ಬೆಂಗಳೂರು: ಆರ್‌ಎಸ್‌ಎಸ್ ದೃಷ್ಟಿಯಲ್ಲಿ ಭಾರತ ಮತ್ತು ಹಿಂದೂ ಎರಡೂ ಅಭಿನ್ನ. ಇದು ತುಂಡಾಸುರರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಅವರು ತುಂಡಾಸುರರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಹೆಡಗೆವಾರ್ ಅವರ ಕುರಿತು ಪಠ್ಯದಲ್ಲಿ ಸೇರ್ಪಡೆ ಮಾಡುವ ವಿಚಾರವನ್ನು ವಿರೋಧಿಸಿದವರಿಗೆ ವಸಂತಕುಮಾರ್ ತಿರುಗೇಟು ನೀಡಿದ್ದಾರೆ.
ಬಿ.ವಿ.ವಸಂತಕುಮಾರ್ ಹೇಳಿದ್ದೇನು?
“”ಡಾ. ಹೆಡಗೆವಾರ್ ಅವರನ್ನು ಒಂದು ಪಕ್ಷದ ವ್ಯಕ್ತಿಯಂತೆ ಭಾವಿಸಿರುವುದು ನಿಮ್ಮ ಮಿತಿಯಲ್ಲವೇ? ಅವರು ರಾಜಕೀಯ ವ್ಯಕ್ತಿಯೋ ಸಾಂಸ್ಕೃತಿಕ ರಾಷ್ಟ್ರೀಯತೆಯ ನಿರ್ಮಾಪಕರೋ? ಆರ್.ಎಸ್.ಎಸ್ ಪರಿವಾರದಲ್ಲಿ ಎಷ್ಟು ಸಂಸ್ಥೆಗಳಿವೆ? ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಕೆಲಸ ಮಾಡಿವೆ ಎಂಬ ಬಗ್ಗೆ ಬರಗೂರು ರಾಮಚಂದ್ರಪ್ಪ ಅಥವಾ ಅಲ್ಲಮಪ್ರಭು ಬೆಟ್ಟದೂರು ಒಂದು ವಿಮರ್ಶಾತ್ಮಕ ಲೇಖನವನ್ನು ಬರೆಯಬೇಕಾಗಿ ಪ್ರಾರ್ಥಿಸುತ್ತೇನೆ.
ಅನಂತರ ಈ ಕುರಿತು ಚರ್ಚೆ ಆಗಲಿʼʼ ಎಂದು ಬಿ ವಿ ವಸಂತಕುಮಾರ್ ಸವಾಲು ಹಾಕಿದ್ದಾರೆ.
“”ಬರಗೂರು ರಾಮಚಂದ್ರಪ್ಪ, ಅಲ್ಲಮಪ್ರಭು ಬೆಟ್ಟದೂರಾದಿಯಾಗಿ ಎಡಪಂಥೀಯ ಚಿಂತಕರು ಕಳೆದ ಮೂವತ್ತೈದು ವರ್ಷಗಳಿಗೂ ಅಧಿಕಕಾಲ ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಈವರೆಗೆ ಅವರು ರಚಿಸಿರುವ ಪಠ್ಯಪುಸ್ತಕಗಳಲ್ಲಾಗಲೀ ಅವರ ಸ್ವತಂತ್ರ ಕೃತಿಗಳಲ್ಲಾಗಲೀ ಆರ್.ಎಸ್.ಎಸ್ ಕುರಿತು ಒಂದಾದರೂ ಒಳ್ಳೆಯ ಅಂಶವನ್ನು ಬರೆದಿದ್ದಾರೆಯೇ ಎಂಬುದಕ್ಕೆ ಉತ್ತರಿಸಲಿʼʼ ಎಂದು ವಸಂತ್ ಕುಮಾರ್ ಆಹ್ವಾನ ನೀಡಿದ್ದಾರೆ.
