Site icon Vistara News

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

Solar

Vistara Editorial: India's Achievement In Solar power generation Is Remarkable

ಹವಾಮಾನ ಬದಲಾವಣೆ (Climate Change), ಜಾಗತಿಕ ತಾಪಮಾನ ಏರಿಕೆ ಕುರಿತು ಜಗತ್ತಿನಾದ್ಯಂತ ಚರ್ಚೆಗಳು, ಪರಿಹಾರಕ್ಕಾಗಿ ಯೋಜನೆ ರೂಪಿಸುವುದು ಸೇರಿ ಹತ್ತಾರು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಚಳಿಗಾಲದಲ್ಲೂ ಬಿರುಬಿಸಿಲು, ಬೇಸಿಗೆಯಲ್ಲಿ ಅಕಾಲಿಕ ಮಳೆ, ಕಾಡುಗಳು ಇರುವ ಪ್ರದೇಶದಲ್ಲೂ ಹೆಚ್ಚಿದ ತಾಪ ಸೇರಿ ಹಲವು ಪರಿಣಾಮಗಳು ಹವಾಮಾನ ಬದಲಾವಣೆಗೆ ಹಿಡಿದ ಕನ್ನಡಿಯೇ ಆಗಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ (Solar Power Generation) ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಹಾಗಾಗಿ, ಇದು ಮರುಮಾತೇ ಇಲ್ಲದೆ ಶ್ಲಾಘನೀಯ ಸಾಧನೆ ಎಂದು ಹೇಳಬಹುದಾಗಿದೆ.

2015ರಲ್ಲಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು 9ನೇ ಸ್ಥಾನದಲ್ಲಿತ್ತು. ಆದರೆ, 2015ರಿಂದ 2023ರ ಅವಧಿಯಲ್ಲಿ ಭಾರತವು ಆರು ಪಟ್ಟು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದೇ ಮೂರನೇ ಸ್ಥಾನಕ್ಕೇರಲು ಕಾರಣವಾಗಿದೆ. 2023ರಲ್ಲಿ ಜಾಗತಿಕ ವಿದ್ಯುತ್‌ ವಲಯದಲ್ಲಿ ದಾಖಲೆಯ ಶೇ. 5.5ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ. ಆದರೆ, ಭಾರತದಲ್ಲಿ ಸೌರ ಶಕ್ತಿಯಿಂದ ಶೇ. 5.8ರಷ್ಟು ವಿದ್ಯುತ್‌ ಉತ್ಪಾದಿಸಲಾಗಿದೆ ಎಂದು ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ (Ember) ತಿಳಿಸಿದೆ. ಇದು ಭಾರತವು ಸೌರ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸುವಲ್ಲಿ ಕಂಡುಕೊಂಡರುವ ವೇಗಕ್ಕೆ ಸಾಕ್ಷಿಯಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯು 2015ರಲ್ಲಿದ್ದ ಶೇ. 0.5ರಿಂದ 2023ಕ್ಕೆ ಶೇ. 5.8ಕ್ಕೆ ಏರಿಕೆಯಾಗಿದೆ ಎಂದು ಎಂಬರ್‌ ತನ್ನ ವರದಿಯಲ್ಲಿ ಕಂಡುಕೊಂಡಿದೆ. ಇಂಟರ್‌ ನ್ಯಾಷನಲ್‌ ಎನರ್ಜಿ ಏಜೆನ್ಸಿಯ(IEA) ಪ್ರಕಾರ, 2030ರ ವೇಳೆಗೆ ಸೌರ ವಿದ್ಯುತ್ ಉತ್ಪಾದನೆಯು ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ. 22ಕ್ಕೆ ಏರಿಕೆಯಾಗಲಿದೆ. ಭಾರತದ ವಾರ್ಷಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಅರ್ಧದಷ್ಟು (2023ರಲ್ಲಿ 1.18 ಗಿಗಾಟನ್) ವಿದ್ಯುತ್ ಉತ್ಪಾದನೆ ಕಾರಣವಾಗುತ್ತಿರುವುದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿಕೊಂಡಿದೆ. ಆದರೆ, ಭಾರತವು ಗಣನೀಯವಾಗಿ ಸೌರ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವುದರಿಂದ ಪರಿಸರದ ಮೇಲಿನ ಪರಿಣಾಮಕ್ಕೂ ಭಾರತ ಪರಿಹಾರ ಕಂಡುಕೊಳ್ಳುವಂತಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಈಗ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಭಾರತವು ಇನ್ನಷ್ಟು ಸಾಧನೆ ಮಾಡಿದರೂ ಅಚ್ಚರಿ ಇಲ್ಲ. ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಮುನ್ನಡೆಯಾಗಿವೆ. ಅದರಲ್ಲೂ, ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಸುವುದು ಕಷ್ಟವಾಗುವ ಜತೆಗೆ ಖಜಾನೆಗೂ ಹೊರೆಯಾಗುತ್ತದೆ. ಇದಕ್ಕೆ ಸೌರ ವಿದ್ಯುತ್‌ ಉತ್ಪಾದನೆಯೇ ರಾಜಮಾರ್ಗವಾಗಿದೆ.

ಹವಾಮಾನ ಬದಲಾವಣೆ ಕುರಿತು ಭಾರತ ಜಾಗತಿಕ ವೇದಿಕೆಗಳಲ್ಲಿ ಭಾರತವು ಪ್ರಬಲವಾಗಿ ಪ್ರತಿಪಾದನೆ ಮಾಡುತ್ತದೆ. ಹವಾಮಾನ ನಿಯಂತ್ರಣದ ಕುರಿತು ನರೇಂದ್ರ ಮೋದಿ ಅವರು ಮಾತನಾಡುತ್ತಾರೆ. ಹವಾಮಾನ ಬದಲಾವಣೆ ವಿರುದ್ಧದ ಸಮರದ ತಂಡದಲ್ಲಿ ಭಾರತವೂ ಪ್ರಮುಖ ಸದಸ್ಯವಾಗಿದೆ. ಇದೇ ಕಾರಣಕ್ಕಾಗಿ, ಸೌರ ವಿದ್ಯುತ್‌ ಉತ್ಪಾದನೆಯ ಸಾಧನೆಯು ಜಗತ್ತಿಗೇ ಮಾದರಿಯಾಗಿದೆ. ಇನ್ನು ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ವಿಕಸಿತ ಭಾರತದ ನಿರ್ಮಾಣಕ್ಕಿರುವ ಮಾನದಂಡಗಳಲ್ಲಿ ಸೌರ ವಿದ್ಯುತ್‌ ಕ್ಷೇತ್ರದ ಸಾಧನೆಯು ಪ್ರಮುಖವಾಗಿದೆ. ಹಾಗಾಗಿ, ಜಪಾನ್‌ಗಿಂತ ಭಾರತ ಮುಂದೆ ಹೋಗಿರುವುದು ವಿಕಸಿತ ಭಾರತದತ್ತ ದಾಪುಗಾಲು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Exit mobile version