ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಯು (Israel Defense Forces) ಜಗತ್ತಿನಲ್ಲೇ ಅತ್ಯಾಧುನಿಕ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಸುತ್ತ ವೈರಿ ರಾಷ್ಟ್ರಗಳನ್ನು ಹೊಂದಿರುವ ಇಸ್ರೇಲ್ ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸನ್ನದ್ದ ಸ್ಥಿತಿಯಲ್ಲೇ ಇರುತ್ತದೆ. ಹೀಗಿದ್ದೂ, ಅಕ್ಟೋಬರ್ 7ರಂದು ಹಮಾಸ್ ಉಗ್ರರ (Hamas Terrorists) ದಾಳಿ ನಡೆದಿದ್ದು ಹೇಗೆ? ಇಸ್ರೇಲ್‌ನ ಶಕ್ತಿಶಾಲಿ ಗುಪ್ತಚರ (Israeli Intelligence) ಎಡವಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಹರಿದಾಡುತ್ತಿವೆ. ಈ ಪ್ರಶ್ನೆಗಳಿಗೆ ಸ್ವತಃ ಇಸ್ರೇಲ್ ಕೂಡ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದೆ. ಮೊನ್ನೆಯ ಹಮಾಸ್ ದಾಳಿ ನಗಣ್ಯವಲ್ಲ. ಇಸ್ರೇಲ್‌ನ 700 ಜನರನ್ನು ಹತ್ಯೆ ಮಾಡುವುದರಲ್ಲಿ ಯಶಸ್ವಿಯಾಗಿದೆ(Israel Palestine War). ಅಂದರೆ, ಈ ದಾಳಿ ಎಷ್ಟರಮಟ್ಟಿಗೆ ಇಸ್ರೇಲ್‌ಗೆ ಪೆಟ್ಟು ನೀಡಿದೆ ಎಂದು ಯೋಚಿಸಬಹುದು(Vistara Explainer).
ಪ್ರತಿಬಾರಿ ಸೋಲು ಅನುಭವಿಸುತ್ತಿದ್ದ ಹಮಾಸ್ ಈ ಬಾರಿ ಇಸ್ರೇಲ್‌ಗೆ ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ನೀಡುವಲ್ಲಿ ಯಶಸ್ವಿಯಾಗಿದೆ. ನೆಲ, ಜಲ ಮತ್ತು ಗಾಳಿ ಮೂಲಕ ಇಸ್ರೇಲ್ ಮೇಲೆ ಒಟ್ಟಿಗೆ ದಾಳಿ ನಡೆಸಿದೆ. ಹಮಾಸ್‌ನ ಈ ವ್ಯವಸ್ಥಿತ ದಾಳಿಗೆ ಇಸ್ರೇಲ್ ಕೂಡ ಬೆಚ್ಚಿ ಬಿದ್ದಿದೆ. ಹಾಗಿದ್ದರೆ, ಇಸ್ರೇಲ್ ಎಡವಿದ್ದು ಎಲ್ಲಿ ನೋಡೋಣ ಬನ್ನಿ…
ಇಸ್ರೇಲ್ ಗುಪ್ತಚರ ವೈಫಲ್ಯ