“”ಈವರೆಗೆ ಪಠ್ಯ ಪುಸ್ತಕಗಳಲ್ಲಿ ಆರ್.ಎಸ್.ಎಸ್ ಚಿಂತನೆಗಳನ್ನು ಸೇರಿಸದೇ ಇದ್ದುದಕ್ಕೆ ಕಾರಣವೇನು? ಬೌದ್ಧಿಕ ಅಸ್ಪೃಶ್ಯತೆ ಒಂದು ಮಾನಸಿಕ ರೋಗವಲ್ಲವೇ? ಈಗ ಡಾ. ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ವಿರೋಧಿಸುತ್ತಿರುವುದು ಅಸಹಿಷ್ಣುತೆ ಮತ್ತು ಬೌದ್ಧಿಕ ಫ್ಯಾಸಿಸಂ ಅಲ್ಲವೆʼʼ ಎಂದು ಡಾ. ವಸಂತಕುಮಾರ್ ಪ್ರಶ್ನಿಸಿದ್ದಾರೆ.
“”ಸಾಮಾಜಿಕ, ಪ್ರಾದೇಶಿಕ, ಲಿಂಗ ಸಮಾನತೆ ಸಾಧಿಸದ ಯಾವ ವಿಚಾರಕ್ಕೂ ಭಾರತದಲ್ಲಿ ಭವಿಷ್ಯವಿಲ್ಲ. ಅದು ಕೇವಲ ಮಾತಾಗದೆ ಕೃತಿಯಲ್ಲಿ ಬರಬೇಕು. ಆಗಮಾತ್ರ ಅದು ಉಳಿಯುತ್ತದೆ, ಬೆಳೆಯುತ್ತದೆ. ಇದು ಆರ್.ಎಸ್.ಎಸ್ ಆದಿಯಾಗಿ ಎಲ್ಲಾ ಪಂಥ ಪಕ್ಷಗಳಿಗೂ ಚಿಂತನಧಾರೆ ಚಿಂತಕರಿಗೂ ಅನ್ವಯಿಸುತ್ತದೆ. ಆರ್.ಎಸ್.ಎಸ್.ನ ದತ್ತಾತ್ರೇಯ ಹೊಸಬಾಳೆಯವರು “ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರಪುನರ್ ನಿರ್ಮಾಣ, ಸಾಮಾಜಿಕ ಸಾಮರಸ್ಯವಿಲ್ಲದೆ ರಾಷ್ಟ್ರ ಪುನರ್ ನಿರ್ಮಾಣ ಸಾಧ್ಯವಿಲ್ಲ” ಎಂಬುದನ್ನು ನನಗೆ ಮತ್ತು ನನ್ನಂಥ ಎಬಿವಿಪಿ, ಆರ್.ಎಸ್.ಎಸ್.ನ ಲಕ್ಷಾಂತರ ಕಾರ್ಯಕರ್ತರಿಗೆ ಕಲಿಸಿದ್ದಾರೆ. ಅದಕ್ಕೆ ಬಲವಿದ್ದರೆ ಬದುಕುತ್ತದೆ, ಉಳಿಯುತ್ತದೆ, ಬೆಳೆಯುತ್ತದೆ. ಬಾಯಲ್ಲಿ ಸಾಮಾಜಿಕ ನ್ಯಾಯ, ಕೃತಿಯಲ್ಲಿ ಸಾಮಾಜಿಕ ಅನ್ಯಾಯ ಎಂಬ ಆತ್ಮವಂಚನೆಗಿಲ್ಲಿ ಜಾಗವಿಲ್ಲ. ಶಿಕ್ಷಣದಲ್ಲೂ ಇಂಥ ಧ್ಯೇಯ ಅಗತ್ಯ. ಆದರ್ಶ ಇಲ್ಲದವರು ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶ ಇರುವವರು ನೂರು ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ ಆದರ್ಶ ಅಗತ್ಯ ಎಂಬುದು ಸ್ವಾಮಿ ವಿವೇಕಾನಂದರ ನಿಲುವುʼʼ ಎಂದು ವಸಂತಕುಮಾರ್ ಹೇಳಿದ್ದಾರೆ.
