Site icon Vistara News

ವಿಸ್ತಾರ ಸಂಪಾದಕೀಯ: ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಬೆಲೆ ಇಳಿಕೆ; ನೆಮ್ಮದಿ ತರುವ ತೀರ್ಮಾನ

petrol

ವಿಸ್ತಾರ ಸಂಪಾದಕೀಯ: ಲೋಕಸಭೆ ಚುನಾವಣೆಯ (Lok Sabha Election 2024) ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ (petrol price) ಮತ್ತು ಡೀಸೆಲ್ (Diesel Price) ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಇಳಿಕೆ (Price cut) ಮಾಡಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಗಳಲ್ಲಿ ಇತ್ತೀಚೆಗೆ ಕಡಿತ ಮಾಡಲಾಗಿತ್ತು. ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ಊಹಾಪೋಹಗಳು ವ್ಯಾಪಕವಾಗಿದ್ದವು. ಅದು ಈಗ ನಿಜವಾಗಿದೆ. ಜಾಗತಿಕ ಇಂಧನ ಮಾರುಕಟ್ಟೆ, ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಕಂಪನಿಗಳ ಆರ್ಥಿಕ ಆರೋಗ್ಯದ ಹಿನ್ನೆಲೆಯಲ್ಲಿ ಸ್ಥಿರತೆಯ ದೃಷ್ಟಿಯಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCಗಳು) ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯಲ್ಲಿನ ಇಳಿಕೆ ಬಗ್ಗೆ ಯೋಚಿಸಬೇಕಾಗಿದೆ ಎಂದು ಇತ್ತೀಚೆಗೆ ಪೆಟ್ರೋಲಿಯಂ ಸಚಿವರು ಹೇಳಿದ್ದರು.

ಲೋಕಸಭೆ ಚುನಾವಣೆ ಹಾಗೂ ವರ್ಷಾಂತ್ಯದಲ್ಲಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಇದರ ಭಾಗವಾಗಿಯೇ ಕೇಂದ್ರ ಸರ್ಕಾರವು ಇತ್ತೀಚೆಗೆ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 100 ರೂ. ಇಳಿಸಿತ್ತು. ಆ ಮೂಲಕ ಬಡವರು ಹಾಗೂ ಮಧ್ಯಮ ವರ್ಗದವರ ಹೊರೆಯನ್ನು ಕಡಿಮೆ ಮಾಡಿದೆ. ಈ ಬೆಲೆ ಇಳಿಕೆಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಅಡುಗೆ ಇಂಧನವಾಗಿ ಬಳಸುವ ಸುಮಾರು 33 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಿದೆ. ಪೆಟ್ರೋಲ್‌ (Petrol Price Cut) ಸೇರಿ ಹಲವು ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಇಳಿದಿರುವುದೂ ಪೆಟ್ರೋಲ್‌, ಡೀಸೆಲ್‌ ದರ ಇಳಿಸಲು ಪೂರಕ ವಾತಾವರಣ ಸೃಷ್ಟಿಸಿದೆ.

ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ 300 ರೂಪಾಯಿ ಸಬ್ಸಿಡಿಯನ್ನು (LPG Subsidy) 2024-25ನೇ ಹಣಕಾಸು ವರ್ಷದವರೆಗೆ ವಿಸ್ತರಣೆ ಮಾಡಲೂ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ. ಇದರೊಂದಿಗೆ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಖರೀದಿಸುವವರಿಗೆ ಅನುಕೂಲವಾಗಲಿದೆ. ದೇಶದ 10 ಕೋಟಿ ಗೃಹಿಣಿಯರು ಸಬ್ಸಿಡಿಯ ಲಾಭ ಪಡೆಯಲಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪರಿಷ್ಕೃತ ದರ ಅನ್ವಯ ಈಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ 603 ರೂ.ಗೆ ದೊರೆಯಲಿದೆ. ಇದು ನಿಜವಾಗಿಯೂ ಮನೆವಾರ್ತೆಯ ಹೊರೆಯನ್ನು ಗಣನೀಯವಾಗಿ ಇಳಿಸುವ ಕ್ರಮವಾಗಿದೆ.

