Site icon Vistara News

Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

Womens Day

ಕೃಷಿ ಹಾಗೂ ಗಾರ್ಡನಿಂಗ್‌ನಲ್ಲಿ ಆಸಕ್ತಿಯಿರುವ ಮಂದಿ ನೀವಾದರೆ ನಿಮಗೊಂದು ಆಸಕ್ತಿದಾಯಕ ಕತೆ ಇಲ್ಲಿದೆ. 26 ವರ್ಷದ ಹೈದರಾಬಾದ್‌ ಮೂಲದ ಮಹಿಳೆಯೊಬ್ಬರ (Women’s Day) ಹೊಸ ಆವಿಷ್ಕಾರದ ಕತೆಯಿದು. ಅಷ್ಟೇ ಅಲ್ಲ, ನಿತ್ಯವೂ ಭೂಮಿ ಮೇಲೆ ರಾಶಿ ಕಸ ಸುರಿಯುವ ಎಲ್ಲರೂ ತಿಳಿದುಕೊಳ್ಳಬೇಕಾದ ಕತೆಯಿದು. ಎಲ್ಲರೂ ಪರಿಸರದ ಬಗ್ಗೆ, ನಾವಿರುವ ಸುತ್ತಮುತ್ತಲ ಪ್ರದೇಶದ ಬಗ್ಗೆಯಾದರೂ ಕೊಂಚ ಆಸಕ್ತಿ ವಹಿಸಿ ಕಸದ ವಿಲೇವಾರಿಯ ಬಗ್ಗೆ ಪಾವನಿ ಲೊಲ್ಲಾರಿಂದ ಪ್ರೇರಣೆ ಪಡೆಯಬೇಕಿದೆ.

ನಿತ್ಯವೂ ನಾವು ಸುರಿದ ಒಂದಿಷ್ಟು ಕಸ ಮಣ್ಣಲ್ಲಿ ಮಣ್ಣಾಗಿ ಹೋಗುತ್ತವೆ. ಇನ್ನೊಂದಿಷ್ಟು ಕಸ ಹಾಗೆಯೇ ವರ್ಷಾನುಗಟ್ಟಲೆ ಕರಗದೆ ಉಳಿಯುತ್ತವೆ. ತ್ಯಾಜ್ಯಗಳ ವಿಲೇವಾರಿಯ ಬಗ್ಗೆ ನಾವು ಅಷ್ಟಾಗಿ ಗಮನ ಹರಿಸುವುದೇ ಇಲ್ಲ. ನಮ್ಮ ಮನೆಯ ಕಸವನ್ನೂ ನಾವು ಸಮರ್ಪಕವಾಗಿ ಬಳಕೆ ಮಾಡುವುದಿಲ್ಲ. ಜೈವಿಕ ತ್ಯಾಜ್ಯಗಳನ್ನು ನಾವು ಸಮರ್ಪಕವಾಗಿ ಬಳಕೆ ಮಾಡಿದರೆ, ನಮ್ಮದೇ ಮನೆಯ ಗಿಡಗಳಿಗೆ ಆಹಾರ ನೀಡಬಹುದು. ಅವುಗಳಲ್ಲಿ ಹೂವರಳಿ ನಳನಳಿಸುವುದನ್ನು ನೋಡಬಹುದು.

ಹೌದು. ಮೇಲ್ನೋಟಕ್ಕೆ ಸಣ್ಣ ವಿಚಾರವಾಗಿ ಕಂಡರೂ, ಇದು ಸದ್ಯದ ಅಗತ್ಯ ಕೂಡಾ. ಮನೆಯ ಜೈವಿಕ ತ್ಯಾಜ್ಯಗಳನ್ನು ಗೊಬ್ಬರವಾಗಿ ಬದಲಾಯಿಸಲು ಸಾಮಾನ್ಯವಾಗಿ ಒಂದು ತಿಂಗಳಾದರೂ ಬೇಕಾಗುತ್ತದೆ. ಆದರೆ, ಈಕೆ ಕಂಡು ಹಿಡಿದ ʻವಪ್ರಾʼ ಎಂಬ ವಾಸನೆ ರಹಿತ ಜೈವಿಕ ಗೊಬ್ಬರ ಯಂತ್ರದ ಮೂಲಕ ನೀವು ಒಂದೇ ವಾರದಲ್ಲಿ ನಿಮ್ಮ ಮನೆಯ ಕಿಚನ್‌ನ ಜೈವಿಕ ಕಸವನ್ನು ನಿಮ್ಮದೇ ಮನೆಯ ಗಿಡಗಳಿಗೆ ಗೊಬ್ಬರವನ್ನಾಗಿ ಪರಿವರ್ತಿಸಬಹುದು!

