2023-24ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಅಂಕಿ ಅಂಶಗಳು ಘೋಷಣೆಯಾಗಿವೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistical Office – NSO) ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದ ಜಿಡಿಪಿ ಶೇ.7.6ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ಜುಲೈನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗಿನ ಚಿತ್ರಣ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ. 6.2ರಷ್ಟಿತ್ತು. ಇನ್ನೊಂದು ಮಹತ್ವದ ಸಂಗತಿ ಎಂದರೆ, ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ. 7.8ರಷ್ಟಿತ್ತು. ಈ ಸಾಲಿನ ಎರಡೂ ತ್ರೈಮಾಸಿಕಗಳನ್ನು ಸೇರಿಸಿದರೆ ಮೊದಲ ಅರ್ಧ ವರ್ಷದ ಜಿಡಿಪಿ ಶೇ. 7.7 ಆಗಿದೆ. “ಜಾಗತಿಕವಾಗಿ ಪರೀಕ್ಷೆಯ ಸಮಯದ ನಡುವೆ ಭಾರತೀಯ ಜಿಡಿಪಿಯ ಬೆಳವಣಿಗೆಯು, ನಮ್ಮ ಆರ್ಥಿಕತೆಯ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ಪ್ರದರ್ಶಿಸಿದೆ. ಇನ್ನೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ವೇಗದ ಗತಿಯ ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ. ಬಡತನದ ತ್ವರಿತ ನಿರ್ಮೂಲನೆ ಮತ್ತು ಬದುಕಿನ ಸ್ಥಿತಿಗತಿ ಸುಧಾರಣೆ ನಮ್ಮ ಆದ್ಯತೆಯಾಗಿದೆʼ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ(Vistara Editorial).
ಇದು ನಿರೀಕ್ಷೆ ಮೀರಿದ ಬೆಳವಣಿಗೆ. ಜಿಡಿಪಿ ಬೆಳವಣಿಗೆ ದರ ಕಳೆದ ವರ್ಷದ ಇದೇ ಅವಧಿಗಿಂತ ಕಡಿಮೆ ಇದೆಯಾದರೂ ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿದೆ. ಯಾಕೆಂದರೆ, ಹಲವಾರು ಆರ್ಥಿಕ ತಜ್ಞರು ಮತ್ತು ಸಂಸ್ಥೆಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಬೆಳವಣಿಗೆ ನಡೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಈಗಾಗಲೇ ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ.6.5ರಿಂದ ಶೇ.7.1ರಷ್ಟು ಏರಿಕೆ ಆಗಲಿದೆ ಎಂದಿದ್ದರು. ರೇಟಿಂಗ್ ಏಜನ್ಸಿಯಾದ ಇಕ್ರಾ ಸಂಸ್ಥೆಯ ತಜ್ಞರ ಪ್ರಕಾರ ಭಾರತದ ಜಿಡಿಪಿಯು ಎರಡನೇ ತ್ರೈಮಾಸಿಕದಲ್ಲಿ ಶೇ.7ರಷ್ಟು ಇರಲಿದೆ ಎಂದಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶೇ.6.9ರಿಂದ ಶೇ.7.1ರಷ್ಟು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿತ್ತು. ಬಾರ್ಕ್ಲೇಸ್ ಇಂಡಿಯಾ ಶೇ.6.5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಜಿಡಿಪಿ ಲೆಕ್ಕಾಚಾರಗಳ ಆಧಾರದಲ್ಲಿ ದೇಶ ಹೆಮ್ಮೆ ಪಡಬಹುದಾದ ಹಲವಾರು ಸಂಗತಿಗಳು ಇವೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ತನ್ನ ಶಕ್ತಿಯನ್ನು ತೋರ್ಪಡಿಸಿದೆ. ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಚೀನಾ ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಸಾಧಿಸಿರುವ ಪ್ರಗತಿ ಶೇ. 4.9 ಮಾತ್ರ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಲೆಕ್ಕಾಚಾರದ ಪ್ರಕಾರ, ನಿರ್ದಿಷ್ಟ ಕ್ಷೇತ್ರಗಳ ನಿವ್ವಳ ಮೌಲ್ಯ ವರ್ಧನೆ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಇದೆ. ಕೃಷಿ ಕ್ಷೇತ್ರವು ಶೇ. 1.2ರಷ್ಟು ಬೆಳವಣಿಗೆಯನ್ನು ಕಂಡಿದೆ. ಉತ್ಪಾದನಾ ವಲಯದಲ್ಲಿ ಈ ಬಾರಿ ದಾಖಲಾಗಿರುವ ಬೆಳವಣಿಗೆ ದರ 13.9 ಶೇಕಡಾ. ಸೇವಾ ವಲಯದಿಂದ ಹೆಚ್ಚಿನ ಜಿಡಿಪಿ ಬಂದಿದೆ. ಇದೇ ಹೊತ್ತಿಗೆ ಈಕ್ವಿಟಿ ಮಾರುಕಟ್ಟೆಯಿಂದಲೂ ಶುಭ ಸುದ್ದಿ ಬಂದಿದೆ. ನಮ್ಮ ದೇಶದ ಪ್ರಮುಖ ಸ್ಟಾಕ್ ಎಕ್ಸ್ಚೇಂಜ್ ಬಿಎಸ್ಇಯಲ್ಲಿ (BSE) ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಮಾಪನವು (Equity Market) ಬುಧವಾರ ಮೊದಲ ಬಾರಿಗೆ 4 ಟ್ರಿಲಿಯನ್ ಅಮೆರಿಕನ್ ಡಾಲರ್ (3.33 ಕೋಟಿ ಕೋಟಿ ರೂ.) ಮೈಲಿಗಲ್ಲನ್ನು ತಲುಪಿದೆ. ಇದು ಕೂಡ ಒಂದು ಮುಖ್ಯವಾದ ಬೆಳವಣಿಗೆ.
