ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು (Central Government) ಸಂಸತ್‌ನಲ್ಲಿ ವಿಧೇಯಕ ಮಂಡಿಸಲಿದೆ, ಸುಮಾರು 40 ತಿದ್ದುಪಡಿ ತರಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಏನಿದು ವಕ್ಫ್ ಮಂಡಳಿ? ಕಾಯ್ದೆ ಏನು ಹೇಳುತ್ತದೆ? ಯಾಕಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದೆ? ಇದಕ್ಕೆ ವಿರೋಧ ಏಕೆ ವ್ಯಕ್ತವಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ಏನಿದು ಕಾಯ್ದೆ? ಏನದು ಪರಮಾಧಿಕಾರ?
ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ.
ವಕ್ಫ್ ಮಂಡಳಿ ಆಸ್ತಿ ಎಷ್ಟು? ತಿದ್ದುಪಡಿ ಏಕೆ?
ವರದಿಗಳ ಪ್ರಕಾರ, ದೇಶದಲ್ಲಿ ವಕ್ಫ್ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ಇದರ ವ್ಯಾಪ್ತಿಯು ಸುಮಾರು 9.4 ಲಕ್ಷ ಎಕರೆ ಆಗಿದೆ. 2022ರಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿರುವ ತಮಿಳುನಾಡಿನ ತಿರುಚೆಂದುರೈ ಎಂಬ ಹಳ್ಳಿಯನ್ನು ವಕ್ಫ್ ಬೋರ್ಡ್ ತಮ್ಮದು ಎಂದು ಘೋಷಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಕಳೆದ ವರ್ಷ, ದೆಹಲಿ ವಕ್ಫ್ ಬೋರ್ಡ್ ಮಂಡಳಿಯ ಅಧೀನದಲ್ಲಿರುವ 123 ಆಸ್ತಿಗಳ ಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ವಕ್ಫ್ ಮಂಡಳಿಯು ಇಂತಹ ವಿವಾದಿತ ಆಸ್ತಿಗಳನ್ನೇ ತುಂಬ ಹೊಂದಿದೆ. ಇಸ್ಲಾಂನಲ್ಲಿರುವ ಕೆಲ ಉಪ ಪಂಗಡಗಳೇ ವಕ್ಫ್ ಮಂಡಳಿಯನ್ನು ವಿರೋಧಿಸುತ್ತಿವೆ.
ಕಾಯ್ದೆಗೆ ಏನೆಲ್ಲ ತಿದ್ದುಪಡಿ?
ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಇದುವರೆಗೆ ವಕ್ಫ್ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಸಾದುದ್ದೀನ್ ಓವೈಸಿ ವಿರೋಧ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧಿಸಿದ್ದಾರೆ. “ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಂಡಳಿಯ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದೆ. ಅಷ್ಟೇ ಅಲ್ಲ, ಇದು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸರ್ಕಾರ ಮೂಗು ತೂರಿಸಿದಂತೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
.@BJP4India ke allies ko sochna chahiye kya vo Musalmanon ke #Waqf properties ko cheenna chahenge? – Barrister @asadowaisi #AIMIM #AsaduddinOwaisi #WaqfAct #WaqfBoard #Owaisi #Hyderabad pic.twitter.com/SSxMB1C0ZW
— Asaduddin Owaisi (@asadowaisi) August 4, 2024
“ವಕ್ಫ್ ಮಂಡಳಿ ವ್ಯಾಪ್ತಿಯ ಆಸ್ತಿಗಳು ವಿವಾದಿತ ಎನಿಸಿದ್ದರೆ, ನ್ಯಾಯಾಲಯವು ಅದನ್ನು ತೀರ್ಮಾನ ಮಾಡುತ್ತದೆ. ಅದರ ಬದಲು ರಾಜಕೀಯ ಪಕ್ಷ ನೇತೃತ್ವದ ಶಾಸಕಾಂಗವೊಂದು ಹೇಗೆ ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸುತ್ತದೆ? ಯಾವುದೇ ಕಾರಣಕ್ಕೂ ವಕ್ಫ್ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ” ಎಂದು ಅಸಾದುದ್ದೀನ್ ಓವೈಸಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್ ಬೋರ್ಡ್‌ಗೆ ಕಾಂಗ್ರೆಸ್ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!