Site icon Vistara News

ವಿಸ್ತಾರ ಸಂಪಾದಕೀಯ: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ, ನಿಷ್ಪಕ್ಷಪಾತ ತನಿಖೆಯಾಗಲಿ

Vistara Editorial

Vistara Editorial: Let there be an impartial investigation In Hassan Pendrive Case

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಚ್‌.ಡಿ.ರೇವಣ್ಣ (HD Revanna) ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸುತ್ತಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ವಶಕ್ಕೆ ಪಡೆದರು. ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್‌ ಕೇಸ್‌ನಲ್ಲಿ (Pendrive Case) ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪುತ್ರ ಎಸ್‌ಐಟಿ ವಶಕ್ಕೆ ಸೇರಿದ್ದು, ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರನ್ನು ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲೇ ಅವರು ಸೆರೆಸಿಕ್ಕಿದ್ದಾರೆ. ಇಲ್ಲಿಗೆ ಪ್ರಕರಣ ಕುತೂಹಲಕಾರಿ ಘಟ್ಟ ಮುಟ್ಟಿದೆ.

ರೇವಣ್ಣ ಅವರ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಇವರು ಇನ್ನೂ ಎಸ್‌ಐಟಿಗೆ ಸಿಕ್ಕಿಲ್ಲ. ಪ್ರಜ್ವಲ್‌ ಅವರ ಸುಳಿವು ಪತ್ತೆ ಹಚ್ಚಲು ಇಂಟರ್‌ಪೋಲ್‌ನಿಂದ ಬ್ಲೂ ಕಾರ್ನರ್‌ ನೋಟೀಸ್‌ ಪಡೆಯಲು ಎಸ್‌ಐಟಿ ಪ್ರಯತ್ನಿಸುತ್ತಿದೆ. ಅವರು ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದ್ದರೆ ಅವರ ಬಂಧನ ಪ್ರಕ್ರಿಯೆ ಸುಲಭವಾಗಲಿದೆ. “ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ರೇವಣ್ಣ ನಡೆದುಕೊಳ್ಳುತ್ತಾರೆ. ಪ್ರಜ್ವಲ್‌ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್‌ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ ಪ್ರಜ್ವಲ್‌ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.

ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ, ಸಂತ್ರಸ್ತರು ತುಂಬಾ ಮಂದಿ ಇರುವುದರಿಂದ, ಎಸ್‌ಐಟಿ ಚುರುಕಾಗಿ ತನಿಖೆ ನಡೆಸುತ್ತಿದೆ. ಇನ್ನು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಜೆಡಿಎಸ್‌ ಅನ್ನು ಹಣಿಯಲು ಸಿಕ್ಕಿರುವ ಸುವರ್ಣಾವಕಾಶವೂ ಇದಾಗಿರುವುದರಿಂದ, ಗೃಹ ಇಲಾಖೆಯೂ ಬಹಳ ಚುರುಕಾಗಿಯೇ ಇದರಲ್ಲಿ ತೊಡಗಿಕೊಂಡಿದೆ. ಪೊಲೀಸರ ಚುರುಕುತನಕ್ಕೆ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂಬ ನ್ಯಾಯನಿಷ್ಪಕ್ಷಪಾತತೆ ಕಾರಣವೋ, ಅಥವಾ ಮೇಲಿನವರ ಒತ್ತಡವೋ ಎಂದು ಕೇಳಿದರೆ ಸರಿಯಾದ ಉತ್ತರ ಸಿಗಲಾರದು. ಪ್ರಭಾವಿಗಳು ಅಪರಾಧ ನಡೆಸಿದಾಗ ಅವರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಇಷ್ಟೊಂದು ಚುರುಕಾಗಿ ಕಾರ್ಯಪ್ರವೃತ್ತರಾಗುವುದನ್ನು ಹಿಂದೆ ಎಂದೂ ಈ ರಾಜ್ಯ ಕಂಡಿರಲಿಲ್ಲ. ಅಷ್ಟರ ಮಟ್ಟಿಗೆ ಪೊಲೀಸ್‌ ಇಲಾಖೆಯನ್ನು ಚುರುಕಾಗಿಸಿದ ಈ ಪ್ರಕರಣ ವಿಶೇಷವೇ ಸರಿ.

ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ನ್ಯಾಯದ ಮುಂದೆ ಎಲ್ಲರೂ ಒಂದೇ. ಇವೆರಡೂ ಸುಂದರವಾದ ಹೇಳಿಕೆಗಳು. ಆದರೆ ವಾಸ್ತವದಲ್ಲಿ ಇವು ಎಷ್ಟು ಸತ್ಯವಾಗಿವೆ ಎಂಬುದನು ಪರಿಶೀಲಿಸಬೇಕು. ರೇವಣ್ಣ ಹಾಗೂ ಪ್ರಜ್ವಲ್‌ ಇಬ್ಬರೂ ಪ್ರಭಾವಿಗಳು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಪ್ರಮುಖ ನಾಯಕರು. ಸಂತ್ರಸ್ತೆ, ದೂರುದಾರರು ಗಟ್ಟಿಯಾಗಿ ನಿಂತು, ಪೊಲೀಸರು ಸಾಕ್ಷ್ಯಗಳನ್ನು ಕರಾರುವಕ್ಕಾಗಿ ಕಲೆಹಾಕಿ ಕೋರ್ಟ್‌ನಲ್ಲಿ ಮಂಡಿಸಿ, ವಿಚಾರಣೆ ಪಾರದರ್ಶಕವಾಗಿ ನಡೆದರೆ ಆರೋಪಿಗಳಿಗೆ ಶಿಕ್ಷೆಯಾಗಬಹುದು. ಇನ್ನು ಮುಂದಿನ ಕೆಲಸ ಪೊಲೀಸರಿಗೂ ಕೋರ್ಟಿಗೂ ಬಿಟ್ಟದ್ದು. ಈ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ಸಾಬೀತಾಗಿದೆ, ಎಷ್ಟರಲ್ಲಿ ಶಿಕ್ಷೆಯಾಗಿದೆ ಎಂಬ ಅಂಕಿಅಂಶಗಳನ್ನು ತೆಗೆದು ನೋಡಿದರೆ ನಿರಾಶೆಯಾಗುತ್ತದೆ. ಈ ಪ್ರಕರಣವೂ ಆ ಸಾಲಿಗೆ ಸೇರದಿರಲಿ.

