Site icon Vistara News

ವಿಸ್ತಾರ ಸಂಪಾದಕೀಯ: ಅನುದಾನ ಘೋಷಣೆಯಾದರೆ ಸಾಲದು, ಕಲ್ಯಾಣವೂ ಆಗಬೇಕು

Monsoon session

ಕಲ್ಯಾಣ ಕರ್ನಾಟಕದ (Kalyana Karnataka) ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಹೊಸ ಸವಾಲು ಎದುರಾಗಿದೆ. ಏಳು ತಿಂಗಳ ಬಳಿಕ ಕೆಕೆಆರ್‌ಡಿಬಿ (KKRDB) ಕಾಮಗಾರಿಗಳ ಕ್ರಿಯಾ ಯೋಜನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. 2023-24ರ ಸಾಲಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ 3 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ಸಮ್ಮತಿ ಸಿಕ್ಕಿದೆ. ಆದರೆ, ಇನ್ನು 3 ತಿಂಗಳಲ್ಲಿ 3 ಸಾವಿರ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಖರ್ಚು ಮಾಡುಲು ಆಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಪ್ರಸಕ್ತ ಹಣಕಾಸು ಅವಧಿ ಅಂತ್ಯವಾಗುವುದು ಮಾರ್ಚ್‌ನಲ್ಲಾಗಿದೆ. ಈ ಮಾರ್ಚ್‌ ಒಳಗೆ ಟೆಂಡರ್‌ ಕರೆದು ಕಾಮಗಾರಿ ಮುಗಿಸುವ ಸವಾಲು ಎದುರಾಗಿದೆ. ಇದು ಸಾಧ್ಯವೇ? ಒಂದೊಮ್ಮೆ ಇನ್ನು ಬಾಕಿ ಇರುವ ಮೂರು ತಿಂಗಳೊಳಗೆ ಟೆಂಡರ್‌ ಕರೆದು ಅಭಿವೃದ್ಧಿ ಕಾರ್ಯ ನಡೆಸಲು ಆಗದೇ ಇದ್ದಲ್ಲಿ 3 ಸಾವಿರ ಕೋಟಿ ರೂ. ಮತ್ತೆ ಸರ್ಕಾರದ ಖಜಾನೆ ಸೇರಲಿದೆ. ಆ ಮೂಲಕ ಕಲ್ಯಾಣ ಕರ್ನಾಟಕ ಜನರ ಅಭಿವೃದ್ಧಿ ಕನಸಿಗೆ ಕೊಳ್ಳಿ ಬೀಳಲಿದೆ(Vistara Editorial).

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಬಹಳಷ್ಟು ಸಲ ಅನ್ಯಾಯ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಇದು ಬೆಂಗಳೂರು- ಮೈಸೂರು ಕೇಂದ್ರಿತವಾದ ರಾಜ್ಯದ ಆಡಳಿತಗಾರರ ಕಣ್ಣಿಗೇ ಬೀಳುವುದಿಲ್ಲ. ಹೀಗಾಗಿಯೇ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಬಲವಾಗುತ್ತಿರುವುದು. ಅಲ್ಲಿನವರಲ್ಲಿ ಅಭಿವೃದ್ಧಿ ವಂಚಿತ ಭಾವ ದಟ್ಟವಾಗಿದೆ. ಇದೀಗ ಅನುಮೋದನೆ ಸಿಕ್ಕಿರುವ ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳುವ ಸವಾಲು. ರಾಜಕೀಯ ಕಾರಣಕ್ಕೆ ಹೈಡ್ರಾಮಾ ಮಾಡುವ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಸುಮ್ಮನಿದ್ದಾರೆ. ಗ್ಯಾರಂಟಿ ಗುಂಗಿನಲ್ಲಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಹ ಈ ವಿಷಯದಲ್ಲಿ ಮೌನ ವಹಿಸಿದೆ. ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಕೊಡಿಸುವ ಬಗ್ಗೆ ಅಧಿವೇಶನದಲ್ಲಿ ಮಾತನಾಡುವುದು ಬಿಟ್ಟರೆ ನಿಜವಾಗಿಯೂ ನ್ಯಾಯ ಸಿಗುವುದು ಯಾವಾಗ ಎಂಬ ಪ್ರಶ್ನೆಯನ್ನು ಅಲ್ಲಿನ ಸಾರ್ವಜನಿಕರು ಎತ್ತಿದರೆ ಅದರಲ್ಲಿ ತಪ್ಪೇನಿಲ್ಲ.

ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವ ಇತ್ತೀಚೆಗೆ ನಡೆದವು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ. ಅಸಂಖ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿಯಿಂದಾಗಿ ಹೈದರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೂ, ಕರ್ನಾಟಕಕ್ಕೂ ಸೇರ್ಪಡೆಯಾಯಿತು. ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಯ್ನು ನೀಡಿದ ಪ್ರದೇಶವಿದು. ಜಗಜ್ಯೋತಿ ಬಸವಣ್ಣನವರ ಸಾಮಾಜಿಕ ಕ್ರಾಂತಿ, ಕಲ್ಯಾಣ ಚಾಲುಕ್ಯರು, ಬಹಮನಿ ಸುಲ್ತಾನರು, ರಾಷ್ಟ್ರಕೂಟರ ಆಳ್ವಿಕೆಯ ಭವ್ಯ ಪರಂಪರೆ ನೀಡಿದ ಪ್ರದೇಶ. ಆದರೆ ರಾಜಧಾನಿ ಕೇಂದ್ರಿತ ಅಭಿವೃದ್ಧಿಯಿಂದಾಗಿ, ಈ ಪ್ರದೇಶದಲ್ಲಿ ಅಭಿವೃದ್ಧಿ ಮರೀಚಿಕೆಯಾಯಿತು.

ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ನಿಜಾಮನ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ ಹಾಗೂ ರಾಯಚೂರು, ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿನ ಬಳ್ಳಾರಿ ಜಿಲ್ಲೆ ಒಳಗೊಂಡಂತೆ 1990ರಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಅಭಿವೃದ್ಧಿ ಕಾರ್ಯಕ್ಕೆ ವಿಶೇಷ ನಿಧಿ ನೀಡಲಾಗಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಸಾಕಾರವಾಗಲಿಲ್ಲ. 2012ರಲ್ಲಿ ಸಂವಿಧಾನ ಕಲಂ 371ಕ್ಕೆ ತಿದ್ದುಪಡಿ ತಂದು 371 (ಜೆ) ಪರಿಚ್ಛೇದ ಸೇರ್ಪಡೆಯಾಗಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆಯಿತು. ಮುಂದೆ ಇದು ಕಲ್ಯಾಣ ಕರ್ನಾಟಕವಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯೂ ರೂಪುಗೊಂಡು, ಈ ಪ್ರದೇಶದ ಅಭಿವೃದ್ಧಿಗೆ ಪರಿಶ್ರಮ ನಡೆಯುತ್ತಲೇ ಇದೆ. ಆದರೆ ನಾನಾ ಕಾರಣಗಳಿಂದಾಗಿ ವಂಚನೆಯಾಗುತ್ತಿರುವುದು ತಪ್ಪಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2023-24ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿತ್ತು. ಅದು ಏನಾಯಿತೋ ತಿಳಿಯದು.

ಅನುದಾನಗಳ ಘೋಷಣೆಯಾದರೆ ಸಾಲದು. ಅವು ಸಮರ್ಪಕವಾಗಿ ಅನುಷ್ಠಾನವೂ ಆಗಬೇಕು. ಕಲ್ಯಾಣ ಕರ್ನಾಟಕದ 7 ಜಿಲ್ಲೆಗೆ ಈ ಬಾರಿ ಅನುಮತಿ ಸಿಕ್ಕಿರುವ 3 ಸಾವಿರ ಕೋಟಿ ರೂಪಾಯಿ ಖರ್ಚಾಗುವುದು ಬಹುತೇಕ ಅನುಮಾನವಾಗಿದೆ. ತಾಂತ್ರಿಕ ದೃಷ್ಟಿಯಿಂದ ಗಮನಿಸಿದಲ್ಲಿ ಇದು ಕಷ್ಟ ಸಾಧ್ಯ. ಇದಕ್ಕೆ ಉತ್ತರದಾಯಿತ್ವ ಯಾರು? ಕೆಕೆಆರ್‌ಡಿಬಿ ವತಿಯಿಂದ ಇನ್ನು 3 ತಿಂಗಳಲ್ಲಿ 3 ಕೋಟಿ ರೂಪಾಯಿ ಅನುದಾನವನ್ನು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೆಯೇ? ಈ ಭಾಗದ ಜನರಿಗೆ ನ್ಯಾಯ, ಪ್ರಗತಿ, ಸುಖಿಜೀವನ ಕಲ್ಪಿಸಿಕೊಡಲು ಮಂಜೂರಾದ ಅನುದಾನಗಳ ಕ್ರಿಯಾಶೀಲ ಅನುಷ್ಠಾನಕ್ಕೆ ಎಲ್ಲರೂ ಪ್ರಯತ್ನಿಸಬೇಕಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ, ಸಮೀಕ್ಷೆಯಿಂದ ಸತ್ಯ ಹೊರಬರಲಿ

Exit mobile version