ಜಮ್ಮು- ಕಾಶ್ಮೀರದ ವಿಷಯದಲ್ಲಿ ಆಗಾಗ ಮೂಗು ತೂರಿಸುವ ನೊಬೆಲ್ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲಾ ಯೂಸುಫ್‌ಜಾಯ್ (Malala Yousafzai) ಅವರಿಗೆ ಜಮ್ಮು-ಕಾಶ್ಮೀರದ ಯುವತಿ ಯಾನಾ ಮಿರ್ (Yana Mir) ಅವರು ಬ್ರಿಟನ್ ಸಂಸತ್ತಲ್ಲಿ ತಿರುಗೇಟು ನೀಡಿದ್ದಾರೆ. “ “ನಾನು ಮಲಾಲಾ ಯೂಸುಫ್‌ಜಾಯ್ ಅಲ್ಲ. ಏಕೆಂದರೆ, ನನ್ನ ಭಾರತ ದೇಶವು ಸುರಕ್ಷಿತವಾಗಿದೆ. ನನ್ನ ಜಮ್ಮು-ಕಾಶ್ಮೀರವು ಸುಭದ್ರವಾಗಿದೆ. ನಾನು ಎಂದಿಗೂ ಭಾರತವನ್ನು ಬಿಟ್ಟು ಬರುವುದಿಲ್ಲ ಹಾಗೂ ಈ ದೇಶದ ಆಶ್ರಯ ಬೇಡುವುದಿಲ್ಲ” ಎಂದಿದ್ದಾರೆ. ಬ್ರಿಟನ್ ಸಂಸತ್‌ನಲ್ಲಿ ಆಯೋಜಿಸಿದ್ದ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ಇವರಿಗೆ ಡೈವರ್ಸಿಟಿ ಅಂಬಾಸಡರ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈಕೆ ಜಮ್ಮು- ಕಾಶ್ಮೀರದಲ್ಲಿ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ. ಈಕೆಯ ಮಾತುಗಳು ಕಾಶ್ಮೀರದ ನೈಜ ಸ್ಥಿತಿಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬಿಚ್ಚಿಡುವುದರಿಂದ, ಮಹತ್ವದ್ದಾಗಿವೆ(Vistara Editorial).
ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಅಲ್ಲಿ ಶಾಂತಿ ನೆಲೆಸಿದೆ. ಜಮ್ಮು-ಕಾಶ್ಮೀರವು ಸುರಕ್ಷಿತವಾಗಿದೆ. ಮಾನವ ಹಕ್ಕುಗಳ ರಕ್ಷಣೆಯಾಗುತ್ತಿದೆ. ಹಾಗಾಗಿ, ಪಾಕಿಸ್ತಾನ ಸೇರಿ ಯಾವುದೇ ರಾಷ್ಟ್ರಗಳು ಪಾಕಿಸ್ತಾನದ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಸಂಕಲ್ಪ ದಿವಸ ಆಚರಣೆ ಮಾಡಿದ ಬಳಿಕವಾದರೂ, ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ ಸೇರಿ ಯಾವುದೇ ದೇಶವು ಸುಳ್ಳು ಮಾಹಿತಿ ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಯಾರೂ ಜಮ್ಮು-ಕಾಶ್ಮೀರದ ಜನರನ್ನು ಪ್ರತ್ಯೇಕಿಸಿ ನೋಡುವುದಿಲ್ಲ ಎಂಬ ನಂಬಿಕೆ ಇದೆ ಎಂದಿದ್ದಾರೆ ಯಾನಾ. ಜಮ್ಮು- ಕಾಶ್ಮೀರದ ಕುರಿತು ಯಾನಾ ಮಿರ್ ಅವರು ಹೆಮ್ಮೆಯಿಂದ ಆಡಿದ ಮಾತುಗಳಿಗೆ ಬ್ರಿಟನ್ ಸಂಸತ್ತಿನಲ್ಲಿಯೇ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪಾಕಿಸ್ತಾನ ಪದೇಪದೆ ಕಾಶ್ಮೀರ ತನಗೆ ಸೇರಿದ್ದು ಎನ್ನುತ್ತಿರುತ್ತದೆ. ಪಾಕ್ ಪರವಾಗಿರುವವರು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದೆಲ್ಲ ಹಲುಬುತ್ತಾರೆ. ಇವರಲ್ಲಿ ಮಲಾಲಾ ಯೂಸುಫ್‌ಜಾಯ್ ಕೂಡ ಒಬ್ಬರು. ಅವರಿಗೆ ಯಾನಾ ಮಿರ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಸ್ವತಃ ಪಾಕಿಸ್ತಾನದಲ್ಲಿ ಶಿಕ್ಷಣ ಪಡೆಯಲಾಗದೆ ಗುಂಡೇಟು ತಿಂದು, ದೇಶ ತೊರೆದು ಬ್ರಿಟನ್ ಸೇರಿಕೊಂಡಿರುವ ಮಲಾಲಾ ಯೂಸುಫ್‌ಜಾಯ್, ಕಾಶ್ಮೀರದ ಮಾನವ ಹಕ್ಕುಗಳ ಬಗ್ಗೆ ಮಾತನಾಡುವುದು ಒಂದು ವ್ಯಂಗ್ಯ, ವಿಪರ್ಯಾಸ. ಆದರೂ ಮಲಾಲಾ ಥರದವರು ಇಂಥ ಮಾತುಗಳ ಮೂಲಕ ಜಾಗತಿಕವಾಗಿ ಭಾರತದ ಬಗ್ಗೆ ಒಂದು ಅಭಿಪ್ರಾಯ ರೂಪಿಸುವ ಕೆಲಸ ಮಾಡುವುದರಿಂದ, ಅದನ್ನೆಲ್ಲ ಖಂಡಿಸುವ ಹಾಗೂ ಕಾಶ್ಮೀರದ ಬಗ್ಗೆ ನಿಜಾಭಿಪ್ರಾಯ ಪ್ರಚುರಪಡಿಸುವ ಯಾನಾ ಮಿರ್ ಅವರಂಥವರು ಮುಖ್ಯರಾಗುತ್ತಾರೆ.
ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ಅನ್ನು ರದ್ದುಪಡಿಸಿದಾಗ, ಅತಿ ಘೋರ ತಪ್ಪು ನಡೆಯಿತೆಂಬಂತೆ ಪಾಕ್‌ಬೊಬ್ಬೆ ಹಾಕಿತು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು ಎಂದು ದೂರಿತು. ಚೀನಾ ಕೂಡ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿತು. ಆದರೆ ವಿಶ್ವಸಂಸ್ಥೆಯಲ್ಲಿ ಭಾರತ ತನ್ನ ನಿಲುಮೆಯನ್ನು ದೃಢವಾಗಿ ಪ್ರದರ್ಶಿಸಿದ್ದಲ್ಲದೆ, ಕಾಶ್ಮೀರದ ಬಗ್ಗೆ ಬೇರೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತು. ಒಂದು ಹಂತದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲೆಂದೇ ಸೃಷ್ಟಿಯಾದ ಅಂತಾರಾಷ್ಟ್ರೀಯ ನಿಯೋಗದ ಭೇಟಿಯನ್ನೂ ಕಾಶ್ಮೀರಕ್ಕೆ ಏರ್ಪಡಿಸಲಾಯಿತು. ಆದರೆ ಯಾವುದರಿಂದಲೂ ಸತ್ಯವನ್ನು ಮುಚ್ಚಿಡಲು ಹಾಗೂ ತಾನು ಹೇಳುತ್ತಿರುವ ಸುಳ್ಳಿಗೆ ಗಿರಾಕಿಗಳನ್ನು ಸೃಷ್ಟಿಸಲು ಪಾಕಿಸ್ತಾನದಿಂದ ಸಾಧ್ಯವಾಗಲಿಲ್ಲ.
