Site icon Vistara News

ವಿಸ್ತಾರ ಸಂಪಾದಕೀಯ: ಕೊಳವೆಬಾವಿ ದುರಂತಗಳಿಗೆ ಕೊನೆಯೇ ಇಲ್ಲವೆ?

Borewell

Vistara Editorial: When Is An End For Borewell Tragedies In Karnataka

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ‌ ಲಚ್ಯಾಣ ಗ್ರಾಮದ ಜಮೀನೊಂದರಲ್ಲಿ ಬುಧವಾರ ಸಂಜೆ ಎರಡು ವರ್ಷದ ಬಾಲಕ ಕೊಳವೆಬಾವಿಗೆ (Borewell Tragedy) ಬಿದ್ದಿದ್ದಾನೆ. ಸಾತ್ವಿಕ್ ಮುಜಗೊಂಡ (2) ಎಂಬ ಬಾಲಕ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಶಂಕರಪ್ಪ ಮುಜಗೊಂಡ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. 500 ಅಡಿಯಷ್ಟು ಕೊರೆದರೂ ನೀರು ಬಂದಿರಲಿಲ್ಲ. ಹಾಗಾಗಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರು. ಈಗ ಅವರ ಮೊಮ್ಮಗನೇ ಈ ಕೊಳವೆ ಬಾವಿಗೆ ಬಿದ್ದಿದ್ದಾನೆ. ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೊಳವೆ ಬಾವಿಯ ಭಯಾನಕ ಕತ್ತಲು ಹಾಗೂ ಉಸಿರುಗಟ್ಟುವ ಸ್ಥಿತಿಯಲ್ಲಿ ಮಕ್ಕಳು ಕಳೆಯಬೇಕಾದ ಕ್ಷಣಗಳನ್ನು ಊಹಿಸುವುದೇ ಕಷ್ಟ. ಸಾತ್ವಿಕ್‌ ಯಾವುದೇ ತೊಂದರೆಯಿಲ್ಲದೆ ಬದುಕಿ ಬರಲಿ ಎಂದು ಹಾರೈಸೋಣ.

ಮಕ್ಕಳು ಅನುಪಯುಕ್ತ ಕೊಳವೆ ಬಾವಿಗಳಿಗೆ ಬೀಳುವುದು ಘೋರ ದುರಂತ. ಕೆಲವು ಬಾಲಕರನ್ನು ಹೇಗೋ ರಕ್ಷಿಸಲು ಸಾಧ್ಯವಾಗಿದೆ. 2006ರಲ್ಲಿ ಬಾಗಲಕೋಟೆಯ ಸಿಕ್ಕೇರಿ ಗ್ರಾಮದ ಯುವತಿ ಕಲ್ಲವ್ವ, 2007ರಲ್ಲಿ ಕಲಬುರಗಿಯ ಭೂಸನೂರು ಗ್ರಾಮದ ಬಾಲಕ ನವನಾಥ, 2009ರಲ್ಲಿ ಇಂಡಿ ತಾಲೂಕಿನ ದೇವರಹಿಂಬರಗಿ ಗ್ರಾಮದ ಬಾಲಕಿ ಕಾಂಚನಾ ಕೊಳವೆ ಬಾವಿಗೆ ಬಿದ್ದು ಬದುಕಿ ಬಂದಿದ್ದಾರೆ. ಇದೊಂದು ಥರ ಮರುಜನ್ಮ ಎನ್ನಬಹುದು. ತುಂಬಾ ಸಲ, ಅಂಥ ಮಕ್ಕಳನ್ನು ಬದುಕಿಸಿಕೊಳ್ಳಲಾಗದ ಹತಾಶೆ ತಂದೆತಾಯಿಗಳನ್ನು ಜೀವಮಾನವಿಡೀ ಕಾಡುತ್ತದೆ. 2000ರಲ್ಲಿ ದಾವಣಗೆರೆಯಲ್ಲಿ ಬಾಲಕ ಕರಿಯ, 2007ರಲ್ಲಿ ರಾಯಚೂರಿನಲ್ಲಿ ಬಾಲಕ ಸಂದೀಪ್, 2014ರಲ್ಲಿ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬಾಲಕಿ ಅಕ್ಷತಾ, 2017ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ವರ್ಷದ ಬಾಲಕಿ ಕಾವೇರಿ ಹಾಗೂ ಗದಗ ಜಿಲ್ಲೆಯ ಸವಡಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಅನುಪಯುಕ್ತ ತೆರೆದ ಕೊಳವೆ ಬಾವಿಯ ಬಳಿ ಆಟವಾಡುವ ಮುಗ್ಧ ಮಕ್ಕಳು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪುವ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸುತ್ತಲೇ ಇವೆ. ಇದಕ್ಕೆ ಸರಕಾರದ ವೈಫಲ್ಯವೂ ಜನರಲ್ಲಿ ಜಾಗೃತಿಯ ಕೊರತೆಯೂ ಕಾರಣವಾಗಿದೆ. ನೀರು ದೊರೆಯದ, ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿಸಬೇಕು ಎಂದು ಸರ್ಕಾರ ತುಂಬ ಹಿಂದೆಯೇ ಆದೇಶ ನೀಡಿದೆ. 2014ರಲ್ಲಿ ಒಂದು ದುರಂತ ನಡೆದಾಗ ಜನರು ಹಾಗೂ ಸರ್ಕಾರ ಎಲ್ಲರೂ ಎಚ್ಚೆತ್ತರು; ಅನುಪಯುಕ್ತ ಬಾವಿಗಳನ್ನು ಮುಚ್ಚಿಸಲು ಕಠಿಣ ನಿರ್ದೇಶನ ನೀಡಲಾಯಿತು. ರಾಜ್ಯಾದ್ಯಂತ ಅಭಿಯಾನ ನಡೆಸಿ 1,47,780 ಅಸುರಕ್ಷಿತ ಕೊಳವೆ ಬಾವಿ ಗುರುತಿಸಿ ಮುಚ್ಚಲಾಯಿತು. ಆ ನಂತರ ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೂ ಸರ್ಕಾರಿ ಅಥವಾ ಖಾಸಗಿ ಬೋರ್‌ವೆಲ್ ಕೊರೆದ ನಂತರ ಅನುಪಯುಕ್ತ ಎಂದಾದರೆ ಅಸುರಕ್ಷಿತವಾಗಿ ಬಿಡದಂತೆ ಸೂಚಿಸಲಾಗಿತ್ತು. ಕಾಲಾಂತರದಲ್ಲಿ ಅದು ಮರೆವು ಅಥವಾ ನಿರ್ಲಕ್ಷ್ಯಕ್ಕೆ ಸಂದಿದೆ.