“ಅಪರಾಧ ನಡೆದಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ” ಎಂದು ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರೂ ಹೇಳಿದ್ದಾರೆ; ಬಿಜೆಪಿ ನಾಯಕರೂ ಹೇಳಿದ್ದಾರೆ. ಪ್ರಕರಣದ ಗಂಭೀರತೆ ಅವರನ್ನು ಅಲುಗಾಡಿಸಿರುವುದು ಅವರ ವರ್ತನೆಯಲ್ಲಿ ಗೋಚರಿಸುತ್ತಿದೆ. ಪ್ರಜ್ವಲ್‌ ಹಾಗೂ ರೇವಣ್ಣ ಅವರನ್ನು ಸಮರ್ಥಿಸಿಕೊಳ್ಳಲು ಯಾರೂ ಮುಂದಾಗಿಲ್ಲ, ಅದು ಸಾಧ್ಯವೂ ಇಲ್ಲ. ಆದರೆ ಈ ಚುನಾವಣೆಯ ಸಂದರ್ಭದಲ್ಲಿ ಉಂಟಾದ ಮೈತ್ರಿ ಏನಾಗಲಿದೆ? ಈ ಪ್ರಕರಣದಿಂದ ಜೆಡಿಎಸ್‌ಗಂತೂ ಲಾಭವಿಲ್ಲ. ಬಿಜೆಪಿಗೂ ಇದ್ದಂತಿಲ್ಲ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಇದೇ 7ರಂದು ನಡೆಯಲಿದೆ. ಈ ಘಟ್ಟದಲ್ಲೇ ಪ್ರಜ್ವಲ್-‌ ರೇವಣ್ಣ ಪ್ರಕರಣ ಸೃಷ್ಟಿಸಿರುವ ಕೋಲಾಹಲ, ಪಕ್ಷದ ಕಾರ್ಯಕರ್ತರನ್ನು ಹತಾಶೆಗೊಳಿಸಿಲ್ಲ ಅಥವಾ ಮತದಾರರನ್ನು ಜೆಡಿಎಸ್‌ನಿಂದ ವಿಮುಖಗೊಳಿಸಿಲ್ಲ ಎಂದು ಹೇಳುವುದು ಹೇಗೆ? ಇದು ರಾಜ್ಯದ ಚುನಾವಣೆ ಮೇಲೆ ಹೇಗೆ ಪ್ರಭಾವ ಬೀಳುವುದೋ, ಫಲಿತಾಂಶ ಬಂದ ನಂತರವೇ ತಿಳಿಯಬೇಕು. ಆಗ ಬಿಜೆಪಿ- ಜೆಡಿಎಸ್‌ ಮೈತ್ರಿಯ ಕತೆಯೂ ನಿರ್ಧಾರವಾಗಬಹುದು. ಕರ್ನಾಟಕದ ಏಕೈಕ ಪ್ರಬಲ ಪ್ರಾದೇಶಿಕ ಪಕ್ಷವೆನಿಸಿದ್ದ ಜೆಡಿಎಸ್‌ಗೆ ಇದರಿಂದ ಏನಾಗಲಿದೆ? ಅದು ಫೀನಿಕ್ಸ್‌ನಂತೆ ಧೂಳಿನಿಂದ ಮೇಲೆದ್ದು ಬರಲಿದೆಯೋ ಅಥವಾ ಸರ್ವನಾಶವಾಗಲಿದೆಯೋ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ.

ಸದ್ಯಕ್ಕಂತೂ ಒಬ್ಬ ಆರೋಪಿಯ ಸೆರೆಯಾಗಿದೆ. ಇನ್ನೊಬ್ಬ ಆರೋಪಿಯ ಬಂಧನವಾಗಬೇಕಿದೆ. ನಿಷ್ಪಕ್ಷಪಾತವಾದ ತನಿಖೆ ನಡೆದು ಸತ್ಯ ಹೊರಬೀಳಲಿ. ನೂರಾರು ಸಂತ್ರಸ್ತೆಯರ ನಿಟ್ಟುಸಿರಿಗೆ ಕಾರಣವಾದವರು ಶಿಕ್ಷೆಗೆ ಒಳಗಾಗಲಿ. ಹಾಗೆಯೇ, ಮುಖ ಬ್ಲರ್‌ ಕೂಡ ಮಾಡದೆ ಸಂತ್ರಸ್ತ ಮಹಿಳೆಯರ ಸಾರ್ವಜನಿಕ ಅವಮಾನಕ್ಕೆ ಕಾರಣವಾದವರಿಗೆ ಕೂಡ ಶಿಕ್ಷೆಯಾಗಲಿ.

ಇದನ್ನೂ ಓದಿ: HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್‌ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ

Exit mobile version