Site icon Vistara News

Sunday read | ಈ ಚೆಲುವೆ ವನ್ಯಜೀವಿ ಫೋಟೋಗ್ರಫಿ ಮಾಡಿದಾಗ…

waheeda rehman

ʻಅಯ್ಯೋ, ಇದೆಲ್ಲಾ ನಮಗ್ಯಾಕೆ, ವಯಸ್ಸಾಯ್ತು ಕಣ್ರೀʼ ಈ ಡೈಲಾಗ್‌ ಬಹಳಷ್ಟು ಮಂದಿ ಕೇಳಿರುತ್ತೀರಿ. ಅಥವಾ ನೀವೇ ಹೇಳಿರುತ್ತೀರಿ. ಬದುಕಿನಲ್ಲಿ ಹೊಸತೇನನ್ನಾದರೂ ಕಲಿಯಬೇಕು, ಪ್ರಯತ್ನಿಸಬೇಕು ಎಂದು ಅನಿಸಿದರೂ ೫೦ ದಾಟುವ ಮೊದಲೇ, ಅಯ್ಯೋ ಅದನ್ನೆಲ್ಲ ಟ್ರೈ ಮಾಡುವ ಕಾಲ ಮುಗಿದು ಹೋಯಿತು, ಇನ್ಯಾಕೆ. ಇನ್ನೇನಿದ್ದರೂ ನಮಗೆ ಗೊತ್ತಿರುವ ಲೋಕದಲ್ಲೇ ಈಜಬೇಕು. ಯಾಕೆ ಬೇಕು ಹೊಸ ಲೋಕ. ನಮಗೆ ಕಲಿಯಬೇಕೆನ್ನುವ ಕಾಲದಲ್ಲಿ ಕಲಿಯಲು ಅವಕಾಶವೇ ಸಿಗಲಿಲ್ಲ!ʼ ಎಂದು ತಮ್ಮ ದುರಾದೃಷ್ಟವನ್ನು ತಾವೇ ಹಳಿದುಕೊಂಡು, ತಾವೇ ಹಾಕಿಕೊಳ್ಳುವ ಬೇಲಿಯೊಳಗೆ ಬಂಧಿಯಾಗುವುದು ಸಾಮಾನ್ಯ. ಆದರೆ, ಹೊಸತೇನನ್ನಾದರೂ ಕಲಿಯಲು ನಿಜವಾದ ಆಸಕ್ತಿಯಿದ್ದರೆ ವಯಸ್ಸಿನ ಹಂಗಿಲ್ಲ ಎಂದು ಸಾಧಿಸಿ ತೋರಿಸಿದವರು ನಮ್ಮ ಜೊತೆಗೇ ಅನೇಕರಿದ್ದಾರೆ. ಕಲಿಯಬೇಕೆನ್ನುವ ಮನಸ್ಸು, ಪ್ರತಿಯೊಂದನ್ನೂ ಖುಷಿಯಿಂದ ಸ್ವೀಕರಿಸಿ ಮುನ್ನುಗ್ಗಬೇಕೆನ್ನುವ ಜೀವನಪ್ರೀತಿ, ಜೊತೆಗೊಂದಿಷ್ಟು ಹುಚ್ಚುತನ ಇದ್ದರೆ ಸಾಕು, ಕಲಿಕೆ ಎಂಬುದು ನಿರಂತರ, ಸಾಯುವವರೆಗೂ ಹೊಸತೊಂದು ಕಲಿಕೆಗೆ ತುಡಿಯುತ್ತಿರಬಹುದು!

ಹೀಗೆ, ತನಗೆ ಮಾಡಬೇಕೆನಿಸಿದ್ದುದನ್ನು ಮಾಡುವುದಕ್ಕೆ ವಯಸ್ಸಾದರೇನು, ಅದಕ್ಕೂ ಇದಕ್ಕೂ ಸಂಬಂಧವಾದರೂ ಏನು ಎಂದು ತನಗಗಿಷ್ಟವಾದುದನ್ನು ಇಳಿ ವಯಸ್ಸಿನಲ್ಲಿ ಖುಷಿಯಿಂದ ಮಾಡುತ್ತಿರುವವರೊಬ್ಬರ ಸ್ಪೂರ್ತಿಕತೆಯಿದು. ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ತನ್ನ ಅದ್ಭುತ ಸೌಂದರ್ಯ ಹಾಗೂ ನಟನೆಯ ಪ್ರತಿಭೆಯಿಂದಲೇ ಮಿಂಚಿ, ಪದ್ಮಭೂಷಣ, ಪದ್ಮಶ್ರೀ, ರಾಷ್ಟ್ರಪ್ರಶಸ್ತಿಗಳೆಲ್ಲವನ್ನೂ ಬಾಚಿದ ಬಾಲಿವುಡ್‌ ನಟಿ ವಹಿದಾ ರೆಹೆಮಾನ್ ವನ್ಯಜೀವಿ ಛಾಯಾಗ್ರಹಣದ ಆಸಕ್ತಿಯನ್ನು ಮೌನವಾಗಿ ಬೆಳೆಸುತ್ತಿದ್ದಾರೆ ಎಂಬುದು ಗೊತ್ತೇ.