ಕಳೆದ ಹಾಗೂ ಈ ವರ್ಷ ಕಾಶ್ಮೀರದಿಂದ ನೀಟ್, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಭಾಗವಹಿಸಿ ರ್ಯಾಂಕ್ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಕಾಶ್ಮೀರಕ್ಕೆ ಮೊತ್ತಮೊದಲ ವಿದೇಶಿ ಹೂಡಿಕೆ ಬಂತು. ದುಬೈನ ಎಮ್ಮಾರ್ ಗ್ರೂಪ್ 500 ಕೋಟಿ ರೂಪಾಯಿ ಮೌಲ್ಯದ ಶಾಪಿಂಗ್ ಮತ್ತು ಬಹೂಪಯೋಗಿ ವಾಣಿಜ್ಯ ಸಂಕೀರ್ಣವನ್ನು ಶ್ರೀನಗರದಲ್ಲಿ ನಿರ್ಮಿಸಲು ಮುಂದಾಯಿತು. ದುಬೈನ ಬುರ್ಜ್‌ಖಲೀಫಾವನ್ನು ನಿರ್ಮಿಸಿದ ಈ ಕಂಪನಿ ನಿರ್ಮಿಸಲಿರುವ ಈ ಸಂಕೀರ್ಣದಿಂದ ಕನಿಷ್ಠ 5000 ಮಂದಿಗೆ ಉದ್ಯೋಗಲಾಭವಾಗಲಿದೆ. ಇದು ಆರಂಭ ಮಾತ್ರವಷ್ಟೇ. ಇನ್ನಷ್ಟು ವಿದೇಶಿ ಹೂಡಿಕೆಗಳು ಇಲ್ಲಿ ಬರಬಹುದು. ಕೇಂದ್ರ ಸರ್ಕಾರ ಕಳೆದೆರಡು ವರ್ಷಗಳಲ್ಲಿ ಇಲ್ಲಿ 30,000 ಕೋಟಿಗೂ ಹೆಚ್ಚು ಪ್ಯಾಕೇಜ್ ನೀಡಿದೆ. 66,000 ಕೋಟಿ ರೂಪಾಯಿ ಮೌಲ್ಯದ ಆಂತರಿಕ ಖಾಸಗಿ ಹೂಡಿಕೆ ಪ್ರಸ್ತಾವನೆಗಳನ್ನು ಇಲ್ಲಿನ ಸರ್ಕಾರ ಸ್ವೀಕರಿಸಿದೆ. 1315ಕ್ಕೂ ಅಧಿಕ ಕಂಪನಿಗಳು ಇಲ್ಲಿಗೆ ಕಾಲಿಡಲು ಯೋಚಿಸುತ್ತಿವೆ. ಇದು ಆರ್ಥಿಕವಾಗಿ, ವಾಣಿಜ್ಯಕವಾಗಿ ಕಾಶ್ಮೀರ ತಲೆಯೆತ್ತುತ್ತಿದೆ ಎಂಬುದರ ಸೂಚನೆ. ಈ ಎಲ್ಲ ಅಭಿವೃದ್ಧಿಯ ಮೂಲ ಬೀಜಗಳು ಆರ್ಟಿಕಲ್ 370ರ ರದ್ದತಿಯಲ್ಲಿದೆ.
ಕಾಶ್ಮೀರದ ಈ ಅಭಿವೃದ್ಧಿ, ಸಕಾರಾತ್ಮಕ ಬೆಳವಣಿಗೆ, ಸುರಕ್ಷಿತತೆ ಎಲ್ಲವನ್ನೂ ಅಂತಾರಾಷ್ಟ್ರೀಯ ಸಮುದಾಯದ ಮುಂದಿಡುತ್ತಿರುವ ಯಾನಾ ಮೀರ್ ಅವರಂಥವರ ಯತ್ನಗಳನ್ನು ನಾವು ಶ್ಲಾಘಿಸೋಣ. ಇದು ಜಾಗತಿಕವಾಗಿ ಎಲ್ಲರ ಕಣ್ತೆರೆಸುತ್ತದೆ ಎಂದು ನಿರೀಕ್ಷಿಸೋಣ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕನ್ನಡ ನಾಮಫಲಕದ ವಿಚಾರದಲ್ಲಿ ಮರಾಠಿಗರು ಮೂಗು ತೂರಿಸಬೇಕಿಲ್ಲ