ವಿಸ್ತಾರ ಸಂಪಾದಕೀಯ: ಮಹಿಳಾ ಮೀಸಲು ವಿಧೇಯಕ ಐತಿಹಾಸಿಕ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಹಿಳಾ ಮೀಸಲು ವಿಧೇಯಕ ಐತಿಹಾಸಿಕ

ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಎಂಬುದು ಮುತ್ಸದ್ದಿಗಳ ಎಂದಿನ ಆಶಯ. ಸಂವಿಧಾನವೂ ಇದನ್ನೇ ಸಾರುತ್ತದೆ. ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಆಶಯದ ʼಮಹಿಳಾ ಮೀಸಲು ವಿಧೇಯಕʼ ಸಂಸತ್ತಿನಲ್ಲಿ 27 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿತ್ತು. ಇದೀಗ ನರೇಂದ್ರ ಮೋದಿ ಸರ್ಕಾರದ ದಿಟ್ಟ ನಿರ್ಧಾರದಿಂದಾಗಿ ಇದು ಸಾಕಾರಗೊಂಡಿದೆ.

VISTARANEWS.COM


on

Womne Empowerment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸ ಸಂಸತ್ ಭವನದಲ್ಲಿ ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನ (Parliament Special Session) ಸಾರ್ಥಕವಾಗಿದೆ. ಲೋಕಸಭೆಯು ಬುಧವಾರ ಮಹಿಳಾ ಮೀಸಲು ವಿಧೇಯಕಕ್ಕೆ ತನ್ನ ಅಂಗೀಕಾರವನ್ನು ನೀಡಿದೆ. ಇದಕ್ಕೂ ಮೊದಲು ಎರಡು ದಿನಗಳ ಕಾಲ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಈ ಮಹಿಳಾ ಮೀಸಲು ವಿಧೇಯಕ ಕುರಿತು ವ್ಯಾಪಕ ಚರ್ಚೆ ನಡೆಸಿವೆ. ಮಹಿಳಾ ಮೀಸಲು ವಿಧೇಯಕದ ಪರ 454 ಸಂಸದರು ಮತ ಚಲಾಯಿಸಿದರೆ, ಇಬ್ಬರು ಸಂಸದರು ಮಾತ್ರ ವಿರುದ್ಧ ಮತ ಹಾಕಿದರು. ಈ ಮೀಸಲು ವಿಧೇಯಕ ಇನ್ನು ರಾಜ್ಯಸಭೆಯಲ್ಲೂ ಅಂಗೀಕೃತವಾಗಬೇಕಿದೆ. ಇದು ಶಾಸನವಾಗಿ ಜಾರಿಯಾದ ಬಳಿಕ ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ದೊರೆಯಲಿದೆ. ಇದೊಂದು ಐತಿಹಾಸಿಕ ಶಾಸನವೆನಿಸಲಿದೆ. (Vistara Editorial)

ಲೋಕಸಭೆಯಲ್ಲಿ ಮಹಿಳಾ ಮೀಸಲು ಬಗ್ಗೆ ಸಾಕಷ್ಟು ಚರ್ಚೆಯೂ ಆಗಿದೆ. ಕಾಂಗ್ರೆಸ್‌ ಸಂಸದೆ ಸೋನಿಯಾ ಗಾಂಧಿಯವರು ಇದು ಕಾಂಗ್ರೆಸ್‌ನ ಕೊಡುಗೆ ಎಂದಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಮುಸ್ಲಿಮ್ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿದರೆ, ಬಿಜೆಪಿ ಸಂಸದೆ ಸ್ಮೃತಿ ಇರಾನಿ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲು ಕಲ್ಪಿಸಲು ಅವಕಾಶವಿಲ್ಲ ಎಂದಿದ್ದಾರೆ. ಎನ್‌ಸಿಪಿ, ಎಸ್‌ಪಿ ನಾಯಕಿಯರು ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ, ಓವೈಸಿ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಿಗೆ ಆಗ್ರಹಿಸಿದ್ದಾರೆ. ಇಂಥ ಚರ್ಚೆಗಳು ಆಗಬೇಕಾದದ್ದೇ. ಸದ್ಯ ಮಹಿಳೆಯರಿಗೆ 33% ಮೀಸಲು ಸಿಗಲಿ; ಉಳಿದದ್ದನ್ನು ಆಮೇಲೆ ನೋಡಿಕೊಳ್ಳಬಹುದು. 2029ರ ಮೊದಲು ಈ ಶಾಸನ ಜಾರಿಗೆ ಬರುವ ಸಂಭವವಿಲ್ಲ ಎಂಬ ಸೋನಿಯಾ ಗಾಂಧಿಯವರ ಆತಂಕವೂ ಆಲೋಚನೆಗೆ ಅರ್ಹವಾದುದು. ಮುಖ್ಯವಾಗಿ ಪಕ್ಷಭೇದ ಮರೆತು ಎಲ್ಲ ಸಂಸದರೂ (ಇಬ್ಬರನ್ನು ಹೊರತುಪಡಿಸಿ) ಈ ವಿದೇಯಕವನ್ನು ಬೆಂಬಲಿಸಿರುವುದು ಐತಿಹಾಸಿಕ.

