ಭಯೋತ್ಪಾದನೆಯ (Terrorism) ವಿರುದ್ಧ ಶೂನ್ಯ ಸಹಿಷ್ಣು ನೀತಿಯ ಭಾಗವಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (Student Islamic Movement of India – SIMI) ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ ಐದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೇಳಿದ್ದಾರೆ. ಯುಎಪಿಎ ಅಡಿಯಲ್ಲಿ 2001ರಲ್ಲಿ ಈ ಸಂಘಟನೆ ಮೇಲೆ ನಿಷೇಧ ಹೇರಲಾಗಿತ್ತು. ಆ ನಿಷೇಧವನ್ನು ವಿಸ್ತರಣೆ ಮಾಡುತ್ತಾ ಬರಲಾಗಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ಭಯೋತ್ಪಾದನೆಯಲ್ಲಿ ತೊಡಗಿರುವ ಈ ಸಂಘಟನೆಯು ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿದೆ ಎಂದು ಶಾ ಹೇಳಿದ್ದಾರೆ(Vistara Editorial).
2017ರ ಗಯಾ ಸ್ಫೋಟ, 2014 ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ, 2014ರ ಭೋಪಾಲ್ ಜೈಲು ಬ್ರೇಕ್ ಸೇರಿದಂತೆ ಅನೇಕ ಭಯೋತ್ಪಾದನಾ ಕೃತ್ಯಗಳಲ್ಲಿ ಸಿಮಿ ಸಂಘಟನೆಯು ಸದಸ್ಯರು ಭಾಗಿಯಾಗಿದ್ದಾರೆ. 1977ರ ಏಪ್ರಿಲ್ 25ರಂದು ಉತ್ತರ ಪ್ರದೇಶದಲ್ಲಿ ಅಲಿಘಡದಲ್ಲಿ ಸಿಮಿ ಸಂಘಟನೆಯನ್ನು ಸ್ಥಾಪನೆ ಮಾಡಲಾಯಿತು. ಈ ಸಂಘಟನೆಯ ಮುಖ್ಯ ಉದ್ದೇಶ ಸ್ವತಂತ್ರ ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನು ಮಾಡುವುದು ಮತ್ತು ಇದಕ್ಕಾಗಿ ದೇಶದಲ್ಲಿ ಜಿಹಾದ್ ಸಾರುವುದು ಆಗಿತ್ತು. ಪರಿಣಾಮ ದೇಶದ ಅನೇಕ ಕಡೆ ಈ ಸಂಘಟನೆಯ ಸದಸ್ಯರು ವಿವಿಧ ಉಗ್ರ ಕೃತ್ಯಗಳಲ್ಲಿ ಭಾಗಿಯಾದದ್ದು ಸಾಬೀತಾಗಿದೆ.
ಒಂದು ಸಂಘಟನೆಯನ್ನು ನಿಷೇಧಿಸಬೇಕಿದ್ದರೆ, ಅದು ಕಾನೂನುಬಾಹಿರ ಚಟುವಟಿಗಳ ತಡೆ ಕಾಯಿದೆಯಡಿ (UAPA) ʼಕಾನೂನುಬಾಹಿರ ಸಂಘಟನೆ’ ಎಂಬುದು ರುಜುವಾತಾಗಬೇಕು. ಇದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇರಬೇಕು. ನಿಷೇಧದ ಬಳಿಕ ಮೂವತ್ತು ದಿನಗಳ ಒಳಗೆ ಸಂಘಟನೆ ಮೇಲ್ಮನವಿ ಸಲ್ಲಿಸಿದರೆ, ಅದನ್ನು ನ್ಯಾಯಾಧೀಶರಿರುವ ಟ್ರಿಬ್ಯುನಲ್ ಕೂಡ ಸಮ್ಮತಿಸಬೇಕು. ನಮ್ಮಲ್ಲಿ ಹೀಗೆ ಹತ್ತಾರು ಭಯೋತ್ಪಾದಕ ಸಂಘಟನೆಗಳು ನಿಷೇಧಿಸಲ್ಪಟ್ಟಿವೆ. ಪಿಎಫ್‌ಐ ಕೂಡ ಹೀಗೆ ನಿಷೇಧಿಸಲ್ಪಟ್ಟಿರುವ ಸಂಘಟನೆಗಳಲ್ಲಿ ಒಂದು. ಕಳೆದ ವರ್ಷ ಇದನ್ನು ನಿಷೇಧಿಸಲಾಗಿತ್ತು. ಸಿಮಿ ಹಾಗೂ ಪಿಎಫ್‌ಐ ಇವೆಲ್ಲವೂ ಮೇಲ್ನೋಟಕ್ಕೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಸ್ಪಷ್ಟವಿದೆ.