Water Crisis: ಬೆಂಗಳೂರಿನ ಕೊಳವೆಬಾವಿ ನೀರು ಪೂರೈಕೆ ಟ್ಯಾಂಕರ್‌ಗಳಿನ್ನು ಸರ್ಕಾರದ ಸುಪರ್ದಿಗೆ: ಡಿ.ಕೆ. ಶಿವಕುಮಾರ್

ಸರಕಾರದ ವತಿಯಿಂದ ಕೊರೆಸುವ ಎಲ್ಲ ಕೊಳವೆ ಬಾವಿ ನೀರು ಸಿಗದೆ ಇದ್ದ ಪಕ್ಷದಲ್ಲಿ ಕಡ್ಡಾಯವಾಗಿ ಸುರಕ್ಷಿತ ಕ್ರಮಗಳೊಂದಿಗೆ ಮುಚ್ಚುವಂತೆ ಆದೇಶ ಹೊರಡಿಸಿ ಅದು ಬಹುತೇಕ ಪಾಲನೆಯೂ ಆಗುತ್ತಿದೆ. ಆದರೆ ಕೆಲವೆಡೆ ಖಾಸಗಿಯಾಗಿ ಕೊರೆಸಿರುವ ಕೊಳವೆಬಾವಿಗಳಲ್ಲಿ ನೀರು ಸಿಗದಿರುವಾಗ, ಮುಚ್ಚಿಸಲು ಮತ್ತೆ ಹಣ ವ್ಯರ್ಥ ಎಂದು ಹಾಗೇ ಬಿಡುವುದರಿಂದ ದುರಂತಗಳು ನಡೆಯುತ್ತಿವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿತ್ತು. ತದನಂತರ ಏನಾಯಿತೋ ತಿಳಿಯಲಿಲ್ಲ. ಸರ್ಕಾರಿ ಅಥವಾ ಖಾಸಗಿ ಬೋರ್‌ವೆಲ್‌ಗಳು ಕೊರೆದ ನಂತರ ಅಸುರಕ್ಷಿತವಾಗಿ ಬಿಟ್ಟರೆ ಅಧಿಕಾರಿಯಿಂದ ಹಿಡಿದು, ಬೋರ್‌ವೆಲ್ ಕೊರೆಸಿದ ವ್ಯಕ್ತಿಯವರೆಗೆ ಸಂಬಂಧಪಟ್ಟ ಎಲ್ಲರನ್ನೂ ಜವಾಬ್ದಾರರನ್ನಾಗಿ ಮಾಡುವುದು, ದಂಡ ಮತ್ತು ಶಿಕ್ಷೆ ಸೇರಿದಂತೆ ಬಿಗಿ ಕ್ರಮಗಳು ಜಾರಿಗೆ ಬರಬೇಕು. ಅದರ ಪರಿಣಾಮಕಾರಿ ಜಾರಿ ಆಗಬೇಕು. ಹಾಗಿದ್ದರೆ ಮಾತ್ರ ಇಂಥ ದುರಂತಗಳು ಇಲ್ಲವಾಗಬಹುದು.

ಇಂಡಿಯ ಸಾತ್ವಿಕ್‌ ಸುರಕ್ಷಿತವಾಗಿ ಮರಳಿ ಬರಲಿ; ನಮ್ಮೆಲ್ಲರ ಹಾರೈಕೆಗಳು ಆತನೊಂದಿಗೆ ಇವೆ. ಇಂಥ ಪರಿಸ್ಥಿತಿ ಇನ್ಯಾವ ಮಗುವಿಗೂ ಹೆತ್ತವರಿಗೂ ಬರದಿರಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version