ಈ ಮಹಿಳಾ ಮೀಸಲು ವಿಧೇಯಕ ಭಾರತದಂಥ ದೇಶದಲ್ಲಿ ಏಕೆ ಮುಖ್ಯ? ಭಾರತವೂ ಸೇರಿದಂತೆ ವಿಶ್ವದ ಸರಿಸುಮಾರು ಅರ್ಧದಷ್ಟು ಜನಸಂಖ್ಯೆ ಸ್ತ್ರೀಯರು. ಆದರೆ ಸ್ತ್ರೀಯರ ಹಕ್ಕುಗಳ ಬಗ್ಗೆ ಹೆಚ್ಚಿನವರು ಅಜ್ಞರು. ಇಂದಿಗೂ ವಿಶ್ವದ ಹಲವು ಕಡೆ ಸ್ತ್ರೀ ಎರಡನೇ ದರ್ಜೆಯ ಪ್ರಜೆ. ಹೀಗಾಗಿ ಸ್ತ್ರೀಯರ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು, ಮಹಿಳೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣದ ಉಪಕ್ರಮಗಳನ್ನು ಕೈಗೆತ್ತಿಕೊಳ್ಳುವುದು ಮುಖ್ಯ. ಮಹಿಳೆಯರ ವಿರುದ್ಧದ ಹಿಂಸೆ ಮತ್ತು ನಿಂದನೆಯಂತಹ ವಿಷಯಗಳ ಬಗ್ಗೆಯೂ ಹೆಚ್ಚು ಸೂಕ್ಷ್ಮವಾದ ಕಾನೂನುಗಳು ರಚನೆಯಾಗುತ್ತಿವೆ. ಇದೂ ಗಮನಾರ್ಹ. ಜನತೆ ಲಿಂಗ ಸಮಾನತೆಯ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ. ಸಮಾಜದ ಎಲ್ಲ ವಲಯಗಳಲ್ಲೂ ಮಹಿಳೆಯರ ಸ್ಥಾನಮಾನ ಹೆಚ್ಚುತ್ತಿದೆ. ಆದರೆ ಅದಕ್ಕನುಗುಣವಾಗಿ ಶಾಸನಸಭೆಗಳಲ್ಲಿ ಪ್ರಾತಿನಿಧ್ಯವಿರಲಿಲ್ಲ. ಇದೊಂದು ಕೊರತೆಯಾಗಿತ್ತು.

ಹಾಗೆ ನೋಡುವುದಾದರೆ ದೇಶದ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಮುಂತಾದ ಅತ್ಯುನ್ನತ ಸ್ಥಾನಗಳನ್ನು ಮಹಿಳೆ ಅಲಂಕರಿಸಿದ್ದಾಳೆ. ಮಿಲಿಟರಿಯ ಪ್ರಮುಖ ಅತ್ಯುನ್ನತ, ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆ ಇದ್ದಾಳೆ. ಖ್ಯಾತ ಬೃಹತ್‌ ಕಂಪನಿಗಳ ಅತ್ಯುನ್ನತ ಸಿಇಒ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಆದರೆ ಪ್ರಾತಿನಿಧ್ಯ ಎಂಬ ವಿಚಾರಕ್ಕೆ ಬಂದಾಗ, ಆಳುವ ಶಾಸಕಾಂಗದಲ್ಲಿ ಮಹಿಳೆಗೆ ಎಷ್ಟು ಸ್ಥಾನವಿದೆ ಎಂಬುದೂ ಮುಖ್ಯವಾಗುತ್ತದೆ. ನಮ್ಮ ಲೋಕಸಭೆಯಲ್ಲಿ 543 ಹಾಗೂ ರಾಜ್ಯಸಭೆಯಲ್ಲಿ 245 ಸದಸ್ಯ ಸ್ಥಾನಗಳಿವೆ. ಜನಸಂಖ್ಯೆಯಲ್ಲಿ ಅರ್ಧ ಎಂದರೆ ಇದರ ಅರ್ಧದಷ್ಟಾದರೂ, ಅಂದರೆ 394ರಷ್ಟಾದರೂ ಮಹಿಳಾ ಎಂಪಿಗಳಿರಬೇಕಿತ್ತು. ಆದರೆ ಈಗ ಲೋಕಸಭೆಯಲ್ಲಿ ಇರುವ ಮಹಿಳಾ ಸದಸ್ಯರ ಸಂಖ್ಯೆ 78 ಆಗಿದ್ದರೆ, ರಾಜ್ಯಸಭೆಯಲ್ಲಿ ಇವರ ಪ್ರಮಾಣ 25 ಮಾತ್ರ. ಅಂದರೆ ಒಟ್ಟು ಸಂಸತ್‌ ಸದಸ್ಯರಲ್ಲಿ ಮಹಿಳೆಯರ ಪಾಲು ಶೇ.13 ಮಾತ್ರ (ಒಟ್ಟು 103). ದೇಶದ ಮೊದಲ ಚುನಾವಣೆ ನಡೆದಾಗಲೂ ಹೆಚ್ಚು ಕಡಿಮೆ ಇಷ್ಟೇ ಇತ್ತು. ಕರ್ನಾಟಕದಲ್ಲಿ ಇದಕ್ಕಿಂತ ಕಡಿಮೆ ಪ್ರಮಾಣದ ಅಂಕಿಅಂಶಗಳನ್ನು ಕಾಣಬಹುದು. 224 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಸಂಖ್ಯೆ ಕೇವಲ 11 (ಶೇ.5). ಅಂದರೆ ಶಾಸಕಾಂಗದಲ್ಲಿ ಮಹಿಳಾ ಪ್ರಾತಿನಿಧ್ಯದಲ್ಲಿ ನಾವು ಏನು ಸಾಧಿಸಿದಂತಾಗಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕೆನಡಾದ ಉದ್ಧಟತನಕ್ಕೆ ತಕ್ಕ ಪಾಠ ಕಲಿಸಬೇಕಿದೆ

ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಎಂಬುದು ಮುತ್ಸದ್ದಿಗಳ ಎಂದಿನ ಆಶಯ. ಸಂವಿಧಾನವೂ ಇದನ್ನೇ ಸಾರುತ್ತದೆ. ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಆಶಯದ ʼಮಹಿಳಾ ಮೀಸಲು ವಿಧೇಯಕʼ ಸಂಸತ್ತಿನಲ್ಲಿ 27 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿತ್ತು. ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿಡಬೇಕು ಎಂಬುದು ಈ ವಿಧೇಯಕದ ಪ್ರಮುಖ ಅಂಶ. ಈವರೆಗೆ ಒಟ್ಟು ಐದು ಬಾರಿ ಈ ವಿಧೇಯಕ ಮತ್ತೆ ಮತ್ತೆ ಮಂಡನೆಯಾಗಿದೆ. ಇದುವರೆಗೆ ಅಂಗೀಕಾರವಾಗದೆ ಉಳಿಯಲು ಕಾರಣ ಪಕ್ಷಗಳ ಹಿಂಜರಿಕೆ, ಮೌಢ್ಯ, ಇಚ್ಛಾಶಕ್ತಿಯ ಕೊರತೆ. ಮಹಿಳಾ ಸಬಲೀಕರಣದ ಮಂತ್ರವನ್ನು ಆಯಕಟ್ಟಿನ ಹೊತ್ತಿನಲ್ಲಿ ಪಠಿಸುವ ರಾಜಕೀಯ ಪಕ್ಷಗಳ್ಯಾವುವೂ ಈ ವಿಧೇಯಕವನ್ನು ಅಂಗೀಕಾರ ಮಾಡುವ ಗೋಜಿಗೇ ಹೋಗಿರಲಿಲ್ಲ. ಇದೀಗ ವಿಧೇಯಕವನ್ನು ಶಾಸನವಾಗಿಸಿ ಜಾರಿಗೆ ತರಲು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ದಿಟ್ಟತನ, ಇಚ್ಛಾಶಕ್ತಿ ಮುಖ್ಯ ಪಾತ್ರ ವಹಿಸಿದೆ. 27 ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೇ ಇದನ್ನು ಮಾಡಬಹುದಿತ್ತು; ಆದರೆ ಮಾಡಿರಲಿಲ್ಲ. ಈಗಲಾದರೂ ಈ ಕನಸು ನನಸಾಗುತ್ತಿರುವುದು ಸ್ವಾಗತಾರ್ಹ. ಗ್ರಾಮೀಣ ಪಂಚಾಯಿತಿ ವ್ಯವಸ್ಥೆಯಲ್ಲಿ ಈ ಶೇ.33 ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿದೆ. ಉನ್ನತ ಮಟ್ಟದಲ್ಲಿಯೂ ಆದಷ್ಟು ಬೇಗನೆ ಜಾರಿಯಾಗಬೇಕು. ರಾಜ್ಯಸಭೆಯಲ್ಲೂ ಇದು ಅಂಗೀಕೃತಗೊಂಡು, ಆದಷ್ಟು ಬೇಗನೆ ಶಾಸನವಾಗಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಅನುಕೂಲಗಳವಾಗಿವೆ. ಇದು ಹವಾಮಾನ ಬದಲಾವಣೆ ನಿಯಂತ್ರಣಕ್ಕೂ ಕಾರಣವಾಗಲಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಸಾಧನೆಯಾಗಿದೆ.

VISTARANEWS.COM


on

Solar
Koo

ಹವಾಮಾನ ಬದಲಾವಣೆ (Climate Change), ಜಾಗತಿಕ ತಾಪಮಾನ ಏರಿಕೆ ಕುರಿತು ಜಗತ್ತಿನಾದ್ಯಂತ ಚರ್ಚೆಗಳು, ಪರಿಹಾರಕ್ಕಾಗಿ ಯೋಜನೆ ರೂಪಿಸುವುದು ಸೇರಿ ಹತ್ತಾರು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಚಳಿಗಾಲದಲ್ಲೂ ಬಿರುಬಿಸಿಲು, ಬೇಸಿಗೆಯಲ್ಲಿ ಅಕಾಲಿಕ ಮಳೆ, ಕಾಡುಗಳು ಇರುವ ಪ್ರದೇಶದಲ್ಲೂ ಹೆಚ್ಚಿದ ತಾಪ ಸೇರಿ ಹಲವು ಪರಿಣಾಮಗಳು ಹವಾಮಾನ ಬದಲಾವಣೆಗೆ ಹಿಡಿದ ಕನ್ನಡಿಯೇ ಆಗಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ (Solar Power Generation) ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಹಾಗಾಗಿ, ಇದು ಮರುಮಾತೇ ಇಲ್ಲದೆ ಶ್ಲಾಘನೀಯ ಸಾಧನೆ ಎಂದು ಹೇಳಬಹುದಾಗಿದೆ.

2015ರಲ್ಲಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು 9ನೇ ಸ್ಥಾನದಲ್ಲಿತ್ತು. ಆದರೆ, 2015ರಿಂದ 2023ರ ಅವಧಿಯಲ್ಲಿ ಭಾರತವು ಆರು ಪಟ್ಟು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದೇ ಮೂರನೇ ಸ್ಥಾನಕ್ಕೇರಲು ಕಾರಣವಾಗಿದೆ. 2023ರಲ್ಲಿ ಜಾಗತಿಕ ವಿದ್ಯುತ್‌ ವಲಯದಲ್ಲಿ ದಾಖಲೆಯ ಶೇ. 5.5ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ. ಆದರೆ, ಭಾರತದಲ್ಲಿ ಸೌರ ಶಕ್ತಿಯಿಂದ ಶೇ. 5.8ರಷ್ಟು ವಿದ್ಯುತ್‌ ಉತ್ಪಾದಿಸಲಾಗಿದೆ ಎಂದು ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ (Ember) ತಿಳಿಸಿದೆ. ಇದು ಭಾರತವು ಸೌರ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸುವಲ್ಲಿ ಕಂಡುಕೊಂಡರುವ ವೇಗಕ್ಕೆ ಸಾಕ್ಷಿಯಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯು 2015ರಲ್ಲಿದ್ದ ಶೇ. 0.5ರಿಂದ 2023ಕ್ಕೆ ಶೇ. 5.8ಕ್ಕೆ ಏರಿಕೆಯಾಗಿದೆ ಎಂದು ಎಂಬರ್‌ ತನ್ನ ವರದಿಯಲ್ಲಿ ಕಂಡುಕೊಂಡಿದೆ. ಇಂಟರ್‌ ನ್ಯಾಷನಲ್‌ ಎನರ್ಜಿ ಏಜೆನ್ಸಿಯ(IEA) ಪ್ರಕಾರ, 2030ರ ವೇಳೆಗೆ ಸೌರ ವಿದ್ಯುತ್ ಉತ್ಪಾದನೆಯು ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ. 22ಕ್ಕೆ ಏರಿಕೆಯಾಗಲಿದೆ. ಭಾರತದ ವಾರ್ಷಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಅರ್ಧದಷ್ಟು (2023ರಲ್ಲಿ 1.18 ಗಿಗಾಟನ್) ವಿದ್ಯುತ್ ಉತ್ಪಾದನೆ ಕಾರಣವಾಗುತ್ತಿರುವುದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿಕೊಂಡಿದೆ. ಆದರೆ, ಭಾರತವು ಗಣನೀಯವಾಗಿ ಸೌರ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವುದರಿಂದ ಪರಿಸರದ ಮೇಲಿನ ಪರಿಣಾಮಕ್ಕೂ ಭಾರತ ಪರಿಹಾರ ಕಂಡುಕೊಳ್ಳುವಂತಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಈಗ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಭಾರತವು ಇನ್ನಷ್ಟು ಸಾಧನೆ ಮಾಡಿದರೂ ಅಚ್ಚರಿ ಇಲ್ಲ. ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಮುನ್ನಡೆಯಾಗಿವೆ. ಅದರಲ್ಲೂ, ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಸುವುದು ಕಷ್ಟವಾಗುವ ಜತೆಗೆ ಖಜಾನೆಗೂ ಹೊರೆಯಾಗುತ್ತದೆ. ಇದಕ್ಕೆ ಸೌರ ವಿದ್ಯುತ್‌ ಉತ್ಪಾದನೆಯೇ ರಾಜಮಾರ್ಗವಾಗಿದೆ.

