Site icon Vistara News

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

BJP

ಭಾರತ ಹಾಗೂ ಇತರ ದೇಶಗಳೂ ಕುತೂಹಲದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ (Lok sabha Election 2024) ಫಲಿತಾಂಶ (Election results 2024) ಪ್ರಕಟವಾಗಿದೆ. 543 ಬಲದ ಲೋಕಸಭೆಯಲ್ಲಿ ಬಹುಮತ ಸಾಧಿಸಿ ಸರಕಾರ ರಚಿಸಬೇಕಿದ್ದರೆ 272 ಸ್ಥಾನಗಳನ್ನು ಗೆಲ್ಲಬೇಕು; ಆದರೆ ಯಾವುದೇ ಒಂದು ಪಕ್ಷ ಅಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಎರಡು ಅವಧಿಗೆ ಆಡಳಿತ ನಡೆಸಿರುವ ಬಿಜೆಪಿ- ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಒಟ್ಟಾರೆ 291 ಸ್ಥಾನಗಳಲ್ಲಿ ಮುಂದಿದ್ದು, ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿ ಅತ್ಯಧಿಕ ಸ್ಥಾನಗಳನ್ನು (240) ಗಳಿಸಿರುವ ಪಕ್ಷವಾಗಿದೆ. ʼ400 ಸ್ಥಾನಗಳನ್ನು ಗೆಲ್ಲುವʼ ಕನಸು ಹೊಂದಿದ್ದ ಎನ್‌ಡಿಎಗೆ ಅದನ್ನು ಸಾಧ್ಯವಾಗಿಸಿಕೊಳ್ಳಲು ಆಗಿಲ್ಲ. ಆಡಳಿತ ಪಕ್ಷಕ್ಕೆ ದೃಢವಾದ ಹೋರಾಟ ನೀಡಿರುವ ಕಾಂಗ್ರೆಸ್‌ ಹಾಗೂ ಇಂಡಿಯಾ ಬ್ಲಾಕ್‌ ಒಟ್ಟಾಗಿ 235 ಸ್ಥಾನಗಳನ್ನು ಗೆದ್ದುಕೊಳ್ಳಲು ಶಕ್ತವಾಗಿದ್ದರೂ ಅಧಿಕಾರದ ಸನಿಹ ಸುಳಿಯಲು ಸಾಧ್ಯವಾಗದು. ಒಟ್ಟಾರೆಯಾಗಿ ನೋಡಿದರೆ ಇದು ಮಿಶ್ರಫಲ ನೀಡಿರುವ ಫಲಿತಾಂಶ; ಎಲ್ಲ ಪಕ್ಷಗಳೂ ಕಲಿಯಬೇಕಾದ ಹಲವು ಪಾಠಗಳನ್ನು ಹುದುಗಿಸಿ ಈ ಫಲಿತಾಂಶವನ್ನು ಮತದಾರರು ನೀಡಿದ್ದಾರೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರರು ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ದಶಕಗಳ ಬಳಿಕ ಭಾರತದ ಮತದಾರರು ನಿರಂತರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾರೆ. ಅಂದರೆ ಎನ್‌ಡಿಎ ಮೇಲೆ ಭರವಸೆಯನ್ನು ದೇಶದ ಜನತೆ ಉಳಿಸಿಕೊಂಡಿದೆ. ಎನ್‌ಡಿಎ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಫಲಾನುಭವಿಗಳಿಗೆ ತಲುಪಿದೆ ಹಾಗೂ ಜನ ಅದನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. 2014ರಲ್ಲಿ ಯುಪಿಎ ಸರಕಾರದ ವಿರುದ್ಧ ಕಂಡುಬಂದಿದ್ದ ಜನತೆಯ ಪ್ರಬಲ ಆಕ್ರೋಶ, ಆಡಳಿತ ವಿರೋಧಿ ಅಲೆ ಈಗ ಕಂಡುಬಂದಿಲ್ಲ. ಹೀಗಾಗಿ ಎನ್‌ಡಿಎ ಸರಕಾರದ ಯಶಸ್ಸು ಅದನ್ನು ಮುಂದಕ್ಕೆ ಒಯ್ದಿದೆ. ಆದರೆ ಬಿಜೆಪಿಗೆ ಪೂರ್ಣ ಬಹುಮತವನ್ನೂ ಮತದಾರ ನೀಡಿಲ್ಲ. ಅದಕ್ಕೂ ಹಲವು ಕಾರಣಗಳಿವೆ. ಹತ್ತು ವರ್ಷಗಳ ಕಾಲ ಆಳಿಸಿಕೊಂಡ ನಂತರ ಸಹಜವಾಗಿಯೇ ಮತದಾರನಿಗೆ ಒಂದು ಪಕ್ಷದ ಕೊರತೆಗಳು ಗೊತ್ತಾಗತೊಡಗುತ್ತವೆ.