ಮಧ್ಯಪ್ರಾಚ್ಯ ರಾಷ್ಟ್ರಗಳ ಪೈಕಿ ಇಸ್ರೇಲ್ ಅತ್ಯಂತ ಶಕ್ತಿಶಾಲಿ ಮತ್ತು ದಕ್ಷ ಗುಪ್ತಚರ ವ್ಯವಸ್ಥೆಯನ್ನು ಹೊಂದಿದೆ. ಪ್ಯಾಲೆಸ್ತೀನ್ ಬಂಡುಕೋರರ ಗುಂಪುಗಳು, ಲೆಬನಾನ್, ಸಿರಿಯಾ ಸೇರಿದಂತೆ ಇತರ ರಾಷ್ಟ್ರಗಳ ಇಸ್ರೇಲ್ ಗುಪ್ತಚರ ಸಂಸ್ಥೆ ತನ್ನ ಮಾಹಿತಿದಾರರನ್ನ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಸ್ರೇಲ್ ಮೇಲಿನ ಹಮಾಸ್ ದಾಳಿಯು ಅನೇಕ ಪಶ್ಚಿಮ ರಾಷ್ಟ್ರಗಳಿಗೂ ದಿಗಿಲು ಮೂಡಿಸಿದೆ. ಯಾಕೆಂದರೆ, ಈ ರಾಷ್ಟ್ರಗಳಿಗೂ ದಾಳಿಯ ಕಿಂಚಿತ್ ಮಾಹಿತಿ ಕೂಡ ಇರಲಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಪ್ಯಾಲೆಸ್ತೀನ್ ಪ್ರಾಂತ್ಯಗಳೊಂದಿಗೆ ದಶಕಗಳ ಕಾಲ ಯುದ್ಧದಲ್ಲಿ ತೊಡಗಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಎಲೆಕ್ಟ್ರಾನಿಕ್ ಪ್ರತಿಬಂಧಕಗಳು, ಸಂವೇದಕಗಳು ಮತ್ತು ಮಾನವ ಮಾಹಿತಿದಾರರ ಜಾಲವನ್ನು ಸ್ಥಾಪಿಸಿದೆ. ಹಮಾಸ್‌ನ ಜಾಲಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಇಸ್ರೇಲ್ ಹಿಂದೆ ಹೆಚ್ಚು ಹೂಡಿಕೆ ಮಾಡಿದೆ. ಪರಿಣಾಮ ಆಗಾಗ ನಡೆಯುವ ದಾಳಿಯನ್ನು ತಡೆಯುವಲ್ಲಿ ಯಶಸ್ವಿ ಕೂಡ ಆಗಿದೆ. ಈಗ ಹಮಾಸ್ ನಡೆಸಿರುವ ದಾಳಿಯನ್ನು 1973ರಲ್ಲಿ ಯೋಮ್ ಕಿಪ್ಪುರ್ ವಾರ್‌ಗೆ ಹೋಲಿಸಲಾಗುತ್ತಿದೆ. ಆಗಲೂ ಇದೇ ರೀತಿಯ ದಾಳಿಯನ್ನು ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಗ್ರೂಪ್‌ಗಳು ನಡೆಸಿದ್ದವು.
ಐರನ್ ಡೋಮ್ ವಿಫಲವಾಯ್ತೆ?
ಅತ್ಯಾಧುನಿಕ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯನ್ನು ಹೊಂದಿರುವ ಇಸ್ರೇಲ್‌ನ ಐರನ್ ಡೋಮ್, ಹಮಾಸ್ ದಾಳಿ ವೇಳೆ ವಿಫಲವಾಯಿತೇ? ಇಂಥದೊಂದು ಪ್ರಶ್ನೆ ಎದ್ದಿದೆ. ಯಾಕೆಂದರೆ, ಜಗತ್ತಿನಲ್ಲೇ ಅತ್ಯಂತ ಸಮರ್ಥನೀಯ ಹಾಗೂ ಅತ್ಯಾಧುನಿಕ ಕ್ಷಿಪಣಿ ದಾಳಿಯನ್ನು ತಡೆಯುವ ವ್ಯವಸ್ಥೆ ತನ್ನಲ್ಲಿದೆ ಎಂದು ಇಸ್ರೇಲ್ ಹೇಳಿಕೊಳ್ಳುತ್ತಿತ್ತು. ವಾಸ್ತವದಲ್ಲಿ ಇದು ನಿಜ ಕೂಡ. ಆದರೆ, ಕ್ಷಿಪಣಿ ದಾಳಿ ತಡೆ ವ್ಯವಸ್ಥೆಯ ಲೋಪಕ್ಕಾಗಿ ಹಮಾಸ್ ಹಲವು ವರ್ಷಗಳಿಂದ ಕಾಯುತ್ತಿತ್ತು. ಅಂತಿಮವಾಗಿ, ಐರನ್ ಡೋಮ್‌ನ ವಿಕ್ನೇಸ್ ಗೊತ್ತಾಗುತ್ತಿದ್ದಂತೆ ತನ್ನ ಕಾರ್ಯಾಚರಣೆ ಕೈಗೊಂಡಿತು.
