ವಿಸ್ತಾರ ಸಂಪಾದಕೀಯ : ವಿಶ್ವ ಮಹಿಳೆಯರ ದಿನಾಚರಣೆ (International Women’s Day 2024) ದಿನವೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಗೃಹಿಣಿಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಇಳಿಕೆ (LPG Price Cut) ಮಾಡಿ ಅವರು ಆದೇಶ ಹೊರಡಿಸಿದ್ದು, ಇದರಿಂದ ದೇಶದ ಲಕ್ಷಾಂತರ ಮಹಿಳೆಯರು ಅನುಕೂಲ ಪಡೆಯಲಿದ್ದಾರೆ. ʼಇದರಿಂದ ದೇಶದ ಲಕ್ಷಾಂತರ ಮನೆಗಳಲ್ಲಿ ಹಣಕಾಸು ಹೊರೆಯಾಗುವುದು ತಪ್ಪಲಿದೆ. ಅದರಲ್ಲೂ, ದೇಶದ ಹೆಣ್ಣುಮಕ್ಕಳ ಸಬಲೀಕರಣದ ದಿಸೆಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರವು ಮಹತ್ವದ್ದಾಗಿದೆʼ ಎಂದಿದ್ದಾರೆ ನರೇಂದ್ರ ಮೋದಿ. ಮಹಿಳೆಯರಿಗೆ ಕೈಗೆಟಕುವ ದರದಲ್ಲಿ ಅಡುಗೆ ಅನಿಲ ಸಿಗುವಂತೆ ಮಾಡುವ ಜತೆಗೆ ಕುಟುಂಬಗಳ ಸೌಖ್ಯಕ್ಕಾಗಿ ನೆರವು ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದು ಮಹಿಳೆಯರ ಸಬಲೀಕರಣ ಹಾಗೂ ಹೆಣ್ಣುಮಕ್ಕಳು ಸುಲಭವಾಗಿ ಜೀವನ ಸಾಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಪ್ರಯತ್ನವಾಗಿದೆ ಎಂದಿದ್ದಾರೆ.
ಉಜ್ವಲ ಯೋಜನೆ ಅಡಿಯಲ್ಲಿ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ 300 ರೂಪಾಯಿ ಸಬ್ಸಿಡಿಯನ್ನು (LPG Subsidy) 2024-25ನೇ ಹಣಕಾಸು ವರ್ಷದವರೆಗೆ ವಿಸ್ತರಣೆ ಮಾಡಲು ಗುರುವಾರ (ಮಾರ್ಚ್ 7) ನಡೆದ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ. ಇದರೊಂದಿಗೆ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಖರೀದಿಸುವವರಿಗೆ ಅನುಕೂಲವಾಗಲಿದೆ. ದೇಶದ 10 ಕೋಟಿ ಗೃಹಿಣಿಯರು ಸಬ್ಸಿಡಿಯ ಲಾಭ ಪಡೆಯಲಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಬೆಲೆ ಇಳಿಕೆ ಮಾಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪರಿಷ್ಕೃತ ದರ ಅನ್ವಯ ಈಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ 603 ರೂ.ಗೆ ದೊರೆಯಲಿದೆ. ಈಗ ಸಬ್ಸಿಡಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ನಿಜವಾಗಿಯೂ ಮನೆವಾರ್ತೆಯ ಹೊರೆಯನ್ನು ಗಣನೀಯವಾಗಿ ಇಳಿಸುವ ಕ್ರಮವಾಗಿದೆ.
