ಕನ್ನಡ ನಾಮಫಲಕ ಜಾಗೃತಿ ಆಂದೋಲನದ ಭಾಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಜಧಾನಿಯಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ (Karave Protest) ನಡೆಸಲಾಗಿದೆ. ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಅಳವಡಿಕೆಗೆ ಒತ್ತಾಯಿಸಿದ ಕರವೇ ಕಾರ್ಯಕರ್ತರು, ಹಲವೆಡೆ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದು, ಧ್ವಂಸ ಮಾಡಿ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದರು. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರ ನೇತೃತ್ವದಲ್ಲಿ ವಿಮಾನ ನಿಲ್ದಾಣ ಬಳಿಯ ಸಾದಹಳ್ಳಿ ಗೇಟ್‌ನಿಂದ ಕಬ್ಬನ್ ಪಾರ್ಕ್‌ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸಾದಹಳ್ಳಿ ಗೇಟ್ ಬಳಿಯೇ ನಾರಾಯಣ ಗೌಡರು ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದ ಪರಿಣಾಮ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತು. ಕೆಲವೆಡೆ ಕಾರ್ಯಕರ್ತರ ಆಕ್ರೋಶ ಮೇರೆ ಮೀರಿರಬಹುದಾದರೂ, ಕನ್ನಡಕ್ಕಾಗಿ ತೋರಿರುವ ಈ ಕೆಚ್ಚು ಪ್ರಶಂಸನೀಯವೇ ಹೌದು(Vistara Editorial).
ಅಂಗಡಿ-ಮುಂಗಟ್ಟು, ಮಳಿಗೆಗಳು, ಮಾಲ್‌ಗಳು ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ (Kannada nameplate mandatory) ಅಳವಡಿಸಿಕೊಳ್ಳಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಹಿಂದೆಯೇ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28ರೊಳಗಾಗಿ ಶೇ. 60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಬೇಕಿತ್ತು. ಬೆಂಗಳೂರಿನ ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕಡೆಗಣನೆ ತೋರಲಾಗುತ್ತಿದೆ. ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ಇದ್ದರೂ, ಆದೇಶ ಪಾಲನೆ ಆಗುತ್ತಿಲ್ಲ ಎಂಬುದು ಕನ್ನಡ ಪರ ಸಂಘಟನೆಗಳ ಸಿಟ್ಟಿಗೆ ಕಾರಣ. ಇದು ಎಲ್ಲ ಕನ್ನಡಿಗರ ಮನದ ಮಾತೂ ಹೌದು.
