2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶ ನೋಡಿ ಸಂತೋಷಪಡುವುದಕ್ಕೂ, ಗಾಬರಿಯಾಗುವುದಕ್ಕೂ ಕಾರಣಗಳಿವೆ.
ಮೊದಲನೆಯದಾಗಿ, ಕಳಪೆ ಫಲಿತಾಂಶ. ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್ ಆಗಿದ್ದಾರೆ. ಅಂದರೆ ಶೇಕಡಾ 10.49%ರಷ್ಟು ಫಲಿತಾಂಶ ಕುಸಿತವಾಗಿದೆ. ಆದರೆ ಇದು ಕೂಡ ನಿಜವಾದ ಕುಸಿತವಲ್ಲ. ಶಿಕ್ಷಣ ಇಲಾಖೆ ಈ ಬಾರಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಅನ್ನು ಕೊಟ್ಟಿದೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿ ಹಿತದೃಷ್ಟಿಯಿಂದ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಒಟ್ಟು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಸಿಕ್ಕಿದೆ. ಇಷ್ಟಾಗಿಯೂ ಫಲಿತಾಂಶ ಮಾತ್ರ ಕಡಿಮೆಯೇ.
ಕೃಪಾಂಕಗಳ ಹಿಂದೊಂದು ಕತೆಯಿದೆ. ಹಲವು ಕಡೆ ಸಾಮೂಹಿಕ ನಕಲು ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದರ ಪರಿಣಾಮವೇ ಈ ಫಲಿತಾಂಶ. ಇದರಿಂದ ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಇದರಿಂದ ಗಾಬರಿ ಬಿದ್ದ ಇಲಾಖೆ, ವಿದ್ಯಾರ್ಥಿಗಳ ಹಾಗೂ ಒಟ್ಟಾರೆ ಶೈಕ್ಷಣಿಕ ಆವರಣದ ನೈತಿಕ ಸ್ಥೈರ್ಯ ಕುಸಿಯದಿರಲಿ ಎಂಬ ದೃಷ್ಟಿಯಿಂದ ಭಾರಿ ಪ್ರಮಾಣದ ಕೃಪಾಂಕ ನೀಡಿದೆ. ಇದೇನೂ ಒಳ್ಳೆಯ ಸುದ್ದಿಯಲ್ಲ. ನಕಲು ನಡೆಯುತ್ತಿದ್ದುದರಿಂದ ಉತ್ತಮ ಫಲಿತಾಂಶ ದೊರೆಯುತ್ತಿತ್ತು ಎಂಬುದನ್ನು ಇಲಾಖೆ ಒಪ್ಪಿಕೊಂಡ ಹಾಗಾಗಿದೆ. ವೆಬ್ ಕಾಸ್ಟಿಂಗ್ ಪರಿಣಾಮ ನಕಲು ನಿಂತುದು ಒಳ್ಳೆಯ ಸಂಗತಿಯೇ. ಆದರೆ ಇದು ಪಾರದರ್ಶಕ ಪರೀಕ್ಷೆಯಲ್ಲಿ ತನ್ಮೂಲಕ ಉತ್ತಮ ಫಲಿತಾಂಶದಲ್ಲಿ ಕೊನೆಯಾಗಬೇಕಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಪರೀಕ್ಷೆಯ ಮೇಲೆ ನಿಗಾ ಇಡಲು ದುಡ್ಡು ಖರ್ಚು ಮಾಡಿದರೆ ಸಾಲದು, ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೂ ಹಾಗೆಯೇ ವೆಚ್ಚ ಮಾಡಿದರೆ ಉತ್ತಮ ಫಲಿತಾಂಶ ಬಂದೀತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ, 625ರಲ್ಲಿ ಅಷ್ಟೂ ಅಂಕಗಳನ್ನೂ ಬಾಚಿಕೊಂಡಿರುವ ಅಂಕಿತಾ ಕೊನ್ನೂರ್ ಹಳ್ಳಿಯೊಂದರ ರೈತರ ಮಗಳು. ಇದು ಗ್ರಾಮೀಣ ಪ್ರತಿಭೆಯ ದಿಗ್ವಿಜಯ ಎನ್ನಬಹುದು. ಈಕೆಗೆ ಐಎಎಸ್ ಅಧಿಕಾರಿಯಾಗುವ ಕನಸು ಇದೆಯಂತೆ. ಬಾಗಲಕೋಟೆ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ. ಪಠ್ಯದ ಜೊತೆಗೆ ಲೈಬ್ರರಿ ಹಾಗೂ ಯುಟ್ಯೂಬ್ ಮಾಹಿತಿಯನ್ನೂ ಸೂಕ್ತವಾಗಿ ಬಳಸಿಕೊಂಡು ಈಕೆ ಟಾಪರ್ ಆಗಿದ್ದಾಳೆ. ಎಲ್ಲ ಮಕ್ಕಳಿಗೂ ಮಾದರಿಯಾಗಿರುವ ಈಕೆಯ ಅಭಿನಂದನೆಗಳು ಸಲ್ಲುತ್ತವೆ. ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ದೊರೆತರೆ ದೊಡ್ಡ ಸಾಧನೆ ಮಾಡಬಲ್ಲರು ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ಸಾಕು.
ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು. ವಿಷಯವಾರು ಪರೀಕ್ಷೆಯನ್ನೂ ಬರೆಯಬಹುದು. ಎರಡು ಅಥವಾ ಮೂರು ಪರೀಕ್ಷೆಗಳಿಗೂ ಕುಳಿತುಕೊಳ್ಳಬಹುದು. ಯಾವುದೇ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಗರಿಷ್ಠ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇದು ಪರೀಕ್ಷಾ ವಿಧಾನದಲ್ಲಿ ಕ್ರಾಂತಿಕರ ಬದಲಾವಣೆ. ಈ ಬಾರಿ ಅನುತ್ತೀರ್ಣರಾದವರಿಗೆ ಹೇಗೂ ಪೂರಕ ಪರೀಕ್ಷೆ ಇದ್ದೇ ಇದೆ. ಆದ್ದರಿಂದ, ಇದೇ ನಿಜವಾಗಿಯೂ ಫಲಿತಾಂಶ ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು