Site icon Vistara News

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

CM Meeting

ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್‌, ಮನೆಗಳಲ್ಲಿ 200 ಯೂನಿಟ್‌ಗಳವರೆಗೆ ವಿದ್ಯುತ್‌ ಫ್ರೀ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರವು (Karnataka Government), ಅವುಗಳನ್ನು ಯಶಸ್ವಿಯಾಗಿಯೂ ಜಾರಿಗೆ ತಂದಿದೆ. ಯಶಸ್ವಿ ಜಾರಿಯಿಂದ ದೇಶಾದ್ಯಂತ ಖ್ಯಾತಿಯನ್ನೂ ಗಳಿಸಿದೆ. ಆದರೆ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ನೇರವಾಗಿ ಜನರ ಜೇಬಿಗೆ ಕೈ ಹಾಕಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ (Petrol, Diesel Price Hike) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಈಗ ತೀವ್ರ ಚರ್ಚೆ, ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ, ಅವುಗಳನ್ನು ಸಮರ್ಪಕವಾಗಿ ಜಾರಿಗೂ ತಂದ, ಬಡವರಿಗೆ ಅನುಕೂಲ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಸರ್ಕಾರವು ಮೊದಲಿಗೆ ಮದ್ಯದ ಬೆಲೆಯನ್ನು ಏರಿಕೆ ಮಾಡಿತು. ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಿ ಸಂಪನ್ಮೂಲವನ್ನು ಕ್ರೋಡೀಕರಣ ಮಾಡಿತು. ಒಂದೇ ವರ್ಷದಲ್ಲಿ ಎರಡೆರಡು ಬಾರಿ ಮದ್ಯದ ಬೆಲೆಯೇರಿಕೆ ಮಾಡಿತು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವು ಈಗಾಗಲೇ ಮುದ್ರಾಂಕ ಶುಲ್ಕಗಳನ್ನು ಏರಿಸಿದೆ. ದತ್ತು ಸ್ವೀಕಾರ ಪ್ರಮಾಣಪತ್ರ, ಅಫಿಡವಿಟ್‌, ಆಸ್ತಿ ಪರಭಾರೆ, ಪವರ್‌ ಆಫ್‌ ಅಟಾರ್ನಿ ಸೇರಿ ಯಾವುದೇ ದಾಖಲೆಯನ್ನು ಪಡೆಯಲು ನಿಗದಿಪಡಿಸಿದ್ದ ಶುಲ್ಕವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ಇದು ಕೂಡ ಸಂಪನ್ಮೂಲ ಕ್ರೋಡೀಕರಣದ ಭಾಗವೇ ಆಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಅದರ ಬೆಲೆ ಹೆಚ್ಚಿಸಿದರೂ ತೊಂದರೆ ಇಲ್ಲ ಎಂದು ಜನ ಸುಮ್ಮನಾದರು. ಮುದ್ರಾಂಕ ಶುಲ್ಕವು ದಿನನಿತ್ಯದ ಖರ್ಚು-ವೆಚ್ಚ ಅಲ್ಲದ ಕಾರಣ, ಅದರ ಬೆಲೆಯೇರಿಕೆಯನ್ನೂ ಜನ ಮನ್ನಿಸಿದರು. ಆದರೆ, ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿರುವುದು ಅಕ್ಷಮ್ಯವಾಗಿದೆ.

ಪೆಟ್ರೋಲ್‌ ಬೆಲೆಯನ್ನು ಒಂದು ಲೀಟರ್‌ಗೆ 3 ರೂ. ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 3.5 ರೂ. ಏರಿಕೆ ಮಾಡಿರುವುದು ಜನರ ಮೇಲೆ ನೇರವಾಗಿ, ನಿತ್ಯವೂ ಪರಿಣಾಮ ಬೀರುತ್ತದೆ. ಈಗಾಗಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇ ಜಾಸ್ತಿಯೇ ಇದ್ದ ಕಾರಣ ಮತ್ತೆ ಏರಿಕೆ ಮಾಡಿರುವುದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಸಾಗಣೆ ವೆಚ್ಚ ಜಾಸ್ತಿಯಾಗುತ್ತದೆ. ಇದು ಅಗತ್ಯವಸ್ತುಗಳ ಬೆಲೆಯೇರಿಕೆಗೂ ಕಾರಣವಾಗುತ್ತದೆ. ಸಕಲ ರೀತಿಯಲ್ಲೂ ಜನರ ಜೇಬಿಗೆ ಭಾರವಾಗುತ್ತದೆ. ಪ್ರತಿದಿನವೂ ಬಡವರ ಹಣಕ್ಕೆ ಕತ್ತರಿ ಬೀಳುತ್ತದೆ. ಅಲ್ಲಿಗೆ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಪಡೆದುಕೊಂಡಂತೆ ಆಗುತ್ತದೆ. ಆಗ ಗ್ಯಾರಂಟಿಗಳ ಆಶಯವೇ ಮಣ್ಣುಪಾಲಾದಂತಾಗುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದಾಗ, ಅಡುಗೆ ಅನಿಲ ಸಿಲಿಂಡರ್‌ ಬೆಲೆಯೂ ಜಾಸ್ತಿ ಮಾಡಿದಾಗ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ‘ಬೆಲೆಯೇರಿಕೆ’ ಅಸ್ತ್ರವನ್ನೇ ಬಳಸಿದೆ. ಹೀಗಿರುವಾಗ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದರೆ ಹೇಗೆ? “ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಲ್ಲ, ಅದಕ್ಕಾಗಿ ಬೆಲೆಯೇರಿಕೆ ಮಾಡಿದ್ದೇವೆ” ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಹೇಳಿರುವುದು ಯಾವ ರೀತಿಯಲ್ಲಿ ಸಮಂಜಸ? ಸಿದ್ದರಾಮಯ್ಯನವರೇ, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಇದರಿಂದ ನಿಮ್ಮ ಸರ್ಕಾರಕ್ಕೆ ಹೆಸರೂ ಬಂದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಕರ್ನಾಟಕದಲ್ಲಿ ನೀವು ನಿರೀಕ್ಷಿಸಿದಷ್ಟು ಸೀಟುಗಳು ಕಾಂಗ್ರೆಸ್‌ಗೆ ಬರದಿರುವ ಹೊತ್ತಿನಲ್ಲಿ ರಾಜ್ಯದ ಜನರ ಮೇಲೆ ಬೆಲೆಯೇರಿಕೆ ಅಸ್ತ್ರವನ್ನು ಬಳಸುತ್ತಿರುವುದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತಹ ವರ್ತನೆಯೇ? ಖಂಡಿತವಾಗಿಯೂ ಇದು ಜನ ವಿರೋಧಿ ಕ್ರಮ.

ಇದನ್ನೂ ಓದಿ: Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Exit mobile version