ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಲ್ಡೀವ್ಸ್ನ ಸಚಿವರಾದ ಮರಿಯಮ್ ಶಿಯುನಾ, ಮಾಲ್ಶಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ಅಲ್ಲಿನ ಸರ್ಕಾರವು ಅಮಾನತು ಮಾಡಿದೆ. ಆ ಮೂಲಕ ದ್ವೀಪ ರಾಷ್ಟ್ರವು ಡ್ಯಾಮೇಜಿಂಗ್ ಕಂಟ್ರೋಲ್ಗೆ ಮುಂದಾಗಿರುವುದು ಸ್ಪಷ್ಟವಾಗಿದೆ. ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಪ್ರವಾಸಿಗರ ನೆಚ್ಚಿನ ತಾಣವಾಗಿ ಲಕ್ಷದ್ವೀಪ ರೂಪುಗೊಳ್ಳಬೇಕು ಎಂದು ಹೇಳಿದ್ದರು. ಪ್ರಧಾನಿ ತಮ್ಮ ಹೇಳಿಕೆಯಲ್ಲಿ ಎಲ್ಲೂ ಮಾಲ್ಡೀವ್ಸ್ ಉಲ್ಲೇಖಿಸಿರಲಿಲ್ಲ. ಆದರೂ, ಮಾಲ್ಡೀವ್ಸ್ ಸಚಿವರು (Maldives Ministers) ಅಧಿಕಪ್ರಸಂಗತನ ಮಾಡಿ, ಅಂತಾರಾಷ್ಟ್ರೀಯವಾಗಿ ಮಾಲ್ಡೀವ್ಸ್ಗೆ ಹಿನ್ನಡೆಯುಂಟು ಮಾಡುವಲ್ಲಿ ಕಾರಣರಾಗಿದ್ದಾರೆ. ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ ಸಚಿವರು ತಮ್ಮ ಹೇಳಿಕೆಗೆ ಬೆಲೆತೆತ್ತಿದ್ದಾರೆ(Vistara Editorial).
ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಮಾಲ್ಡೀವ್ಸ್ ರಕ್ಷಣೆಯ ದೃಷ್ಟಿಯಿಂದಲೂ ಭಾರತಕ್ಕೆ ಮಹತ್ವದ ರಾಷ್ಟ್ರವಾಗಿದೆ. ಹಾಗಾಗಿಯೇ ಚೀನಾ ಈ ದ್ವೀಪ ರಾಷ್ಟ್ರದ ಮೇಲೆ ತನ್ನ ಪಾರಮ್ಯ ಮೆರೆಯುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಈಗ ಮೋದಿ ವಿರುದ್ಧದ ಹೇಳಿಕೆಗಳು ಕೂಡ ಈ ತಂತ್ರದ ಭಾಗವಾಗಿಯೇ ಹೊರ ಬಂದಿವೆ. ಚೀನಾದ ಕುಮ್ಮಕ್ಕು ಇಲ್ಲದೇ ಭಾರತದ ಪ್ರಧಾನಿ ವಿರುದ್ಧ ಅವಹೇಳನಕಾರಿ ಮಾತುಗಳು ಹೊರ ಬೀಳಲು ಸಾಧ್ಯವಿಲ್ಲ. ಜನವರಿ 8ರಿಂದ ನಾಲ್ಕು ದಿನಗಳ ಕಾಲ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲೂ ಮಾಲ್ಡೀವ್ಸ್ ಸಚಿವರ ಹೇಳಿಕೆಯನ್ನು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ‘ಫ್ರೆಂಡ್ ಆಫ್ ಚೀನಾ’ ಎಂದು ಕರೆಯಿಸಿಕೊಳ್ಳುವ ಮುಯಿಜು ಅವರು ಮಾಲ್ಡೀವ್ಸ್ನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತ ವಿರೋಧಿ ನೀತಿ ಹೆಚ್ಚೆಚ್ಚು ಮುನ್ನೆಲೆಗೆ ಬಂದಿದೆ. ಈ ಹಿಂದಿನಿಂದ ಮಾಲ್ಡೀವ್ಸ್ ಸರ್ಕಾರಗಳು ಅನುಸರಿಕೊಂಡು ಬಂದಿದ್ದ ‘ಇಂಡಿಯಾ ಫಸ್ಟ್’ ನೀತಿಯನ್ನು ಕೈ ಬಿಟ್ಟಿರುವ ಮುಯಿಜು ಅವರು, ಮಾಲ್ಡೀವ್ಸ್ನಲ್ಲಿರುವ ತನ್ನ ಪಡೆಯನ್ನು ಭಾರತವು ವಾಪಸ್ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸುತ್ತಲೇ ಇದ್ದಾರೆ.
