Site icon Vistara News

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

Rajakaluve

Vistara Editorial: Remove Rajakaluve Encroachment In Karnataka Before Monsoon 2024

ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸಲು ಸೂಚಿಸಲಾಗಿದೆ. ಯಾವ ಪ್ರಬಲ ರಾಜಕಾರಣಿಯೇ ಇರಲಿ, ಬೇರೆ ಯಾರೇ ಇರಲಿ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿವೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಂದು ಮುಖ್ಯಮಂತ್ರಿಗಳು ನಗರದ ವಿವಿಧೆಡೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಮತ್ತು ಮಳೆಯಿಂದ ಸಮಸ್ಯೆಗಳಿಗೆ ಒಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಬಳಿಕ ಇದನ್ನು ಹೇಳಿದ್ದಾರೆ.

ಜೂನ್ ತಿಂಗಳಿನಿಂದ ಮುಂಗಾರು ಪ್ರಾರಂಭವಾಗಲಿದೆ. ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಲಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ನಡೆಸಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಯಲಹಂಕದಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ. ಮುಯಮಂತ್ರಿಗಳು ತಿಳಿಸುವ ಪ್ರಕಾರ, ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು. ಹಿಂದಿನ ಸರ್ಕಾರ 193 ಕಿಮೀ ತೆರವು ಮಾಡಿದೆ. ಸದ್ಯ ರಾಜಕಾಲುವೆ ತೆರವಿಗೆ 1800 ಕೋಟಿ ರೂ. ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ. ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ. 12.15 ಕಿಮೀ ದೂರದ ಕಾಲುವೆ ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ.

ಜೂನ್‌ ಇನ್ನೇನು ಒಂದು ವಾರದಲ್ಲಿ ಬರಲಿದೆ. ಮುಂಗಾರು ಆರಂಭವಾಗಲಿದೆ. ಮಲೆನಾಡು ಹಾಗೂ ಬಯಲುಸೀಮೆಯ ಕೃಷಿಕ ಜನತೆಗೆ ಇರುವ ಮುಂಗಾರಿನ ಸಿದ್ಧತೆಯ ಜ್ಞಾನ ನಗರದ ಮಹಾಜನತೆಗೆ ಇಲ್ಲ. ಹೀಗಾಗಿ ಮುಂಗಾರಿನ ಆರಂಭದಲ್ಲಿ ಅಪ್ಪಳಿಸುವ ಮಳೆಗೆ, ಮಹಾನಗರ ಸಿದ್ಧವಾಗಿರುವುದಿಲ್ಲ. ಹೀಗಾಗಿಯೇ ರಾಜಕಾಲುವೆಗಳು ಕಸ ತುಂಬಿ ಕಟ್ಟಿಕೊಳ್ಳುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು ಹಳೆಯ ಹಾಗೂ ದುರ್ಬಲ ಮರಗಳು ಬೀಳುವುದು, ಶಿಥಿಲ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್‌ ಕಂಬಗಳು, ತೆರೆದ ಮ್ಯಾನ್‌ಹೋಲ್‌ಗಳು ಸಾವಿನರಮನೆಗಳಾಗುವುದನ್ನು ಕಾಣುತ್ತೇವೆ. ವಿಳಂಬವಾಗಿರುವ ರಾಜಕಾಲುವೆ ತೆರವು ಹಾಗೂ ಸ್ವಚ್ಛತೆ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿವೆ ಎಂಬ ಲೆಕ್ಕ ಇವೆ. ನಾಲ್ಕು ಮಳೆಗೆ ರಸ್ತೆಗುಂಡಿಗಳು ಮರಣಕೂಪಗಳಾಗುತ್ತವೆ. ಇವುಗಳನ್ನು ಮುಚ್ಚಿಸಬೇಕು.

ರಾಜಕಾಲುವೆಗಳ ನಿರ್ವಹಣೆಗೆ ಶಾಶ್ವತವಾದ ಒಂದು ವ್ಯವಸ್ಥೆಯನ್ನೇ ರೂಪಿಸಬೇಕಿದೆ. ರಾಜಕಾಲುವೆ ಹಾಗೂ ಒಳಚರಂಡಿ ವ್ಯವಸ್ಥೆಗಳು ಪ್ರತ್ಯೇಕವಾಗಿರಬೇಕು. ಆದರೆ ನಗರದ ಎಷ್ಟೋ ಕಡೆ ಅವು ಒಟ್ಟಾಗಿವೆ. ಇದು ತಪ್ಪಬೇಕು. ಇನ್ನು ರಾಜಕಾಲುವೆಯ ಒತ್ತುವರಿ ಪ್ರಭಾವಿಗಳಿಂದಲೇ ಆಗಿರುವುದು ಹೆಚ್ಚು. ಕಾನೂನಾತ್ಮಕ ಅಡ್ಡಿಆತಂಕಗಳನ್ನು ಸೃಷ್ಟಿಸುವವರೂ ಇವರೇ. ಇವರನ್ನು ಎದುರಿಸಲು ಸರ್ಕಾರ ಇನ್ನಷ್ಟು ಸನ್ನದ್ಧವಾಗಬೇಕು. ಮನೆಗಳಲ್ಲಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆಯಾದರೂ ಇರಬೇಕು. ಇಲ್ಲವಾದರೆ ರಾಜಕಾಲುವೆಗಳಿಗಾದರೂ ಅದು ಸೇರಬೇಕು. ಎರಡೂ ಇಲ್ಲದೆ ಹೋದರೆ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ಈ ಕೃತಕ ಪ್ರವಾಹಗಳಿಂದ ಜನಜೀವನ ಅಸ್ತವ್ಯಸ್ಥಗೊಂಡು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಲಯದಲ್ಲಿಯೂ ರಾಜಧಾನಿಗೆ ಕೆಟ್ಟ ಹೆಸರು ಬರುತ್ತದೆ. ಮೂಲಸೌಕರ್ಯ ಸರಿಯಿಲ್ಲ ಎಂದು ಇತರ ನಗರಗಳು ನಮ್ಮ ಅವಕಾಶವನ್ನು ಕಸಿಯುತ್ತವೆ. ನಾಲ್ಕಾರು ಕಂಪನಿಗಳು ಬೆಂಗಳೂರಿನ ಇನ್‌ಫ್ರಾಸ್ಟ್ರಕ್ಚರ್‌ ಕಳಪೆ ಎಂದು ಒಂದು ಮಾತು ಹೇಳಿದರೂ ಅದು ವಾಣಿಜ್ಯಾತ್ಮಕವಾಗಿ ಕಪ್ಪು ಚುಕ್ಕೆ. ಆದ್ದರಿಂದ, ಮುಂಗಾರಿಗೆ ಮುನ್ನವೇ ಈ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಿಕೊಂಡು ಸನ್ನದ್ಧರಾಗಬೇಕಿದೆ.

ಇದನ್ನೂ ಓದಿ: PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

Exit mobile version