Site icon Vistara News

ವಿಸ್ತಾರ ಸಂಪಾದಕೀಯ: ಬರ ತಾಂಡವವಾಡುತ್ತಿದೆ, ಎಚ್ಚರಗೊಳ್ಳಲೇಬೇಕಿದೆ

Vistara Editorial, Drought is all over in the karnataka, farmers need help

ರಾಜ್ಯದಲ್ಲಿ ಬರ (Drought in Karnataka) ತಾಂಡವವಾಡುತ್ತಿದೆ ಎಂದು ರಾಜ್ಯ ಸರ್ಕಾರ ಎರಡನೇ ಬಾರಿಗೆ ಅಧಿಕೃತವಾಗಿ ಘೋಷಿಸಿದೆ. ರಾಜ್ಯ ಸರ್ಕಾರದಿಂದ (State Government) ಮತ್ತೊಂದು ಸುತ್ತಿನ ಬರ ಪಟ್ಟಿ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದ ಬರ ಮಾನದಂಡಗಳ ಅನುಸಾರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ರಾಜ್ಯ ಸರ್ಕಾರ ಹೇಳಿಕೊಂಡಿದ್ದು, ಹೆಚ್ಚುವರಿಯಾಗಿ 21 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಿದೆ. ಅಲ್ಲದೆ, 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಅನುಸಾರ ಈಗಾಗಲೇ ಘೋಷಣೆಯಾಗಿರುವ 161 ಬರಪೀಡಿತ ತಾಲೂಕುಗಳ ಪಟ್ಟಿಗೆ ಹೆಚ್ಚುವರಿಯಾಗಿ 21 ತಾಲೂಕುಗಳ ಸೇರ್ಪಡೆಯಾಗಿದೆ. ಅಂದರೆ ಒಟ್ಟು 182 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಣೆಯಾದಂತೆ ಆಗಿದೆ. ಇನ್ನು 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಘೋಷಿಸಲ್ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಇರುವ 236 ತಾಲೂಕುಗಳ ಪೈಕಿ 208 ತಾಲೂಕುಗಳು ಬರಕ್ಕೆ ಒಳಗಾಗಿವೆ. ಅಂದರೆ, ಬರ ಇಲ್ಲ ಎಂದು ಹೇಳಬಹುದಾದ ತಾಲೂಕುಗಳು 28 ಮಾತ್ರ! ಇದು ಗಂಭೀರ ಸನ್ನಿವೇಶ. ತುರ್ತು ಕಾರ್ಯಾಚರಣೆಗೆ ಇಳಿಯಲೇಬೇಕಾದ ಸನ್ನಿವೇಶ.

ರಾಜ್ಯದಲ್ಲಿ ದಿನೇದಿನೆ ಮಳೆ ಕಡಿಮೆಯಾಗುತ್ತಿದೆ. ನಿರೀಕ್ಷೆ ಸಹ ಹುಸಿಯಾಗುತ್ತಿದೆ. ಮಳೆ ಬೀಳಬೇಕಾದ ಪ್ರದೇಶಗಳಲ್ಲಿ ಸಮರ್ಪಕವಾಗಿ ಮಳೆ ಬರುತ್ತಿಲ್ಲ. ಹೀಗಾಗಿ ರೈತರ ಸಹಿತ ನಾಗರಿಕರು ಕಂಗೆಟ್ಟಿದ್ದಾರೆ. ಒಂದು ಕಡೆ ಇಳುವರಿ ಇಲ್ಲ, ಇನ್ನೊಂದು ಕಡೆ ನೀರಿಗೆ ಹಾಹಾಕಾರ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಜತೆಗೆ ರಾಜ್ಯದಲ್ಲಿ ಹಸಿರು ಬರ (Green drought) ಕಾಣಿಸಿಕೊಂಡಿದೆ. ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ ತುತ್ತಾಗುತ್ತದೆಯೇ ಎಂಬ ಭಯ ಕಾಡಲಾರಂಭಿಸಿದೆ. ಮುೂಡಿಗೆರೆ, ಯಳಂದೂರು, ದಾಂಡೇಲಿ, ಸಿದ್ದಾಪುರ ಮುಂತಾದ ಹಚ್ಚಹಸಿರು ಪ್ರದೇಶಗಳನ್ನೇ ಗಂಭೀರ ಬರ ಆವರಿಸಿದೆ. ಸಕಲೇಶಪುರ, ಕೊಪ್ಪ, ಶೃಂಗೇರಿಯಂಥ ಪಶ್ಚಿಮ ಘಟ್ಟ ಪ್ರದೇಶಗಳಲ್ಲೂ ಬರ ಕಾಣಿಸಿಕೊಂಡಿದ್ದು, ಕುಡಿಯುವ ನೀರಿಗೆ ಆತಂಕ ತಲೆದೋರಿದೆ. ಇದೆಲ್ಲ ಹೇಗಾಯಿತು ಎಂದು ಚಿಂತಿಸಿ ದೀರ್ಘಕಾಲಿಕ ಪರಿಹಾರಗಳ ಬಗ್ಗೆ ಯೋಚಿಸಲೇಬೇಕು. ಅದಕ್ಕೂ ಮುನ್ನ ತಕ್ಷಣದ ಕಾರ್ಯಾಚರಣೆಗಳ ಬಗ್ಗೆ ಚಿಂತಿಸಬೇಕಿದೆ.