ಹವಾಮಾನ ಬದಲಾವಣೆ ಕುರಿತು ಭಾರತ ಜಾಗತಿಕ ವೇದಿಕೆಗಳಲ್ಲಿ ಭಾರತವು ಪ್ರಬಲವಾಗಿ ಪ್ರತಿಪಾದನೆ ಮಾಡುತ್ತದೆ. ಹವಾಮಾನ ನಿಯಂತ್ರಣದ ಕುರಿತು ನರೇಂದ್ರ ಮೋದಿ ಅವರು ಮಾತನಾಡುತ್ತಾರೆ. ಹವಾಮಾನ ಬದಲಾವಣೆ ವಿರುದ್ಧದ ಸಮರದ ತಂಡದಲ್ಲಿ ಭಾರತವೂ ಪ್ರಮುಖ ಸದಸ್ಯವಾಗಿದೆ. ಇದೇ ಕಾರಣಕ್ಕಾಗಿ, ಸೌರ ವಿದ್ಯುತ್‌ ಉತ್ಪಾದನೆಯ ಸಾಧನೆಯು ಜಗತ್ತಿಗೇ ಮಾದರಿಯಾಗಿದೆ. ಇನ್ನು ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ವಿಕಸಿತ ಭಾರತದ ನಿರ್ಮಾಣಕ್ಕಿರುವ ಮಾನದಂಡಗಳಲ್ಲಿ ಸೌರ ವಿದ್ಯುತ್‌ ಕ್ಷೇತ್ರದ ಸಾಧನೆಯು ಪ್ರಮುಖವಾಗಿದೆ. ಹಾಗಾಗಿ, ಜಪಾನ್‌ಗಿಂತ ಭಾರತ ಮುಂದೆ ಹೋಗಿರುವುದು ವಿಕಸಿತ ಭಾರತದತ್ತ ದಾಪುಗಾಲು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಭಾರತದ ಚುನಾವಣೆಯಲ್ಲಿ ಅಮೆರಿಕದ ಹಸ್ತಕ್ಷೇಪ ಖಂಡನೀಯ

ಅಮೆರಿಕದ ಹಿತಾಸಕ್ತಿ ಭಾರತದಲ್ಲಿ ಬಹಳಷ್ಟಿದೆ. ಅಲ್ಲಿನ ಮೆಡಿಕಲ್ ಲಾಬಿ, ಸೋಯಾ ಲಾಬಿ, ತೈಲ ಲಾಬಿ, ಶಸ್ತ್ರಾಸ್ತ್ರ ಲಾಬಿ ಇತ್ಯಾದಿಗಳು ಇಲ್ಲಿ ಪ್ರಭಾವ ಬೀರಲು ಯತ್ನಿಸುತ್ತಲೇ ಇರುತ್ತವೆ. ಉದಾಹರಣೆಗೆ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಬೇಡಿ ಎಂದು ಇತ್ತೀಚೆಗೆ ಬೆದರಿಕೆ ಒಡ್ಡಿತ್ತು. ಶಸ್ತ್ರಾಸ್ತ್ರಗಳಲ್ಲಿ ಸ್ವಾವಲಂಬನೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಬೆಳವಣಿಗೆ, ಸುಸ್ಥಿರ ಇಂಧನದಲ್ಲಿ ಮುನ್ನಡೆ, ರಾಷ್ಟ್ರೀಯವಾದಿ ಚಿಂತನೆಯ ಆಡಳಿತ ಇತ್ಯಾದಿಗಳು ಅಮೆರಿಕದ ಕಣ್ಣು ಕುಕ್ಕಿರಲೂಬಹುದು.