ಹೈದರಾಬಾದ್‌ನ ವಿಜ್ಞಾನ ಭಾರತಿ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಸಂದರ್ಭ ಪಾವವಿ ಲೊಲ್ಲ ಅಲ್ಲಿನ ಇಕೋ ಕ್ಲಬ್‌ನ ಸದಸ್ಯರಾಗಿದ್ದರಂತೆ. ಅಲ್ಲಿನ ವಿದ್ಯಾರ್ಥಿಗಳ ಈ ಕ್ಲಬ್‌ ಮೂಲಕ ಸುತ್ತಮುತ್ತಲ ಪ್ರದೇಶಗಳಲ್ಲಿ ಕಸ ವಿಲೇವಾರಿ, ಸ್ವಚ್ಛತೆ ಅಭಿಯಾನ, ಪರಿಸರ ಸಂರಕ್ಷಣೆ ಇತ್ಯಾದಿಗಳ ಕಾಳಜಿ ವಹಿಸುತ್ತಿತ್ತು. ಇದೇ ಸಂದರ್ಭ ಹತ್ತಿರದ ಹಳ್ಳಿಯೊಂದರಲ್ಲಿ, ನಮ್ಮ ಮನೆಯ ಕಸದ ವಿಲೇವಾರಿ ಹೇಗೆ ಎಂಬ ವಿಚಾರದ ಬಗ್ಗೆ ಹಳ್ಳಿಗರಿಗೆ ಅರಿವು ಮೂಡಿಸುವ ಸಂದರ್ಭ ಮನೆಯಲ್ಲೇ ಸುಲಭವಾಗಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರವನ್ನು ನಾವೇ ಏಕೆ ಮಾಡಬಾರದು ಎಂಬ ಯೋಚನೆ ಪಾವನಿ ಅವರಿಗೆ ಬಂತಂತೆ. ಅಂತಿಮ ವರ್ಷದ ಪದವಿ ಸಂದರ್ಭ ಆಕೆಗೆ ಈ ಯೋಚನೆ ಇನ್ನೂ ಬಲವಾಯಿತಂತೆ. ಹಳ್ಳಿಗಳಿಗೆ ಭೇಟಿ ಕೊಟ್ಟಾಗಲೆಲ್ಲ ಅಲ್ಲಿನ ಮನೆಗಳ ಅಷ್ಟೂ ಜೈವಿಕ ತ್ಯಾಜ್ಯಗಳು, ಅಲ್ಲೇ ಪಕ್ಕದಲ್ಲಿ ರಾಶಿ ಗುಡ್ಡೆ ಹಾಕಿ, ತ್ಯಾಜ್ಯವಾಗಿಯೇ ಇರುವುದನ್ನು ಕಂಡ ಪಾವನಿ ಅವರಿಗೆ, ಈ ಸಮಸ್ಯೆಗೆ ಉತ್ತರ ಹುಡುಕಲೇ ಬೇಕು ಎಂಬ ಯೋಚನೆ ಬಲವಾಯಿತಂತೆ.

ಹೀಗೊಂದು ಯೋಚನೆ ತಲೆಯಲ್ಲಿ ಹುಟ್ಟಿದ ಮೇಲೆ ಪಾವನಿ ಹಿಂದೆ ಮುಂದೆ ನೋಡಲಿಲ್ಲ. ತನ್ನ ಕನಸಿನ ಯಂತ್ರ ಕಂಡು ಹಿಡಿದೇ ಬಿಟ್ಟರು. 2020ರಲ್ಲಿ ತಾನು ಕಂಡು ಹಿಡಿದ ಈ ಯಂತ್ರವನ್ನು ಮನೆಮನೆಗೂ ತಲುಪಿಸುವ ಉದ್ದೇಶದಿಂದ ತನ್ನಿಬ್ಬರು ಗೆಳೆಯರಾದ ಮಹೇಶ್‌ ಯು ಹಾಗೂ ಸಿದ್ಧೇಶ್‌ ಸಾಕೋರೆ ಜೊತೆಗೆ ಸೇರಿ ಫ್ಯೂಚರ್‌ ಸ್ಟೆಪ್ಸ್‌ ಎಂಬ ಸಂಸ್ಥೆಯನ್ನೂ ಕಟ್ಟಿದರು. ಆ ಮೂಲಕ ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಈ ಯಂತ್ರವನ್ನು ರವಾನಿಸಿದ್ದಾರೆ. ಈಗಾಗಲೇ ಇಂತಹ ಆರು ಸಾವಿರ ಯಂತ್ರಗಳನ್ನು ಇವರು ಮಾರಾಟ ಮಾಡಿದ್ದಾರೆ.