ಬೆಲೆಯೇರಿಕೆಯ ಈ ದಿನಗಳಲ್ಲಿ ಇಂಥ ಕ್ರಮಗಳು ಹೆಚ್ಚಿನ ಮಹತ್ವದ್ದಾಗುತ್ತವೆ. ಇಂದು ಪ್ರತಿಯೊಂದರ ಬೆಲೆಯೂ ಕೂಡ ಪೆಟ್ರೋಲ್‌- ಡೀಸೆಲ್‌ ಬೆಲೆ ಹಾಗೂ ಎಲ್‌ಪಿಜಿ ಬೆಲೆಯ ಮೂಲಕ ನಿರ್ಧರಿಸಲ್ಪಡುತ್ತದೆ. ಇವುಗಳಲ್ಲಿ ಏರಿಕೆಯಾದರೆ ಸಾಗಣೆ ವೆಚ್ಚದ ಏರಿಕೆಯಿಂದಾಗಿ ಪ್ರತಿಯೊಂದು ಸಾಮಗ್ರಿಯ ಮೌಲ್ಯವೂ ಏರುತ್ತದೆ. ಎಲ್‌ಪಿಜಿ ದರದಲ್ಲಿ ಏರಿಕೆಯಾದರೆ ಸಿದ್ಧಪಡಿಸಿದ ಆಹಾರ ಸಾಮಗ್ರಿಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ. ಸಾರಿಗೆಯ ವೆಚ್ಚ ಏರಿಕೆಯ ಪರಿಣಾಮವು ಆತಿಥ್ಯ ಉದ್ಯಮದಲ್ಲಿ ಮಾತ್ರವಲ್ಲದೆ ಮನೆಮನೆಗಳ ದಿನನಿತ್ಯದ ವಹಿವಾಟಿನಲ್ಲಿ ಕೂಡ ಪರಿಣಾಮ ಬೀರುತ್ತದೆ. ಇದು ಹಣದುಬ್ಬರದ ಮೂಲ. ಹೀಗಾಗಿ, ಪೆಟ್ರೋಲ್‌ ಬೆಲೆ ಇಳಿಕೆ, ಎಲ್‌ಪಿಜಿ ಬೆಲೆ ಇಳಿಕೆಗಳು ಮಧ್ಯಮ, ಕೆಳಮಧ್ಯಮ ಮತ್ತು ಎಲ್ಲ ವರ್ಗದವರಿಗೆ ಇನ್ನಷ್ಟು ನಿರಾಳವಾಗಿ ಉಸಿರಾಡಲು ಅಗತ್ಯವಾದ ಅವಕಾಶವನ್ನು ಒದಗಿಸುತ್ತದೆ. ತುಟ್ಟಿಯಾದ ಈ ಜಮಾನಾದಲ್ಲಿ ಬೆಲೆಗಳು ಇನ್ನಷ್ಟು ಆಕಾಶಕ್ಕೇರದಂತೆ ಈ ಕ್ರಮಗಳು ಕಾಪಾಡಿವೆ.

ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ಕ್ರಮಗಳು ಮಹತ್ವದ್ದು. ಪ್ರತಿಪಕ್ಷಗಳು ಸಾಮಾನ್ಯವಾಗಿ ತೈಲ ಹಾಗೂ ಅನಿಲ ಬೆಲೆ ಏರಿಕೆಯನ್ನೇ ಸರ್ಕಾರದ ವಿರುದ್ಧದ ಟೀಕೆಯ ಬಂಡವಾಳ ಮಾಡಿಕೊಂಡುಬಿಡುತ್ತಾರೆ. ಮೋದಿ ಸರ್ಕಾರ ಬೆಲೆ ಇಳಿಕೆ ಮಾಡುವ ಮೂಲಕ ಈ ಮಹಾಸ್ತ್ರವನ್ನೇ ಪ್ರತಿಪಕ್ಷಗಳ ಕೈಯಿಂದ ಕಿತ್ತುಕೊಂಡಿದೆ. ರಾಜಕಾರಣ ಅದೇನೇ ಇದ್ದರೂ, ಶ್ರೀಸಾಮಾನ್ಯನಿಗೆ ಈ ಬೆಲೆ ಇಳಿಕೆಯಿಂದ ಸಂತೋಷವಾಗುವುದಂತೂ ನಿಜ.

ಇದನ್ನೂ ಓದಿ: Petrol Price Cut: ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರಿಗೆ ₹2 ಇಳಿಕೆ; ಚುನಾವಣೆಗೂ ಮುನ್ನ ಸಿಹಿ ಸುದ್ದಿ ಕೊಟ್ಟ ಕೇಂದ್ರ

Exit mobile version