ಹಾಸನದಲ್ಲಿ ಹುಟ್ಟಿಕೊಂಡು ರಾಜ್ಯಾದ್ಯಂತ, ದೇಶಾದ್ಯಂತ ಸುದ್ದಿಯಾಗುತ್ತಿರುವ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ ಈಗಾಗಲೇ ಸಾಕಷ್ಟು ರಾಜಕೀಯ ಕೋಲಾಹಲ ಎಬ್ಬಿಸಿದೆ. ಈ ಪ್ರಕರಣವನ್ನು ಸಾರ್ವಜನಿಕಗೊಳಿಸಿದ ಸಂದರ್ಭ, ಇದರ ಹಿಂದೆ ಮುಂದೆ ಇರುವ ರಾಜಕೀಯ ಲೆಕ್ಕಾಚಾರಗಳು, ಈಗ ನಡೆಯುತ್ತಿರುವ ಪ್ರತಿಭಟನೆಗಳು, ಎಲ್ಲವೂ ಕುತೂಹಲಕರವಾಗಿವೆ. ಆರೋಪಿ ಎನಿಸಿಕೊಂಡಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಈಗಾಗಲೇ ದೇಶ ಬಿಟ್ಟು ಜರ್ಮನಿಗೆ ತೆರಳಿದ್ದಾರೆ. “ತನಿಖೆಗೆ ಕರೆದಾಗ ಬರುತ್ತಾರೆ” ಎಂದು ಅವರ ತಂದೆ ಎಚ್‌ಡಿ ರೇವಣ್ಣ ಹೇಳಿದ್ದಾರೆ. ಆದರೆ ಬಹುಶಃ ನಿರೀಕ್ಷಣಾ ಜಾಮೀನು ದೊರೆಯುವವರೆಗೂ ಪ್ರಜ್ವಲ್ ಮರಳುವುದು ಅನುಮಾನವೇ ಅನಿಸುತ್ತದೆ. “ತನಿಖೆ ನಡೆಯಲಿ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಎಲ್ಲರ ಮಾತೂ ಹೌದು.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 354A, 354D, 506, 509 ಅಡಿ ಕೇಸ್ ದಾಖಲಾಗಿದ್ದು, ಆರೋಪ ಸಾಬೀತಾದರೆ ಏಳು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ಆಗಬಹುದು. ತನ್ನ ಮೇಲೆ ರೇಪ್ ನಡೆದಿದೆ ಎಂದು ಆರೋಪ ನೀಡಿದವರು ಬಲವಾಗಿ ಕೋರ್ಟ್‌ನಲ್ಲಿ ವಾದಿಸಿದರೆ ಆರೋಪಿಯನ್ನು ಯಾರೂ ಕಾಪಾಡಲಾರರು. ಆದರೆ ಶ್ರೀಮಂತರು, ಪ್ರಭಾವಿಗಳು ಹಾಗೂ ಅಧಿಕಾರದಲ್ಲಿ ಇರುವವರ ಮುಂದೆ ಬಡ ಆರೋಪಿಗಳು ನಿಲ್ಲಲು ಸಾಧ್ಯವೇ? ಇದು ಕಾನೂನು ಹಾಗೂ ನ್ಯಾಯಾಂಗದ ಪಾರದರ್ಶಕತೆ, ತನಿಖಾ ಸಂಸ್ಥೆಗಳ ಪ್ರಾಮಾಣಿಕತೆ ಹಾಗೂ ಸಾಕ್ಷಿಗಳನ್ನು ಕಲೆಹಾಕುವ ಪರಿಶ್ರಮ ಇವುಗಳನ್ನೆಲ್ಲ ಅವಲಂಬಿಸಿದೆ.
ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಗೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ಅಧಿಕೃತವಾಗಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳು ಇದ್ದಾರೆ. ಎಡಿಜಿಪಿ ಬಿ.ಕೆ. ಸಿಂಗ್ ಎಸ್‌ಐಟಿ ಮುಖ್ಯಸ್ಥರಾಗಿದ್ದು, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ ಸೀಮಾ ಲಾಟ್ಕರ್ ಸದಸ್ಯರಾಗಿದ್ದಾರೆ. ಸಿಐಡಿಯಲ್ಲಿ ಎಡಿಜಿಪಿಯಾಗಿರುವ ಬಿ.ಕೆ ಸಿಂಗ್ ಅವರು, ಈ ಹಿಂದೆ ಗೌರಿ ಲಂಕೇಶ್ ಕೊಲೆ ಕೇಸ್ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕ ಪಡಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೋರಿದೆ. ಮಹಿಳಾ ಸಂಘಟನೆಗಳು, ಮಹಿಳಾ ಹಕ್ಕುಗಳ ಆಯೋಗ ಕೂಡ ಈ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದೆ.