ನೆನಪಿಡಬೇಕಾದ ಸಂಗತಿ
“”ಆರ್.ಎಸ್.ಎಸ್ ಅನ್ನು ಎಷ್ಟೆಷ್ಟು ವಿರೋಧಿಸುತ್ತಾರೋ ಅಷ್ಟಷ್ಟು ಅದು ಬೆಳೆಯುತ್ತದೆ. ಏಕೆಂದರೆ ಅದರದು ಪ್ರತ್ಯಾತ್ಮಕ ಚಿಂತನೆಯಲ್ಲ, ಕ್ರಿಯಾತ್ಮಕ ಚಿಂತನೆ. ವಿನಾಶಕಾರಿ ದೃಷ್ಟಿಕೋನವಲ್ಲ, ರಚನಾತ್ಮಕ ದೃಷ್ಟಿಕೋನ. ಆರ್.ಎಸ್.ಎಸ್ ರಾಜಕೀಯ ಪಕ್ಷವಲ್ಲ, ಅದೊಂದು ಹಿಂದೂಸ್ಥಾನದ ಪರಂಪರೆಯ ಸಾಂಸ್ಕೃತಿಕ ಚಲನಶೀಲ ನದಿʼʼ ವಸಂತಕುಮಾರ್ ವ್ಯಾಖ್ಯಾನಿಸಿದ್ದಾರೆ.
ಹಿನ್ನೆಲೆ ಏನು?
ಆರ್‌ಎಸ್ಎಸ್ ಸಂಸ್ಥಾಪಕರ ಕುರಿತ ಪಠ್ಯಕ್ಕೆ ಪರ-ವಿರೋಧದ ಅಭಿಪ್ರಾಯ ಕೇಳಿ ಬಂದಿತ್ತು. ರಾಜ್ಯ ಬಿಜೆಪಿ ಸರಕಾರದ ಶಿಕ್ಷಣ ಇಲಾಖೆ ಕೇಸರಿಕರಣಕ್ಕೆ ಮುಂದಾಗಿದೆ ಎಂದು ಅನೇಕರು ಆರೋಪಿಸಿದ್ದರು. ಭಗತ್ ಸಿಂಗ್ ಬಗ್ಗೆ ಅಳವಡಿಸಬೇಕಾದ ಪಾಠವನ್ನು ಕೈಬಿಟ್ಟು ಕೇಶವ ಬಲಿರಾಮ್ ಹೆಡಗೇವಾರ್ ಬಗ್ಗೆ ಪಠ್ಯಕ್ಕೆ ಸೇರಿಸಲಾಗಿರುವುದು ತಪ್ಪು ಎಂದು ಕೆಲವರು ಹೇಳಿದ್ದರು.
ಈ ಬಗ್ಗೆ ಕರ್ನಾಟಕ ಪಠ್ಯ ಪುಸ್ತಕ ಸಂಘ ಪತ್ರದ ಮೂಲಕ ಸ್ಪಷ್ಟೀಕರಣ ನೀಡಿತ್ತು. ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ಸಮಿತಿ ರಚಿಸಿಲಾಗಿತ್ತು. ಈ ಸಮಿತಿಯು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಹಾಗೂ 1 ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ ಎಂದು ತಿಳಿಸಲಾಗಿತ್ತು. 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಿಂದ ಭಗತ್ ಸಿಂಗ್’ ಬಗ್ಗೆ ಇದ್ದ ಗದ್ಯ ಪಾಠವನ್ನು ಕೈಬಿಟ್ಟಿರುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು.
ಭಗತ್ ಸಿಂಗ್ ಕುರಿತಾದ ಪಠ್ಯವನ್ನು ಮುಂದುವರಿಸುವ ಜತೆಗೆ ಹೆಡಗೇವಾರ್ ಅವರ ಕುರಿತಾದ ಪಠ್ಯವನ್ನು ಸೇರಿಸಲಾಗಿದೆ. ಅಲ್ಲದೆ, 10ನೇ ತರಗತಿಯ ಪಠ್ಯ ಪ್ರಸ್ತುತ ಮುದ್ರಣ ಹಂತದಲ್ಲಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: ಶಾಲಾ ಪಾಠದಲ್ಲಿ RSS: ವಿವಾದಕ್ಕೊಳಗಾಗಿರುವ ಹೆಡಗೇವಾರ್ ಕುರಿತ ಪೂರ್ಣ ಪಠ್ಯ ಇಲ್ಲಿದೆ ನೋಡಿ!