೮೪ರ ಈ ಇಳಿ ವಯಸ್ಸಿನಲ್ಲಿ, ಛಾಯಾಗ್ರಹಣದಂಥ ಆಸಕ್ತಿಯನ್ನು ಗಟ್ಟಿಯಾಗಿ ಹಿಡಿದಿರುವ ವಹೀದಾ ರೆಹೆಮಾನ್‌, ಪ್ರಪಂಚದಾದ್ಯಂತ ತಿರುಗಾಡಿ ಸಾಕಷ್ಟು ಫೋಟೋಗಳನ್ನೂ ಸೆರೆಹಿಡಿದಿದ್ದಾರೆ. ಆ ಮೂಲಕ ಇಳಿ ವಯಸ್ಸಿನಲ್ಲೂ ಆಸಕ್ತಿಯಿದ್ದರೆ, ಹೊಸತನ್ನು ಕಲಿಯಬಹುದು ಎಂದು ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ವಹೀದಾ ತೆಗೆದ ಚಿತ್ರ. ಕೃಪೆ: ಔಟ್‌ಲುಕ್

ಸಣ್ಣವಳಿದ್ದಾಗಿಂದಲೇ ಛಾಯಾಗ್ರಹಣ ಎಂದರೆ ಆಸಕ್ತಿ, ಕಲಿಯಬೇಕೆನ್ನುವ ಅತೀವ ಹಂಬಲ ಇದ್ದ ವಹೀದಾ ರೆಹೆಮಾನ್‌ ಆಗ ಇದ್ದ ಪುಟ್ಟ ಕ್ಯಾಮೆರಾದಲ್ಲಿ ಫೋಟೋಗಳನ್ನು ತೆಗೆಯುತ್ತಿದ್ದರಂತೆ. ತಾಂತ್ರಿಕವಾಗಿ ಪರಿಣತಿ ಪಡೆಯದಿದ್ದರೂ, ಆಗ ಫೋಟೋ ತೆಗೆದು ಖಷಿ ಪಡುತ್ತಿದ್ದ ಆಕೆ ಪೂರ್ಣ ಪ್ರಮಾಣದಲ್ಲಿ ಅತ್ತ ಗಮನ ಹರಿಸಿದ್ದಾರೆ. ಒಂದು ಕಾಲದಲ್ಲಿ ನಟನೆಯಲ್ಲಿ ಕ್ಯಾಮೆರಾ ಮುಂದೆ ಬ್ಯುಸಿ ಆದ ಕಾರಣ, ಕ್ಯಾಮರಾ ಹಿಂದಿನ ಆಸಕ್ತಿ ನೆನೆಗುದಿಗೆ ಬಿತ್ತು. ಈಗ ಕೆಲ ವರ್ಷಗಳಿಂದ, ಈ ಆಸಕ್ತಿಯನ್ನು ತುಂಬು ಪ್ರೀತಿಯಿಂದ ಮತ್ತೆ ಮುಂದುವರಿಸಿರುವ ವಹೀದಾ ರೆಹೆಮಾನ್‌, ತಾಂತ್ರಿಕವಾಗಿಯೂ ಕುಶಲತೆ ಸಾಧಿಸಲು ಛಾಯಾಗ್ರಹಣ ಕಲಿತಿದ್ದಾರೆ. ಕಲಿಯುತ್ತಿದ್ದಾರೆ.

