Site icon Vistara News

ವಿಸ್ತಾರ ಸಂಪಾದಕೀಯ: ‘ಸ್ಪಿನ್ ಸರ್ದಾರ್’ ಬಿಷನ್‌ ಸಿಂಗ್‌ ಬೇಡಿ ಕೊಡುಗೆ ಸ್ಮರಣೀಯ

Vistara Editorial, Spin Sardar Bishan Singh Bedi's contribution to cricket is commendable

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನರಾಗಿದ್ದಾರೆ. 1966ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬೇಡಿ, 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿ ಮರೆಯಲಾರದ ಕೊಡುಗೆ ನೀಡಿದ್ದಾರೆ. ಅತ್ಯಂತ ನುರಿತ ಎಡಗೈ ಸ್ಪಿನ್ನರ್ ಆಗಿದ್ದ ಬೇಡಿ, ಭಾರತ ತಂಡದ ಪರವಾಗಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದು 266 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಇದಲ್ಲದೆ, ಅವರು ಹತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್​​ಗಳನ್ನು ಪಡೆದಿದ್ದಾರೆ. ಆಗಿನ್ನೂ ಏಕದಿನ ಕ್ರಿಕೆಟ್‌ ಪಂದ್ಯಗಳ ಆರಂಭದ ದಿನಗಳಾಗಿದ್ದರೂ, ಸಿಕ್ಕ ಅತ್ಯಲ್ಪ ಪಂದ್ಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು. ತಂಡದಲ್ಲಿ ಸ್ಪಿನ್ ಸರ್ದಾರ್ ಎಂದೇ ಗುರುತಿಸಿಕೊಂಡಿದ್ದ ಬಿಶನ್ ಸಿಂಗ್ ಬೇಡಿ ತಮ್ಮ ಕ್ರಿಕೆಟ್ ಜೀವನದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ಪಡೆದಿದ್ದಾರೆ. ಅವರು ತಂಡದಲ್ಲಿ ಇದ್ದ ಕಾಲದಲ್ಲಿ ನಾಲ್ವರ ಜೋಡಿ- ಎರ್ರಪಲ್ಲಿ ಪ್ರಸನ್ನ, ಬಿ.ಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್- ಅವರೊಂದಿಗೆ ಸೇರಿ ʼಸ್ಪಿನ್‌ ಚತುಷ್ಟಯʼ (ಸ್ಪಿನ್‌ ಕ್ವಾರ್ಟೆಟ್)‌ ಅನ್ನು ಕಟ್ಟಿದರು. ಇದು ಭಾರತ ಕ್ರಿಕೆಟ್‌ ತಂಡದಲ್ಲೂ ವಿಶ್ವದ ಕ್ರಿಕೆಟ್‌ ಇತಿಹಾಸದಲ್ಲೂ ಸ್ಪಿನ್ ಬೌಲಿಂಗ್ ಕಲೆಯ ಕ್ರಾಂತಿಗೆ ನಾಂದಿ ಹಾಡಿದರು(Vistara Editorial).

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಠಕ್ಕ ಚೀನಾ ನಡೆಯ ಮೇಲೆ ಎಚ್ಚರ ಅಗತ್ಯ

