Site icon Vistara News

Education News : ಅಸ್ಸಾಂನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು, ರಾಜ್ಯದಲ್ಲಿ ಕತೆಯೇನು?

board exam

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಅನ್ನು ಅಳವಡಿಸಿಕೊಂಡಿರುವ ಅಸ್ಸಾಂ ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ (Sslc Exam) ಪರೀಕ್ಷೆ (10ನೇ ತರಗತಿ) ನಡೆಸುವುದಿಲ್ಲ (Education News) ಎಂದು ಅಧಿಕೃತವಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಏನಾಗಲಿದೆ ಎಂಬ ಚರ್ಚೆ ಪೋಷಕರ ವರ್ಗದಲ್ಲಿ ನಡೆಯುತ್ತಿದೆ.

ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಹಿಮವಂತ್‌ ಬಿಸ್ವಾ ಶರ್ಮಾ ಟ್ವೀಟ್‌ ಮಾಡಿ, ʻʻರಾಜ್ಯದಲ್ಲಿ 10 ನೇ ತರಗತಿಗೆ ಬೋರ್ಡ್‌ ಲೆವೆಲ್‌ ಪರೀಕ್ಷೆ ನಡೆಸುವುದಿಲ್ಲ. 12 ನೇ ತರಗತಿಗೆ ಬೋರ್ಡ್‌ (education news) ಲೆವೆಲ್‌ ಪರೀಕ್ಷೆ ನಡೆಸಲಾಗುವುದು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ಮಟ್ಟದಲ್ಲಿಯೇ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತದೆ. ಹತ್ತರಿಂದ ಹನ್ನೊಂದನೇ ತರಗತಿಗೆ ನೇರವಾಗಿ ಪ್ರವೇಶ ಪಡೆಯಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಟ್ವಿಟ್ಟರ್‌ನಲ್ಲಿ ಹೇಳಿದ್ದೇನು?

ರಾಷ್ಟ್ರೀಯ ಶಿಕ್ಷಣ ನೀತಿ 2020 (national education policy 2020) ಜಾರಿಗೆ ತಂದಿರುವ ಅಲ್ಲಿಯ ಸರ್ಕಾರ ಈ ನೀತಿಯಂತೆಯೇ ಈ ಬದಲಾವಣೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಮಂಡಳಿಯನ್ನು (SEBA) ಪಿಯು ಮಂಡಳಿಯೊಂದಿಗೆ (AHSEC)ವಿಲೀನಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಈ ಹಿಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಜಾರಿಗೆ ತ್ವರಿತ ಕ್ರಮ ತೆಗೆದುಕೊಂಡಿತ್ತು. ಈಗಾಗಲೇ ರಾಜ್ಯದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ (Education News) ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿ ವಿಲೀನಗೊಳಿಸಲಾಗಿದೆ. ʻಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ʼ ಮಂಡಳಿಯನ್ನು ರೂಪಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ಮುಂದಾದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಈ ನೀತಿ ಜಾರಿಯಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಕೂಡ ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗುವುದಿಲ್ಲ ಎಂದೇ ಶಿಕ್ಷಣ ಇಲಾಖೆ ಹೇಳಿಕೊಂಡು ಬಂದಿತ್ತು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಎನ್‌ಇಪಿ ಜಾರಿಗೆ ತರುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ಈಗಿರುವ ವ್ಯವಸ್ಥೆಯೇ ಮುಂದುವರಿಯಲಿದೆಯೇ ಎಂಬ ಚರ್ಚೆ ಈಗ ನಡೆಯುತ್ತಿದೆ.

ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿಯೇ ಹೇಳಿತ್ತು. ಇತ್ತೀಚೆಗೆ ಬೆಳಗಾವಿಯಲ್ಲಿ ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ʻʻದೇಶಾದ್ಯಂತ ಜಾರಿಯಲ್ಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಲಾಗುತ್ತದೆ. ರಾಜ್ಯದ ಹೊಸ ಶಿಕ್ಷಣ ನೀತಿ ಬರಲಿದೆ. ನಮಗೆ ನಾಗಪುರ್‌ ಶಿಕ್ಷಣ ನೀತಿಯ ಅಗತ್ಯವಿಲ್ಲ. ನಾವು ವಿಸ್ತೃತವಾಗಿ ಚರ್ಚೆ ನಡೆಸಿ ಹೊಸ ನೀತಿಯನ್ನು ಜಾರಿ ಮಡುತ್ತೇವೆ. ಇಷ್ಟು ದಿನ ಇದ್ದ ನೀತಿಯಿಂದ ಏನೇನಾಯಿತು ಎಂದು ಪರಿಶೀಲಿಸುತ್ತೇವೆʼʼ ಎಂದಿದ್ದರು.