ಮುಂಗಾರು ಈ ವರ್ಷ ತೀವ್ರವಾಗಿ ದುರ್ಬಲಗೊಂಡಿದೆ. ಮಳೆಯನ್ನೇ ನೆಚ್ಚಿಕೊಂಡು ಉಳುಮೆ ಮಾಡಿದ್ದವರು ಕಂಗಾಲಾಗಿದ್ದಾರೆ. ಬೀಜ, ಗೊಬ್ಬರಕ್ಕೆಲ್ಲ ಖರ್ಚು ಮಾಡಿದ ಹಣ ವ್ಯರ್ಥವಾಗಿದೆ. ರೈತರು ಪರಿಹಾರದ ಹಣಕ್ಕಾಗಿ ಸರ್ಕಾರತದತ್ತ ನೋಡುತ್ತಿದ್ದಾರೆ. ಸಚಿವ ಸಂಪುಟ 10 ಕೆಜಿ ಅಕ್ಕಿ ನೀಡಲು ಮುಂದಾಗಿತ್ತು. ಅದರಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜತೆಗೆ ರಾಜ್ಯದಿಂದ 5 ಕೆಜಿ ಅಕ್ಕಿಯ ಹಣ ಕೊಡಲಾಗುತ್ತಿತ್ತು. ಈಗ ಬರಪೀಡಿತ ತಾಲೂಕುಗಳ ಪರಿಸ್ಥಿತಿ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಹಣದ ಬದಲು 10 ಕೆಜಿ ಅಕ್ಕಿಯನ್ನೇ ನೀಡಲು ಸರ್ಕಾರ ಮುಂದಾಗಿದೆ. ಜೋಳ, ರಾಗಿ ಬೆಳೆಯುವ ಪ್ರದೇಶಗಳಲ್ಲೂ ಸೂಕ್ತ ಆಹಾರ ಧಾನ್ಯ ವ್ಯವಸ್ಥೆ ಆಗಬೇಕಿದೆ. ನರೇಗಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವತ್ತ ಸರ್ಕಾರ ಚಿಂತಿಸಬೇಕು. ಕೃಷಿ ಪತ್ತಿನ ಸಹಕಾರ ಸಂಘಗಳು, ಸ್ವಸಹಾಯ ಸಂಘಗಳ ಮೂಲಕ ರೈತರ ನೆರವಿಗೆ ಧಾವಿಸಬಹುದು. ಕೆರೆಕಟ್ಟೆಗಳ ಹೂಳೆತ್ತುವುದರಿಂದ ಸ್ವಲ್ಪ ಮಟ್ಟಿಗೆ ನೀರಿಗೆ ಸಹಾಯವಾಗಬಹುದು. ಜಿಲ್ಲಾ ಮಟ್ಟದಲ್ಲಿ ಬರ ನಿರ್ವಹಣಾ ಸಮಿತಿಗಳನ್ನು ರಚಿಸಿ ಜಿಲ್ಲಾಧಿಕಾರಿಗಳನ್ನು ಇದಕ್ಕೆ ಉತ್ತರದಾಯಿ ಮಾಡಬೇಕಿದೆ. ಆಯಾ ಪ್ರದೇಶಕ್ಕೇ ವಿಶಿಷ್ಟವಾದ ಬರ ಸಮಸ್ಯೆಗಳನ್ನು ಕಂಡುಕೊಂಡು ಉತ್ತರ ಒದಗಿಸುವ ಪ್ರಯತ್ನ ಆಗಬೇಕು. ಉಸ್ತುವಾರಿ ಸಚಿವರು ಈಗ ಪೂರ್ಣ ಪ್ರಮಾಣದಲ್ಲಿ ಇದರತ್ತ ಕಾರ್ಯಪ್ರವೃತ್ತವಾಗಬೇಕು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಗತ್ತಿನ ಮೇಲೆ ದುಷ್ಪರಿಣಾಮ ಬೀರುವ ಮುನ್ನವೇ ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧ ಕೊನೆಯಾಗಲಿ

