ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates – UAE – ಯುಎಇ)ನಲ್ಲಿ ನಿರ್ಮಾಣಗೊಂಡಿರುವ ಆ ದೇಶದ ಮೊದಲ ಹಿಂದೂ ದೇವಸ್ಥಾನವನ್ನು (Hindu Temple) ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದಾರೆ. “ಯುಎಇಯು ಜಗತ್ತಿನಲ್ಲಿ ಒಂದು ಸ್ವರ್ಣಮಯ ಅಧ್ಯಾಯವನ್ನು ಬರೆದಿದೆ. ಕೋಟ್ಯಂತರ ಭಾರತೀಯರ ಮನವನ್ನು ಯುಎಇ ಗೆದ್ದಿದೆ. ರಾಮಲಲ್ಲಾ ಜನ್ಮಭೂಮಿಯಲ್ಲಿ ವಿರಾಜಮಾನನಾಗಿದ್ದಾನೆ. ಸಂಪೂರ್ಣ ಭಾರತೀಯರು ಈ ದೈವಿಕ ಭಾವನೆಯಲ್ಲಿ ಮುಳುಗಿದ್ದಾರೆ. ಇದೀಗ ಅಬುಧಾಬಿ ಮಂದಿರ (Abu Dhabi Hindu Temple) ಉದ್ಘಾಟನೆಗೊಂಡಿದೆ. ನಾನು ಭಾರತ ಮಾತೆಯ ಪೂಜಾರಿ” ಎಂದು ಮೋದಿ ಹೇಳಿದ್ದಾರೆ. ಅಬುಧಾಬಿಯಲ್ಲಿ ಭವ್ಯ ಹಿಂದೂ ಮಂದಿರ (BAPS Hindu Mandir) ನಿರ್ಮಾಣವಾಗಲು ಅತೀ ದೊಡ್ಡ ಕೊಡುಗೆ ನೀಡಿದ ಕೀರ್ತಿ ಇಲ್ಲಿನ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯದ್ ಅವರಿಗೆ ಸಲ್ಲಬೇಕು. ಮೊಹಮ್ಮದ್ ಶೇಕ್ ಅಬುಧಾಬಿಯಲ್ಲಿನ ಹಿಂದೂಗಳ ಮಾತ್ರವಲ್ಲ, 140 ಕೋಟಿ ಭಾರತೀಯರ ಮನಸ್ಸು ಗೆದ್ದಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಇದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಮಾತ್ರವಲ್ಲ, ವಿಶ್ವದ 3ನೇ ಅತೀ ದೊಡ್ಡ ಹಿಂದೂ ದೇಗುಲವೂ ಹೌದು. ಇದು ಹಿಂದೂ ಧರ್ಮದ ʼಸ್ವಾಮಿ ನಾರಾಯಣʼ ಪಂಥಕ್ಕೆ ಸೇರಿದ, ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (Bochasanwasi Akshar Purushottam Swaminarayan Sanstha) ಮಂದಿರ ಆಗಿದೆ. ಇದಕ್ಕೆ ಆಗಿರುವ ವೆಚ್ಚ ಸುಮಾರು 700 ಕೋಟಿ ರೂಪಾಯಿ. ಇಲ್ಲಿ ಕೃಷ್ಣ- ರಾಧೆ, ಶಿವ- ಪಾರ್ವತಿ, ಸೀತೆ, ರಾಮ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರುಗಳನ್ನು ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ ಮತ್ತು ಮತ್ತು 180 ಅಡಿ ಅಗಲವಿದೆ. ಒಟ್ಟು 27 ಏಕರೆ ಪ್ರದೇಶವನ್ನು ಈ ಮಂದಿರಕ್ಕಾಗಿ ಯಎಇ ಸರ್ಕಾರ ನೀಡಿದೆ. ಈ ಪೈಕಿ 17 ಏಕರೆ ಪ್ರದೇಶದಲ್ಲಿ ಭವ್ಯ ಮಂದಿರ ನಿರ್ಮಾಣಗೊಂಡಿದೆ. 20000 ಟನ್ ಕಲ್ಲಿನಿಂದ ಈ ಮಂದಿರ ನಿರ್ಮಾಣ ಮಾಡಲಾಗಿದೆ. ಆಯೋಧ್ಯೆ ರಾಮ ಮಂದಿರದ ರೀತಿ, ಕಬ್ಬಿಣ ಸೇರಿದಂತೆ ಇತರ ಲೋಹಗಳನ್ನು ಬಳಸಿಲ್ಲ. ದೇಗುಲದ ನಿರ್ಮಾಣ ಕಾರ್ಯದಲ್ಲಿ 2,000 ಭಾರತೀಯ ಶಿಲ್ಪಿಗಳು ಕೆತ್ತನೆ ಕೆಲಸ ಮಾಡಿದ್ದರು.
