ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ, ದಿವ್ಯವಾದ ರಾಮ ಮಂದಿರ (Ayodhya Ram Mandir) ನಿರ್ಮಾಣವಾಗಿದ್ದು, ಅಲ್ಲಿ ಇಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ (Ram Lalla) ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಕೋಟಿ ಭಾರತೀಯರ ಪ್ರತಿನಿಧಿಯಾಗಿ ಸ್ವತಃ ಪ್ರಧಾನ ಮಂತ್ರಿಗಳೇ ಇದನ್ನು ನೆರವೇರಿಸಿದ್ದಾರೆ. ದೇಶದ ನಾನಾ ಕಡೆಗಳಿಂದ ಬಂದ ಏಳು ಸಾವಿರ ಗಣ್ಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಮೂರ್ತಿಯ ಕಣ್ಣಿನ ಪರದೆ ಸರಿಸಿದ ಕ್ಷಣ ಕೋಟ್ಯಂತರ ಹಿಂದೂಗಳ ತನು ಮನ ಪುಳಕಗೊಂಡ ಕ್ಷಣ. ಲಕ್ಷಾಂತರ ಹಿಂದೂಗಳ ಹೋರಾಟಕ್ಕೆ ಸಾರ್ಥಕತೆ ಉಂಟಾದ ಕ್ಷಣ. ಐದು ಶತಮಾನಗಳ ಕಾಯುವಿಕೆ ಅಂತ್ಯಗೊಂಡ ಕ್ಷಣ(Vistara Editorial).
ಪ್ರಧಾನಿ ಮೋದಿಯವರು ಈ ಸಂದರ್ಭದಲ್ಲಿ ಆಡಿದ ಮಾತುಗಳೂ ಸಮಚಿತ್ತದಿಂದ ಕೂಡಿದ್ದವು. ರಾಮಮಂದಿರ ನಿರ್ಮಾಣದಿಂದ ಬೆಂಕಿ ಹೊತ್ತಿ ಉರಿಯುವುದಿಲ್ಲ. ಬದಲಾಗಿ ಸಮಾಜದಲ್ಲಿ ಶಾಂತಿ, ಸಾಮರಸ್ಯದ ದೀಪ ಬೆಳಗುತ್ತದೆ. ದೇಶದ ಏಳಿಗೆಗೆ ಹೊಸ ಶಕ್ತಿಯೊಂದು ಉದ್ಭವವಾಗುತ್ತದೆ. ಹಾಗಾಗಿ, ರಾಮಮಂದಿರವನ್ನು ವಿರೋಧಿಸುವವರು ಈಗ ರಾಮಮಂದಿರಕ್ಕೆ ಆಗಮಿಸಬೇಕು. ಅವರು ತಮ್ಮ ಮನೋಭಾವವನ್ನು ಮರು ಪರಿಶೀಲಿಸಿಕೊಳ್ಳಬೇಕು. ಚಿಂತನೆಗಳನ್ನು ಬದಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ರಾಮ ವಿವಾದ ಅಲ್ಲ, ಸಮಾಧಾನ. ರಾಮ ಬರೀ ವರ್ತಮಾನ ಅಲ್ಲ, ಅನಂತ ಕಾಲ. ರಾಮ ಎಲ್ಲರಿಗೂ ಸೇರಿದವನು. ಇದು ಕೇವಲ ವಿಗ್ರಹದ ಪ್ರಾಣ ಪ್ರತಿಷ್ಠೆ ಅಲ್ಲ. ಸಾಕ್ಷಾತ್ ಭಾರತೀಯರ ಮಾನವೀಯ ಮೌಲ್ಯದ, ಸರ್ವೋಚ್ಚ ಆದರ್ಶದ ಪ್ರಾಣ ಪ್ರತಿಷ್ಠಾಪನೆ. ಇದು ಕೇವಲ ದೇವ ಮಂದಿರ ಅಲ್ಲ, ಭಾರತದ ದೃಷ್ಟಿಯ, ಭಾರತದ ದರ್ಶನದ ಮಂದಿರ. ರಾಷ್ಟ್ರ ಚೇತನ ಮಂದಿರ. ರಾಮ ಪ್ರವಾಹ, ಪ್ರಭಾವ. ರಾಮ ನಿತ್ಯ ನಿರಂತರ. ಇದು ಪವಿತ್ರ ಸಮಯ. ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ನಾವೀಗ ಮುನ್ನುಡಿ ಬರೆಯಬೇಕು. ಭವ್ಯ ದಿವ್ಯ ಭಾರತದ ನಿರ್ಮಾಣಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು ಎಂದಿದ್ದಾರೆ ಪ್ರಧಾನಿ.
