Site icon Vistara News

ವಿಸ್ತಾರ ಸಂಪಾದಕೀಯ: ಠಕ್ಕ ಚೀನಾ ನಡೆಯ ಮೇಲೆ ಎಚ್ಚರ ಅಗತ್ಯ

Vistara News: China increased its military presence in LAC and India should more Careful

ವಿಸ್ತರಣಾವಾದವನ್ನೇ ತನ್ನ ಆದ್ಯತೆಯ ನೀತಿಯನ್ನಾಗಿಸಿಕೊಂಡಿರುವ ಚೀನಾ ತನ್ನ ನೆರೆಯ ಯಾವುದೇ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿಲ್ಲ. ಭಾರತದ ಜತೆಗೆ ಮೇಲ್ನೋಟಕ್ಕೆ ‘ಭಾಯಿ ಭಾಯಿ’ ಎನ್ನುವ ಭಾವನೆ ಇದ್ದರೂ, ಗಡಿಯಲ್ಲಿ ಎಂದಿಗೂ ಸಂಘರ್ಷದ ಹಾದಿಯೇ ಅದರ ಗುರಿಯಾಗಿದೆ. ಚೀನಾದ ಈ ನೀತಿಯನ್ನು ಪೆಂಟಗನ್ ಬಿಡುಗಡೆ ಮಾಡಿರುವ ವರದಿಯೂ ಪುಷ್ಟೀಕರಿಸುತ್ತದೆ. ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ರೇಖೆಗುಂಟ 2022ರಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜನೆ ಜತೆಗೆ ಸೇನಾ ಮೂಲ ಸೌಕರ್ಯವನ್ನು ಕೈಗೊಂಡಿದೆ ಎಂಬ ಮಾಹಿತಿಯನ್ನು ‘ಮಿಲಿಟರಿ ಆ್ಯಂಡ್ ಸೆಕ್ಯುರಿಟಿ ಡೆವಲಪ್‌ಮೆಂಟ್ಸ್ ಇನ್‌ವಾಲ್ವಿಂಗ್ ದಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ’ ಶೀರ್ಷಿಕೆಯ ವರದಿಯಲ್ಲಿ ತಿಳಿಸಲಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಭಾರತ ಸರ್ಕಾರಕ್ಕೆ ತಿಳಿದಿಲ್ಲ ಎಂದಲ್ಲ. ಆದರೆ, ಠಕ್ಕ ಚೀನಾ ಮೇಲೆ ಎಚ್ಚರ ಅಗತ್ಯ ಎಂಬ ಅಂಶವನ್ನು ಈ ವರದಿ ಒತ್ತಿ ಹೇಳುತ್ತಿದೆ(vistara Editorial).

2020ರಿಂದಲೂ ಭಾರತ ಮತ್ತು ಚೀನಾ ಗಡಿಯಲ್ಲಿ ತುಸು ಹೆಚ್ಚೇ ಸಂಘರ್ಷಮಯ ವಾತಾವರಣವಿದ್ದು, 2022ರಲ್ಲಿ ಚೀನಾ, ವಾಸ್ತವ ಗಡಿ ರೇಖೆಗುಂಟ ತನ್ನ ಸೇನಾ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿದೆ. ಡೋಕ್ಲಾಮ್ ಬಳಿ ಭೂಗತ ಸಂಗ್ರಹ ಸೌಲಭ್ಯಗಳು, ವಾಸ್ತವಿಕ ಗಡಿ ರೇಖೆಯ ಎಲ್ಲ ಮೂರೂ ವಲಯಗಳಲ್ಲಿ ಹೊಸ ರಸ್ತೆಗಳ ನಿರ್ಮಾಣ, ಭೂತಾನ್ ಗಡಿಯಲ್ಲಿರುವ ವಿವಾದಿತ ಪ್ರದೇಶದಲ್ಲಿ ಹೊಸ ಹಳ್ಳಿಗಳ ನಿರ್ಮಾಣ, ಪ್ಯಾಂಗಾಂಗ್ ಲೇಕ್‌ನಲ್ಲಿ ಎರಡನೇ ಸೇತುವೆ ನಿರ್ಮಾಣ, ಉಭಯ ಉದ್ದೇಶಗಳಿಗೆ ಬಳಕೆಯಾಗುವ ವಿಮಾನ ನಿಲ್ದಾಣ ಮತ್ತು ಬಹಳಷ್ಟು ಸಂಖ್ಯೆಯಲ್ಲಿ ಹೆಲಿಪ್ಯಾಡ್‌ಗಳ ನಿರ್ಮಾಣವು ಈ ಸೇನಾ ಮೂಲ ಸೌಕರ್ಯ ಅಭಿವೃದ್ಧಿಯು ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ಯುದ್ಧ ಪರಿಸ್ಥಿತಿ ನಿರ್ಮಾಣವಾದರೆ, ಈ ಮೂಲಸೌಕರ್ಯಗಳಿಂದ ಚೀನಾ ಸೇನೆಯನ್ನು ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಾವು ಚೀನಾದ ಈ ನಡೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ಚೀನಾ ಗಡಿಯಲ್ಲಿ ಎಂದಿಗೂ ಸುಮ್ಮನೆ ಕೂರುವ ರಾಷ್ಟ್ರವಲ್ಲ; ಈ ವಿಷಯವನ್ನು ಇತಿಹಾಸ ನಮಗೆ ಸಾರಿ ಹೇಳುತ್ತಿದೆ. ತೀರಾ ಇತ್ತೀಚಿನ ಉದಾಹಣೆಗಳನ್ನು ತೆಗೆದುಕೊಂಡರೆ, ನಮ್ಮ 20 ಯೋಧರ ಸಾವಿಗೆ ಕಾರಣವಾದ ಗಲ್ವಾನ್ ಕಣಿವೆ ಸಂಘರ್ಷದಿಂದ ಹಿಡಿದು ಅರುಣಾಚಲ ಪ್ರದೇಶ ತನ್ನದೆಂದು ಹೇಳುವ ತಿರುಚಿದ ನಕಾಶೆ ಬಿಡುಗಡೆಯವರೆಗೂ ಅದರ ಕಿತಾಪತಿಗಳು ಮುಂದುವರಿಯುತ್ತಲೇ ಇವೆ. ಚೀನಾದ ಯಾವುದೇ ಚಟುವಟಿಕೆಯನ್ನು ನಾವು ಉದಾಸೀನ ಮಾಡುವಂತೆಯೇ ಇಲ್ಲ. ಅದರ ಪ್ರತಿಯೊಂದು ನಡೆಯೂ ಕುತಂತ್ರದಿಂದ ಕೂಡಿರುತ್ತದೆ.