ಆದರೆ, ಭಾರತವು ಈಗ ಮೊದಲಿನಂತಿಲ್ಲ. ತನ್ನ ಹಿತಾಸಕ್ತಿಗಳ ವಿರುದ್ಧ ಸಮರ ಸಾರುವ ಶಕ್ತಿಗಳ ವಿರುದ್ಧ ತನ್ನದೇ ಆದ ಧಾಟಿಯಲ್ಲಿ ಉತ್ತರ ನೀಡುತ್ತಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಮಾಲ್ಡೀವ್ಸ್ ವಿಚಾರದಲ್ಲೂ ಭಾರತವು ತನ್ನ ಶಕ್ತಿಯನ್ನು ಭಿನ್ನ ರೀತಿಯಲ್ಲಿ ಪ್ರದರ್ಶಿಸಿದೆ. ಈ ಬಾರಿ ನಾಗರಿಕರು ಅದಕ್ಕೆ ಸಾಥ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನ ಶುರು ಮಾಡುವ ಮೂಲಕ ಮಾಲ್ಡೀವ್ಸ್ಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಈ ಅಭಿಯಾನಕ್ಕೆ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ದಿಗ್ಗಜರೂ ಸಾಥ್ ನೀಡಿದ್ದರಿಂದ ಅದರ ತೀವ್ರತೆ ಇನ್ನಷ್ಟು ಹೆಚ್ಚಾಯಿತು. ಸಾಕಷ್ಟು ಭಾರತೀಯರು ತಮ್ಮ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದರು. ಭಾರತೀಯರ ಈ ನಡೆಗೆ ಬೆಚ್ಚಿದ ಮಾಲ್ಡೀವ್ಸ್ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಹೇಳಿಕೆಯನ್ನು ಬಿಡುಗಡೆ ಮಾಡಿತು! ಯಾಕೆಂದರೆ, ಮಾಲ್ಡೀವ್ಸ್ಗೆ ಪ್ರವಾಸೋದ್ಯಮವೇ ಆದಾಯದ ಮೂಲ ಮತ್ತು ಇದರಲ್ಲಿ ಭಾರತೀಯ ಪ್ರವಾಸಿಗರ ಕೊಡುಗೆಯೇ ಅಪಾರ.
