ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ (Janatha Darshan) ಜನರಿಂದ ಭಾರೀ ಸ್ಪಂದನ ದೊರೆತಿದೆ. 3500ಕ್ಕೂ ಹೆಚ್ಚು ಅರ್ಜಿಗಳನ್ನು ಮುಖ್ಯಮಂತ್ರಿಗಳು ಖುದ್ದು ಸ್ವೀಕರಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನಗಳ ಗಡುವನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಾಗರಿಕರು ತಮ್ಮ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದಿದ್ದರು. ಅಹವಾಲು ತಂದಿರುವವರ ಸಂಖ್ಯೆ ಇನ್ನೂ ಬಹಳಷ್ಟಿದೆ ಎಂಬ ಕಾರಣದಿಂದ ಮಧ್ಯಾಹ್ನದ ಊಟವನ್ನೂ ಅಹವಾಲು ಸ್ವೀಕರಿಸುವ ಟೇಬಲ್ಲಿಗೇ ಊಟ ತರಿಸಿಕೊಂಡು ಅಲ್ಲೇ ಊಟ ಸೇವಿಸಿ, ಜನತಾ ದರ್ಶನ ಮುಂದುವರಿಸಿ, ಸರ್ಕಾರಿ ಅಧಿಕಾರಿಗಳಿಗೂ ಮಾದರಿಯಾದರು. ಪ್ರತಿ ಸಮಸ್ಯೆಯನ್ನೂ ಖುದ್ದಾಗಿ ಪರಿಶೀಲಿಸಿ, ಆಯಾ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಪರಿಹಾರಕ್ಕೆ ಸೂಚಿಸಿದ್ದು ಸಿಎಂ ಕಾಳಜಿಯನ್ನು ಪ್ರದರ್ಶಿಸಿತು. ಇದು ಮಾದರಿ ನಡೆ, ಶ್ಲಾಘನೀಯ ಕಾರ್ಯಕ್ರಮ(Vistara Editorial).
ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕೆಲವೊಂದು ಕಿವಿಮಾತು ಸಹಿತ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬರಕೂಡದು. ಬಂದರೆ ಸಹಿಸುವುದಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಎಚ್ಚರಿಕೆಯನ್ನೂ ನೀಡಿದರು. ಸಮರ್ಪಕವಾಗಿ ಕಾರ್ಯನಿರ್ವಹಿಸಿ ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ ಎಂದು ತಾಕೀತು ಮಾಡಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ವೈದ್ಯಕೀಯ ವೆಚ್ಚ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳೇ ಹೆಚ್ಚಾಗಿ ಬಂದಿವೆ. ಇಂದು ನಡೆದ ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳಿಗೆ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ, ಪರಿಹಾರಕ್ಕೆ ನೀಡಲು ಯಾಕೆ ಸಾಧ್ಯವಿಲ್ಲ ಎಂದು ಲಿಖಿತ ಪತ್ರ ನೀಡಬೇಕು ಎಂದಿದ್ದಾರೆ ಸಿಎಂ. ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ನಡೆಸುವ, ತಾವೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸಂಬಂಧಿಸಿ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.