ಭಾರತದ ಕ್ರಿಕೆಟ್​ ತಂಡ ಮೊದಲ ಏಕದಿನ ಪಂದ್ಯದ ಗೆಲುವಿನಲ್ಲಿ ಬಿಷನ್​ ಅವರು ಪ್ರಮುಖ ಪಾತ್ರ ವಹಿಸಿದ್ದರು. 1975ರ ವಿಶ್ವಕಪ್​ನ ಪಂದ್ಯವೊಂದರಲ್ಲಿ ಅವರು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು. ಅದರಲ್ಲಿ 12 ಓವರ್​ಗಳಲ್ಲಿ 8 ಮೇಡನ್​ ಹಾಕಿ 6 ರನ್ ನೀಡಿ 1 ವಿಕೆಟ್​ ಪಡೆದಿದ್ದರು. ಬೇಡಿ ಅತ್ಯಂತ ಪರಿಣತ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಆಗಿದ್ದವರು. ಎದುರಾಳಿ ಬ್ಯಾಟ್ಸ್‌ಮನ್‌ಗಳ ತಂತ್ರಗಾರಿಕೆಯನ್ನು ಅರಿತು ಬೌಲಿಂಗ್‌ ಮಾಡುವಲ್ಲಿ ನಿಪುಣರಾಗಿದ್ದರು. ಅದೇ ರೀತಿ ಗಾಯಗೊಂಡ ನಾಯಕ ಅಜಿತ್ ವಾಡೇಕರ್ ಅವರ ಅನುಪಸ್ಥಿತಿಯಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸಿದ್ದರು. 1971ರಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಐತಿಹಾಸಿಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿಂದ ಬಳಿಕ ಭಾರತ ತಂಡ ಸ್ಪರ್ಧಾತ್ಮಕ ಕ್ರಿಕೆಟ್ ರಾಷ್ಟ್ರವಾಗಿ ಬೆಳೆಯಿತು. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಹೊರತಾಗಿ, ಬೇಡಿ ಅತ್ಯುತ್ತಮ ದೇಶೀಯ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದರು. ಹಲವಾರು ಸ್ಪಿನ್ ಬೌಲರ್​​ಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ಯುವ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಸ್ಪಿನ್‌ ಬೌಲಿಂಗ್‌ ಎಂಬುದೇ ಒಂದು ವಿಚಿತ್ರವಾದ ಕಲೆ. ಅದನ್ನು ಕೋಚಿಂಗ್‌ ಮೂಲಕ ಕಲಿಸಬಹುದು; ಆದರೆ ಸ್ಪಿನ್‌ ಕೌಶಲದ ಆತ್ಮವನ್ನು ಹಿಡಿಯಲಾಗದಿದ್ದರೆ, ಅದನ್ನು ಕರಗತ ಮಾಡಿಕೊಳ್ಳುವುದು ಸಾಧ್ಯವಿಲ್ಲ.‌ ವೇಗದ ಬೌಲಿಂಗ್‌ಗೆ ದೇಹತ್ರಾಣ ಬಹು ಮುಖ್ಯವಾದುದು. ಆದರೆ ಸ್ಪಿನ್‌ಗೆ ದೇಹತ್ರಾಣಕ್ಕಿಂತಲೂ ಬ್ಯಾಟರ್‌ನ ಗಮನವನ್ನು ಬೇರೆಡೆಗೆ ಸೆಳೆಯುವ ನೈಪುಣ್ಯ ಮುಖ್ಯವಾಗುತ್ತದೆ. ಸ್ಪಿನ್‌ಗೆ ದೇಹದ ಭಂಗಿ, ಗಾಳಿ ಬೀಸುವ ವೇಗ ಹಾಗೂ ದಿಕ್ಕು, ಪಿಚ್‌ನ ಸ್ಥಿತಿಗತಿ, ಎಲ್ಲವೂ ಮುಖ್ಯವಾಗುತ್ತದೆ. ಇದೆಲ್ಲವೂ ಒಂದೆಡೆ ಮೇಳೈಸಿದಾಗ ಅತ್ಯುತ್ತಮ ಸ್ಪಿನ್‌ ಬೌಲರ್‌ ತಯಾರಾಗುತ್ತಾನೆ. ಬಿಷನ್‌ ಸಿಂಗ್‌ ಬೇಡಿ ಅವರಲ್ಲಿ ಇದೆಲ್ಲವೂ ಮೇಳೈಸಿದಂತಿದ್ದವು. ಹಾಗಾಗಿಯೇ ಅವರು ದೇಶ ಕಂಡು ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗುವುದು ಸಾಧ್ಯವಾಯಿತು. ತಮ್ಮ ಕಲೆಯನ್ನು ಅವರು ಇತರರಿಗೂ ಧಾರೆಯೆರೆದು ಭವಿಷ್ಯದ ಆಟಗಾರರನ್ನು ಸಿದ್ಧಪಡಿಸಿದ್ದು ವಿಶೇಷ. ಹಾಗೆಯೇ ಬೇಡಿ ಅವರ ಪ್ರಭಾವ ಕ್ರಿಕೆಟ್​ ಕ್ಷೇತ್ರದಲ್ಲಿ ಅಗಾಧವಾಗಿ ಬೇರೂರಿದೆ. ಆಟದಿಂದ ನಿವೃತ್ತರಾದ ನಂತರವೂ ಕ್ರಿಕೆಟ್ ಜಗತ್ತಿನ ಪ್ರಗತಿಯ ಬಹಿರಂಗ ಧ್ವನಿಯಾಗಿ ಮುಂದುವರಿದ್ದರು. ಕ್ರಿಕೆಟ್​ಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಅವರು ಭಾರತೀಯ ಕ್ರಿಕೆಟ್​​ ಕ್ಷೇತ್ರದಲ್ಲಿ ಕೊನೇ ತನಕ ಗೌರವಾನ್ವಿತ ವ್ಯಕ್ತಿಯಾಗಿ ಉಳಿದಿದ್ದಾರೆ. ಕಲಾತ್ಮಕತೆ ಮತ್ತು ಕ್ರೀಡೆಗೆ ಅಚಲ ಸಮರ್ಪಣೆಗೆ ಅವರು ಇನ್ನೊಂದು ಹೆಸರಾಗಿದ್ದರು. ಅವರ ಘನತೆ, ಸಮರ್ಪಣಾ ಭಾವಗಳು ನಮ್ಮ ವರ್ತಮಾನ ಹಾಗೂ ಭವಿಷ್ಯದ ಕ್ರಿಕೆಟ್‌ ಅನ್ನು ಮುನ್ನಡೆಸಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version