Site icon Vistara News

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Porsche

Will enter active politics on my work, not due to Gandhi family's name: Robert Vadra

ಪುಣೆಯಲ್ಲಿ ಒಬ್ಬಾತ ಅಪ್ರಾಪ್ತ ವಯಸ್ಕ ಸ್ಪೋರ್ಟ್ಸ್‌ ಕಾರು ಅತಿ ವೇಗದಲ್ಲಿ ಯದ್ವಾತದ್ವಾ ಓಡಿಸಿ ಇಬ್ಬರ ಸಾವಿನ ಕಾರಣನಾಗಿದ್ದಾನೆ. ವಿಶೇಷ ಎಂದರೆ, ಇವನಿಗೆ ಬಂಧನವಾದ 15 ಗಂಟೆಯೊಳಗೇ ಜಾಮೀನು ದೊರೆತಿದೆ. 17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್‌ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಇವರಿಬ್ಬರೂ ಐಟಿ ಎಂಜಿನಿಯರ್ ಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಆತನಿಗೆ ಜಾಮೀನು ನೀಡಿದ್ದಲ್ಲದೆ, ಕೆಲವು ಸರಳ ಶಿಕ್ಷೆಗಳನ್ನು ಆತನಿಗೆ ವಿಧಿಸಿದೆ. ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬುದು ಷರತ್ತು. ಈತ ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯ ಮಗ ಹಾಗೂ ಪ್ರಭಾವಿ. ಪಬ್‌ನಲ್ಲಿ ಪಾರ್ಟಿ ಮಾಡಿ ಪಾನಮತ್ತನಾಗಿ ಹಿಂದಿರುಗುತ್ತಿದ್ದ. ಸಮಾಧಾನದ ವಿಷಯ ಎಂದರೆ ಪುಣೆ ಪೊಲೀಸರು ಜಾಮೀನು ಆದೇಶದ ವಿರುದ್ಧ ಮೇಲಿನ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಈ ಪ್ರಕರಣದ ಬಗ್ಗೆ ಜನಾಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬಾಲಕನ ತಂದೆ ಮತ್ತು ಆತನಿಗೆ ಮದ್ಯ ಪೂರೈಸಿದ ಬಾರ್ ಮಾಲೀಕನನ್ನು ಬಂಧಿಸಿದ್ದಾರೆ. ಇವರು ಕೂಡ ಬೇಗನೆ ಜಾಮೀನಿನ ಮೇಲೆ ಬಿಡುಗಡೆಯಾದರೆ ಆಶ್ಚರ್ಯವಿಲ್ಲ.

ಇದು ನಮ್ಮ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಯ ಛಿದ್ರಗಳು ಎಲ್ಲಿವೆ ಎಂಬುದನ್ನು ಬೆಟ್ಟು ಮಾಡಿ ತೋರಿಸುವಂತಿದೆ. ಕರ್ನಾಟಕದಲ್ಲಿಯೂ ಹೀಗೇ ಆಗಿದೆ; ಲೈಂಗಿಕ ದೌರ್ಜನ್ಯ ಹಾಗೂ ಕಿಡ್‌ನ್ಯಾಪ್‌ ಪ್ರಕರಣದಲ್ಲಿ ಬಂಧಿತರಾದ ಮಾಜಿ ಸಚಿವರು ಆರು ದಿನಗಳಲ್ಲಿ ಜಾಮೀನು ಪಡೆಯುತ್ತಾರೆ. ವಿಶೇಷ ತನಿಖಾ ದಳದ ವಕೀಲರು ಎಷ್ಟು ಪ್ರಯತ್ನಿಸಿದರೂ ಜಾಮೀನು ತಪ್ಪಿಸಲು ಆಗುವುದಿಲ್ಲ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಆತನನ್ನು ಕರೆದು ತರುವಲ್ಲಿ ಇಲ್ಲಿನ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಗಳು ಸದ್ಯಕ್ಕೆ ಅಸಹಾಯಕವಾಗಿವೆ. ಇದು ಈ ಪ್ರಕರಣದ ಒಂದು ಮುಖ.

ಪ್ರಭಾವಿಗಳು ಏನು ಮಾಡಿದರೂ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಪರಿಸ್ಥಿತಿ ಸೃಷ್ಟಿಯಾಗಿರುವಂತಿದೆ. ನಗರಗಳಲ್ಲಿ ಇತ್ತೀಚೆಗೆ ನಡೆಯುವ ಅಪರಾಧ ಸ್ವರೂಪಗಳನ್ನು ನೋಡುವುದಾದರೆ, ಕುಬೇರರು ಬಡವರ ಮೇಲೆ ಕೈ ಮಾಡುವುದು, ಹಲ್ಲೆ ನಡೆಸಿಯೂ ಪಾರಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಯಮಕನಮರಡಿಯಲ್ಲಿ ಇತ್ತೀಚೆಗೆ ನಡೆದ ಒಂದು ಅಪರಾಧ ನೋಡಿದರೆ, ಸಾಲ ಪಾವತಿ ಮಾಡಲಿಲ್ಲ ಎಂದು ರೈತನ ಪತ್ನಿ- ಮಗನನ್ನು ಒಬ್ಬಾಕೆ ಗೃಹಬಂಧನದಲ್ಲಿಟ್ಟಿದ್ದಾಳೆ. ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಿಗ ಮಹಿಳೆಯ ಮೇಲೆ ಪೊಲೀಸ್‌ ಕ್ರಮ ಕೈಗೊಂಡಂತಿಲ್ಲ. ಶ್ರೀಮಂತರು ಸಾಕಿದ ನಾಯಿಗಳು ಬೀದಿಯಲ್ಲಿ ಬಡವರ ಮಕ್ಕಳನ್ನು ಕಚ್ಚಿ ತಿನ್ನುತ್ತಿವೆ. ನಿರ್ಲಕ್ಷ್ಯದಿಂದ ಮಕ್ಕಳ ಜೀವಕ್ಕೆ ಎರವಾದವರಿಗೂ ಶಿಕ್ಷೆಯಾದ ಹಾಗಿಲ್ಲ.