ಎಲ್‌ಪಿಜಿ ಬೆಲೆ ಏರಿಳಿಕೆ ಆಗಾಗ ನಡೆಯುತ್ತದಾದರೂ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಮಹತ್ವದ್ದು. ಬೆಲೆಯೇರಿಕೆಯ ಈ ದಿನಗಳಲ್ಲಿ ಇಂಥ ಕ್ರಮಗಳು ಹೆಚ್ಚಿನ ಮಹತ್ವದ್ದಾಗುತ್ತವೆ. ಇಂದು ಪ್ರತಿಯೊಂದರ ಬೆಲೆಯೂ ಕೂಡ ಪೆಟ್ರೋಲ್- ಡೀಸೆಲ್ ಬೆಲೆ ಹಾಗೂ ಎಲ್‌ಪಿಜಿ ಬೆಲೆಯ ಮೂಲಕ ನಿರ್ಧರಿಸಲ್ಪಡುತ್ತದೆ. ಇವುಗಳಲ್ಲಿ ಏರಿಕೆಯಾದರೆ ಸಾಗಣೆ ವೆಚ್ಚದ ಏರಿಕೆಯಿಂದಾಗಿ ಪ್ರತಿಯೊಂದು ಸಾಮಗ್ರಿಯ ಮೌಲ್ಯವೂ ಏರುತ್ತದೆ. ಎಲ್‌ಪಿಜಿ ದರದಲ್ಲಿ ಏರಿಕೆಯಾದರೆ ಸಿದ್ಧಪಡಿಸಿದ ಆಹಾರ ಸಾಮಗ್ರಿಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ. ಹೋಟೆಲ್ ಮಾತ್ರವಲ್ಲ, ಮನೆಗಳಲ್ಲಿ ಕೂಡ ಆಹಾರ ಸಿದ್ಧಪಡಿಸುವಿಕೆಯ ವೆಚ್ಚ ಹೆಚ್ಚಾಗುತ್ತದೆ. ಇದು ಹಣದುಬ್ಬರ (inflation) ದ ಮೂಲ. ಹೀಗಾಗಿ, ಎಲ್‌ಪಿಜಿ ಬೆಲೆ ಇಳಿಕೆ ಮತ್ತು ಸಬ್ಸಿಡಿ ಮುಂದುವರಿಕೆ ಎಂಬುದು ಮಧ್ಯಮ, ಕೆಳಮಧ್ಯಮ ಮತ್ತು ಎಲ್ಲ ವರ್ಗದವರಿಗೆ ಇನ್ನಷ್ಟು ನಿರಾಳವಾಗಿ ಉಸಿರಾಡಲು ಅಗತ್ಯವಾದ ಅವಕಾಶವನ್ನು ಒದಗಿಸುತ್ತದೆ. ತುಟ್ಟಿಯಾದ ಈ ಜಮಾನಾದಲ್ಲಿ ಬೆಲೆಗಳು ಇನ್ನಷ್ಟು ಆಕಾಶಕ್ಕೇರದಂತೆ ಈ ಕ್ರಮಗಳು ಕಾಪಾಡಿವೆ.
ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ಕ್ರಮಗಳು ಮಹತ್ವದ್ದು. ಪ್ರತಿಪಕ್ಷಗಳು ಸಾಮಾನ್ಯವಾಗಿ ತೈಲ ಹಾಗೂ ಅನಿಲ ಬೆಲೆ ಏರಿಕೆಯನ್ನೇ ಸರ್ಕಾರದ ವಿರುದ್ಧದ ಟೀಕೆಯ ಬಂಡವಾಳ ಮಾಡಿಕೊಂಡುಬಿಡುತ್ತಾರೆ. ಮೋದಿ ಸರ್ಕಾರ ಬೆಲೆ ಇಳಿಕೆ ಮಾಡುವ ಮೂಲಕ ಈ ಮಹಾಸ್ತ್ರವನ್ನೇ ಪ್ರತಿಪಕ್ಷಗಳ ಕೈಯಿಂದ ಕಿತ್ತುಕೊಂಡಿದೆ. ಹೀಗೆಯೇ ಪೆಟ್ರೋಲ್- ಡೀಸೆಲ್ ಬೆಲೆಯೂ ಇಳಿಯಲಿ ಎಂಬುದು ಜನಸಾಮಾನ್ಯನ ಅನಿಸಿಕೆ. ಅದು ಕೂಡ ಇಂದು ಸಾಕಾರವಾಗಲಿದೆ ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಎಲ್ಲರೂ ಸೇರಿ ನೀರಿನ ಸಮಸ್ಯೆಗೆ ಉತ್ತರಿಸೋಣ