ಐರನ್ ಡೋಮ್, ಗಾಜಾಪಟ್ಟಿಯಿಂದ ತೂರಿ ಬರುವ ಕ್ಷಿಪಣಿಗಳನ್ನು ಗಾಳಿಯಲ್ಲೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಏಕಕಾಲಕ್ಕೆ ಸಾವಿರಾರು ಕ್ಷಿಪಣಿಗಳು ತೂರಿ ಬಂದಾಗ, ಅಂಥ ಕ್ಷಿಪಣಿಗಳನ್ನು ಶೇ.100ರಷ್ಟು ಹೊಡೆದುರುಳಿಸಲು ಸಾಧ್ಯವಾಗಿಲ್ಲ. ಹಮಾಸ್ ಉಗ್ರರು 5000 ಕ್ಷಿಪಣಿಗಳ ಮೂಲಕ ಏಕಕಾಲಕ್ಕೆ ದಾಳಿ ನಡೆಸಿದ್ದೇ ತಡ, ಐರನ್ ಡೋಮ್ ಶೇ.100ರಷ್ಟು ತಡೆಯುವ ಕೆಲಸವನ್ನು ಮಾಡಲಿಲ್ಲ. ಶೇ.90ರಷ್ಟು ಕ್ಷಿಪಣಿಗಳನ್ನು ನಾಶಗೊಳಿಸಲಷ್ಟೇ ಯಶಸ್ವಿಯಾಯಿತು.
ದಿ ನ್ಯೂಯಾರ್ಕ್ ಟೈಮ್ಸ್‌ನ ವರದಿಯ ಪ್ರಕಾರ, ಐರನ್ ಡೋಮ್ ಸೀಮಿತ ಸಂಖ್ಯೆಯ ಇಂಟರ್‌ಸೆಪ್ಟರ್‌ಗಳನ್ನು ಹೊಂದಿದೆ. ಈ ಸಿಸ್ಟಮ್ ಅನ್ನು ಮರುಲೋಡ್ ಮಾಡಲು ಸಮಯ ತೆಗೆದುಕೊಳ್ಳಬಹುದು. ಈ ವಿಕ್ನೇಸ್ ಕಂಡು ಹಿಡಿದ ಹಮಾಸ್, ಅದರ ಲಾಭವನ್ನು ಪಡೆದುಕೊಂಡಿತು. ಕೇವಲ 20 ನಿಮಿಷಗಳಲ್ಲಿ 5,000 ರಾಕೆಟ್‌ಗಳನ್ನು ಉಡಾಯಿಸಿತು. ಅದರ ರಿಸಲ್ಟ್ ಈಗ ಜಗತ್ತಿನ ಮುಂದಿದೆ. ಹಾಗೆಯೇ ಕೆಲವು ಸೇನಾ ತಜ್ಞರ ಪ್ರಕಾರ, ಹಮಾಸ್ ಉಗ್ರರು ಬಳಸಿದ ಕ್ಷಿಪಣಿಗಳನ್ನು ಐರನ್ ಡೋಮ್‌ಗೆ ಗುರುತಿಸಲು ಸಾಧ್ಯವಾಗಿಲ್ಲ.
ಈ ಸುದ್ದಿಯನ್ನೂ ಓದಿ: Israel Palestine War: ಏನಿದು ಐರನ್ ಡೋಮ್? ಇಸ್ರೇಲ್‌ನ ಈ ವ್ಯವಸ್ಥೆ ಕ್ಷಿಪಣಿ ದಾಳಿಯನ್ನು ಹೇಗೆ ತಡೆಯುತ್ತದೆ?