ಇಂದು ಅಬುದಾಭಿಯಲ್ಲಿ ಲೋಕಾರ್ಪಣೆಗೊಂಡಿರುವ ಬಾಪ್ಸ್ ಮಂದಿರ ಭಾರತ ಹಾಗೂ ಯುಎಇ ನಡುವಿನ ಬಂಧವನ್ನು ಇನ್ನಷ್ಟು ಬಿಗಿ ಮಾಡಿದೆ. ಕಳೆದ 10 ವರ್ಷಗಳಲ್ಲಿ 7 ಬಾರಿ ಯುಎಇಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಈ ಬಾರಿ 8 ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಅಬುಧಾಬಿಯಲ್ಲೂ ಭಾರತೀಯ ಯುಪಿಐ ಪಾವತಿ ಸೇವೆಯನ್ನೂ ಆರಂಭಿಸಲಾಗಿದೆ. ಮುಸ್ಲಿಂ ದೇಶವೊಂದರಲ್ಲಿ, ಇಡೀ ಪಶ್ಚಿಮ ಏಷ್ಯಾದಲ್ಲೇ ಇಲ್ಲದಷ್ಟು ವಿಶಾಲವಾದ ದೇವಾಲಯವೊಂದು ನಿರ್ಮಾಣವಾಗಿದೆ. ಇದು ಧಾರ್ಮಿಕ ಸ್ಥಳವಾಗಿ ಮಾತ್ರವಲ್ಲ, ಅದನ್ನೂ ಮೀರಿದ ಮಹತ್ತರ ತಾಣವಾಗಿ ವಿಜೃಂಭಿಸಲಿದೆ. ಯುಎಇಯಲ್ಲಿ ಇದಲ್ಲದೆ ಇನ್ನೂ ಮೂರು ದೇವಾಲಯಗಳಿವೆ. ಇಲ್ಲಿಗೆ ಸಾಕಷ್ಟು ಭಾರತೀಯರೂ ಭೇಟಿ ನೀಡುತ್ತಾರೆ. ಯುಎಇ ಹೇಳಿ ಕೇಳಿ ಮುಸ್ಲಿಂ ದೇಶ. ಆದರೆ ಇಲ್ಲಿನ ಪ್ರಜೆಗಳಲ್ಲಿ 35% ಮಂದಿ ಭಾರತೀಯ ವಲಸಿಗರು. ಇವರು ಇಲ್ಲಿನ ತೈಲ ಕಂಪನಿಗಳು ಮತ್ತಿತರ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಅಲ್ಲಿಗೆ ತೆರಳಿದವರು. ಆದರೆ ಇವರ ಧರ್ಮದ ಆಚರಣೆಗಳಿಗೆ ಯುಎಇ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದೆ. ಇದೊಂದು ಲಿಬರಲ್ ದೇಶವಾಗಿದ್ದು, ಎಲ್ಲ ಧರ್ಮದವರೂ ಇಲ್ಲಿ ಒಟ್ಟಾಗಿ ಬದುಕುತ್ತ ಸಾಮರಸ್ಯದ ಪಾಠವನ್ನು ಜಗತ್ತಿಗೆ ಮಾಡಬಲ್ಲವರಾಗಿದ್ದಾರೆ. ಇಂಥ ನೆಲದಲ್ಲಿ ವಿಶಾಲ ಹಿಂದೂ ದೇವಾಲಯವೊಂದು ತಲೆಯೆತ್ತುವುದು ವಿಶಿಷ್ಟವಾದುದು. ಇದು ಭಾರತೀಯ ಸಮುದಾಯವನ್ನು ಅಲ್ಲಿನ ಇನ್ನಷ್ಟು ಬೆಸೆಯಬಲ್ಲದು. ಇದೊಂದು ಧಾರ್ಮಿಕ ಮಾತ್ರವಲ್ಲದೆ, ಪ್ರವಾಸೀ ಕೇಂದ್ರವಾಗಿಯೂ ಬೆಳೆಯಲಿದೆ.