ಸಿಮಿ ಹೆಚ್ಚಾಗಿ ಉತ್ತರ ಪ್ರದೇಶ, ದೆಹಲಿ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ. ಇದು ಜಮಾತ್-ಎ-ಇಸ್ಲಾಮಿ ಹಿಂದ್ (JIH) ನ ವಿದ್ಯಾರ್ಥಿ ವಿಭಾಗವಾಗಿತ್ತು. 1981ರಲ್ಲಿ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ ನಾಯಕ ಯಾಸರ್ ಅರಾಫತ್ ಅವರ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯದಿಂದಾಗಿ ಮೂಲ ಸಂಘಟನೆಯಿಂದ ಬೇರ್ಪಟ್ಟಿತು. 1980ರ ದಶಕದಲ್ಲಿ ಅದರ ಸಿದ್ಧಾಂತದಲ್ಲಿ ಆಮೂಲಾಗ್ರ ಬದಲಾವಣೆ ಕಂಡಿತು. SIMI ಮೂರು ತತ್ವಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ- ಕುರಾನ್ ಆಧಾರದ ಮೇಲೆ ಮಾನವ ಜೀವನವನ್ನು ನಿಯಂತ್ರಿಸುವುದು, ಇಸ್ಲಾಂ ಧರ್ಮದ ಪ್ರಚಾರ ಮತ್ತು ಇಸ್ಲಾಮಿನ ಕಾರಣಕ್ಕಾಗಿ ಜಿಹಾದ್ ಸಂಘಟಿಸುವುದು. ಇಸ್ಲಾಮಿಕ್ ದೇಶ ಸ್ಥಾಪನೆ, ಇಸ್ಲಾಮಿಕ್ ಬ್ರದರ್‌ಹುಡ್‌ನ ಸ್ಥಾಪನೆ, ಇಸ್ಲಾಂನ ಶ್ರೇಷ್ಠತೆಯನ್ನು ಸ್ಥಾಪಿಸಲು ಜಿಹಾದ್ ಅಗತ್ಯ ಎಂಬುದೆಲ್ಲ ಈ ಸಂಸ್ಥೆಯ ಬೋಧನೆಗಳಾಗಿವೆ. 1992ರ ಬಳಿಕ ಈ ಸಂಘಟನೆ ಹೆಚ್ಚು ಹೆಚ್ಚು ಉಗ್ರವಾಗುತ್ತ ಬಂದಿದೆ.
ಇಂಥ ಸಂಘಟನೆಗಳೆಲ್ಲ ಭಾರತೀಯ ಮೌಲ್ಯ ಆದರ್ಶಗಳಿಗೆ ವಿರುದ್ಧವಾಗಿದೆ; ನಮ್ಮ ಸಂವಿಧಾನ ಪ್ರತಿಪಾದಿಸುವ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯನ್ನೂ ತಿರಸ್ಕರಿಸುತ್ತದೆ. ಭಯೋತ್ಪಾದನೆಯನ್ನು ಪ್ರತಿಪಾದಿಸುವ ಇದರ ಹಲವು ನಾಯಕರು ಬಂಧನದಲ್ಲಿದ್ದಾರೆ. ಭಾರತದ ಸಾರ್ವಭೌಮತೆಗೆ ಆತಂಕಕಾರಿಯಾಗಿರುವ ಈ ಸಂಘಟನೆ ನಿಷೇಧದಲ್ಲಿರುವುದೇ ಒಳ್ಳೆಯದು.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಹೌತಿ ಉಗ್ರರನ್ನು ಮಟ್ಟ ಹಾಕಬೇಕಿದೆ