ರಾಜ್ಯಾದ್ಯಂತ ತೀವ್ರ ಬರಗಾಲ (Drought In Karnataka) ಎದುರಾಗಿದೆ. ರೈತರೂ ಸೇರಿ ಜನ-ಜಾನುವಾರುಗಳು ಆಗಸ ನೋಡುವಂತಾಗಿದೆ. ಮಳೆ ಬಾರದೆ, ಬೆಳೆ ಇಲ್ಲದೆ ಜಮೀನುಗಳು ಆಟದ ಮೈದಾನದಂತಾಗಿವೆ. ಕೆರೆ-ಕಟ್ಟೆಗಳೆಲ್ಲ ಒಣಗಿ, ಬಾಯ್ತೆರೆದುಕೊಂಡಿವೆ. ಇದರ ಮಧ್ಯೆಯೇ, ಬೇಸಿಗೆಯ ಬಿಸಿಲಿನ ಝಳ ದಿನೇದಿನೆ ಜಾಸ್ತಿಯಾಗುತ್ತಿದ್ದು, ಹನಿ ನೀರಿಗೂ ತತ್ವಾರ ಎದುರಾಗುವ ದಿನಗಳು ತುಂಬ ದೂರವಿಲ್ಲ. ಇನ್ನೊಂದು ತಿಂಗಳಲ್ಲಿ ರಣಬಿಸಿಲು ರಾಜ್ಯವನ್ನು ಬಾಧಿಸಲಿದ್ದು, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಲಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಬರ ನಿರ್ವಹಣೆಗಾಗಿ (Drought Management) ಸಹಾಯವಾಣಿ ಹಾಗೂ ಕಂಟ್ರೋಲ್ ರೂಂ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೂ, ಬರ ನಿರ್ವಹಣೆಯು ಚುರುಕಾಗದಿದ್ದರೆ, ಅಧಿಕಾರಿಗಳು ದಕ್ಷವಾಗಿ ಕಾರ್ಯನಿರ್ವಹಿಸದಿದ್ದರೆ ರಾಜ್ಯದ ಜನ ಪರದಾಡುತ್ತಾರೆ.
ಕರ್ನಾಟಕದ 223 ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. ಅದರಲ್ಲೂ, 194 ತಾಲೂಕುಗಳು ತೀವ್ರ ಬರದ ಬರೆಗೆ ನಲುಗಿ ಹೋಗಿವೆ. ರೈತರಂತೂ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕುಟುಂಬಕ್ಕೆ ಕುಟುಂಬಗಳೇ ಗುಳೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿವೆ. ಮಳೆ ಇಲ್ಲದೆ ಮುಂಗಾರು ಬೆಳೆ ಹಾನಿ, ಜಲಾಶಯ, ಕೆರೆಗಳಲ್ಲಿ ಹನಿ ನೀರಿಲ್ಲದೆ ಹಿಂಗಾರಿನಲ್ಲಿ ಬಿತ್ತನೆಯೇ ಆಗದಿರುವುದು ನಾಡಿನ ಬೆನ್ನೆಲುಬಾಗಿರುವ ರೈತರ ಬೆನ್ನೆಲುಬನ್ನೇ ಮುರಿದಂತಾಗಿದೆ. ಹಾಗಾಗಿ, ರಾಜ್ಯ ಸರ್ಕಾರವು ಕ್ಷಿಪ್ರವಾಗಿ ಬರ ನಿರ್ವಹಣೆ ಕಾರ್ಯ ಕೈಗೊಳ್ಳದಿದ್ದರೆ, ರೈತರಿಗೆ ಆಶ್ರಯ, ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಾಗದಿದ್ದರೆ, ಬೆಳೆಯಿಲ್ಲದೆ ಜೇಬುಗಳನ್ನು ಖಾಲಿ ಮಾಡಿಕೊಂಡು, ಮೈತುಂಬ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬರ ಪರಿಹಾರ ವಿತರಣೆಯಾಗದಿದ್ದರೆ ಅವರ ಆಕ್ರೋಶ ಕಟ್ಟೆಯೊಡೆಯುವುದು ನಿಶ್ಚಿತವಾಗಿದೆ.