ಇದೆಲ್ಲವೂ ಒಂದು ಕಡೆಗಾದರೆ, ಪ್ರಕರಣದ ಇನ್ನೊಂದು ಆಯಾಮವನ್ನೂ ನೋಡಬೇಕು. ಲೈಂಗಿಕ ಕಿರುಕುಳದ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಎಲ್ಲರಿಗೂ ಸಿಗುವಂತೆ ಹಂಚಿದವರು ಯಾರು? ಯಾಕೆ ಅದನ್ನು ಚುನಾವಣೆಯ ಸಂದರ್ಭದಲ್ಲಿಯೇ ಹೊರಬಿಡಲಾಯಿತು? ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ರಾಜಕೀಯ ಮೈತ್ರಿ ಮಾಡಿಕೊಂಡಿರುವ ಸಮಯವನ್ನೇ ಆಯ್ದುಕೊಂಡು ಈ ವಿಡಿಯೋಗಳನ್ನು ಹರಿದಾಡುವಂತೆ ಮಾಡುವ ಹಿನ್ನೆಲೆಯಲ್ಲಿ ಚುನಾವಣಾ ಅಭ್ಯರ್ಥಿಯೊಬ್ಬರ ಸೋಲಿಗಾಗಿ ನಡೆಸಿದ ಸಂಚು ಕೂಡ ಇಲ್ಲವೇ? ಇದು ಸಮಯಸಾಧಕತನವಲ್ಲ, ಇದರ ಹಿಂದೆ ರಾಜಕೀಯ ಇಲ್ಲ ಎನ್ನುವುದು ತೀರಾ ಮುಗ್ಧತೆಯೂ ಅಲ್ಲ, ಭಂಡತನವಾಗುತ್ತದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ನಿಜ; ಆದರೆ ಸಂತ್ರಸ್ತ ಅಮಾಯಕ ಮಹಿಳೆಯರ ಗುರುತನ್ನು ಸಾರ್ವಜನಿಕಗೊಳಿಸಿದವರೂ ಆರೋಪಿಗಳೇ ಅಲ್ಲವೇ? ಅವರಿಗೂ ಶಿಕ್ಷೆಯಾಗಬೇಕಿದೆ. ಇದು ಮಹಿಳೆಯ ಘನತೆಗೆ ಕುಂದು ತರುವ ಸಂಚು.
ಘಟನೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದೊಳಗೆ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ತಿಳಿಯದು. ಅದು ಪಕ್ಷದ ಆಂತರಿಕ ವಿಚಾರ. ಪಕ್ಷದಿಂದ ಅವರ ಉಚ್ಚಾಟನೆಗೆ ತೀರ್ಮಾನಿಸಲಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ. ಹಾಗೆ ಆದರೆ ಪಕ್ಷ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಬೇಕು. ಬಿಜೆಪಿ ಕೂಡ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ, ಪ್ರಕರಣದ ಬಗ್ಗೆ ಬಿಜೆಪಿ ನಾಯಕರ ನಿಲುವು ಏನಿದೆ ಎಂದು ಸಾರ್ವಜನಿಕರು ತಿಳಿಯಲು ಬಯಸಿದರೆ ತಪ್ಪಾಗದು. ಹಾಗೆಯೇ ಹಾಸನ ಲೋಕಸಭೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಈ ಪ್ರಕರಣ ಯಾವ ರೀತಿ ಕೆಲಸ ಮಾಡಿದೆ, ಫಲಿತಾಂಶ ಹೇಗಿದ್ದೀತು ಎಂದು ತಿಳಿಯುವುದಕ್ಕೆ ಫಲಿತಾಂಶದವರೆಗೂ ಕಾಯಬೇಕಾದೀತು. ಬಿಕೆ ಸಿಂಗ್ ನೇತೃತ್ವದ ಎಸ್‌ಐಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರಕರಣ ತಾರ್ಕಿಕ ಕೊನೆ ಮುಟ್ಟಬಹುದು. ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹಾರೈಸೋಣ.
ಇದನ್ನೂ ಓದಿ: DK Shivakumar: ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