ವನ್ಯಜೀವಿ ಛಾಯಾಗ್ರಹಣ ಎಂದರೆ ಅವರಿಗೆ ಅತೀವ ಆಸಕ್ತಿಯಂತೆ. ಇದಕ್ಕಾಗಿ ಭಾರತದ ಹಲವೆಡೆ ಸೇರಿದಂತೆ, ಪ್ರಪಂಚದೆಲ್ಲೆಡೆ ರಾಷ್ಟ್ರೀಯ ಉದ್ಯಾನಗಳನ್ನು ಸುತ್ತಿದ್ದಾರೆ. ಸಾಕಷ್ಟು ಸಫಾರಿಗಳನ್ನು ಮಾಡಿದ್ದಾರೆ. ಪ್ರಾಣಿಗಳ ಫೋಟೋ ಸೆರೆಹಿಡಿಯಲು ಎಲ್ಲರಂತೆ ಕಾದು ಕುಳಿತಿದ್ದಾರೆ. ಅಸ್ಸಾಂ, ಅರುಣಾಚಲ ಪ್ರದೇಶ, ತಾಂಜಾನಿಯಾ, ನಮೀಬಿಯಾ, ಕೀನ್ಯಾ ಹೀಗೆ ಹಲವೆಡೆ ವನ್ಯಜೀವಿಗಳ ಕೆಲವು ಅದ್ಭುತ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದು, ರೋಮಾಂಚಿತರಾಗಿದ್ದಾರೆ. ಕೆಲವು ಛಾಯಾಚಿತ್ರ ಪ್ರದರ್ಶನಗಳನ್ನೂ ಮಾಡಿದ್ದಾರೆ.

ಸಿನಿಮಾ ಜಗತ್ತಿನಿಂದ ನಿವೃತ್ತಿ ಪಡೆದ ಮೇಲೆ ನನ್ನ ಇತರ ಆಸಕ್ತಿಗಳೆಡೆಗೂ ಗಮನ ಕೊಡಲು ಯೋಚಿಸಿದೆ. ಜೊತೆಗೆ ಇವುಗಳನ್ನು ಶಾಸ್ತ್ರೀಯವಾಗಿ ಕಲಿಯಲೂ ಈಗ ಸಾಧ್ಯವಿದೆ. ಮೊದಲು ಫೋಟೋಗ್ರಫಿಯನ್ನು ಶಾಸ್ತ್ರೀಯವಾಗಿ ಕಲಿಸಲು, ಕಲಿಯಲು ಸೂಕ್ತ ವೇದಿಕೆಗಳಿರಲಿಲ್ಲ. ಹಾಗಾಗಿ ಇತ್ತೀಚೆಗಿನ ವರ್ಷಗಳಲ್ಲಿ ಈ ಬಗ್ಗೆ ಹೆಚ್ಚು ಗಮನ ಹರಿಸಿದೆ ಎನ್ನುತ್ತಾರೆ ವಹೀದಾ ರೆಹಮಾನ್.‌

ವನ್ಯಜೀವಿ ಛಾಯಾಗ್ರಹಣಕ್ಕೆ ಕೇವಲ ಕೌಶಲ, ಆಸಕ್ತಿ ಮಾತ್ರ ಇದ್ದರೆ ಸಾಲದು. ತಾಳ್ಮೆ ಹಾಗೂ ಅದೃಷ್ಟ ಇವೆರಡೂ ಬಹಳ ಮುಖ್ಯ. ಅದಕ್ಕಾಗಿ ವನ್ಯಜೀವಿ ಛಾಯಾಗ್ರಹಣವೆಂಬುದು ಚಾಲೆಂಜಿಂಗ್‌ ಎನ್ನುತ್ತಾರೆ ಈ ಹಿರಿಯ ನಟಿ.

ಯಶಸ್ಸು, ಖ್ಯಾತಿಗಳ ಉತ್ತುಂಗ ನೋಡಿದ ವಹೀದಾ ರೆಹಮಾನ್‌, ಬದುಕಿನಲ್ಲಿ ಎಲ್ಲ ದಕ್ಕಿದೆ, ಇನ್ನೇನು ವಯಸ್ಸಾಯ್ತು, ಇದೆಲ್ಲ ಯಾಕೆ ಎಂದು ಕೈಕಟ್ಟಿ ಕೂತರೆ ಈ ಛಾಯಾಗ್ರಹಣವೆಂಬ ಹೊಸ ಲೋಕ ನೋಡಲು ಸಾಧ್ಯವಿತ್ತಾ ಹೇಳಿ! ಅದಕ್ಕೇ ವಯಸ್ಸು ಕೇವಲ ನಂಬರ್‌ ಮಾತ್ರ!

ಇದನ್ನೂ ಓದಿ | Stars Festive Fashion | ಎಥ್ನಿಕ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ನಲ್ಲಿ ಕರ್ವಾಚೌತ್‌ ಆಚರಿಸಿದ ಬಾಲಿವುಡ್‌ ತಾರೆಯರು

Exit mobile version