Site icon Vistara News

ವಿಸ್ತಾರ ಸಂಪಾದಕೀಯ: ವೈಮಾನಿಕ ಉದ್ಯಮದಲ್ಲಿ ಭಾರತದ ದಾಪುಗಾಲು

Vistara Editorial, India progressing in aviation industry

ರ್ನಾಟಕವು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಏವಿಯೇಷನ್‌ ಹಬ್‌ ಆಗಲಿದೆ. ದೇಶದಲ್ಲಿ ವಿಮಾನ ಯಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮೂಲೆ ಮೂಲೆಗೆ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಅದೇ ಹೊತ್ತಿಗೆ ಕರ್ನಾಟಕ ವೈಮಾನಿಕ ತಂತ್ರಜ್ಞಾನ (Aviation technology) ಮತ್ತು ಉತ್ಪಾದನೆಯ ಕೇಂದ್ರವಾಗಿ ಮೂಡುತ್ತಿದೆ ಎಂದು‌ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ (BIETC) ಕ್ಯಾಂಪಸನ್ನು (BIETC Campus) ಶುಕ್ರವಾರ ಲೋಕಾರ್ಪಣೆಗೊಳಿಸಿ ಮತ್ತು ಹೆಣ್ಮಕ್ಕಳಿಗೆ ವಿಮಾನ ಯಾನ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವ ಬೋಯಿಂಗ್‌ ಸುಕನ್ಯಾ (Boeing sukanya programme) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಡಿದ ಮಾತುಗಳಿವು(vistara editorial).

ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ ಸುಮಾರು 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕ್ಯಾಂಪಸ್‌. ಅಮೆರಿಕವನ್ನು ಹೊರತುಪಡಿಸಿ ಬೇರೆ ದೇಶದಲ್ಲಿ ನಿರ್ಮಾಣವಾದ ಅತಿ ದೊಡ್ಡ ಕ್ಯಾಂಪಸ್‌ ಇದು. ಈ ಸಂಸ್ಥೆ ಭಾರತೀಯ ಪ್ರತಿಭೆಗಳನ್ನು ಸ್ವಾಗತಿಸಲಿದ್ದು, ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲಿದೆ. ದೇಶದ ಸ್ಟಾರ್ಟಪ್‌ಗಳು, ಖಾಸಗಿ ವಲಯ ಮತ್ತು ಸರ್ಕಾರದೊಡನೆ ಈ ಬಿಐಇಟಿಸಿ ಕೇಂದ್ರ ಕಾರ್ಯಾಚರಿಸಲಿದೆ. ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ನೂತನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರ ಗಮನ ಹರಿಸಲಿದೆ. ಇದರಿಂದ ಜಾಗತಿಕವಾಗಿ ಏರೋಸ್ಪೇಸ್ ಉದ್ಯಮದ ಪ್ರಗತಿಗಾಗಿ ಕಾರ್ಯಾಚರಿಸಲು ಇನ್ನಷ್ಟು ಸಹಕಾರಿ. ಇಲ್ಲಿ 93,000ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಹೊಂದುವ ಗುರಿ ಇದೆ. ಈ ಎಂಜಿನಿಯರ್‌ಗಳು ಸಂಶೋಧನೆ ಮತ್ತು ಅಭಿವೃದ್ಧಿ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು. ಈಗ ಜಗತ್ತಿನ ಅತಿ ಶ್ರೇಷ್ಠ ವೈಮಾನಿನ ತಂತ್ರಜ್ಞಾನ ಕರ್ನಾಟಕದಲ್ಲಿ ನೆಲೆಗೊಂಡಿದೆ. ಈ ಮೂಲಕ ಕರ್ನಾಟಕ ಅತಿ ದೊಡ್ಡ ವಿಮಾನಯಾನ ಹಬ್‌ ಆಗುವ ಸಾಧ್ಯತೆ ಕಂಡುಬರುತ್ತಿದೆ ಎಂದು ಮೋದಿಯವರು ಸರಿಯಾಗಿಯೇ ಗುರುತಿಸಿದ್ದಾರೆ. ಇತ್ತೀಚೆಗೆ ಪ್ರಧಾನಿಯವರು ಗುಬ್ಬಿಯಲ್ಲಿ ಉದ್ಘಾಟಿಸಿದ, ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎನಿಸಿದ ಎಚ್‌ಎಎಲ್‌ ಫ್ಯಾಕ್ಟರಿಯಲ್ಲಿ 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳು ನಿರ್ಮಾಣವಾಗಲಿವೆ. ಇವು ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಹಾಗೆಯೇ ದೇಶದ ಮೊದಲ ಮೇಕ್‌ ಇನ್‌ ಇಂಡಿಯಾ ಹಗುರ ಯುದ್ಧ ವಿಮಾನ ತೇಜಸ್‌ ನಮ್ಮ ಹೆಮ್ಮೆ.

