, ʼಸಮಿತಿ ಮತ್ತು ಪ್ರಾಧಿಕಾರಗಳ ಅದೇಶಗಳನ್ನು ತಡೆಹಿಡಿಯಲು ಸಾಧ್ಯ ಇಲ್ಲʼ ಎಂದಿದ್ದಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಯದು. ಮೇಕೆದಾಟು ಯೋಜನೆಗೆ ಅನುಮತಿ ಕೊಡುವ ಬಗ್ಗೆಯೂ ಅವರು ಪ್ರಾಧಿಕಾರದತ್ತ ಬೊಟ್ಟು ಮಾಡಿದರು. ಅತ್ತ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕೇಂದ್ರದ ಪರವಾಗಿ ವಾದ ಮಾಡಿದ ಮುಕುಲ್ ರೋಹಟ್ಗಿ ಅವರು, ಕರ್ನಾಟಕದವರು ಕರ್ನಾಟಕದ ಪರಿಸ್ಥಿತಿ ಆದ್ಯತೆಗೆ ತೆಗೆದುಕೊಂಡಿದ್ದಾರೆ. ಆದರೆ ತಮಿಳುನಾಡಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಮಿಳುನಾಡಿಗೆ ಮಳೆ ತರುವ ಈಶಾನ್ಯ ಮುಂಗಾರು ಕೂಡಾ ಕೊರತೆಯಾಗಲಿದೆ ಎಂದೇ ತಮಿಳುನಾಡಿನ ಪರ ವಾದಿಸಿದರು.
ಇನ್ನೊಂದು ಕಡೆ, ಒಂದು ದಿನದ ಹಿಂದೆ ದಿಲ್ಲಿಯಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು ರಾಜ್ಯದ ಸಚಿವರ, ಎಲ್ಲ ಪಕ್ಷದ ಸಂಸದರನ್ನು ಸೇರಿಸಿ ಭೋಜನಕೂಟ ಸಭೆಯನ್ನು ನಡೆಸಿದ್ದರು. ಈ ಸಭೆಯ ಬಳಿಕವೂ ಬಿಜೆಪಿ ಸಂಸದರು ರಾಜ್ಯ ಸರ್ಕಾರದ ದೋಷಗಳತ್ತ ಬೊಟ್ಟು ಮಾಡಿದರೇ ಹೊರತು ಏನೇ ಪರಿಸ್ಥಿತಿ ಬಂದರೂ ತಾವು ರಾಜ್ಯದ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಲಿಲ್ಲ. ಮೊದಲು ನೀರು ಬಿಟ್ಟದ್ದೇಕೆ, ಈಗ ನಮ್ಮನ್ನು ಮಾತನಾಡಿಸುತ್ತಿರುವುದೇಕೆ ಎಂದು ಟೀಕಿಸಿದರು. ಆ ಮೂಲಕ ಕರ್ನಾಟಕದ ನಾಯಕರಲ್ಲಿ ಇರುವ ಬಿಕ್ಕಟ್ಟನ್ನು ಜಗಜ್ಜಾಹೀರು ಮಾಡಿದರು. ಮೊದಲೇ ಸರ್ಕಾರ ಗಟ್ಟಿಯಾಗಿ ನಿಂತು, ನೀರು ಬಿಡುವುದಿಲ್ಲ ಎಂಬ ಸಂದೇಶವನ್ನು ದೃಢವಾಗಿ ಹೇಳಬೇಕಿತ್ತು ಎಂಬುದೇನೋ ನಿಜ. ವಿಪಕ್ಷ ಒಕ್ಕೂಟದಲ್ಲಿ ಜೊತೆಗಿರುವ ಪಕ್ಷ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವುದರಿಂದ, ಅದನ್ನು ಕಟುವಾಗಿ ಟೀಕಿಸಲು ಸಿದ್ದರಾಮಯ್ಯನವರು ಹಿಂಜರಿದಿರುವುದೂ ಎದ್ದು ಕಾಣಿಸುತ್ತಿದೆ. ಆದರೆ ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಎಲ್ಲ ಸಚಿವರು, ಸಂಸದರು, ಪಕ್ಷಗಳ ನಾಯಕರು ಒಂದಾಗಿದ್ದಾರೆ. ಆ ಒಗ್ಗಟ್ಟು ಕರ್ನಾಟಕದವರಲ್ಲೂ ಕಾಣಿಸುವುದು ಬೇಡವೇ? ನಮಗಾದ ಅನ್ಯಾಯಕ್ಕೆ ಇನ್ಯಾರು ಕಾರಣ? ನಾವೇ ಅಲ್ಲವೇ?
ಈ ಸಂಪಾದಕೀಯವನ್ನೂ ಓದಿ:ವಿಸ್ತಾರ ಸಂಪಾದಕೀಯ: ಮಹಿಳಾ ಮೀಸಲು ವಿಧೇಯಕ ಐತಿಹಾಸಿಕ
ಅಂತೂ ಎಲ್ಲವೂ ಸೇರಿಕೊಂಡು ಕರ್ನಾಟಕವನ್ನು ಬಗ್ಗುಬಡಿದಿವೆ. ಈಗ ನೀರು ಇಟ್ಟುಕೊಂಡೂ ಬಿಡದೇ ಹೋಗಿರುವ ಕರ್ನಾಟಕವೇ ಖಳನಾಯಕನಾಗಿ ಲೋಕದ ಕಣ್ಣಿಗೆ ಕಾಣಿಸಿಕೊಂಡಿದೆ. ಸಿಎಂ ಸಂಕಷ್ಟ ಸೂತ್ರ ಇಲ್ಲ ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ಮಳೆ ಯದ್ವಾತದ್ವಾ ವ್ಯತ್ಯಾಸವಾಗಲಿದೆ ಎಂಬುದು ಖಚಿತ. ಆದ್ದರಿಂದ ಸಂಕಷ್ಟವೂ ಪ್ರತಿವರ್ಷ ಎದುರಾಗಲಿರುವುದೂ ಖಚಿತ. ಸಂಕಷ್ಟ ಸೂತ್ರವನ್ನು ಈಗಲೇ ರೂಪಿಸಿಕೊಳ್ಳದಿದ್ದರೆ ನಮ್ಮ ರೈತರಿಗೆ ಸರ್ವನಾಶ ಕಾದಿದೆ. ಕಾವೇರಿ ಸಂಕಷ್ಟ ಆಳುವವರಿಗೆ ಬೆಂಕಿಯ ಹಾಗೆ ಎಂಬುದನ್ನು ಹಳೆಯ ದೃಷ್ಟಾಂತಗಳು ಖಚಿತಪಡಿಸಿವೆ. ರೈತರು ಕೆರಳಿದ್ದಾರೆ. ಕಾವೇರಿ ಭಾವನಾತ್ಮಕ ವಿಚಾರವೂ ಹೌದು. ಈಗಲೂ ರಾಜಕೀಯ ಜಾಣ್ಮೆ, ಒಗ್ಗಟ್ಟು, ಕಾನೂನು ಹೋರಾಟ, ಇತ್ಯಾದಿಗಳ ಮೂಲಕ ಇದನ್ನು ಪರಿಹರಿಸಬೇಕಿದೆ. ಹಳೆಯ ಅನಾಹುತಗಳು ಮರುಕಳಿಸುವುದು ಬೇಡ.