ಜನತಾದರ್ಶನ ಕಾರ್ಯಕ್ರಮದ ಆಶಯ ದೊಡ್ಡದೇ. ಆದರೆ ಜನ ಪಹಣಿ, ಪೋಡಿ, ಖಾತೆ ಮಾಡಿಸುವುದು ಮೊದಲಾದ ಚಿಲ್ಲರೆ ಕೆಲಸಗಳನ್ನು ಮಾಡಿಸಿಕೊಳ್ಳುವುದು ಕೂಡ ಸಾಧ್ಯವಾಗದೆ ನೊಂದು ನೇರ ಸಿಎಂ ಬಳಿಗೇ ಬರುತ್ತಾರೆ ಎಂದರೆ ಅಂಥ ಬ್ಯೂರಾಕ್ರಸಿಗೆ ಏನನ್ನಬೇಕು? ಜನರಿಗೆ ದೂರುಗಳಿದ್ದೇ ಇರುತ್ತವೆ. ಜನ ಯಾವಾಗ ಮಂತ್ರಿಗಳ ಬಳಿಗೆ ಬರುತ್ತಾರೆ ಎಂಬುದನ್ನೂ ಗಮನಿಸಬೇಕು. ತಾಲೂಕು ಪಂಚಾಯತು, ಜಿಲ್ಲಾ ಪಂಚಾಯತು, ನೋಂದಣಿ, ಕಂದಾಯ, ಹೀಗೆ ವಿಭಾಗವಾರು ಇಲಾಖೆಗಳಲ್ಲಿ ಕೇಸ್ವರ್ಕರ್ಗಳು ತಮ್ಮ ಅರ್ಜಿಗಳ ವಿಲೇವಾರಿ ಮಾಡಲು ವಿಫಲರಾದಾಗ, ಮೇಲಧಿಕಾರಿಗಳತ್ತ ಜನ ಎಡತಾಕುವುದು ಸಾಮಾನ್ಯ. ಆದರೆ ಮೇಲಧಿಕಾರಿಗಳು ಇಂಥ ಅರ್ಜಿಗಳನ್ನು ʼಸರಿಯಾದ ರೀತಿಯಲ್ಲಿʼ (through proper channel) ಬರಲಿ ಎಂದು ಮತ್ತೆ ಅದನ್ನು ಕೆಳಗಿನ ಮೇಜುಗಳ ಕಡೆಗೆ ತಳ್ಳುವುದೂ ಸಾಮಾನ್ಯ. ಹೀಗೆ ಪ್ರಭಾವಿಗಳಲ್ಲದ ಜನಸಾಮಾನ್ಯರು ಮೇಜಿನಿಂದ ಮೇಜಿಗೆ ಅಲೆದಾಡುವುದು, ನಾಳೆ ಬಾ ಎಂದು ಹೇಳಿಸಿಕೊಳ್ಳುವುದು ಅತಿ ಸಾಮಾನ್ಯ ದೃಶ್ಯ. ಅನೇಕ ಮಂದಿಯ ಬದುಕು ಹೀಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ʼತಬರನ ಕಥೆʼಯಂತೆ ಮುಗಿದುಹೋಗುತ್ತದೆ. ಇದೊಂದು ದಃಸ್ವಪ್ನವೇ ಸರಿ. ಇದರಿಂದ ಪಾರಾಗಲು ಸಣ್ಣ ಸಣ್ಣ ವಿಚಾರಗಳಿಗೂ ಜನ ಪುಢಾರಿಗಳ ಮೊರೆ ಹೋಗುತ್ತಾರೆ; ಅಥವಾ ದಲ್ಲಾಳಿಗಳನ್ನು ಹಿಡಿದುಕೊಳ್ಳುತ್ತಾರೆ. ಇವರ ಮೂಲಕ ಕೆಲಸ ಮಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ.
ಹೀಗೆ ಸರ್ಕಾರಿ ಕೆಲಸದ ಕೆಂಪು ಪಟ್ಟಿಯ ವಿಳಂಬ ನರಕದಿಂದ ಬೇಸತ್ತ ಜನಸಾಮಾನ್ಯನಿಗೆ, ಪಾರಾಗುವ ಒಂದು ಕಿಂಡಿಯಂತೆ ಜನತಾ ದರ್ಶನ ಕಾಣಿಸಿದರೆ ಆಶ್ಚರ್ಯವಿಲ್ಲ. ಸಿಎಂಗೆ ಅರ್ಜಿ ಸಲ್ಲಿಸಿದರೆ ತಮ್ಮ ಕೆಲಸ ಕೂಡಲೇ ಆಗಬಹುದು ಎಂಬ ಆಸೆ ಅವರಲ್ಲಿ ಮೂಡುವುದು ಸಹಜ. ಹೀಗಾಗಿಯೇ ಇಂಥ ಕಾರ್ಯಕ್ರಮಗಳಿಗೆ ಜನಸ್ಪಂದನ ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ. ಜನ ಸರ್ಕಾರಿ ಕಚೇರಿಗಳ ಬಾಗಿಲಿಗೆ ಅಲೆದಾಡುವ ಬದಲು, ಜನತಾ ದರ್ಶನದ ಮೂಲಕ ಸರ್ಕಾರವೇ ಜನರ ಬಳಿ ಹೋಗುತ್ತಾರೆ. ಈ ಹಿಂದಿನ ಮುಖ್ಯಮಂತ್ರಿಗಳೂ ಇಂಥ ಪ್ರಯತ್ನ ಮಾಡಿದ್ದುಂಟು. ಆದರೆ ಚಿಲ್ಲರೆ ಕೆಲಸಗಳಿಗೂ ಜನ ಸಿಎಂ ಬಳಿಗೇ ಬರಬೇಕಾಗುತ್ತದೆ ಎಂದರೆ ಅದನ್ನು ಉತ್ತಮ ಆಡಳಿತವೆನ್ನಬೇಕೋ ಇಲ್ಲವೋ ಎಂಬುದನ್ನು ಮತ್ತಷ್ಟು ವಿವೇಚಿಸಿ ನೋಡಿದರೆ ಗೊತ್ತಾಗುತ್ತದೆ. ರಾಜ್ಯದ ಮೂಲೆಮೂಲೆಗಳಿಂದ ಇಷ್ಟೊಂದು ಜನ ಬೆಂಗಳೂರಿಗೆ ಓಡಿ ಬರುತ್ತಾರೆ ಅಂದರೆ ಜಿಲ್ಲಾಡಳಿತಗಳು ಏನು ಮಾಡುತ್ತಿವೆ? ಪ್ರತಿ ಸಮಸ್ಯೆ ಪರಿಹಾರಕ್ಕೂ ಮುಖ್ಯಮಂತ್ರಿಯ ಮೊರೆ ಹೋಗಬೇಕು ಅಂದರೆ ಅಧಿಕಾರಿಗಳಿಗೆ ಏನು ಕೆಲಸ?
