Site icon Vistara News

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Jagannath Temple

All 4 Doors Of Puri Jagannath Temple Opened For First Time Since Covid: VIDEO

ಭುವನೇಶ್ವರ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದ (Jagannath Temple) ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ (ಜೂನ್‌ 13) ತೆರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಬಾಗಿಲಿನ ಮೂಲಕ ತೆರಳಿ, ದೇವರ ದರ್ಶನ ಪಡೆಯುತ್ತಿದ್ದ ಭಕ್ತರು ಗುರುವಾರದಿಂದ ನಾಲ್ಕೂ ಬಾಗಿಲುಗಳ ಮೂಲಕ ಜಗನ್ನಾಥನ ದರ್ಶನ ಪಡೆಯಬಹುದಾಗಿದೆ. ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ (Mohan Charan Majhi) ಅವರ ಸಮ್ಮುಖದಲ್ಲಿ ಎಲ್ಲ ಬಾಗಿಲುಗಳನ್ನು ತೆರೆಯಲಾಗಿದೆ.

ಬಾಗಿಲುಗಳಿಗೆ ಬೀಗ ಹಾಕಿದ್ದೇಕೆ?

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ಪುರಿ ಜಗನ್ನಾಥ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಕೊರೊನಾ ಲಾಕ್‌ಡೌನ್‌, ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದೇ ಸಂದರ್ಭದಲ್ಲಿ ದೇವಾಲಯದ ನಾಲ್ಕು ಬಾಗಿಲುಗಳನ್ನು ಮುಚ್ಚಲಾಗಿತ್ತು. ಆದರೆ, ಕೋವಿಡ್‌ 19 ಬಿಕ್ಕಟ್ಟಿನ ಬಳಿಕವೂ, ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ ನಾಲ್ಕೂ ಬಾಗಿಲುಗಳನ್ನು ತೆರೆದಿರಲಿಲ್ಲ. ಸಿಂಹದ್ವಾರದ ಮೂಲಕ ಮಾತ್ರ ಭಕ್ತರು ದೇವರು ದರ್ಶನ ಪಡೆಯುವಂತಾಗಿತ್ತು.

ಬಿಜೆಪಿ ಪ್ರಣಾಳಿಕೆಗೂ, ಇದಕ್ಕೂ ಏನು ಸಂಬಂಧ?

ಪುರಿ ಜಗನ್ನಾಥ ದೇವಾಲಯಕ್ಕೆ 12ನೇ ಶತಮಾನದ ಇತಿಹಾಸವಿದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತ ಸೇರಿ ದೇಶ-ವಿದೇಶಗಳಿಂದ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಪ್ರತಿ ವರ್ಷವು ಪುರಿ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಇದು ವಿಶ್ವದಲ್ಲೇ ಬೃಹತ್‌ ಹಿಂದು ಹಬ್ಬ ಅಥವಾ ಜಾತ್ರೆ ಎಂದೇ ಖ್ಯಾತಿಯಾಗಿದೆ. ಆದರೆ, ಈ ದೇವಾಲಯದ ನಾಲ್ಕೂ ದ್ವಾರಗಳನ್ನು ತೆರೆಯದೆ ಇರುವುದು ರಾಜಕೀಯ ವಿಷಯವಾಗಿ ಬದಲಾಗಿತ್ತು.

ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್‌ ಅವರ ಆಡಳಿತದಲ್ಲಿ ನಾಲ್ಕೂ ದ್ವಾರಗಳನ್ನು ತೆಗೆಯದಿರುವ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯದ ನಾಲ್ಕೂ ಬಾಗಿಲುಗಳನ್ನು ತೆರೆಯಲಾಗುವುದು, ಕಳೆದು ಹೋಗಿರುವ ಭಂಡಾರದ ಬೀಗದ ಕೈ ಕುರಿತು ತನಿಖೆ ನಡೆಸಲಾಗುವುದು ಎಂಬುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಅದರಂತೆ, ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಅವರು ದೇವಾಲಯದ ಬಾಗಿಲುಗಳನ್ನು ತೆರೆಸುವ ಮೂಲಕ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.

ದೇಗುಲದ ಬಾಗಿಲುಗಳು ಏಕೆ ಪ್ರಮುಖ?

ದೇವಾಲಯದ ನಾಲ್ಕು ದ್ವಾರಗಳು ಭಕ್ತರಿಗೆ ಪ್ರಮುಖವಾಗಿವೆ. ನಾಲ್ಕೂ ದ್ವಾರಗಳು ಒಂದೊಂದು ಪ್ರಾಣಿಯನ್ನು ಪ್ರತಿನಿಧಿಸುತ್ತವೆ. ಪೂರ್ವದಲ್ಲಿರುವ ದ್ವಾರವು ಸಿಂಹವನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ಸಿಂಹದ್ವಾರ ಎನ್ನುತ್ತಾರೆ. ಇನ್ನು ಪಶ್ಚಿಮದಲ್ಲಿರುವ ದ್ವಾರವು ಹುಲಿಯನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ವ್ಯಾಘ್ರದ್ವಾರ ಎಂದು ಕರೆಯುತ್ತಾರೆ. ಅದರಂತೆ, ಉತ್ತರಕ್ಕೆ ಇರುವ ದ್ವಾರವು ಆನೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಹಸ್ತಿದ್ವಾರ ಎಂದೂ, ದಕ್ಷಿಣಕ್ಕೆ ಇರುವ ದ್ವಾರವು ಕುದುರೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಅಶ್ವದ್ವಾರ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

Exit mobile version