ಇನ್ನು ಟ್ರಾಫಿಕ್‌ ಅಪರಾಧಗಳ ಕತೆಯೂ ಇದೇ ಮಾದರಿಯಲ್ಲಿದೆ. ಹಿಟ್‌ ಆಂಡ್‌ ರನ್‌ಗಳು ಹೆಚ್ಚುತ್ತಿವೆ. ದೊಡ್ಡ ವಾಹನಗಳನ್ನು ಯದ್ವಾತದ್ವಾ ಓಡಿಸಿ, ದ್ವಿಚಕ್ರ ವಾಹನ ಸವಾರರ ಜೀವ ತೆಗೆಯುವವರ ಸಂಖ್ಯೆ ಹೆಚ್ಚಿದೆ. ರೋಡ್‌ ರೇಜ್‌ ಪ್ರಕರಣಗಳಲ್ಲಿ ಸಬಲರು ದುರ್ಬಲರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದಾರೆ. ಇವರ್ಯಾರಿಗೂ ಶೀಘ್ರವಾಗಿ ಶಿಕ್ಷೆಯಾಗುತ್ತಿಲ್ಲ. ಸುಲಭವಾಗಿ ಜಾಮೀನೂ ದೊರೆಯುತ್ತಿದೆ. ದುರ್ಬಲ ಸೆಕ್ಷನ್‌ಗಳು, ದುರ್ಬಲ ಸಾಕ್ಷಿಗಳು, ವಿಲಂಬಿತ ನ್ಯಾಯಾಂಗ ಪ್ರಕ್ರಿಯೆ ಇವುಗಳಿಂದಾಗಿ ಸಂತ್ರಸ್ತರು ಮತ್ತಷ್ಟು ಸಂತ್ರಸ್ತರೇ ಆಗುತ್ತಿದ್ದಾರೆ. ನ್ಯಾಯದಾನ ವಿಳಂಬವಾದಷ್ಟೂ ಸಾಕ್ಷಿಗಳು, ಕಕ್ಷಿದಾರರು ಕೇಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವು ದಾಖಲೆ ಪತ್ರಗಳು ನಾಶವಾಗಬಹುದು, ಸಾಕ್ಷಿಗಳು ಇಲ್ಲವಾಗಬಹುದು. ಕಾಲದ ಹೊಡೆತಕ್ಕೆ ಸಿಲುಕಿ, ಪ್ರತಿ ತಿಂಗಳೂ ಕೋರ್ಟಿಗೆ ಅಲೆದು ಹೈರಾಣಾಗುವ ಪರಿಸ್ಥಿತಿಯಿಂದ ರೋಸಿಹೋಗಿ ರಾಜಿ ಮಾಡಿಕೊಂಡ ಎಷ್ಟೋ ಪ್ರಕರಣಗಳು ಇವೆ. ಇದು ನ್ಯಾಯ ಬೇಡವೆಂದಲ್ಲ, ಶಿಕ್ಷೆಗಿಂತಲೂ ನಿಷ್ಕರುಣಿಯಾಗಿರುವ ಕಟಕಟೆಯ ಸಹವಾಸ ಬೇಡವೆಂದು.

ಎಲ್ಲಿಯವರೆಗೆ ದುರ್ಬಲರು ನ್ಯಾಯ ಪಡೆಯದೆ, ಸಬಲರು ನ್ಯಾಯಾಂಗದ ಎಲ್ಲ ಲಾಭವನ್ನೂ ಪಡೆಯುತ್ತಾರೋ ಅಲ್ಲಿಯವರೆಗೂ ನ್ಯಾಯಾಂಗಕ್ಕೂ ಪೊಲೀಸ್‌ ವ್ಯವಸ್ಥೆಗೂ ಅಂಟಿದ ಸಬಲ ಪಕ್ಷಪಾತಿ ಎಂಬ ಕಳಂಕ ತಪ್ಪುವುದಿಲ್ಲ. ಅಪರಾಧದ ಗಂಭೀರತೆ ಪರಿಗಣಿಸಿ ಶೀಘ್ರ ಶಿಕ್ಷೆ, ತ್ವರಿತ ನ್ಯಾಯದಾನ ಸಾಧ್ಯವಾಗಬೇಕು.

ಇದನ್ನೂ ಓದಿ: Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Exit mobile version