ಮುಖ್ಯವಾಗಿ, ಎನ್‌ಡಿಎ ಪಕ್ಷಗಳ ಬಗ್ಗೆ ಪ್ರತಿಪಕ್ಷಗಳು ನಡೆಸಿದ ಪ್ರಚಾರದ ತೀವ್ರತೆ ಅತ್ಯುಚ್ಛ ಮಟ್ಟವನ್ನು ಮುಟ್ಟಿದೆ. ಇದರಲ್ಲಿ ಸ್ವಲ್ಪ ಸತ್ಯವೂ ಅಪಾರ ಪ್ರಮಾಣದ ಸುಳ್ಳೂ ಇತ್ತು. ಮೋದಿ ಸರಕಾರ ಅಲ್ಪಸಂಖ್ಯಾತರ ವಿರೋಧಿ ಎಂಬುದು ಅವುಗಳಲ್ಲಿ ಒಂದು. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಮೋದಿ ಸರಕಾರ ಸಾಕಷ್ಟು ನೀಡಿದ್ದರೂ, ವಿಪಕ್ಷಗಳ ಈ ಅಪಪ್ರಚಾರದ ಮುಂದೆ ಅದು ನಿಲ್ಲಲಿಲ್ಲ. ಅಂತಾರಾಷ್ಟ್ರೀಯವಾಗಿ ಮೋದಿ ಸರ್ಕಾರದ, ಆ ಮೂಲಕ ದೇಶದ ಮಾನ ಹರಾಜು ಹಾಕುವ ಕಾರ್ಯಕ್ರಮವನ್ನೂ ಹಲವರು ನಡೆಸಿದರು. ಎನ್‌ಡಿಎ ಸರಕಾರದ ಸಾಧನೆಯ ಅಂಕಿಅಂಶಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಕೊನೆಯ ಕ್ಷಣಗಳಲ್ಲಿ ಬಿಜೆಪಿ ಸ್ವಲ್ಪ ತೀವ್ರವಾದಿ ಹಿಂದುತ್ವದ ಧೋರಣೆಯನ್ನೂ ತೋರಿಸಲು ಮುಂದಾಯಿತು. ಇದು ಮುಸ್ಲಿಂ ಮತಗಳನ್ನು ಮತ್ತಷ್ಟು ಬಿಜೆಪಿಯ ವಿರುದ್ಧ, ಇಂಡಿಯಾ ಒಕ್ಕೂಟದ ಪರ ಕ್ರೋಡೀಕರಿಸಲು ಸಾಧ್ಯವಾಗಿರಬಹುದು.

