ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ (Republic Day) ಸಂದರ್ಭದಲ್ಲಿ 2024ರ ಪದ್ಮ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು(Padma Awards) ಅದರಲ್ಲಿ ಕರ್ನಾಟಕದ ಎಂಟು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಕರ್ನಾಟಕದ ಜೇನು ಕುರುಬ ಸಮುದಾಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಮೈಸೂರಿನ ಸೋಮಣ್ಣ, ಮನೋವಿಜ್ಞಾನಿ ಹಾಗೂ ವೈದ್ಯ ಸಿ.ಆರ್ ಚಂದ್ರಶೇಖರ್, ಕಲಾವಿದೆ ಅನುಪಮಾ ಹೊಸಕೆರೆ, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಪ್ಲಾಸ್ಟಿಕ್ ಸರ್ಜನ್ ಪ್ರೇಮಾ ಧನರಾಜ್, ಶ್ರೀಧರ್ ಎಂ. ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆ.ಎಸ್ ರಾಜಣ್ಣ, ಉದ್ಯಮಿ ಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಉದ್ಯಮವನ್ನು ಹೊಂದಿರುವ ಸೀತಾರಾಮ್ ಜಿಂದಾಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗುತ್ತಿದೆ. ಹಾಗೆಯೇ ಹಲವು ತಳಿಯ ಭತ್ತ ಬೆಳೆಯುವ ಕಾಸರಗೋಡಿನ ರೈತ ಸತ್ಯ ನಾರಾಯಣ ಬೇಳೇರಿ ಅವರೂ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಒಟ್ಟು 110 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿಲಾಗಿದೆ. ಇವರೆಲ್ಲರೂ ಅರ್ಹರು ಹಾಗೂ ತೆರೆಮರೆಯಲ್ಲಿ ತಮ್ಮ ಕಾಯಕವನ್ನು ನಡೆಸಿಕೊಂಡು ಹೋಗುತ್ತಿದ್ದವರು ಎಂಬುದು ವಿಶೇಷ(Vistara Editorial).
ಈ ಪ್ರಶಸ್ತಿಗಳನ್ನು ಪಡೆದವರೆಲ್ಲ ನಿಜವಾದ ಸಾಧಕರು; ಎಲ್ಲರ ಕೊಡುಗೆಯೂ ಸ್ಮರಿಸುವಂಥದು. ಉದಾಹರಣೆಗೆ, ಹರಿಯಾಣದ ಸಿರ್ಸಾ ಜಿಲ್ಲೆಯವರಾದ ಗುರ್ವಿಂದರ್ ಸಿಂಗ್ ಕಳೆದ 34 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಗುರ್ವಿಂದರ್ ಸಿಂಗ್ ಅವರು ಚಿಕ್ಕವರಿದ್ದಾಗಲೇ ಟ್ರಕ್ ಗುದ್ದಿದ ಪರಿಣಾಮ ಅವರ ಸೊಂಟವು ಸ್ವಾಧೀನ ಕಳೆದುಕೊಂಡಿತು. ಹಾಗಾಗಿ ಅವರು ವ್ಹೀಲ್‌ಚೇರ್‌ನಲ್ಲಿಯೇ ಇಡೀ ಜೀವನ ಕಳೆದರೂ ಅದರಿಂದ ಹತಾಶರಾಗದೆ, ಸಮಾಜ ಸೇವೆಯಲ್ಲಿ ತೊಡಗಿ, ಸಾವಿರಾರು ಜನರಿಗೆ ಆಶ್ರಯವಾಗಿದ್ದಾರೆ. ಅನಾಥರು, ದಿವ್ಯಾಂಗರು, ವೃದ್ಧರ ಸೇವೆಯಲ್ಲಿ ತೊಡಗಿರುವ ಇವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅನಾಥ ಮಕ್ಕಳ ರಕ್ಷಣೆಗಾಗಿ ಬಾಲ ಗೋಪಾಲ ಧಾಮ ಎಂಬ ಸಂಸ್ಥೆ ಕಟ್ಟಿ 300 ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಇಂಥವರಿಗಲ್ಲವೇ ಪ್ರಶಸ್ತಿ ನೀಡಬೇಕಾದ್ದು?
ಇನ್ನು ಭಾರತದ ಮೊದಲ ಮಹಿಳಾ ಆನೆ ಮಾವುತ ಎಂದೇ ಕರೆಯಲ್ಪಡುವ ಪಾರ್ವತಿ ಬರುವಾ (Parbati Baruah) ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ತಮ್ಮ 14ರ ಹರೆಯದಲ್ಲೇ ಮಾವುತರಾಗಿ ಗುರುತಿಸಿಕೊಂಡ ಅವರು 4 ದಶಕಗಳಿಂದ ಆನೆಯ ಒಡನಾಡಿಯಾಗಿದ್ದಾರೆ. ಬಾಲ್ಯದಿಂದಲೇ ಕುಟುಂಬದತ್ತವಾಗಿ ಬಂದ ಆನೆಗಳನ್ನು ಸಾಕುವುದರ ಜೊತೆಗೆ ಆನೆಗಳ ಜೀವನ ಮಟ್ಟ ಸುಧಾರಣೆಗೂ ಹಲವು ರೀತಿಯ ಕ್ರಮ ಕೈಗೊಂಡಿದ್ದಾರೆ. ಹೊಸದಾಗಿ ಪಳಗಿಸಿದ ಆನೆಗಳ ಚಿಕಿತ್ಸೆ ಮತ್ತು ಶುಶ್ರೂಷೆ, ಆನೆ ಗಣತಿ, ಮಾವುತರು ಮತ್ತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ಇತ್ಯಾದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಬಿಬಿಸಿ ಹೊರ ತಂದ ʼಕ್ವೀನ್ ಆಫ್ ಎಲಿಫೆಂಟ್ʼ ಎಂಬ ಸಾಕ್ಷ್ಯಚಿತ್ರದ ಬಳಿಕ ಪಾರ್ವತಿ ಹೆಸರು ಇನ್ನಷ್ಟು ಜನಪ್ರಿಯವಾಯಿತು. ಅವರು ಆನೆಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ವಿಶ್ವಸಂಸ್ಥೆಯ ಏಷ್ಯನ್ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್ ಮತ್ತು ಅಸ್ಸಾಂ ಸರ್ಕಾರದ ʼಮಾನವ-ಆನೆ ಸಂಘರ್ಷʼ (Man- Elephant Conflict) ಕಾರ್ಯಪಡೆಯ ಸದಸ್ಯರೂ ಹೌದು. 1989ರಲ್ಲಿ ವಿಶ್ವಸಂಸ್ಥೆಯ ʼಗ್ಲೋಬಲ್ 500- ರೋಲ್ ಆಫ್ ಹಾನರ್ʼ ಪ್ರಶಸ್ತಿಯೂ ಲಭಿಸಿದೆ.