ಈ ಹಿಂದಿನ ಜನತಾ ದರ್ಶನಗಳ ಅರ್ಜಿಗಳ ಕತೆ ಏನಾಗಿದೆ ಎಂಬುದನ್ನೂ ಗಮನಿಸಬೇಕಿದೆ. ಜನತಾ ದರ್ಶನಗಳು ಕೇವಲ ತೋರಿಕೆಯ ಕಾರ್ಯಕ್ರಮ ಆಗದೆ ಜನರ ಸಂಕಷ್ಟ ಪರಿಹಾರ ಆಗುವಂತಾಗಲಿ. ಸ್ವಲ್ಪ ಆಳವಾಗಿ ವಿಮರ್ಶೆ ಮಾಡಿದರೆ, ಜನತಾ ದರ್ಶನಗಳು ಸರ್ಕಾರಗಳ ವೈಫಲ್ಯವನ್ನು ಕಾಣಿಸುವ ಕಾರ್ಯಕ್ರಮವೇ ಹೊರತು ಸಾಫಲ್ಯವನ್ನಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಸಮಯದಲ್ಲಿ ಕೆಲಸ ಆಗುತ್ತಿಲ್ಲ ಅನ್ನುವ ಕಾರಣಕ್ಕಾಗಿ ತಾನೇ ಜನತಾ ದರ್ಶನದ ಸಮಯದಲ್ಲಿ ಅಷ್ಟೊಂದು ಪ್ರಮಾಣದ ಅಹವಾಲುಗಳು ಬರುವುದು? ಮೊದಲು ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಜನತೆಗೆ ತಮ್ಮ ಕಚೇರಿಯಲ್ಲಿಯೇ ದರ್ಶನ ಕೊಡಬೇಕು. ಕೆಳಹಂತದ ಅಧಿಕಾರಿಗಳ ಜನತಾ ದರ್ಶನ ಮೊದಲಾಗಲಿ. ಅವರ ಮೇಲೆ ಮೇಲಧಿಕಾರಿಗಳು ನಿಗೂ ಇಡುವುದೂ ಆಗಲಿ. ಹಾಗೇ ಜಿಲ್ಲಾ ಮಟ್ಟದಲ್ಲೇ ಜನತಾ ದರ್ಶನ ಪರಿಣಾಮಕಾರಿಯಾಗಿ ನಡೆದಿದ್ದೇ ಆದಲ್ಲಿ ಜನ ದೂರದ ವಿಧಾನ ಸೌಧದವರೆಗೆ ದೂರುದುಮ್ಮಾನ ಹಿಡಿದುಕೊಂಡು ಮುಖ್ಯಮಂತ್ರಿಗಳನ್ನು ಹುಡುಕಿಕೊಂಡು ಬರುವ ಪ್ರಶ್ನೆಯೇ ಬರುವುದಿಲ್ಲ. ಜನತಾ ದರ್ಶನದ ಅರ್ಜಿಗಳನ್ನೇ ಕಾಲಕಾಲಕ್ಕೆ ವಿಲೇವಾರಿ ಮಾಡುವ ಒಂದು ವ್ಯವಸ್ಥೆ ರೂಪುಗೊಳ್ಳಬೇಕು. ಆಗ ಮಾತ್ರ ಜನತಾ ದರ್ಶನದ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಬಹುದು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹೆಣ್ಣು ಭ್ರೂಣ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ; ಸಮಾಜದಲ್ಲಿ ಜಾಗೃತಿ ಮೂಡಲಿ