Site icon Vistara News

ವಿಸ್ತಾರ ಸಂಪಾದಕೀಯ: ಚಂದ್ರಯಾನ 3 ಇಳಿದ ಜಾಗವೀಗ ‘ಶಿವಶಕ್ತಿ’;‌ ದೇಶದ ಸಾಧನೆ ಚಿರಾಯು

Chandrayaan 4

Chandrayaan 4's landing site on the Moon revealed

ಬಾಹ್ಯಾಕಾಶದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಖ್ಯಾತಿ ಈಗ ಅಮರವಾಗಿದೆ. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ 3 ಮಿಷನ್‌ನ (Chandrayaan) ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಫ್ಟ್‌ಲ್ಯಾಂಡ್‌ ಆಗಿರುವ ಜಾಗಕ್ಕೆ ಶಿವ ಶಕ್ತಿ ಎಂಬ ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಅನುಮತಿ ನೀಡಿರುವುದು ಭಾರತಕ್ಕೆ ಸಿಕ್ಕ ಐತಿಹಾಸಿಕ ಮುನ್ನಡೆಯಾಗಿದೆ. “ಭಾರತೀಯ ಪುರಾಣಶಾಸ್ತ್ರದ ಪ್ರಕಾರ, ಶಿವ ಎಂಬ ಪುಲ್ಲಿಂಗ ಹೆಸರು ಹಾಗೂ ಶಕ್ತಿ ಎಂಬ ಸ್ತ್ರೀಲಿಂಗದ ಹೆಸರು ಸಮೀಕರಣಗೊಂಡು ಶಿವಶಕ್ತಿಯಾಗಿದೆ. ಇಸ್ರೋದ ಚಂದ್ರಯಾನ 3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗವೀಗ ಶಿವಶಕ್ತಿ ಎಂದು ಕರೆಯಲಾಗುತ್ತದೆ” ಎಂಬುದಾಗಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಪ್ರಕಟಣೆ ತಿಳಿಸಿದೆ. ಹಾಗಾಗಿ, ಚಂದ್ರನ ಅಂಗಳದಲ್ಲಿ ಭಾರತದ ಪುರಾಣಶಾಸ್ತ್ರ, ದೇವರು, ನಂಬಿಕೆ, ಸಾಮರ್ಥ್ಯವನ್ನು ಸಾರುವ ಶಿವಶಕ್ತಿಯು ಅಮರವಾಗಿದೆ. ಇದು ದೇಶದ ಪ್ರತಿಯೊಬ್ಬರೂ ಹೆಮ್ಮೆಪಡುವ ಸಂಗತಿಯಾಗಿದೆ.

ಚಂದ್ರಯಾನ 3 ಯಶಸ್ಸಿನ ಬಳಿಕ ಮಿಷನ್‌ ಲ್ಯಾಂಡ್‌ ಆದ ಪ್ರದೇಶಕ್ಕೆ ಶಿವಶಕ್ತಿ ಪಾಯಿಂಟ್‌ ಎಂಬುದಾಗಿ ಕರೆಯೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ (ISRO) ಕಮಾಂಡ್‌ ಪಾಯಿಂಟ್‌ ಪೀಣ್ಯದ ಇಸ್ಟಾಕ್‌ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಗಳನ್ನು ಶಿವ ಮತ್ತು ಶಕ್ತಿಗೆ ಹೋಲಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಲದಿಂದ ಈ ಸಾಧನೆ ಸಾಧ್ಯವಾಗಿದೆ. ವಿಕ್ರಮ್‌ನ ವಿಶ್ವಾಸದ ಜತೆಗೆ ಪ್ರಗ್ಯಾನ್‌ನ ಪರಾಕ್ರಮ ಇದೆ. ಹೀಗಾಗಿ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗವನ್ನು ಶಿವಶಕ್ತಿ ಪಾಯಿಂಟ್‌ ಎಂದು ಕರೆಯೋಣ ಎಂದಿದ್ದರು. ನರೇಂದ್ರ ಮೋದಿ ಅವರ ಆಶಯಕ್ಕೆ ದೇಶಾದ್ಯಂತ ಬೆಂಬಲವೂ ವ್ಯಕ್ತವಾಗಿತ್ತು. ದೇಶದ ಜನರ ಬೆಂಬಲ, ನರೇಂದ್ರ ಮೋದಿ ಅವರ ಆಶಯದಂತೆ ಜಾಗತಿಕ ಖಗೋಳ ಒಕ್ಕೂಟವೂ ಶಿವಶಕ್ತಿ ಎಂಬ ಹೆಸರಿಡಲು ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದೆ.