ಇನ್ನು ಕಾಸರಗೋಡಿನ ಬೆಳ್ಳೂರು ಗ್ರಾಮ ಪಂಚಾಯತ್ ಸತ್ಯನಾರಾಯಣ ಸುಮಾರು 12 ವರ್ಷಗಳಿಂದ ದೇಸಿ ಭತ್ತದ ತಳಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿದ್ದು, 650ಕ್ಕೂ ಹೆಚ್ಚಿನ ಭತ್ತದ ತಳಿಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಸಾಧಾರಣ ಕೃಷಿ ಕುಟುಂಬ ಹಿನ್ನೆಲೆಯ ಅವರು ಇದೀಗ ಅಸಾಧಾರಣ ಕೃಷಿ ಕಾರ್ಯದ ಮೂಲಕ ದೇಶದ ಗಮನ ಸೆಳೆದಿದ್ದಾರೆ. ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ, ರಾಜಭೋಗ, ಉಪ್ಪು ನೀರಿನಲ್ಲಿಯೂ ಬೆಳೆಯಬಹುದಾದ ಕಗ್ಗ, ಬರ ನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಟಾ, ಫಿಲಿಪೈನ್ಸ್‌ನ ಮನಿಲಾ, ಸುಶ್ರುತ ಕಾಲದ ಕಳಮೆ, ಬುದ್ಧನ ಕಾಲಘಟ್ಟದ ಕಲಾನಾಮಕ್, ನೇರಳೆ ಬಣ್ಣದ ಡಾಂಬಾರ್ ಕಾಳಿ, ಕಾರ್ ರೆಡ್ ರೈಸ್, ಕಲಾವತಿ, ನಜರ್ ಬಾತ್, ಮೈಸೂರು ಮಲ್ಲಿಗೆ, ಜಾಸ್ಮಿನ್ ಮುಂತಾದ ಅಮೂಲ್ಯ ತಳಿಗಳನ್ನು ಸತ್ಯನಾರಾಯಣ ಸಂರಕ್ಷಿಸುತ್ತಿದ್ದಾರೆ. ಜತೆಗೆ ಕರ್ನಾಟಕ, ಮಣಿಪುರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಮುಂತಾದೆಡೆಗಳ ಭತ್ತದ ತಳಿಯೂ ಇವರ ಸಂಗ್ರಹದಲ್ಲಿದೆ. ಇರುವ 5 ಎಕ್ರೆ ಜಮೀನಿನಲ್ಲಿಯೇ ಇದನ್ನೆಲ್ಲ ಮಾಡಿದ್ದಾರೆ ಎಂದರೆ ನಂಬಲೇಬೇಕು!
ಹೀಗೆ ಹೆಚ್ಚಾಗಿ ಸುದ್ದಿಗೆ ಬಾರದ, ವಿಶಿಷ್ಟವಾದ ಸಾಧನೆಗಳನ್ನು ಮಾಡುತ್ತ ತೆರೆಮರೆಯಲ್ಲೇ ಇರುವ ಸಾಧಕರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡಿದಾಗ ಹಲವು ಪ್ರಯೋಜನಗಳಾಗುತ್ತವೆ. ಪ್ರಶಸ್ತಿಗಳು ಯೋಗ್ಯರಿಗೆ ಸಲ್ಲುತ್ತವೆ. ಅಯೋಗ್ಯರ ಪಾಲಾಗುವುದು ತಪ್ಪುತ್ತದೆ. ಸಾಧಕರಿಗೆ ನಿಜವಾದ ರಾಷ್ಟ್ರ ಗೌರವ ಸಲ್ಲಿಸಿದಂತಾಗುತ್ತದೆ. ಸಾಧನೆ ಮಾಡಿದ್ದರೂ ಅದಕ್ಕೆ ಪ್ರಚಾರವಿಲ್ಲದೆ ಮರೆಯಲ್ಲೇ ಉಳಿದವರು ರಾಷ್ಟ್ರ ಮಟ್ಟದ ಪ್ರಚಾರ ಪಡೆಯುತ್ತಾರೆ. ಇದರಿಂದ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಜನರಿಗೆ ಲಾಭಗಳಾಗುವುದು ಸಾಧ್ಯ. ಪ್ರಶಸ್ತಿಗಳು ನಿಜಕ್ಕೂ ಯೋಗ್ಯರಿಗೆ ಸಲ್ಲುತ್ತವೆ ಎಂಬ ಭಾವ ಪ್ರಜೆಗಳಲ್ಲಿ ಉಳಿಯುತ್ತದೆ. ಸಾಧಕರಿಗೂ ತಮ್ಮನ್ನು ಗುರುತಿಸುವವರಿದ್ದಾರೆ ಎಂಬ ಸಾರ್ಥಕ ಭಾವ ಮೂಡುತ್ತದೆ. ಹೀಗಾಗಿ ಈ ಸಲದ ಪದ್ಮ ಪ್ರಶಸ್ತಿಗಳು ಅರ್ಥಪೂರ್ಣವಾಗಿವೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ಮಿಲಿಟರಿ ಶಕ್ತಿ ಈಗ ರಫ್ತಿಗೂ ಸೈ