ಬೆಂಗಳೂರು ಕಾಸ್ಮೊಪಾಲಿಟನ್ ಸಿಟಿ. ಇಲ್ಲಿ ಎಲ್ಲ ನಮ್ಮ ದೇಶದ ಎಲ್ಲ ರಾಜ್ಯಗಳ ಜನ ಬಂದು ನೆಲೆಸಿದ್ದಾರೆ. ಆದರೆ ಇಲ್ಲಿ ಬಂದು ಹತ್ತಿಪ್ಪತ್ತು ವರ್ಷಗಳಾಗಿದ್ದರೂ ಒಂದಕ್ಷರ ಕನ್ನಡವನ್ನೂ ಕಲಿಯದೇ, ಹಿಂದಿ ತಮಿಳು ತೆಲುಗುಗಳಲ್ಲೇ ನಿಭಾಯಿಸಿಕೊಂಡು ದೊಡ್ಡ ಉದ್ಯಮಗಳನ್ನೇ ಕಟ್ಟಿ ಉದ್ಧಾರವಾದವರು ಸಾಕಷ್ಟಿದ್ದಾರೆ. ಅಂಥವರು ತಾವು ಬಿಬಿಎಂಪಿಗೆ ಕಂದಾಯ ಕೊಡುತ್ತಿದ್ದೇವೆ ಎಂದು ವಾದಿಸಬಹುದು; ಆದರೆ ಅವರು ಈ ನಾಡಿನ ಜನತೆಗೆ, ಇಲ್ಲಿನ ಭಾಷಿಕ- ಸಾಂಸ್ಕೃತಿಕ ಅಗತ್ಯಗಳಿಗೆ ಯಾವುದೇ ಕೊಡುಗೆ ಕೊಟ್ಟಂತಾಗುವುದಿಲ್ಲ. ಅವರನ್ನು ಸಾಕಿದವರು, ವ್ಯಾಪಾರ ನೀಡಿದವರು, ಅವರ ಅಂಗಡಿ ಮಳಿಗೆಗಳಲ್ಲಿ ನಾನಾ ವಿಧದ ಉದ್ಯೋಗ ಮಾಡಿದವರು ಕನ್ನಡಿಗರು. ಬಳಕೆದಾರರು ಕನ್ನಡಿಗರು. ಇದು ಕನ್ನಡದ ನೆಲ. ತಾವು ನಿಂತ ನೆಲದ ಭಾಷೆಯನ್ನೂ ಭಾವನೆಯನ್ನೂ ಅರ್ಥ ಮಾಡಿಕೊಳ್ಳಬೇಕಾದುದು ಅವರ ಜವಾಬ್ದಾರಿ. ಇವರು ಇಂಗ್ಲೆಂಡ್‌ಗೆ ಹೋದರೆ ಇಂಗ್ಲಿಷ್‌ನಲ್ಲಿ, ಜಪಾನ್‌ಗೆ ಹೋದರೆ ಜಪಾನಿಯಲ್ಲಿ ಮಾತಾಡಲು ಕಲಿಯುತ್ತಾರೆ. ಕರ್ನಾಟಕದಲ್ಲಿರುವಾಗ ಕನ್ನಡ ಬಳಸಲು ಏನು ಕಾಯಿಲೆ? ಅದರಲ್ಲೂ ನಾವು ಹೆಚ್ಚೇನೂ ಕೇಳುತ್ತಿಲ್ಲ. ನಿಮ್ಮ ನಾಮಫಲಕಗಳಲ್ಲಿ ಶೇ. 60 ಭಾಗ ಕನ್ನಡದಲ್ಲಿರಲಿ ಎಂದು ಕೇಳುತ್ತಿದ್ದೇವೆ ಅಷ್ಟೇ. ಇದೇನೂ ಅಸಾಧ್ಯವಾದ ಕೆಲಸವಲ್ಲ.
ಮುಖ್ಯಮಂತ್ರಿಗಳು ಕೂಡ ‘ಕರ್ನಾಟಕದಲ್ಲಿರುವವರು ಕನ್ನಡ ಕಲಿಯಬೇಕು’ ಎಂದು ಗುಡುಗಿದ್ದಾರೆ. ಸಂಸದ ಪ್ರಹ್ಲಾದ ಜೋಶಿಯವರು ಸಹ ‘ಇದೇನೂ ಇಂಗ್ಲೆಂಡಲ್ಲ’ ಎಂದಿದ್ದಾರೆ. ಕನ್ನಡ ಕಾವಲು ಸಂಸ್ಥೆಗಳು, ಪ್ರಾಧಿಕಾರ ಮೊದಲಾದವು ದಶಕಗಳಿಂದ ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕ್‌ಗಳಲ್ಲಿ ಸಂಪೂರ್ಣ ಕನ್ನಡದ ಅನುಷ್ಠಾನವನ್ನು ಒತ್ತಾಯಿಸುತ್ತಿವೆ. ಅದೂ ಆಗಬೇಕು. ಜೊತೆಗೆ, ಖಾಸಗಿ ವಲಯದಲ್ಲೂ ಕನ್ನಡ ಬಳಕೆ ಹೆಚ್ಚಾಗಬೇಕು. ಮೊದಲು ಕನ್ನಡಿಗರೇ ಕನ್ನಡದ ಬಗ್ಗೆ ಅಭಿಮಾನ ತೋರಬೇಕು. ಕನ್ನಡಿಗರಿಗೇ ತಮ್ಮ ಭಾಷೆಯ ಬಗ್ಗೆ ಅಭಿಮಾನವಿಲ್ಲದೆ ಹೋದರೆ ಯಾರೂ ಏನೂ ಮಾಡಲಾಗದು. ತಮಿಳುನಾಡಿಗರ ಉಗ್ರ ಭಾಷಾಭಿಮಾನ ಒಂದು ದೃಷ್ಡಿಯಿಂದ ನಮಗೆ ಮಾದರಿ. ಅಲ್ಲಿನ ಫಲಕಗಳಲ್ಲಿ ನಾವು ತಮಿಳನ್ನು ಮಾತ್ರ ಕಾಣಬಲ್ಲೆವು. ಇಂಗ್ಲಿಷ್ ಸಣ್ಣದಾಗಿ, ಕೆಳಗಡೆ ಇರುತ್ತದೆ. ಹಿಂದಿ ಇಲ್ಲವೇ ಇಲ್ಲ. ನಾವು ಸ್ವಾಭಿಮಾನಶೂನ್ಯರಾಗಬಾರದು. ಕರವೇ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿದರೆ ಕನ್ನಡ ನಾಳೆಯಿಂದಲೇ ಎಲ್ಲೆಡೆ ರಾರಾಜಿಸುವುದು ಶತಸ್ಸಿದ್ಧ. ಅಂಥ ವಾತಾವರಣ ಮೂಡಿದರೆ ಕನ್ನಡದ ಉಳಿವಿನ ಬಗ್ಗೆ ಆತಂಕಪಡುವುದು ತಪ್ಪಲಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯವಹಾರ, ಭಾರತದ ಇನ್ನೊಂದು ಜಿಗಿತ