1970ರ ದಶಕದ ನಂತರ ಮಾಲ್ಡೀವ್ಸ್ನ ಮುಖ್ಯ ಆದಾಯದ ಮೂಲ ಪ್ರವಾಸೋದ್ಯಮವಾಗಿದೆ. ಈ ದೇಶದ ಒಟ್ಟು ಜಿಡಿಪಿಗೆ ಪ್ರವಾಸೋದ್ಯಮದಿಂದಲೇ ಶೇ.28 ಕೊಡುಗೆ ಇದೆ. ಹಾಗೆಯೇ, ಮಾಲ್ಡೀವ್ಸ್ನ ಶೇ.60 ಕ್ಕಿಂತ ಹೆಚ್ಚು ವಿದೇಶಿ ವಿನಿಮಯಕ್ಕೂ ಇದೇ ಮೂಲಧಾರವಾಗಿದೆ. ಪ್ರವಾಸೋದ್ಯಮದ ಸಂಬಂಧಿ ಆಮದು ಸುಂಕ ಮತ್ತು ತೆರಿಗೆಗಳಿಂದ ಅಲ್ಲಿನ ಸರ್ಕಾರಕ್ಕೆ ಶೇ.90ರಷ್ಟು ಆದಾಯವಿದೆ. ಈ ಪ್ರವಾಸೋದ್ಯಮಕ್ಕೆ ಭಾರತೀಯರ ಕೊಡುಗೆಯೇ ಹೆಚ್ಚು. 2023ರ ಅಂಕಿ ಸಂಖ್ಯೆಗಳನ್ನು ಪರಿಶೀಲಿಸುವುದಾದರೆ ಮಾಲ್ಡೀವ್ಸ್ಗೆ ಭೇಟಿ ನೀಡಿದ ಪ್ರವಾಸಿಗರ ಪೈಕಿ ಭಾರತೀಯರ ಸಂಖ್ಯೆಯೇ ಹೆಚ್ಚು. ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, 2023ರ ಡಿಸೆಂಬರ್ವರೆಗೆ ಒಟ್ಟು 17, 57,939 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪೈಕಿ ಭಾರತೀಯ ಪ್ರವಾಸಿಗರ ಸಂಖ್ಯೆ 2,09,198. ನಂತರದ ಸ್ಥಾನದಲ್ಲಿ ರಷ್ಯಾ (2,09,146) ಮತ್ತು ಚೀನಾ (1,87,118) ಪ್ರವಾಸಿಗರಿದ್ದಾರೆ. ಹಾಗಾಗಿ, ಭಾರತದೊಂದಿಗೆ ಸಂಘರ್ಷಕ್ಕಿಳಿಯುವುದು ಆರ್ಥಿಕವಾಗಿಯೂ ಲಾಭದಾಯಕವಲ್ಲ ಎಂಬುದು ಅರಿವಿಗೆ ಬರುತ್ತಿದ್ದಂತೆ ಅಲ್ಲಿನ ಸರ್ಕಾರವು ಸಚಿವರ ವಿರುದ್ಧ ಕ್ರಮಕ್ಕೆ ಮುಂದಾಯಿತು.
ಹಿಂದೂ ಮಹಾಸಾಗರದಲ್ಲಿ ಭಾರತಕ್ಕೆ ಮಾಲ್ಡೀವ್ಸ್ ಮಹತ್ವದ ಪಾಲುದಾರ ರಾಷ್ಟ್ರವಾಗಿದ್ದರೂ ಅದರ ಭಾರತದ ವಿರೋಧಿ ನೀತಿಗಳಿಗೆ ಸೊಪ್ಪು ಹಾಕಬೇಕಿಲ್ಲ. ಮಾಲ್ಡೀವ್ಸ್ಗೆ ಭವಿಷ್ಯದಲ್ಲಿ ಪಾಠ ಕಲಿಸಬೇಕಿದ್ದರೆ, ನಮ್ಮ ಲಕ್ಷದ್ವೀಪ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಜಾಗತಿಕ ಪ್ರವಾಸಿ ತಾಣಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಲಕ್ಷದ್ವೀಪಗಳಂತೂ ಮಾಲ್ಡೀವ್ಸ್ಗೆ ಯಾವುದರಲ್ಲೂ ಕಡಿಮೆ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಮತ್ತು ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ಮಾಲ್ಡೀವ್ಸ್ಗೆ ತಕ್ಕಶಾಸ್ತಿ ಮಾಡಬೇಕು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ : ಸಿಎಂ ಆಶಯದ ನಿರ್ಭೀತ ಬೆಂಗಳೂರು ನಿಜವಾಗಲಿ