ಎನ್‌ಡಿಎ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಪಾಠ ಎಂದರೆ, ಪ್ರಾದೇಶಿಕ ಪಕ್ಷಗಳು ಹಾಗೂ ಮಿತ್ರಪಕ್ಷಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಹಾಗೆಯೇ ತನ್ನ ಪಕ್ಷದ ಪ್ರಾದೇಶಿಕ ನಾಯಕರನ್ನೂ ಕಡೆಗಣಿಸಬಾರದು. ಪ್ರಾದೇಶಿಕ ನಾಯಕರಿಗೆ ತಮ್ಮದೇ ಆದ ಅಜೆಂಡಾ ಇದ್ದರೂ, ಸ್ಥಳೀಯ ಸಮೀಕರಣಗಳು ಇವರನ್ನು ಅವಲಂಬಿಸಿರುತ್ತವೆ. ಹಾಗೇ ರಾಮ ಮಂದಿರದಂಥ ಸಂಗತಿಗಳು ಈ ಸಲ ಒಂದು ವರ್ಗದ ಮಂದಿಯನ್ನು ಮಾತ್ರ ಸೆಳೆಯಲು ಶಕ್ತವಾದವು. ಇದು ಈಗಾಗಲೇ ಬಿಜೆಪಿ ಬಗ್ಗೆ ಒಲವುಳ್ಳವರನ್ನು ಇನ್ನಷ್ಟು ತೃಪ್ತಿಪಡಿಸಿತೇ ಹೊರತು, ಹೊಸ ಮತದಾರರನ್ನು ತರಲಿಲ್ಲ. ಇದಕ್ಕೆ ಉತ್ತರಪ್ರದೇಶವೇ ಉದಾಹರಣೆ. ಅಲ್ಲಿ ಇದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಶಕ್ತವಾಗಲಿಲ್ಲ. ಬಿಜೆಪಿ ವಿರೋಧಿ ಮತಗಳು ಇಲ್ಲಿ ಕ್ರೋಡೀಕೃತಗೊಂಡವು. ಈ ಕ್ರೋಡೀಕರಣಕ್ಕೆ ಆಕ್ರಮಣಕಾರಿಯಾದ ಬಿಜೆಪಿಯ ಚುನಾವಣಾ ಪ್ರಚಾರ ಭಾಷಣಗಳು, ಧ್ರುವೀಕರಣವಾದಿ ನಡೆ ಕಾರಣವಿರಬಹುದು. ಇದನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಎನ್‌ಡಿಎ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಿಲ್ಲ.

ಅನೇಕರಿಗೆ ಮತದಾರ ಈ ಬಾರಿ ಪಾಠ ಕಲಿಸಿದ್ದಾನೆ. ಅತ್ಯಾಚಾರ ಆರೋಪಿಯಾಗಿ ಜೈಲಿನಲ್ಲಿರುವ ಸಂಸದನನ್ನು ಭಾರಿ ಮತಗಳ ಅಂತರದಿಂದ ಸೋಲಿಸಿರುವುದು, ಮತದಾರನಿಗೆ ಇಂಥ ನಾಯಕರ ಬಗ್ಗೆ ಎಷ್ಟು ಜಿಗುಪ್ಸೆ ಮೂಡಿದೆ ಎಂಬುದಕ್ಕೆ ಉದಾಹರಣೆ. ಹಾಗೆಯೇ ಸ್ಮೃತಿ ಇರಾನಿ, ಅಣ್ಣಾಮಲೈಯಂಥ ನಾಯಕರನ್ನು ಸೋಲಿಸುವ ಮೂಲಕವೂ ಮತದಾರ ಹಲವು ಪಾಠಗಳನ್ನು ಮುಂದಿರಿಸಿದ್ದಾನೆ. ಜೊತೆಗೆ ಬೆಂಗಳೂರೂ ಗ್ರಾಮಾಂತರದಲ್ಲಿ ಡಾ.ಮಂಜುನಾಥ್‌ ಅವರಂಥ ಹೊಸಬರನ್ನು ಗೆಲ್ಲಿಸಿರುವುದು ಮತದಾರನ ವಿವೇಕಕ್ಕೆ ಸಾಕ್ಷಿ. ತಮಿಳುನಾಡು, ಕೇರಳಗಳಲ್ಲಿ ಪ್ರಾದೇಶಿಕ ಶಕ್ತಿಗಳ ಪ್ರಾಬಲ್ಯವನ್ನು ಮುರಿಯಲು ಎನ್‌ಡಿಎಗೆ ಸಾಧ್ಯವಾಗಿಲ್ಲ. ಆದರೆ ಹಲವು ಕಡೆ ಹೊಸ ಸ್ಥಾನಗಳನ್ನು ಗೆದ್ದುಕೊಂಡಿದೆ. ಉದಾಹರಣೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ. ಕಾಂಗ್ರೆಸ್‌ ಉಚಿತ ಯೋಜನೆಗಳ ಆಮಿಷಗಳನ್ನು ಮುಂದಿಟ್ಟಿರುವುದು ಹಲವು ಕಡೆ ಕೆಲಸ ಮಾಡಿರುವಂತಿದೆ. ಇದು ಬೊಕ್ಕಸಕ್ಕೆ ಹೊರೆಯೆನಿಸುತ್ತದಾದರೂ, ಭಾರತದಂಥ ದೇಶಗಳ ಪ್ರಜೆಗಳು ಇಂಥ ಉಚಿತಗಳನ್ನು ಬಾಚಿಕೊಳ್ಳುವುದರಲ್ಲಿ ಮುಂದು; ಹೀಗಾಗಿ ಇದನ್ನು ಮುಂದಿನ ದಿನಗಳಲ್ಲಿ ಪರಿಗಣಿಸದೇ ನಿರ್ವಾಹವಿಲ್ಲ.

