Site icon Vistara News

ವಿಸ್ತಾರ ಸಂಪಾದಕೀಯ: ದಿವ್ಯಾಸ್ತ್ರಗಳ ಸೇರ್ಪಡೆಯಿಂದ ಭಾರತ ಮತ್ತಷ್ಟು ಬಲಿಷ್ಠ

Agni 5

ಭಾರತದ ಮಿಲಿಟರಿಗೆ ಹೊಸದೊಂದು ʼದಿವ್ಯಾಸ್ತ್ರʼ ಸೇರ್ಪಡೆಗೊಂಡಿದೆ. ಈ ಕಾರ್ಯಕ್ರಮದ ಹೆಸರೇ ʼದಿವ್ಯಾಸ್ತ್ರʼ ಆಗಿತ್ತು. ಅಕ್ಷರಾರರ್ಥದಲ್ಲಿ ಇದು ದಿವ್ಯಾಸ್ತ್ರವೇ ಆಗಿದೆ. ಇದನ್ನು ಯಶಸ್ವಿಯಾಗಿ ಉಡಾಯಿಸಿ ಪರೀಕ್ಷಿಸಲಾಗಿದೆ. ಅಗ್ನಿ -5 (Agni 5) ಎಂಬ ಹೆಸರಿನ ಈ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯು ವಾತಾವರಣದಿಂದ ಆಚೆ ಹೋಗಿ ವಾತಾವರಣ ಮರು ಪ್ರವೇಶಿಸಿ ಬಹು ಗುರಿಗಳ ಮೇಲೆ ಸ್ವತಂತ್ರವಾಗಿ ದಾಳಿಯಿಡಬಲ್ಲ ತಂತ್ರಜ್ಞಾನ (ಎಂಐಆರ್​ಐವಿ) ಹೊಂದಿರುವ ಕ್ಷಿಪಣಿ. ಇದು ನಮ್ಮ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಹಲವಾರು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಫಲ. ಇದರೊಂದಿಗೆ ಈ ತಂತ್ರಜ್ಞಾನವನ್ನು ಹೊಂದಿರುವ ಗಣ್ಯ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದೆ. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್​ ಹಾಗೂ ಬ್ರಿಟನ್​ಈ ಸಾಲಿನ ದೇಶಗಳು.

ವಿಶೇಷ ಎಂದರೆ ಡಿಆರ್​ಡಿಒದ ಮಹಿಳಾ ವಿಜ್ಞಾನಿಯೊಬ್ಬರು ಈ ಮಿಷನ್​​ನ ನೇತೃತ್ವ ವಹಿಸಿದ್ದು. ಹಲವಾರು ಮಹಿಳಾ ವಿಜ್ಞಾನಿಗಳು ಈ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದ್ದರಿಂದ ಇದು ʼನಾರಿಶಕ್ತಿ ದಿವ್ಯಾಸ್ತ್ರʼವೂ ಹೌದು. ಡಿಆರ್​​ಡಿಒ ವಿಜ್ಞಾನಿಗಳು ಅನೇಕ ವರ್ಷಗಳಿಂದ ಈ ಮಲ್ಟಿಪಲ್ ಇಂಡಿಪೆಂಡೆಂಟ್ ಟಾರ್ಗೆಟಬಲ್ ರೀ-ಎಂಟ್ರಿ ವೆಹಿಕಲ್ಸ್ (MIRV ) ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ತಂತ್ರಜ್ಞಾನದಲ್ಲಿ ಅಗ್ನಿ-5 ನಂಥ ಕ್ಷಿಪಣಿ ಅನೇಕ ಸಿಡಿತಲೆಗಳನ್ನು ಜೊತೆಗೇ ಸಾಗಿಸಬಲ್ಲದು. ಡಿಆರ್​ಡಿಒ ಅಭಿವೃದ್ಧಿಪಡಿಸಿದ ವ್ಯವಸ್ಥೆಯು ಹೆಚ್ಚಿನ ನಿಖರತೆಯ ಸಂವೇದಕ​ಗಳಿಂದ ಕೂಡಿದೆ. ಸಿಡಿಸಿದ ಬಳಿಕ ಇದು ಮೊದಲು ಬಾಹ್ಯಾಕಾಶಕ್ಕೆ ಹೋಗಿ ಬಳಿಕ ಭೂಮಿಯ ವಾತಾವರಣಕ್ಕೆ ಮರಳುತ್ತದೆ. ವಿವಿಧ ಸ್ಥಳಗಳಲ್ಲಿರುವ ಅನೇಕ ಗುರಿಗಳನ್ನು ಒಂದೇ ಸಲಕ್ಕೆ ಈ ಸಿಡಿತಲೆಗಳ ಮೂಲಕ ನಾಶ ಮಾಡುತ್ತದೆ. ನೂರಾರು ಕಿಲೋಮೀಟರ್ ದೂರದಲ್ಲಿರುವ ಸ್ಥಳಗಳನ್ನು ಗುರಿಯಾಗಿಸಿಯೂ ಈ ದಾಳಿ ಮಾಡಬಹುದು. ಈ ಕ್ಷಿಪಣಿಯ ದೂರವ್ಯಾಪ್ತಿ ಸುಮಾರು 5000 ಕಿ.ಮೀ. ಈಗ ಪರೀಕ್ಷಿಸಿದ್ದು 3500 ಕಿಮೀ ಮಾತ್ರ. ಸರಿಯಾಗಿ ಉಪಯೋಗಿಸಿದರೆ ಬೀಜಿಂಗ್‌ ಅನ್ನು ಇದು ತಲುಪಬಲ್ಲುದು. ಬಹು- ಗುರಿಗಳು ಇದರ ಒಂದು ಅನುಕೂಲ ಆದರೆ, ಇನ್ನೊಂದು ಅನುಕೂಲವೆಂದರೆ ಇದರ ಅನಿರೀಕ್ಷಿತತೆ ಹಾಗೂ ತಡೆಯಲು ಅಸಾಧ್ಯವಾದ ಸಾಮರ್ಥ್ಯ. ಇದು ಎದುರಾಳಿಗಳು ಬಳಸುವ ಕ್ಷಿಪಣಿ ವಿರೋಧಿ ರಕ್ಷಣಾ (AMD) ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ವಂಚಿಸುತ್ತದೆ. ರೇಡಾರ್‌ಗಳಿಗೆ ಸುಲಭವಾಗಿ ಇದು ಉದ್ದೇಶಿಸಿರುವ ಗುರಿಯ ಬಗ್ಗೆ ತಿಳಿಯುವುದಿಲ್ಲ.