ನೆರೆರಾಷ್ಟ್ರಗಳಿಗೆ ಕಾಟ ಕೊಡುವುದು ಚೀನಾದ ಯುದ್ಧನೀತಿಯ ಭಾಗವಾಗಿದೆ. ಭಾರತದ ಸುತ್ತಮುತ್ತಲಿನ ಪುಟ್ಟ ದೇಶಗಳಿಗೆ ಸಾಲ ನೀಡಿ, ತನ್ನ ಸಾಲದಿಂದ ಅವುಗಳು ಮುಳುಗುವಂತೆ ಮಾಡಿ, ಅಲ್ಲಿ ತನ್ನ ವ್ಯಾಪಾರ ಹಾಗೂ ಮಿಲಿಟರಿ ವಸಾಹತುಗಳನ್ನು ಸ್ಥಾಪಿಸಿ, ಅಲ್ಲಿಂದ ಭಾರತದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಸೈಬರ್‌ ಕಾರಸ್ಥಾನಗಳ ಮೂಲಕ ನಮ್ಮ ದೇಶದ ಸರಕಾರಿ- ವ್ಯೂಹಾತ್ಮಕ ವೆಬ್‌ಸೈಟ್‌ಗಳಿಗೆ ಲಗ್ಗೆ ಹಾಕಲು ಯತ್ನಿಸುತ್ತದೆ. ವೈರಿ ದೇಶ ಪಾಕಿಸ್ತಾನಕ್ಕೆ ಮಿಲಿಟರಿ ಬೆಂಬಲ ಹಾಗೂ ಅಲ್ಲಿಂದ ಕಾರ್ಯಾಚರಿಸುವ ಉಗ್ರರ ಶಿಬಿರಗಳಿಗೆ ಧನಸಹಾಯ ಮಾಡುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ದಾಖಲೆಗಳನ್ನು ನೀಡಿ, ತನ್ನ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ತಂದಾಗಲೂ ಚೀನಾ ಅದಕ್ಕೆ ಅಡ್ಡಗಾಲು ಹಾಕುತ್ತದೆ. ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತಕ್ಕೆ ಕಿರುಕುಳ ಕೊಡಲು ಅದು ಸದಾ ಸಿದ್ಧವಾಗಿಯೇ ಇರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಕೂಡಾ ಚೀನಾಗೆ ತಕ್ಕ ಉತ್ತರ ನೀಡುತ್ತಲೇ ಬಂದಿರುವುದು ಗಮನಾರ್ಹವಾಗಿದೆ. ಚೀನಾದ ಕಪಟ ಕಾರ್ಯತಂತ್ರಗಳನ್ನೂ ಯುದ್ಧನೀತಿಗಳನ್ನೂ ಅರ್ಥ ಮಾಡಿಕೊಂಡಿರುವ ನೂತನ ಭಾರತದ ಎದುರೇಟುಗಳು ಚೀನಾವನ್ನು ಅಚ್ಚರಿಯಲ್ಲಿ ಕೆಡುವುತ್ತಾ ಬಂದಿವೆ. ಗಲ್ವಾನ್‌ನಲ್ಲಿ ಚೀನಾ ಸೈನಿಕರ ಪಾಶವೀ ದಾಳಿಗೆ ಅದೇ ಮಾದರಿಯ ಉತ್ತರ ನೀಡುವಲ್ಲಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಒತ್ತಡ ಹಾಕಿಸುವವರೆಗೂ ಭಾರತದ ರಾಜನೀತಿ, ವ್ಯೂಹಾತ್ಮಕ ಸಿದ್ಧತೆ, ಮಿಲಿಟರಿ ಸನ್ನದ್ಧತೆಗಳು ಹಬ್ಬಿವೆ. ಠಕ್ಕ ಚೀನಾದ ಬಗ್ಗೆ ಸದಾ ಎಚ್ಚರ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ರಾಜನೀತಿಯ ಮಾದರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಈಗ ಅಗತ್ಯವಾಗಿದೆ. ಜತೆಗೆ ಅಕ್ಕಪಕ್ಕದ ದೇಶಗಳ ಜತೆಗಿನ ಆತ್ಮೀಯ ರಾಜನೀತಿ, ಅಮೆರಿಕದಂಥ ಮಿತ್ರ ರಾಷ್ಟ್ರಗಳನ್ನು ಕಾಪಾಡಿಕೊಳ್ಳುವ ಜಾಣ್ಮೆ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವಿವೇಕದ ಮೂಲಕ ಇಂಥ ಸಂದಿಗ್ಧತೆಗಳನ್ನು ಎದುರಿಸಬಹುದಾಗಿದೆ. ಚೀನಾದ ‘ಬೆಲ್ಟ್ ಆ್ಯಂಡ್ ರೋಡ್’ ಉಪಕ್ರಮಕ್ಕೆ ಪ್ರತಿಯಾಗಿ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ ಮೂಲಕ ಭಾರತ ಕೂಡ ಸರಿಯಾದ ಪೆಟ್ಟು ನೀಡಲು ಮುಂದಾಗಿರುವುದು ನಮ್ಮ ಪರಿಣಾಮಕಾರಿ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಬಹುದು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೆನಡಾ ವಿಚಾರದಲ್ಲಿ ಭಾರತಕ್ಕೆ ಬುದ್ಧಿವಾದ ಬೇಕಿಲ್ಲ