ಕೃಷಿ ಫಸಲು ಕೈಕೊಟ್ಟರೂ ರೈತರು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದಾರೆ. ಇದರ ಮಧ್ಯೆಯೇ ಕುಡಿಯುವ ನೀರಿನ ಸಮಸ್ಯೆಯೂ ಒಕ್ಕರಿಸಿದೆ. ರಾಜ್ಯದ 98 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆ-ಕಟ್ಟೆಗಳು ಒಣಗಿಹೋಗಿ, ಬೋರ್‌ವೆಲ್‌ಗಳಲ್ಲಿ ನೀರು ಬಾರದಂತಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಕ್ಷಿಪ್ರವಾಗಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಪ್ರತಿದಿನ ಸರಿಯಾದ ಸಮಯಕ್ಕೆ ಗ್ರಾಮಗಳಿಗೆ ನೀರು ಪೂರೈಕೆಯಾಗಬೇಕು. ಆರೋಗ್ಯ ಸಮಸ್ಯೆ ಎದುರಾಗುವ ಕಾರಣ ಬೋರ್‌ಗಳ ನೀರನ್ನು ಶುದ್ಧೀಕರಿಸಿ ಪೂರೈಸಲು ಕೂಡ ಕ್ರಮ ತೆಗೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಜನರಷ್ಟೇ ಜಾನುವಾರುಗಳ ಸಂಖ್ಯೆಯೂ ಇರುವುದರಿಂದ ಅವುಗಳಿಗೂ ಕುಡಿಯುವ ನೀರಿನ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು.
ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!
ಗ್ರಾಮಗಳ ಜತೆಗೆ ಪಟ್ಟಣಗಳು, ನಗರಗಳ ಕಡೆಗೂ ರಾಜ್ಯ ಸರ್ಕಾರ ಗಮನ ಹರಿಸಬೇಕು. ಪಟ್ಟಣ, ನಗರ ಹಾಗೂ ಮಹಾ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಟ್ಯಾಂಕರ್ ನೀರು ಪೂರೈಕೆಯ ದಂಧೆ ಶುರುವಾಗುತ್ತದೆ. ಈಗಾಗಲೇ ನಗರಗಳಲ್ಲಿ ಒಂದು ಟ್ಯಾಂಕರ್ ನೀರಿಗೆ 2-3 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಬೋರ್‌ವೆಲ್‌ಗಳನ್ನು ಕೊರೆದು, ಜನರ ಬಳಿ 2-3 ಪಟ್ಟು ಹಣ ವಸೂಲಿ ಮಾಡುವ ದಂಧೆ ಆರಂಭವಾಗಿದೆ. ಇದನ್ನು ಕೂಡ ರಾಜ್ಯ ಸರ್ಕಾರ ತಡೆಗಟ್ಟಬೇಕು. ನೀರಿನ ದಂಧೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಎಗ್ಗಿಲ್ಲದೆ ಬೋರ್‌ವೆಲ್ ಕೊರೆದು ಅಂತರ್ಜಾಲಕ್ಕೆ ಕುತ್ತು ತರುವ ಜಾಲವನ್ನು ನಿಯಂತ್ರಿಸಬೇಕು. ಆ ಮೂಲಕ ಜನರ ದಾಹ ನೀಗಿಸುವ ಜತೆಗೆ ಹಣದ ಮೇಲಿನ ಮೋಹಕ್ಕೆ ನಡೆಯುವ ದಂಧೆಯನ್ನೂ ತಡೆಗಟ್ಟಬೇಕು. ಇಲ್ಲದಿದ್ದರೆ, ನೀರಿಗಾಗಿ ಸಂಘರ್ಷಗಳೇ ನಡೆಯುವ ಸಾಧ್ಯತೆಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