ಶಿಕ್ಷಣ ನೀತಿ ಕುರಿತು ಡಿಕೆಶಿ ಮಾತು

ನಿರ್ಧಾರವಾಗಿಲ್ಲ ಎಂದ ಸಚಿವ ಸುಧಾಕರ್‌

ಮಂಗಳವಾರದಂದು ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಪಡಿಸುವ ಕುರಿತು ಸಭೆ ನಡೆಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್‌ ಈ ಬಗ್ಗೆ ಇನ್ನೂ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ನೀತಿಯ ಸಾಧಕ-ಬಾಧಕ ಬಗ್ಗೆ ಚರ್ಚೆ ನಡೆದಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಜತೆಯಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ʻʻನಮ್ಮ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದತಿ ಬಗ್ಗೆ ಉಲ್ಲೇಖ ಮಾಡಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಗ್ರ ಚಿಂತನೆ. ಮಾಡಿ ನಿರ್ಣಯ ತೆಗೆದುಕೊಳ್ಳುವುದು ಈಗಿನ ಅಗತ್ಯವಾಗಿದೆʼʼ ಎಂದು ಅವರು ಈ ಸಭೆಯ ಬಳಿಕ ಹೇಳಿದ್ದರು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಈ ನೀತಿ ಜಾರಿಯ ಕುರಿತು ಶಿಕ್ಷಣ ತಜ್ಞರ ಜತೆ ಈಗ ಒಂದು ಸಭೆ ನಡೆದಿದೆ ಅಷ್ಟೇ. ಸಭೆಯಲ್ಲಿ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಹಾಗೂ ಹಲವು ಶಿಕ್ಷಣ (Education News) ತಜ್ಞರು ಭಾಗಿಯಾಗಿದ್ದರು. ಇಲಾಖೆಯ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿವರ ಪಡೆದುಕೊಂಡಿದ್ದೇನೆ. ಕಾಂಗ್ರೆಸ್‌ ಪಕ್ಷದ ನಿಲುವು, ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದೇನೆ ಎಂದು ವಿವರಿಸಿರುವ ಅವರು ರಾಷ್ಟ್ರೀಯ ಶಿಕ್ಷಣ (Education News) ನೀತಿಯಲ್ಲಿ ಇರುವ ಲೋಪದೋಷಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಆತುರಾತುರವಾಗಿ ಇದನ್ನು ಅನುಷ್ಠಾನ ಮಾಡಲಾಗಿದೆ ಎನ್ನುವ ಅಭಿಪ್ರಾಯಗಳು ಬಂದಿವೆ. ಈ ನೀತಿ ಜಾರಿಯಾಗಿ ಎರಡು ವರ್ಷಗಳ ಆಗಿರುವು ಕಾರಣದಿಂದ ಏಕಾಏಕಿ ನಿರ್ಧಾರ ಕಷ್ಟ ಸಾಧ್ಯವಿದೆ ಎಂದು
ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿ ಮಾಡುವ ಉದ್ದೇಶ ನಮಗೆ ಇಲ್ಲ. ಈ ಬಗ್ಗೆ ಆದಷ್ಟು ಬೇಗ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್‌ ಭರವಸೆ ನೀಡಿದ್ದಾರೆ. ಆದರೆ ಈ ಬಗ್ಗೆ ಪೋಷಕರ ವರ್ಗದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಆದಷ್ಟು ಬೇಗ ಈ ಗೊಂದಲ ಬಗೆಹರಿಸಬೇಕೆಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ: NCF 2023 Draft: ಪಿಯುಗೆ ವರ್ಷಕ್ಕೆ ಇನ್ಮುಂದೆ ಒಂದಲ್ಲ 2 ಬಾರಿ ಪರೀಕ್ಷೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವರದಿಯಲ್ಲಿ ಏನಿದೆ?

Exit mobile version