VISTARANEWS.COM


on

Joe Biden
Koo

ಅಮೆರಿಕದಲ್ಲಿ ಖಲಿಸ್ತಾನಿ ನಾಯಕ (Khalistan Leader) ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಯ ಸಂಚಿನಲ್ಲಿ (Murder plot) ಭಾರತದ ʼರಾʼ (RAW) ಅಧಿಕಾರಿಯ ಕೈವಾಡದ ಕುರಿತು ಅಮೆರಿಕ(America)ದ ಆರೋಪಕ್ಕೆ ತಿರುಗೇಟು ನೀಡಿದ್ದ ರಷ್ಯಾ(America v/s Russia), ಅಮೆರಿಕವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ ಎಂದು ಹೇಳಿತ್ತು. ಪನ್ನುನ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದ ಅಮೆರಿಕಕ್ಕೆ ಟಾಂಗ್‌ ನೀಡಿದ್ದ ರಷ್ಯಾ, ಭಾರತದಲ್ಲಿ ಆಂತರಿಕ ರಾಜಕೀಯ ಸ್ಥಿತಿಗತಿಯನ್ನು ಅಲ್ಲೋಲ ಕಲ್ಲೋಲ ಮಾಡಲು ಅಮೆರಿಕ ಯತ್ನಿಸುತ್ತಿದೆ. ಭಾರತೀಯ ರಾಷ್ಟ್ರೀಯತೆ ಮನಸ್ಥಿತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳದ ಅಮೆರಿಕ ಸುಖಾಸುಮ್ಮನೆ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆರೋಪ ಮಾಡುತ್ತಿದೆ. ಭಾರತದ ಆಂತರಿಕ ವಿಚಾರದಲ್ಲಿ ಅಮೆರಿಕ ನಿರಂತರವಾಗಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಭಾರತವನ್ನು ಗೌರವಿಸುವ ಮನಸ್ಸು ಅಮೆರಿಕಕ್ಕೆ ಇಲ್ಲ. ಅಮೆರಿಕದ ಆರೋಪಗಳು ಸುಳ್ಳು ಮತ್ತು ನಿರಾಧಾರವಾಗಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಹೇಳಿದೆ.

ರಷ್ಯಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ, ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಅಮೆರಿಕ ಎಂದಿಗೂ ಬಯಸುವುದಿಲ್ಲ. ಭಾರತ ಮಾತ್ರ ಅಲ್ಲ ಬೇರೆ ಯಾವುದೇ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದಿಲ್ಲ ಎಂದು ಹೇಳಿದೆ. ಈ ಮಾತಿನಲ್ಲಿ ಸತ್ಯವೆಷ್ಟಿದೆ, ಸುಳ್ಳೆಷ್ಟು ಎಂಬುದು ಇಡೀ ಜಗತ್ತಿಗೇ ಗೊತ್ತು. ಈ ಭೂಮಿಯಲ್ಲಿ ಎಲ್ಲ ದೇಶಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದೇಶ ಒಂದಿದ್ದರೆ ಅದು ಅಮೆರಿಕ. ರಷ್ಯ ಕೂಡ ಸುಮ್ಮಸುಮ್ಮನೇ ಆರೋಪ‌ ಮಾಡಲಾರದು. ಅದರ ಬೇಹುಗಾರಿಕೆ ಶಕ್ತಿ ಕೂಡ ಬಲವಾಗಿಯೇ ಇದೆ. ಹೀಗಾಗಿ ಅದು ಹಂಚಿಕೊಂಡಿರುವ ಮಾಹಿತಿ ಪೂರ್ತಿ ಸುಳ್ಳು ಎನ್ನಲಾಗುವುದಿಲ್ಲ. ರಷ್ಯ ಹಾಗೂ ಅಮೆರಿಕ ಸಾಂಪ್ರದಾಯಿಕ ವೈರಿಗಳಾಗಿರುವುದರಿಂದ, ಆ ಅಂಶವೂ ರಷ್ಯದ ಹೇಳಿಕೆಯ ಹಿಂದೆ ಸ್ವಲ್ಪ ಕೆಲಸ ಮಾಡಿರಬಹುದು ಅನ್ನೋಣ.

ಅನ್ಯ ದೇಶಗಳ ವಿಚಾರದಲ್ಲಿ ಮೂಗು ತೂರಿಸುವ ಅಮೆರಿಕದ ಚಾಳಿಗೆ ಸಾಕಷ್ಟು ಇತಿಹಾಸವಿದೆ. ಅದು ಕ್ಯೂಬಾದ, ರಷ್ಯದ ಅಧ್ಯಕ್ಷರ ಹತ್ಯೆಗೆ ಯತ್ನಿಸಿದೆ; ಅಫ್ಘಾನಿಸ್ತಾನವನ್ನು ಭಯೋತ್ಪಾದಕರನ್ನು ಬೆಳೆಸಿ ಪೂರ್ತಿ ನಾಶ ಮಾಡಿದೆ. ಪಾಕ್ ಅದೇ ಹಾದಿಯಲ್ಲಿದೆ. ಗಲ್ಫ್ ದೇಶಗಳಲ್ಲಿ ಅಮೆರಿಕದ ಮೂಗಿನ ನೇರಕ್ಕೆ ಕುಣಿಯದ ಇರಾನ್, ಟರ್ಕಿ, ಮುಂತಾದ ದೇಶಗಳನ್ನು ಬೆದರಿಸುತ್ತದೆ. ನ್ಯಾಟೋ ಮೂಲಕ ಯುರೋಪ್ ದೇಶಗಳನ್ನು ಕುಣಿಸುತ್ತಿದೆ. ಲ್ಯಾಟಿನ್ ಅಮೆರಿಕದ ಡ್ರಗ್ಸ್ ಜಾಲವನ್ನು ಗುಮ್ಮನಗುಸಕನಂತೆ ಪೋಷಿಸಿದೆ. ವಿಯೆಟ್ನಾಂ ಮೊದಲಾದ ದೇಶಗಳನ್ನು ನೇರ ಮಿಲಿಟರಿ ದಾಳಿ ಮೂಲಕ ಬಗ್ಗುಬಡಿಯಲು ಯತ್ನಿಸಿದೆ. ಅಮೆರಿಕ ಎಸಗದ ಕುಕೃತ್ಯವೇ ಇಲ್ಲ. ಇಂಥ ದೇಶದ ಮಿಲಿಟರಿ ಮತ್ತು ಬೇಹುಗಾರಿಕೆ ನಮ್ಮ ದೇಶದ ಚುನಾವಣೆಯಲ್ಲಿ ಕರಾಮತ್ತಿಗೆ ಮುಂದಾದರೆ ಆಶ್ಚರ್ಯವಿಲ್ಲ.