ಈಕೆ ಹೇಳುವಂತೆ, ಶೇ. 60ರಷ್ಟು ಕಸವೆಲ್ಲವೂ ಮನೆಗಳಿಂದ ಹೊರಬೀಳುವ ಜೈವಿಕ ತ್ಯಾಜ್ಯವೇ ಆಗಿದೆ. ಇವೆಲ್ಲವೂ ಯಾವ ಉಪಯೋಗಕ್ಕೂ ಬರದೆ,ಕೊನೆಗೆ ಇದರಿಂದ ಮಿಥೇನ್‌ ಗ್ಯಾಸ್‌ ಉತ್ಪಾದನೆಯಾಗಿ ಅದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಇನ್ನೊಂದೆಡೆ, ನಗರಗಳಲ್ಲಿ ಬಹಳ ಮಂದಿ ತಮ್ಮ ಟೆರೇಸ್‌ ಗಾರ್ಡನ್‌ಗೆ ಅಥವಾ ಉದ್ಯಾನಗಳಿಗೆ ಗೊಬ್ಬರಗಳನ್ನು ಖರೀದಿಸಬೇಕಾಗುತ್ತದೆ. ಬಹಳಷ್ಟು ಮಂದಿ ತಮ್ಮ ಮನೆಗಳಲ್ಲಿ ತಮ್ಮದೇ ತ್ಯಾಜ್ಯಗಳಿಂದ ಗೊಬ್ಬರ ಮಾಡಬೇಕು ಎಂದುಕೊಂಡರೂ ಅವರ ಕೈಯಲ್ಲಿ ಸಾಧ್ಯವಾಗುವುದಿಲ್ಲ. ಕಾರಣ ಇದರ ಕಷ್ಟದಾಯಕ ಪ್ರಕ್ರಿಯೆ. ಸುಮಾರು 50-60 ದಿನಗಳ ದೀರ್ಘ ಕಾಲ ಇವು ತೆಗೆದುಕೊಳ್ಳುವುದರಿಂದ ಸಾಕಷ್ಟು ಮಂದಿ ಕೈಚೆಲ್ಲುತ್ತಾರೆ. ಇವೆಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಬೇಗನೆ ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವಂತೆ ಏನಾದರೂ ಯಂತ್ರವನ್ನು ಕಂಡುಹಿಡಿಯಲೇಬೇಕು ಅನಿಸಿತು ಎನ್ನುತ್ತಾರೆ.

ಈಕೆಯ ಈ ಯಂತ್ರ ಪ್ರತಿನಿತ್ಯವೂ ಒಂದು ಕೆಜಿ ಕಸದ ಸಾಮರ್ಥ್ಯ ಹೊಂದಿದೆ. ಬಾಲ್ಕನಿಗಳಲ್ಲಿ ಗಾರ್ಡನ್‌ ಇಟ್ಟುಕೊಂಡಿರುವವರಿಗೆ ಹೇಳಿ ಮಾಡಿಸಿದ್ದು. ಇದೊಂದು ಕಸದ ತೊಟ್ಟಿಯ ಹಾಗೆ. ಜೈವಿಕವಾದ ಯಾವುದೇ ಕಸವನ್ನು ಇದಕ್ಕೆ ಹಾಕಬಹುದು. 3,500 ರೂಪಾಯಿಗಳ ಈ ಯಂತ್ರವನ್ನು ನೀವು ಖರೀದಿಸಿದರೆ ಅದರ ಜೊತೆಗೆ ಒಂದು ಗ್ರೀನ್‌ ಮಿಕ್ಸ್‌ ಪೌಡರನ್ನೂ ಪಡೆಯಬಹುದು. ಒಂದು ತಿಂಗಳಲ್ಲಿ 30 ಕೆಜಿ ವಾಸನೆ ರಹಿತ ಗೊಬ್ಬರವನ್ನು ಇದರ ಮೂಲಕ ತಯಾರಿಸಬಹುದು ಎನ್ನುತ್ತಾರೆ.

ಇದನ್ನೂ ಓದಿ: Cooking Tips: ಪಾಸ್ತಾ, ಮ್ಯಾಕ್ರೋನಿ ಬೇಯಿಸುವಾಗ ಅಂಟುತ್ತವೆಯೋ? ಹಾಗಾದರೆ ಇಲ್ಲಿವೆ ಟಿಪ್ಸ್‌!

Exit mobile version