ಭಾರತ ಮತ್ತು ಚೀನಾ ನಡುವಿನ ಗಡಿಯ ವೈಷಮ್ಯ, ರಾಜತಾಂತ್ರಿಕ ತಾಕಲಾಟಗಳ ಹೊರಾತಾಗಿಯೂ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ, ವಹಿವಾಟು ಮೌಲ್ಯವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಗಡಿಯಲ್ಲಿನ ತ್ವೇಷಮಯ ವಾತಾವರಣ ಮಾತ್ರವಲ್ಲದೇ, ಹೆಚ್ಚುತ್ತಿರುವ ಚೀನಾ ಮೇಲಿನ ಅವಲಂಬನೆಯನ್ನು ನವಭಾರತವು ಕಡಿಮೆ ಮಾಡಬೇಕಿದೆ. ಒಂದೆಡೆ ಚೀನಾ ಗಡಿಯಲ್ಲಿ ಕಾದಾಡುತ್ತಲೇ ಅದೇ ರಾಷ್ಟ್ರದ ಜತೆಗೆ ವ್ಯಾಪಾರವನ್ನು ವೃದ್ದಿಸುವುದು ತರವಲ್ಲ. ಈ ನಿಟ್ಟಿನಲ್ಲಿ ಭಾರತವು ಯೋಚಿಸಬೇಕಾಗಿದೆ. ಜತೆಗೆ, ವಾಸ್ತವ ಗಡಿ ರೇಖೆಗುಂಟ ಹೆಚ್ಚಿನ ಪ್ರಮಾಣದಲ್ಲಿ ಸೇನಾ ಮೂಲಸೌಕರ್ಯವನ್ನು ಹೆಚ್ಚಿಸುವುದರ ಮೂಲಕ ಚೀನಾಗೆ ತಿರುಗೇಟು ನೀಡಬೇಕು. ಎಲ್ಲ ಪರಿಸ್ಥಿತಿಗೂ ಸಿದ್ಧ ಎಂಬ ಸಂದೇಶವನ್ನು ಕಳುಹಿಸಬೇಕು.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version