ಅಮೆರಿಕದ ಹಿತಾಸಕ್ತಿ ಭಾರತದಲ್ಲಿ ಬಹಳಷ್ಟಿದೆ. ಅಲ್ಲಿನ ಮೆಡಿಕಲ್ ಲಾಬಿ, ಸೋಯಾ ಲಾಬಿ, ತೈಲ ಲಾಬಿ, ಶಸ್ತ್ರಾಸ್ತ್ರ ಲಾಬಿ ಇತ್ಯಾದಿಗಳು ಇಲ್ಲಿ ಪ್ರಭಾವ ಬೀರಲು ಯತ್ನಿಸುತ್ತಲೇ ಇರುತ್ತವೆ. ಉದಾಹರಣೆಗೆ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಬೇಡಿ ಎಂದು ಇತ್ತೀಚೆಗೆ ಬೆದರಿಕೆ ಒಡ್ಡಿತ್ತು. ಭಾರತದ ರಸಗೊಬ್ಬರ ಸಬ್ಸಿಡಿ, ಭತ್ತದ ಇಳುವರಿಯ ಹೆಚ್ಚಳ ಇತ್ಯಾದಿಗಳ ಬಗ್ಗೆ ಅದರ ಕೊಂಕು ಇದೆ. ಶಸ್ತ್ರಾಸ್ತ್ರಗಳಲ್ಲಿ ಸ್ವಾವಲಂಬನೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಬೆಳವಣಿಗೆ, ಸುಸ್ಥಿರ ಇಂಧನದಲ್ಲಿ ಮುನ್ನಡೆ, ರಾಷ್ಟ್ರೀಯವಾದಿ ಚಿಂತನೆಯ ಆಡಳಿತ ಇತ್ಯಾದಿಗಳು ಅಮೆರಿಕದ ಕಣ್ಣು ಕುಕ್ಕಿರಲೂಬಹುದು. ಸದ್ಯ ಅದು ಪನ್ನುನ್ ಹತ್ಯೆ ಸಂಚಿನ ನೆಪ ಹಿಡಿದುಕೊಂಡು ಭಾರತಕ್ಕೆ ಮುಜುಗರ ಸೃಷ್ಟಿಸುವ ಯತ್ನದಲ್ಲಿದೆ. ಆದರೆ ಪನ್ನುನ್ ಭಾರತಕ್ಕೆ ಪೀಡಕನಾದ ಒಬ್ಬ ಭಯೋತ್ಪಾದಕ ಎಂಬುದನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ.

ಆದರೆ ಭಾರತ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಆಗದ ದಡ್ಡ ದೇಶವಲ್ಲ. ನಮಗೆ ನಮ್ಮದೇ ರಾಜನೀತಿಯಿದೆ, ಸಂವಿಧಾನವಿದೆ. ನಮ್ಮ ಸಾರ್ವಭೌಮತ್ವವನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನಮ್ಮ ಚುನಾವಣೆಗಳು ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕ. ಅಮೆರಿಕದ ಕೈವಾಡವನ್ನು ಪತ್ತೆ ಹಚ್ಚುವಷ್ಟು, ಅದನ್ನು ಮೊಳಕೆಯಲ್ಲೇ ನಿಗ್ರಹಿಸುವಷ್ಟು ಶಕ್ತವಾಗಿದೆ ನಮ್ಮ ಬೇಹುಗಾರಿಕೆ ಶಕ್ತಿ.

ಇದನ್ನೂ ಓದಿ: China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

SSLC Result 2024: ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ‌ ಮೊದಲ ಬಾರಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು.

VISTARANEWS.COM


on

karnataka SSLC result 2024
Koo

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶ ನೋಡಿ ಸಂತೋಷಪಡುವುದಕ್ಕೂ, ಗಾಬರಿಯಾಗುವುದಕ್ಕೂ ಕಾರಣಗಳಿವೆ.

ಮೊದಲನೆಯದಾಗಿ, ಕಳಪೆ ಫಲಿತಾಂಶ. ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್ ಆಗಿದ್ದಾರೆ. ಅಂದರೆ ಶೇಕಡಾ 10.49%ರಷ್ಟು ಫಲಿತಾಂಶ ಕುಸಿತವಾಗಿದೆ. ಆದರೆ ಇದು ಕೂಡ ನಿಜವಾದ ಕುಸಿತವಲ್ಲ. ಶಿಕ್ಷಣ ಇಲಾಖೆ ಈ ಬಾರಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿ ಹಿತದೃಷ್ಟಿಯಿಂದ ಗ್ರೇಸ್‌ ಮಾರ್ಕ್ಸ್‌ ನೀಡಲಾಗಿದೆ. ಒಟ್ಟು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಸಿಕ್ಕಿದೆ. ಇಷ್ಟಾಗಿಯೂ ಫಲಿತಾಂಶ ಮಾತ್ರ ಕಡಿಮೆಯೇ.