ರಾಮ ಮಂದಿರಕ್ಕಾಗಿ ನಡೆದ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ಐದು ಶತಮಾನಗಳ ಇತಿಹಾಸವಿದೆ. ರಾಮನಿಗೆ ಆದ ಅಪಮಾನವನ್ನು ರಾಷ್ಟ್ರಕ್ಕೇ ಆದ ಅಪಮಾನ ಎಂದು ನಮ್ಮ ಸಮುದಾಯ ಭಾವಿಸಿತ್ತು. ಐದು ಶತಮಾನಗಳ ಹಿಂದೆ ಮೊಗಲ್ ದೊರೆ ಔರಂಗಜೇಬ ರಾಮ ಜನ್ಮಭೂಮಿಗೆ ಮಾಡಿದ ಅಪಚಾರವನ್ನು ಮೂರು ದಶಕಗಳ ಹಿಂದೆ ಅಳಿಸಿ ಹಾಕಲಾಯಿತು. ಅಂದೇ ಹೊಸ ರಾಮ ಮಂದಿರದ ಕನಸೂ ಮೊಳೆಯಿತು. ಆದರೆ ಅದು ನನಸಾಗಲು ಇಷ್ಟು ವರ್ಷಗಳು ತೆಗೆದುಕೊಂಡಿತು. ಇದರ ಹಿಂದೆ ಎಷ್ಟೊಂದು ಹೋರಾಟ ಇದೆ ಎಂದು ನೆನೆಯುವುದು ಕ್ಲೀಷೆ ಆಗಲಿಕ್ಕಿಲ್ಲ. ಆ ಹೋರಾಟದಲ್ಲಿ ಸಾವಿರಾರು ಮಂದಿ ನೇರವಾಗಿ ಪಾಲ್ಗೊಂಡರಾದರೂ, ಅವರು ಹಿಂದೆ ಇಡೀ ಹಿಂದೂ ಸಮುದಾಯದ ಆಶಯ ಆಕಾಂಕ್ಷೆಗಳೇ ಪ್ರಬಲವಾಗಿ ಇದ್ದವು ಎಂದರೆ ತಪ್ಪಲ್ಲ. ಆದ್ದರಿಂದಲೇ ಇಂದು ರಾಮಮಂದಿರದ ಭವ್ಯ ನಿಲುವು ಸಾಧ್ಯವಾಗಿದೆ. ಇದು ಸಂತ್ರಸ್ತ, ಅನ್ಯಾಯಕ್ಕೆ ಒಳಗಾದ ಹಿಂದೂ ಸಮುದಾಯದ, ಭಾರತೀಯತೆಯ ಗೆಲುವು. ಇದು ನಮ್ಮ ದೇಶದ ದಿಟ್ಟತನವನ್ನು ಪ್ರತಿಪಾದಿಸುವ ಸಂಕೇತ ಕೂಡ.
ಹಾಗೆಂದು ಹೊಸ ರಾಮ ಮಂದಿರ ಬರಿಯ ಹಿಂದೂಗಳಿಗೆ ಸೇರಿದ್ದು ಎಂದು ಭಾವಿಸಬೇಕಿಲ್ಲ. ಇದು ಈ ದೇಶದ ಸಹಬಾಳ್ವೆ, ಭ್ರಾತೃತ್ವ, ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಪ್ರತೀಕವೂ ಆಗಲಿದೆ; ಆಗಬೇಕು. ಎಷ್ಟೋ ಮಂದಿ ಹಿಂದೂಯೇತರರು ಈ ಮಂದಿರಕ್ಕಾಗಿ ತಮ್ಮ ಯೋಗದಾನ ನೀಡಿದ್ದಾರೆ. ʼಶ್ರೀರಾಮʼ ಎಂಬುದು ಒಂದು ವ್ಯಕ್ತಿಯಲ್ಲ; ಅದೊಂದು ಶಕ್ತಿ. ಅದರಲ್ಲಿ ಭಾರತೀಯತೆ, ಭಾರತೀಯ ಮೌಲ್ಯಗಳ ಸಾರವೇ ಅಡಗಿದೆ. ಆತ ಮರ್ಯಾದಾ ಪುರುಷೋತ್ತಮ. ಭಾರತದ ಆರ್ಷ ಮೌಲ್ಯಗಳನ್ನು ಸಮರ್ಪಕವಾಗಿ ಪ್ರತಿಪಾದಿಸುವ ಸಂಕೇತ ಯಾವುದಾದರೂ ಇದ್ದರೆ ಅದು ಶ್ರೀರಾಮ. ಹೀಗಾಗಿಯೇ ಈ ಮಂದಿರ, ಇಡೀ ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಒಂದು ತೋರುಗಂಬ. ರಾಮನ ಆದರ್ಶಗಳಲ್ಲಿ ನಾವು ಮುನ್ನಡೆಯುತ್ತೇವೆ ಎಂಬ ಶಪಥವನ್ನು ಕೈಗೊಳ್ಳಲು ಇದು ಸಕಾಲ. ರಾಮನ ಆದರ್ಶವೆಂದರೆ ರಾಮರಾಜ್ಯ; ರಾಮರಾಜ್ಯವೆಂದರೆ ಹಸಿವು ದುಃಖ ನಿರುದ್ಯೋಗಗಳಿಲ್ಲದ, ಸುಖಿಗಳಿಂದ ಕೂಡಿದ ರಾಜ್ಯ. ಅದನ್ನು ಸಾಧಿಸುವತ್ತ ನಾವು ಮುನ್ನಡೆಯಬೇಕು.