ಎನ್‌ಡಿಎಗೆ ಅಧಿಕಾರ ನೀಡಿದ ಮತದಾರರು, ವಿಪಕ್ಷವಾದ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟವನ್ನೂ ಗಟ್ಟಿಗೊಳಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಅನ್ನು 52 ಸ್ಥಾನಕ್ಕೆ ಇಳಿಸಿದ್ದ ಮತದಾರರೇ ಈ ಸಲ ಅದನ್ನು ನೂರರ ಆಸುಪಾಸಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ಮತದಾರರ ಚೈತನ್ಯವನ್ನೂ, ಅವರ ವಿವೇಚನಾ ಶಕ್ತಿಯನ್ನೂ ಅರ್ಥ ಮಾಡಿಕೊಳ್ಳಬಹುದು. ಮತದಾರ ಭ್ರಷ್ಟಾಚಾರಿ ಸರ್ಕಾರಕ್ಕೆ ಪಾಠ ಕಲಿಸಲೂ ಶಕ್ತ; ಹಾಗೇ ಏನೂ ಅಲ್ಲದ ಪಕ್ಷವನ್ನು ಮೇಲೆತ್ತಲೂ ಶಕ್ತ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಇನ್ನಷ್ಟು ಮಾಗಬೇಕು ಅನ್ನಿಸಿದರೂ, ಭಾರತ್‌ ಜೋಡೋ ಮುಂತಾದ ಕಾರ್ಯಕ್ರಮಗಳ ಮೂಲಕ ಮತದಾರರ ಮನದಲ್ಲಿ ತುಸುವಾದರೂ ತಮ್ಮ ಇಮೇಜ್‌ ಹೆಚ್ಚಿಸಿಕೊಳ್ಳಲು ಶಕ್ತರಾದರು. ಹಾಗಾಗಿ ಎರಡೂ ಕಡೆ ಗೆದ್ದಿದ್ದಾರೆ. ಇವರಿಂದ, ಗೆಲ್ಲುವ ಮತಗಳ ಅಂತರವನ್ನು 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿಸಿಕೊಂಡ ನರೇಂದ್ರ ಮೋದಿಯವರೂ ಪಾಠ ಕಲಿಯಬಹುದು. ಇದೇ ವೇಗವನ್ನು ಉಳಿಸಿಕೊಂಡರೆ ಇಂಡಿಯಾ ಬ್ಲಾಕ್‌ ಮುಂದಿನ ಚುನಾವಣೆ ಹೊತ್ತಿಗೆ ಇನ್ನಷ್ಟು ಸದೃಢವಾಗಬಹುದು. ವಾಸ್ತವವಾಗಿ ದೃಢ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಗತ್ಯ. ಅದು ಈಗ ಸಾಧ್ಯವಾಗಿದೆ. ಗಟ್ಟಿ ವಿರೋಧ ಪಕ್ಷವಾಗಿ ಇಂಡಿಯಾ ಕೆಲಸ ಮಾಡಿದರೆ, ಆಡಳಿತ ಪಕ್ಷವೂ ಇನ್ನಷ್ಟು ಎಚ್ಚರದಿಂದ, ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿದೆ.

ಇದನ್ನೂ ಓದಿ: Election Results 2024: ತಮಿಳುನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಗಳಿಕೆ ಪ್ರಮಾಣ ಶೇ. 3.57ರಿಂದ ಶೇ. 11.04ಕ್ಕೆ ಜಿಗಿತ!

Exit mobile version