ಕೃಪಾಂಕಗಳ ಹಿಂದೊಂದು ಕತೆಯಿದೆ. ಹಲವು ಕಡೆ ಸಾಮೂಹಿಕ ನಕಲು ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದರ ಪರಿಣಾಮವೇ ಈ ಫಲಿತಾಂಶ. ಇದರಿಂದ ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಇದರಿಂದ ಗಾಬರಿ ಬಿದ್ದ ಇಲಾಖೆ, ವಿದ್ಯಾರ್ಥಿಗಳ ಹಾಗೂ ಒಟ್ಟಾರೆ ಶೈಕ್ಷಣಿಕ ಆವರಣದ ನೈತಿಕ ಸ್ಥೈರ್ಯ ಕುಸಿಯದಿರಲಿ ಎಂಬ ದೃಷ್ಟಿಯಿಂದ ಭಾರಿ ಪ್ರಮಾಣದ ಕೃಪಾಂಕ ನೀಡಿದೆ. ಇದೇನೂ ಒಳ್ಳೆಯ ಸುದ್ದಿಯಲ್ಲ. ನಕಲು ನಡೆಯುತ್ತಿದ್ದುದರಿಂದ ಉತ್ತಮ ಫಲಿತಾಂಶ ದೊರೆಯುತ್ತಿತ್ತು ಎಂಬುದನ್ನು ಇಲಾಖೆ ಒಪ್ಪಿಕೊಂಡ ಹಾಗಾಗಿದೆ. ವೆಬ್ ಕಾಸ್ಟಿಂಗ್ ಪರಿಣಾಮ ನಕಲು ನಿಂತುದು ಒಳ್ಳೆಯ ಸಂಗತಿಯೇ. ಆದರೆ ಇದು ಪಾರದರ್ಶಕ ಪರೀಕ್ಷೆಯಲ್ಲಿ ತನ್ಮೂಲಕ ಉತ್ತಮ ಫಲಿತಾಂಶದಲ್ಲಿ ಕೊನೆಯಾಗಬೇಕಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಪರೀಕ್ಷೆಯ ಮೇಲೆ ನಿಗಾ ಇಡಲು ದುಡ್ಡು ಖರ್ಚು ಮಾಡಿದರೆ ಸಾಲದು, ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೂ ಹಾಗೆಯೇ ವೆಚ್ಚ ಮಾಡಿದರೆ ಉತ್ತಮ ಫಲಿತಾಂಶ ಬಂದೀತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿರುವ, 625ರಲ್ಲಿ ಅಷ್ಟೂ ಅಂಕಗಳನ್ನೂ ಬಾಚಿಕೊಂಡಿರುವ ಅಂಕಿತಾ ಕೊನ್ನೂರ್‌ ಹಳ್ಳಿಯೊಂದರ ರೈತರ ಮಗಳು. ಇದು ಗ್ರಾಮೀಣ ಪ್ರತಿಭೆಯ ದಿಗ್ವಿಜಯ ಎನ್ನಬಹುದು. ಈಕೆಗೆ ಐಎಎಸ್‌ ಅಧಿಕಾರಿಯಾಗುವ ಕನಸು ಇದೆಯಂತೆ. ಬಾಗಲಕೋಟೆ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ. ಪಠ್ಯದ ಜೊತೆಗೆ ಲೈಬ್ರರಿ ಹಾಗೂ ಯುಟ್ಯೂಬ್ ಮಾಹಿತಿಯನ್ನೂ ಸೂಕ್ತವಾಗಿ ಬಳಸಿಕೊಂಡು ಈಕೆ ಟಾಪರ್ ಆಗಿದ್ದಾಳೆ. ಎಲ್ಲ ಮಕ್ಕಳಿಗೂ ಮಾದರಿಯಾಗಿರುವ ಈಕೆಯ ಅಭಿನಂದನೆಗಳು ಸಲ್ಲುತ್ತವೆ. ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ದೊರೆತರೆ ದೊಡ್ಡ ಸಾಧನೆ ಮಾಡಬಲ್ಲರು ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ಸಾಕು.

ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ‌ ಮೊದಲ ಬಾರಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು. ವಿಷಯವಾರು ಪರೀಕ್ಷೆಯನ್ನೂ ಬರೆಯಬಹುದು. ಎರಡು ಅಥವಾ ಮೂರು ಪರೀಕ್ಷೆಗಳಿಗೂ ಕುಳಿತುಕೊಳ್ಳಬಹುದು. ಯಾವುದೇ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಗರಿಷ್ಠ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇದು ಪರೀಕ್ಷಾ ವಿಧಾನದಲ್ಲಿ ಕ್ರಾಂತಿಕರ ಬದಲಾವಣೆ. ಈ ಬಾರಿ ಅನುತ್ತೀರ್ಣರಾದವರಿಗೆ ಹೇಗೂ ಪೂರಕ ಪರೀಕ್ಷೆ ಇದ್ದೇ ಇದೆ. ಆದ್ದರಿಂದ, ಇದೇ ನಿಜವಾಗಿಯೂ ಫಲಿತಾಂಶ ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು.

VISTARANEWS.COM


on

Sam Pitroda
Koo

ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಮ್ಮ ಹೇಳಿಕೆಗಳ ಮೂಲಕ ಹಾನಿಯೆಸಗುವ ಮಣಿಶಂಕರ ಅಯ್ಯರ್‌ ಮುಂತಾದವರ ಪರಂಪರೆಯನ್ನು ಕಾಂಗ್ರೆಸ್‌ ಪಕ್ಷದ ಭಾರತೀಯ ಸಾಗರೋತ್ತರ ವಿಭಾಗದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಮುಂದುವರಿಸುತ್ತಿರುವಂತಿದೆ. ದೇಶದ ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಸ್ಯಾಮ್‌ ಪಿತ್ರೋಡಾ ವಿವಾದ ಹುಟ್ಟುಹಾಕಿದ್ದಾರೆ. “ಭಾರತದಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಪಿತ್ರೋಡಾ ಹೇಳಿದ್ದಾರೆ.

ಸಹಜವಾಗಿಯೇ ಈ ಮಾತು ವಿವಾದ ಹುಟ್ಟುಹಾಕಿದೆ. ಇಂಥ ಅವಕಾಶವನ್ನು ಎಂದೂ ಕಳೆದುಕೊಳ್ಳದ ಪ್ರಧಾನಮಂತ್ರಿ ನರೇಂದ್ರ ಮೋದಿ, “ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್‌ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ. ಚರ್ಮದ ಬಣ್ಣದ ಆಧಾರದ ಮೇಲೆ ಭಾರತೀಯರಿಗೆ ಮಾಡುವ ಅವಮಾನವನ್ನು ಈ ದೇಶ ಸಹಿಸುವುದಿಲ್ಲ” ಎಂದು ಪಿತ್ರೋಡಾ ಮೇಲೆ ಹರಿಹಾಯ್ದಿದ್ದಾರೆ. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯ ಸ್ಪರ್ಧೆಯ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ಅಮೆರಿಕದಲ್ಲಿರುವ ‘ಶೆಹಜಾದಾ’ನ ಅಂಕಲ್‌ ಹಾಗೂ ಫಿಲಾಸಫಿ ಮಾರ್ಗದರ್ಶಕ (ಪಿತ್ರೋಡಾ) ಈ ‘ಶೆಹಜಾದಾ’ಗೆ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ ಸಲಹೆ ನೀಡುತ್ತಾರೆ” ಎಂದು ಕುಟುಕಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳಿವಳಿಕೆ ಬೆಳೆಸಿಕೊಳ್ಳಿ” ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು.