ಒಂದೆಡೆ ಪಾಕಿಸ್ತಾನ, ಅಫ್ಘಾನಿಸ್ತಾನಗಳಂಥ ಮುಸ್ಲಿಂ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಕಿರುಕುಳ ನೀಡಲಾಗುತ್ತಿದೆ; ಇಂಥ ಹೊತ್ತಿಗೆ ಯುಎಇಯಂಥ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಭವ್ಯ ಹಿಂದೂ ಗುಡಿ ನಿರ್ಮಾಣವಾಗುವುದು ಹಾಗೂ ಅಲ್ಲಿನ ಹಿಂದೂಗಳ ಆಚರಣೆಗಳಿಗೆ ಮುಕ್ತ ಅವಕಾಶ ದೊರೆಯುವುದು ವಿಭಿನ್ನ ರೀತಿಯ ಸಂದೇಶವನ್ನು ಜಗತ್ತಿಗೆ ನೀಡುತ್ತದೆ. ಅಮೆರಿಕದಲ್ಲಿ ಕೂಡ ಇಂದು ಹಿಂದೂ ದೇವಾಲಯಗಳು ಸಾಕಷ್ಟಿದ್ದು, ಅಲ್ಲಿನ ಭಾರತೀಯ ಸಮುದಾಯದ ಶ್ರದ್ಧಾ ಕೇಂದ್ರಗಳಾಗಿವೆ. ದೀಪಾವಳಿಯಂಥ ಹಿಂದೂ ಹಬ್ಬಗಳನ್ನು ಶ್ವೇತಭವನದಲ್ಲಿ ಅಲ್ಲಿನ ಅಧ್ಯಕ್ಷರ ಸಮ್ಮುಖದಲ್ಲಿ ಆಚರಿಸಲಾಗುತ್ತದೆ. ಇಂಗ್ಲೆಂಡಿನ ಪ್ರಧಾನ ಮಂತ್ರಿ ʼನಾನು ಹೆಮ್ಮೆಯ ಹಿಂದೂʼ ಎಂದು ಹೇಳಲು ಹಿಂಜರಿಯುವುದಿಲ್ಲ. ಮಧ್ಯಪ್ರಾಚ್ಯ ಮುಸ್ಲಿಂ ದೇಶಗಳಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭವ್ಯ ಸ್ವಾಗತವನ್ನು ಪಡೆಯುತ್ತಾರೆ; ದೊಡ್ಡ ವಾಣಿಜ್ಯ ವಹಿವಾಟುಗಳು ನೆರವೇರುತ್ತವೆ. ಇವೆಲ್ಲವೂ ಬಿಡಿ ಘಟನೆಗಳಂತೆ ತೋರಿದರೂ, ಅಷ್ಟೇ ಆಗಿಲ್ಲ. ಇವೆಲ್ಲವೂ ಭಾರತೀಯ ಹಿಂದೂ ಸಮುದಾಯದ ಅಸ್ಮಿತೆಯೊಂದು ಜಗತ್ತಿನ ಮುಂದೆ ತಲೆಯೆತ್ತಿ ನಿಂತಿರುವುದನ್ನು ಸೂಚಿಸುವುದಾಗಿದೆ.
ಯುಎಇಯ ಭವ್ಯ ದೇವಾಲಯದ ಯಾವುದೇ ಪಂಥದ್ದಿರಲಿ, ಹಿಂದೂಗಳೆಲ್ಲ ಅದರ ಬಗ್ಗೆ ಅಯೋಧ್ಯೆಯ ರಾಮ ಮಂದಿರದಂತೆಯೇ ಹೆಮ್ಮೆ ಪಡುತ್ತಿದ್ದಾರೆ ಎಂಬುದು ಮುಖ್ಯವಾದುದು. ಈ ಭಾರತೀಯ ಅಸ್ಮಿತೆ ಭಾರತೀಯರೆಲ್ಲರ ಉಸಿರಾಗಲಿ.
ಇದನ್ನೂ ಓದಿ: UAE Temple Inauguration: ಯುಎಇ ಹಿಂದು ದೇಗುಲದ ಶಿಲೆಯಲ್ಲಿ ‘ವಸುದೈವ ಕುಟುಂಬಕಂ’ ಎಂದು ಕೆತ್ತಿದ ಮೋದಿ!