ಗಾಜಾ ಪಟ್ಟಿಗೆ ಶಶ್ತ್ರಾಸ್ತ್ರಗಳ ಕಳ್ಳ ಸಾಗಣೆ
ಇಷ್ಟು ದೊಡ್ಡ ಮಟ್ಟದ ರಾಕೆಟ್ ದಾಳಿ ನಡೆಸಲು ಹಮಾಸ್ ವ್ಯವಸ್ಥಿತವಾಗಿ ಯೋಜನೆ ರೂಪಿಸಿರುವುದು ಸ್ಪಷ್ಟವಾಗುತ್ತದೆ. ದಾಳಿಗೆ ಬಳಸಿದ ರಾಕೆಟ್‌ಗಳೆಲ್ಲವೂ ಇರಾನ್‌ನಲ್ಲಿ ತಯಾರಾದ ರಾಕೆಟ್‌ಗಳಾಗಿವೆ. ಅಂದರೆ, ಈ ರಾಕೆಟ್‌ಗಳನ್ನು ಗಾಜಾಪಟ್ಟಿಗೆ ಕಳ್ಳ ಸಾಗಣೆ ಮಾಡುವ ಮೂಲಕ ತಲುಪಿಸಲಾಗಿದೆ. ಆದರೆ, ಇಸ್ರೇಲ್‌ಗೆ ಮಾತ್ರ ಇದರ ಪರಿವೇ ಇರಲಿಲ್ಲ. ಹಮಾಸ್ ಉಗ್ರರ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮರೆತು ಬಿಟ್ಟಂತೆ ಕಾಣುತ್ತದೆ. ಮೂಲಗಳ ಪ್ರಕಾರ, ಇರಾನ್ ಮೂಲದ ರಾಕೆಟ್‌ಗಳನ್ನು ಬಿಡಿ ಭಾಗಗಳಾಗಿ ತಂದು, ಗಾಜಾ ಪಟ್ಟಿಯಲ್ಲಿ ಅಸೆಂಬಲ್ ಮಾಡಲಾಗಿದೆಯಂತೆ!
ವಿಶೇಷ ಎಂದರೆ, ಈ ಕ್ಷಿಪಣಿ ಮತ್ತು ರಾಕೆಟ್‌ಗಳ ಬಿಡಿ ಭಾಗಗಳನ್ನು ಭೂಗತ ಅಥವಾ ಸಮುದ್ರ ಮಾರ್ಗಗಳ ಬದಲಿಗೆ ಲೀಗಲ್ ಕ್ರಾಸಿಂಗ್ ಮಾರ್ಗಗಳ ಮೂಲಕವೇ ಗಾಜಾಪಟ್ಟಿಗೆ ತರಲಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದೂ, ಹಮಾಸ್ ಉಗ್ರರ ಈ ತಂತ್ರವನ್ನು ಪತ್ತೆ ಹಚುವಲ್ಲಿ ಇಸ್ರೇಲ್‌ಗೆ ಸಾಧ್ಯವಾಗಿಲ್ಲ.
ಗಾಜಾ ಪಟ್ಟಿಯ ವಿವಿಧ ಬಂಡುಕೋರರ ಸಂಘಟನೆಗಳಲ್ಲಿ ಇಸ್ರೇಲ್ ತನ್ನದೇ ಆದ ಮಾಹಿತಿದಾರರನ್ನು ಹೊಂದಿದೆ. ಇದಕ್ಕಾಗಿ ಹಲವು ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯನ್ನು ಅಳವಡಿಸಿದೆ. ಹಾಗಿದ್ದೂ, ಹಮಾಸ್ ಬಂಡುಕೋರರ ಈ ವ್ಯವಸ್ಥಿತ ದಾಳಿಯನ್ನು ಕಿಂಚಿತ್ ಊಹಿಸುಲ ಸಾಧ್ಯವಾಗಿಲ್ಲ. ಇಸ್ರೇಲ್‌ನ ಶಕ್ತಿಶಾಲಿ ಗುಪ್ತಚರ ವ್ಯವಸ್ಥೆಗೆ ಚಳ್ಳೆ ಹಣ್ಣು ತಿನ್ನಿಸಿ, ದೊಡ್ಡ ಮಟ್ಟದ ದಾಳಿಯನ್ನು ನಡೆಸಲು ಅವರು ಯಶಸ್ವಿಯಾಗಿದ್ದಾರೆ.