ಭಾರತೀಯ ಸೇನೆ ಇಂಥ ಹಲವು ʼದಿವ್ಯಾಸ್ತ್ರʼಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಕಳೆದ ಮೇ ತಿಂಗಳಲ್ಲಿ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯನ್ನು ಸುಖೋಯಿ ಫೈಟರ್‌ ಜೆಟ್‌ನಿಂದ ಉಡಾಯಿಸಲಾಗಿತ್ತು. ಇತ್ತೀಚೆಗಷ್ಟೇ ಐಎನ್‌ಎಸ್‌ ವಿಕ್ರಾಂತ್‌ ಎಂಬ ಏರ್‌ಕ್ರಾಫ್ಟ್‌ ಕ್ಯಾರಿಯರ್‌ ನೌಕೆಯನ್ನೂ ಭಾರತ ಮಿಲಿಟರಿಗೆ ಸೇರಿಸಿಕೊಳ್ಳಲಾಗಿದೆ. ಇದು ಬಂಗಾಲ ಕೊಲ್ಲಿಯೂ ಸೇರಿದಂತೆ ಚೀನಾದ ನೌಕೆಗಳು ಓಡಾಡುವ ಪ್ರದೇಶದ ಮೇಲೆ ತನ್ನ ನಿಗಾ ಇಡಬಲ್ಲುದು ಹಾಗೂ ಅಗತ್ಯ ಬಿದ್ದರೆ ವೈಮಾನಿಕ ದಾಳಿಗೆ ನೆಲವಾಗಿ ಕಾರ್ಯಾಚರಿಸಬಲ್ಲುದು. ಇವೆಲ್ಲವೂ ನಮ್ಮ ಮಿಲಿಟರಿಯ ಸನ್ನದ್ಧತೆಯನ್ನು ಪ್ರದರ್ಶಿಸುವ ಕ್ರಮಗಳಾಗಿವೆ. ರಫೇಲ್‌ ಯುದ್ಧವಿಮಾನಗಳ ಸೇರ್ಪಡೆ, ಉಪಗ್ರಹ ನಾಶಕ ತಂತ್ರಜ್ಞಾನದ ಅಭಿವೃದ್ಧಿ, ಘಾತಕ್‌ ಮಾನವರಹಿತ ದಾಳಿ ಡ್ರೋನ್‌ಗಳ ಅಳವಡಿಕೆ, ಹೆಲಿಕಾಪ್ಟರ್‌ನಿಂದ ನೌಕೆಯತ್ತ ಉಡಾಯಿಸಬಹುದಾದ NASM-SR ಕ್ಷಿಪಣಿಗಳ ನಿಯೋಜನೆ ಮುಂತಾದವು ಅಂಥ ಕ್ರಮಗಳು. ಆರು ಹೊಸ ಸಬ್‌ಮೆರೀನ್‌ಗಳೂ ಸೇನೆ ಸೇರುವ ನಿರೀಕ್ಷೆ ಇದೆ. ಇದರೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳೂ ಆತ್ಮನಿರ್ಭರ ಮಿಲಿಟರಿಯನ್ನು ರೂಪುಗೊಳಿಸುವಲ್ಲಿ ನೆರವಾಗುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಡಿಆರ್‌ಡಿಒ, ಇಸ್ರೋ ಮುಂತಾದ ಸಂಸ್ಥೆಗಳು ಪರಿಣಾಮಕಾರಿ ಆವಿಷ್ಕಾರಗಳನ್ನು ಮಾಡುತ್ತಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಸ್ವಾಗತಾರ್ಹ

ಜಾಣ ರಾಜತಾಂತ್ರಿಕ ನಡೆಗಳ ಜತೆಗೆ ಇಂಥ ಮಿಲಿಟರಿ ಸನ್ನದ್ಧತೆಗಳೂ ಸೇರಿದಾಗ ರಾಷ್ಟ್ರವೊಂದರ ಭದ್ರತಾ ವ್ಯವಸ್ಥೆ ಪರಿಪೂರ್ಣಗೊಳ್ಳುತ್ತದೆ. 1962ರಲ್ಲಿ ಯುದ್ಧಸನ್ನದ್ಧತೆಯಿಲ್ಲದ ಕಾರಣ ಮುಖಭಂಗ ಅನುಭವಿಸಿದ ಭಾರತ, ಇಂದು ಅದನ್ನು ಮೀರಿ ನಿಂತಿದೆ ಎಂಬುದನ್ನು ವೈರಿಗಳೂ ಅರ್ಥ ಮಾಡಿಕೊಳ್ಳುವಂತೆ ನಮ್ಮ ನಡೆಯಿರುವುದನ್ನು ನಾವು ಸ್ವಾಗತಿಸಬೇಕು.

Exit mobile version