ಶ್ರೀ ರಾಮ ಮಂದಿರದ ನಿರ್ಮಾಣದಿಂದ ಅಯೋಧ್ಯೆ ಮುಂದಿನ ದಿನಗಳಲ್ಲಿ ನಳನಳಿಸಲಿದೆ. ವಿಶ್ವದ ಮೂಲೆಮೂಲೆಯಲ್ಲಿರುವ ಪ್ರತಿಯೊಬ್ಬ ರಾಮ ಭಕ್ತರಿಗೆ ಇದರಿಂದ ಖುಷಿಯಾಗಿದೆ. ಇಲ್ಲಿಗೆ ಪ್ರತಿ ಶ್ರದ್ಧಾವಂತ ಹಿಂದೂವೂ ಭೇಟಿ ನೀಡಲು ಬಯಸುವುದು ನಿಶ್ಚಿತ. ಸಹಜವಾಗಿಯೇ ಇಲ್ಲಿಗೆ ಸಂಪತ್ತಿನ ಹೊಳೆ ಹರಿದುಬರಲಿದೆ. ಅಯೋಧ್ಯೆಯಲ್ಲಿ ಸಾರಿಗೆ ಸಂಪರ್ಕದಿಂದ ಹಿಡಿದು ಪ್ರತಿಯೊಂದು ವಲಯವೂ ಅಭಿವೃದ್ಧಿಯಾಗಲಿದೆ. ಅಯೋಧ್ಯೆಯಲ್ಲಿ ಇರುವವರು ಹಿಂದೂಗಳು ಮಾತ್ರವೇ ಅಲ್ಲ; ಎಲ್ಲ ಸಮುದಾಯದವರಿದ್ದಾರೆ. ಈ ಅಭಿವೃದ್ಧಿಯ ಫಲ ಎಲ್ಲರಿಗೂ ಹಂಚಿಹೋಗಲಿದೆ. ಒಂದು ಊರಿನಲ್ಲಿ ಮಂದಿರ ನಿರ್ಮಾಣವಾಗುವುದು ಎಂದರೆ ಆ ಊರು ಬೆಳವಣಿಗೆ ಕಾಣುವುದು ಎಂದು ಕೂಡ ಅರ್ಥ.
ಇಂದು ರಾಮ ಮಂದಿರವನ್ನು ಟೀಕಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದರೆ, ಇದು ಟೀಕಿಸುವ ವಿಚಾರವಲ್ಲ. ಇದರಲ್ಲಿ ಕೋಟ್ಯಂತರ ಹಿಂದೂಗಳ ಭಾವನೆಗಳಿವೆ. ಇದನ್ನು ಹಗುರವಾಗಿ ಕಾಣಲಾಗದು. ಭಕ್ತಿ ಎಂಬುದು ರಾಷ್ಟ್ರವನ್ನು ಕಟ್ಟುವ ಒಂದು ಮೌಲ್ಯವೂ ಆಗಬಹುದು. ಇದೇ ಕಾರಣವಾಗಿ ಮುಂದಿನ ದಿನಗಳಲ್ಲಿ ನಾವೆಲ್ಲ ದ್ವೇಷ ರೋಷಗಳನ್ನು ಮರೆತು ಪ್ರೀತಿ ಸಾಹೋದರ್ಯಗಳ ಸಹಬಾಳ್ವೆ ಕಾಣುವಂತಾಗಲಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಯೋಧ್ಯೆಯ ರಾಮ ಮಂದಿರ ರಾಷ್ಟ್ರೀಯ ಅಸ್ಮಿತೆಯ ಸಂಕೇತ