ಭಾರತವು ಈಗ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆಯನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ವಿಮಾನ ಯಾನ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ವಿಮಾನ ಯಾನದ ಸೌಲಭ್ಯವನ್ನು, ಸಂಪರ್ಕದ ವ್ಯವಸ್ಥೆಯನ್ನು ಹೆಚ್ಚಿಸಿದ್ದರಿಂದ ದೇಶದ ಮೂಲೆ ಮೂಲೆಗೆ ವಿಮಾನ ಯಾನ ಸಂಪರ್ಕ ಸಾಧ್ಯವಾಗಿದೆ. ಜನಸಾಮಾನ್ಯರ ವಿಮಾನಯಾನ ಎಂದೇ ಹೆಸರಾದ ಉಡಾನ್‌ ಯೋಜನೆಯ ಪ್ರಭಾವ ಹೆಚ್ಚಿದೆ. 2014ರಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 150ಕ್ಕೆ ಏರಿದೆ. ಇದರಿಂದ ಸರಕು ಸಾಗಾಟದಲ್ಲೂ ಹೆಚ್ಚಳವಾಗಿದೆ.

ಇದರ ಜೊತೆಗೆ, . ವಾಯುಯಾನ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ರಕ್ಷಣಾ ವಿಮಾನಗಳಿರಬಹುದು, ನಾಗರಿಕ ವಿಮಾನಗಳಿರಬಹುದು. ಮಹಿಳೆಯರ ಪಾಲ್ಗೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿದೆ. ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಹಿಳಾ ಪೈಲಟ್‌ಗಳ ಸಂಖ್ಯೆ 15% ಇದೆ. ಇದು ಜಾಗತಿಕ ಶೇಕಡಾವಾರು ಪ್ರಮಾಣಕ್ಕಿಂತ ಶೇಕಡಾ ಮೂರು ಹೆಚ್ಚಾಗಿದೆ. ಬೋಯಿಂಗ್‌ ಸುಕನ್ಯಾದಿಂದ ಇನ್ನಷ್ಟು ಉತ್ತೇಜನ ದೊರೆಯಲಿದೆ.

ಕಳೆದ ಒಂದು ದಶಕದಲ್ಲಿ ಭಾರತದ ಏವಿಯೇಷನ್‌ ಮಾರ್ಕೆಟ್‌ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಉತ್ಪಾದನೆ ಮತ್ತು ಸರ್ವಿಸ್‌ ಸೆಕ್ಟರ್‌ನಲ್ಲಿ ಅವಕಾಶಗಳಿವೆಯೇ ಎಂದು ಬೇರೆ ಬೇರೆ ದೇಶಗಳು ಕಾಯುತ್ತಿವೆ. ಹೀಗೆ ಭಾರತ ದೊಡ್ಡ ಏವಿಯೇಷನ್‌ ಹಬ್‌ ಆಗಿ ಬೆಳೆಯುವ ಲಕ್ಷಣ ತೋರಿದೆ. ವೈಮಾನಿಕ ಕ್ಷೇತ್ರ ಭವಿಷ್ಯದ ಕ್ಷೇತ್ರ. ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ. ಇದರೊಂದಿಗೆ ಇದರ ಸುತ್ತಲಿನ ಇತರ ಹಲವು ವಲಯಗಳೂ ಬೆಳೆಯಲಿವೆ. ಇದು ಸ್ಟಾರ್ಟಪ್‌ಗಳಿಗೆ, ಯುವ ಉದ್ಯಮಿಗಳಿಗೆ ಹೊಸ ಆವಿಷ್ಕಾರಗಳಿಗೆ ನೆರವಾಗಲಿದೆ. ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಉದ್ಯಮಶೀಲತೆಯನ್ನೂ ಸುಗಮಗೊಳಿಸಲಾಗಿದ್ದು, ಕೆಂಪು ಪಟ್ಟಿಯ ಬದಲಿಗೆ ಕೆಂಪು ಹಾಸು ಹಾಸಲಾಗುತ್ತಿದೆ. ಸುಸ್ಥಿರವಾದ ಅಭಿವೃದ್ಧಿಗೆ ಇದು ಮೂಲವಾಗಬೇಕು. ಸ್ಥಳೀಯರಿಗೂ ಹೆಚ್ಚಿನ ಉದ್ಯೋಗ, ಕೌಶಲ್ಯ ವೃದ್ಧಿಗೆ ಕಾರಣವಾಗಬೇಕು. ದೇಶದ ಲಕ್ಷ ಕೋಟಿ ಜಿಡಿಪಿ ಕನಸಿಗೆ ವೈಮಾನಿಕ ಕ್ಷೇತ್ರವೂ ಕೊಡುಗೆ ನೀಡುವಂತಾಗಬೇಕು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಆನ್‌ಲೈನ್‌ನಲ್ಲಿ ಮಕ್ಕಳ ಕೈಗೆ ಲೈಂಗಿಕ ಸರಕು ಆಘಾತಕಾರಿ

Exit mobile version