ಪಿತ್ರೋಡಾ ಅವರು ತಮ್ಮ ಮಾತನ್ನು ವಿಶ್ಲೇಷಣೆ ಎಂದುಕೊಂಡಿರುವಂತಿದೆ. ಆದರೆ ವಿಶ್ಲೇಷಣೆಗೂ ಜನಾಂಗೀಯ ನಿಂದನೆಗೂ ಅವರು ವ್ಯತ್ಯಾಸ ಗುರುತಿಸಿಕೊಳ್ಳಬೇಕಿದೆ. ದಕ್ಷಿಣ ಭಾರತೀಯರು ತುಸು ಕಪ್ಪಗಿದ್ದಾರೆ ಸರಿ; ಅಷ್ಟಕ್ಕೇ ಅವರು ಆಫ್ರಿಕನ್ನರಿಗೆ ಸಮವೋ? ಭಾರತದಲ್ಲಿ ಅತಿ ಹೆಚ್ಚಿನ ತೆರಿಗೆ ಉತ್ಪತ್ತಿಯಾಗುವುದು, ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವವರು ದಕ್ಷಿಣ ಭಾರತೀಯರು. ಇಲ್ಲಿನ ಸಂಸ್ಕೃತಿ ಅಲ್ಲಿಗಿಂತ ವಿಭಿನ್ನ. ಪೂರ್ವಭಾಗದವರು ಚೀನೀಯರಂತೆ ಕಾಣುತ್ತಾರೆ ಎನ್ನುವ ಮೂಲಕ, ʼಅರುಣಾಚಲ ನಮ್ಮದುʼ ಎನ್ನುತ್ತಿರುವ ಚೀನಾಕ್ಕೆ ಪಿತ್ರೋಡಾ ಸಹಾಯ ಮಾಡುತ್ತಿರುವಂತಿದೆ. ಭೌಗೋಳಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳು ಪ್ರತಿ ದೇಶದಲ್ಲೂ ಇದ್ದೇ ಇರುತ್ತವೆ. ಭಾರತ ವಿಶಾಲ ದೇಶವಾದುದರಿಂದ ಇಲ್ಲಿ ಹೆಚ್ಚಿನ ವೈವಿಧ್ಯವಿದೆ. ಆ ಕಾರಣಕ್ಕೇ ಇದು ಸಾಂಸ್ಕೃತಿಕವಾಗಿ ಶ್ರೀಮಂತವೂ ಆಗಿದೆ. ಇದು ಭಾರತದ ಶಕ್ತಿಯೇ ಹೊರತು, ಇನ್ನೊಂದರ ನಕಲು ಅಲ್ಲ. ನಾವು ನಮ್ಮನ್ನು ಬೇರೆ ದೇಶಗಳಿಗೆ ಚರ್ಮದ ಬಣ್ಣದಿಂದ ಹೋಲಿಸಿಕೊಳ್ಳಬೇಕಿಲ್ಲ. ಬೇಕಿದ್ದರೆ ಭೂತಾನಿನ ಆನಂದದ ಸ್ವಭಾವದ ಸೂಚ್ಯಂಕಕ್ಕೆ, ಜಪಾನಿನ ಪರಿಶ್ರಮದ ಗುಣಕ್ಕೆ, ಕೆರಿಬಿಯನ್ನರ ದೈಹಿಕ ಬಲಕ್ಕೆ ಹೋಲಿಸಿಕೊಳ್ಳೋಣ.

ಈ ಹಿಂದೆ ಮಣಿಶಂಕರ ಅಯ್ಯರ್‌ ಮುಂತಾದವರು ಹೀಗೆ ʼಸೆಲ್ಫ್‌ ಗೋಲ್‌ʼ ಅಥವಾ ʼಆತ್ಮಹತ್ಯಾ ದಾಳಿʼ ಮಾಡಿಕೊಳ್ಳುತ್ತಿದ್ದರು. ಇಂಥವರು ಸ್ವತಃ ತಮ್ಮ ಪಕ್ಷಕ್ಕೇ ತಮ್ಮ ಹೇಳಿಕೆಗಳಿಂದ ಗಂಡಾಂತರ ತಂದೊಡ್ಡುತ್ತಿರುತ್ತಾರೆ. 2017ರಲ್ಲಿ ಮಣಿಶಂಕರ ಅಯ್ಯರ್‌ ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಇತ್ತೀಚೆಗೆ ಅವರು ಪಾಕಿಸ್ತಾನದಲ್ಲಿ ನಿಂತು “ಭಾರತದ ಮೂರನೇ ಎರಡು ಭಾಗ ಜನ ಪಾಕ್‌ನತ್ತ ಬರಲು ಸಿದ್ಧರಿದ್ದಾರೆ” ಎಂದಿದ್ದರು. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ಸರದಾರʼ ಎಂದು ಕರೆದಿದ್ದರು. ಇತ್ತೀಚೆಗೆ ಗುಜರಾತ್‌ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿ, ನಿಂದಿಸಲ್ಪಟ್ಟವರು ಭಾರಿ ಬಹುಮತದಿಂದ ಗೆದ್ದಿದ್ದರು. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳದ ಜನನಾಯಕರು ಇಂಥ ಮಾತುಗಳನ್ನು ಬಳಸುತ್ತಾರೆ. ನಂತರ ನಾಲಿಗೆ ಕಚ್ಚಿಕೊಳ್ಳುತ್ತಾರೆ. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ.

ಇದನ್ನೂ ಓದಿ: Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Continue Reading
Advertisement
Dina Bhavishya
ಭವಿಷ್ಯ40 mins ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case
ಕರ್ನಾಟಕ6 hours ago

Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

IPL 2024
ಪ್ರಮುಖ ಸುದ್ದಿ6 hours ago

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

Chetan Chandra
ಕರ್ನಾಟಕ7 hours ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest7 hours ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ7 hours ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ7 hours ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ8 hours ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ8 hours ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ8 hours ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ40 mins ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ11 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ12 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ12 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ16 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ17 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ3 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

ಟ್ರೆಂಡಿಂಗ್‌