ಚಂದ್ರನ ಅಂಗಳ ಸೇರಿ ಯಾವುದೇ ಮಿಷನ್‌ ಕಕ್ಷೆ ಸೇರಿದರೆ, ಆ ಬಿಂದುವಿಗೆ ಒಂದು ಹೆಸರಿಡುವುದು ಸಂಪ್ರದಾಯವಾಗಿದೆ. ಅದರಂತೆ, ಚಂದ್ರಯಾನ 2 ಪತನಗೊಂಡರೂ ಆ ಜಾಗಕ್ಕೆ ತಿರಂಗಾ ಪಾಯಿಂಟ್‌ ಎಂದು ಹೆಸರಿಡಲಾಗಿದೆ. ಇನ್ನು ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆದ ಜಾಗಕ್ಕೆ ಶಿವಶಕ್ತಿ ಎಂದು ಹೆಸರಿಟ್ಟಿರುವುದರ ಹಿಂದೆ ಪುರಾಣ ಶಾಸ್ತ್ರದ ಜತೆಗೆ ಆಧುನಿಕ ಭಾರತದಲ್ಲಿ ಸ್ತ್ರೀಯರ ಸಬಲೀಕರಣದ ಸಂಕೇತವಾಗಿದೆ. “ಶಿವಶಕ್ತಿ ಎಂಬ ಹೆಸರಿನಲ್ಲಿ ಶಕ್ತಿ ಎಂಬುದು ಮಹಿಳಾ ವಿಜ್ಞಾನಿಗಳ ಕೊಡುಗೆ, ಶ್ರಮ ಹಾಗೂ ಸ್ಫೂರ್ತಿಯ ದ್ಯೋತಕವಾಗಿದೆ” ಎಂದು ನರೇಂದ್ರ ಮೋದಿ ಅವರೇ ಘೋಷಿಸಿದ್ದಾರೆ. ಚಂದ್ರಯಾನ 3 ಮಿಷನ್‌ನ ಹಿಂದೆ ಮಹಿಳಾ ವಿಜ್ಞಾನಿಗಳ ಕೊಡುಗೆಯೂ ಇರುವುದರಿಂದ ಶಿವಶಕ್ತಿ ಎಂಬುದಾಗಿ ಹೆಸರಿಟ್ಟಿರುವುದು ಹೆಣ್ಣುಮಕ್ಕಳಿಗೆ ನೀಡುವ ಗೌರವವೂ ಆಗಿದೆ.

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹತ್ತಾರು ಮೈಲುಗಳನ್ನು ನೆಟ್ಟಿದೆ. ಏಕಕಾಲಕ್ಕೆ 100ಕ್ಕೂ ಅಧಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಸಾಫ್ಟ್‌ ಲ್ಯಾಂಡಿಂಗ್‌, ಆದಿತ್ಯ ಎಲ್‌ 1 ಮಿಷನ್‌ ಯಶಸ್ವಿ ಸೇರಿ ಹತ್ತಾರು ಸಾಧನೆಗಳನ್ನು ಮಾಡಿದೆ. ಇನ್ನು, ಭಾರತದ ಉಪಗ್ರಹಗಳು, ರಾಕೆಟ್‌ಗಳ ಉಡಾವಣೆಗೂ, ದೇಶದ ಪುರಾಣಶಾಸ್ತ್ರಕ್ಕೂ ನಂಟಿದೆ. ರಾಮಾಯಣದಲ್ಲಿರುವ ಪುಷ್ಪಕ ವಿಮಾನದಿಂದ ಸ್ಫೂರ್ತಿ ಪಡೆದು ಇತ್ತೀಚೆಗೆ ಚಿತ್ರದುರ್ಗದಲ್ಲಿ ಉಡಾವಣೆ ಮಾಡಲಾದ ರಾಕೆಟ್‌ಗೆ ಪುಷ್ಪಕ ಎಂದು ಹೆಸರಿಟ್ಟಿರುವುದು ಕೂಡ ತಾಜಾ ನಿದರ್ಶನವಾಗಿದೆ. ಇದರ ಬೆನ್ನಲ್ಲೇ, ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆದ ಜಾಗಕ್ಕೆ ಶಿವಶಕ್ತಿ ಎಂಬ ಹೆಸರಿಟ್ಟಿರುವುದಕ್ಕೆ ಜಾಗತಿಕ ಮಾನ್ಯತೆಯೂ ಸಿಕ್ಕಿರುವುದು ಭಾರತದ ಅಸ್ಮಿತೆಗೆ ಸಂದ ಗೌರವವೂ ಆಗಿದೆ.

ಇದನ್ನೂ ಓದಿ: Shiva Shakti: ಚಂದ್ರಯಾನ 3 ಇಳಿದ ಜಾಗ ಈಗ ಶಿವಶಕ್ತಿ ಪಾಯಿಂಟ್‌; ಜಾಗತಿಕ ಸಂಸ್ಥೆ ಒಪ್ಪಿಗೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version