ಈ ಹಿಂದಿನ ಮೂರು ವರ್ಷವೂ ಸಮಸ್ಯೆ ಉಂಟಾಗಿತ್ತು. ಕೆಲವೊಮ್ಮೆ ಮುಂಗಾರು ಹಂಗಾಮಿನಲ್ಲಿ ರೈತರು ಪ್ರಹಾಹ, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಬರಬೇಕಾದಾಗ ಬರದೆ, ಬೇಡದಿದ್ದಾಗ ಬಂದು ಹೋಗುತ್ತಿದೆ. ಹೀಗಾಗಿ ಸುಗ್ಗಿ ಮತ್ತಿತರ ಬೆಳೆಗಳ ಸೀಸನ್‌ಗೆ ಈ ಮಳೆ ಏನೇನೂ ಉಪಯಗವಾಗಿಲ್ಲ. ಬೆಳೆದಿರುವಷ್ಟು ಆಹಾರಧಾನ್ಯಗಳಿಗೆ ಸಂಗ್ರಹಾಗಾರ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ದೊರೆತ ಮಳೆಯ ನೀರನ್ನೇ ಸಂಗ್ರಹಿಸಿ ಅದನ್ನು ಮುಂದಿನ ವರ್ಷಕ್ಕೆ ಉಳಿಸಿಕೊಳ್ಳುವ, ದೀರ್ಘಾವಧಿ ಮಳೆಕೊಯ್ಲು ಮುಂತಾದ ಸುಸ್ಥಿರ ಪದ್ಧತಿಗಳು ನಮ್ಮ ರೈತರಲ್ಲಿ ಇಲ್ಲ. ಹೆಚ್ಚಿನವರು ಮಳೆಯನ್ನೇ ನೆಚ್ಚಿಕೊಂಡವರು. ಮಳೆ ಕೈಕೊಟ್ಟರೆ ಬದುಕಿನ ರಥವೇ ಮುಂದೆ ಸಾಗುವುದಿಲ್ಲ. ಹೀಗಾಗಿ ಬರದ ಏಟು ದುಪ್ಪಟ್ಟಾಗುತ್ತದೆ. ಇನ್ನು ಗುಳೆಯ ಸಮಸ್ಯೆ. ಮಳೆ ಚೆನ್ನಾಗಿ ಆಗದೆ ಹೋದಾಗ ಉತ್ತರ ಕರ್ನಾಟಕದಲ್ಲಿ ಭಾರಿ ಗುಳೆ ಶುರುವಾಗುತ್ತದೆ. ದುಡಿಮೆಗಾಗಿ ಪಟ್ಟಣಗಳತ್ತ ವಲಸೆ ಹೊರಡುತ್ತಾರೆ. ಇದು ಅನಿವಾರ್ಯವಾಗಿದೆ. ಕುಟುಂಬವೇ ವಲಸೆ ಹೋಗುವುದರಿಂದ ಮಕ್ಕಳ ಶಿಕ್ಷಣ ಕೂಡ ಕುಂಟುತ್ತದೆ. ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಪರಿಹಾರ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ರೈತರ ಸಮಸ್ಯೆಗಳಿಗೆ ಸಾಮಾನ್ಯವಾಗಿ ಸರ್ಕಾರಿ ಇಲಾಖೆಗಳು ಕುರುಡಾಗಿ, ಕಿವುಡಾಗಿ ವರ್ತಿಸುತ್ತವೆ. ಅಧಿಕಾರಿಗಳು ಈ ಸಂದರ್ಭದಲ್ಲಿ ಹೆಚ್ಚು ಸ್ಪಂದನಶೀಲವಾಗಿ ವರ್ತಿಸುವಂತೆ ಮಾಡುವುದು ತುರ್ತು ಅಗತ್ಯವಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version