ಒಂದು ದೇಶದ ಮಾರುಕಟ್ಟೆಯಲ್ಲಿ ಈ ಪ್ರಮಾಣದ ಬೆಳವಣಿಗೆಯಾಗುವುದು, ಜಿಡಿಪಿ ನಿರಂತರವಾಗಿ ಪ್ರಗತಿ ತೋರಿಸುವುದು ಯಾವಾಗ ಎಂದರೆ, ಆ ದೇಶದ ಮಾರುಕಟ್ಟೆಯಲ್ಲಿ ಒಳಗಿನ ಹಾಗೂ ಹೊರಗಿನ ಹೂಡಿಕೆದಾರರ ವಿಶ್ವಾಸ ಹೆಚ್ಚಿದಾಗ. ಅಂದರೆ ಇಲ್ಲಿ ಒಳ್ಳೆಯ ಹೂಡಿಕೆ ಮಾಡಬಹುದು, ಸುರಕ್ಷಿತ ವಾತಾವರಣವಿದೆ, ಇಲ್ಲಿ ಪ್ರಗತಿಯ ಸಾಧ್ಯತೆಯಿದೆ ಎಂದು ತೋರಿದಾಗ ಮಾತ್ರ ಅಂಥಲ್ಲಿ ಹಣ ಹೂಡಲಾಗುತ್ತದೆ. ಇಂತಹ ಆತ್ಮವಿಶ್ವಾಸದ ಪರಿಣಾಮವಾಗಿಯೇ ದೇಶದ ಜಿಡಿಪಿ ಏರಿಕೆಯಾಗಿದೆ ಹಾಗೂ ಈಕ್ವಿಟಿ ಮಾರುಕಟ್ಟೆ ಉತ್ತುಂಗ ಮುಟ್ಟಿದೆ. ಚೀನಾದಂಥ ಹಿತಶತ್ರು, ಪಾಕ್ನಂಥ ವೈರಿಗಳು ಅಕ್ಕಪಕ್ಕದಲ್ಲಿದ್ದಾಗಲೂ ಎದೆಗುಂದದೆ ನಾವು ವಿಶ್ವದ ದೊಡ್ಡ ದೇಶಗಳನ್ನು ಮಿತ್ರರನ್ನಾಗಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ದೇಶದ ಮಾರುಕಟ್ಟೆಗೆ ಬೇಕಾದಂತೆ ಕುಣಿಸುತ್ತಿದ್ದೇವೆ. ನಮ್ಮ ಜನಸಂಖ್ಯಾ ಬಂಡವಾಳ, ದುಡಿಯುವ ವರ್ಗ ನಮ್ಮ ಮಾರುಕಟ್ಟೆಗೆ ಪೂರಕವಾಗಿದೆ. ಇಲ್ಲಿನ ಪ್ರತಿಭೆಗಳು ಯುಎಸ್, ಯುಕೆಯ ಆರ್ಥಿಕತೆಗಳನ್ನು ಕಟ್ಟುತ್ತಿವೆ. ಜಿಡಿಪಿ ಏರಿಕೆಯ ಪರಿಣಾಮವು, ಪ್ರಧಾನಿಯವರು ಹೇಳಿದಂತೆ ನಮ್ಮ ಜನತೆಯ ಬಡತನದ ತ್ವರಿತ ನಿರ್ಮೂಲನೆ ಮತ್ತು ಬದುಕಿನ ಸ್ಥಿತಿಗತಿ ಸುಧಾರಣೆಗೂ ಮೂಲವಾಗಬೇಕು. ಆಗ ಜಿಡಿಪಿ ಬೆಳವಣಿಗೆಗೆ ಹೆಚ್ಚಿನ ಅರ್ಥ ಬರುತ್ತದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕನ್ನಡ ಚಲನಚಿತ್ರಗಳು ಒಟಿಟಿಗಳಿಗೆ ಅಸ್ಪೃಶ್ಯವೇ?