| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಗುರುವಾರ, ಡಿಸೆಂಬರ್ 1ರಂದು ಬೆಂಗಳೂರಿನ ವಿವಿಧ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ (Bomb Threat) ಎಂಬ ಹುಸಿ ಇಮೇಲ್ ಬೆದರಿಕೆ ನಗರದಾದ್ಯಂತ ಭಯ, ಆತಂಕಗಳನ್ನು ಉಂಟು ಮಾಡಿತು. ಈ ಇಮೇಲ್ ಅನ್ನು ಐಪಿ ಅಡ್ರೆಸ್ ಬಚ್ಚಿಟ್ಟಿದ್ದ, ಇನ್ನೂ ಗುರುತಿಸಲಾಗಿರದ ವ್ಯಕ್ತಿ ಕಳುಹಿಸಿದ್ದ. ಪೊಲೀಸರು ಈ ಪ್ರಕರಣದ ಹಿಂದೆ ಬಿದ್ದಿದ್ದು, ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ (Vistara Explainer).
ಇತ್ತೀಚಿನ ದಿನಗಳಲ್ಲಿ, ಬೆಂಗಳೂರು ನಗರದಲ್ಲಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಇಮೇಲ್‌ಗಳ ಪ್ರಮಾಣ ದಿನೇ ದಿನೇ ಹೆಚ್ಚತೊಡಗಿದೆ. ಈ ದುರುದ್ದೇಶಪೂರಿತ ಸಂದೇಶಗಳು ಹೆತ್ತವರಲ್ಲಿ ಗಂಭೀರ ಚಿಂತೆ ಉಂಟುಮಾಡಿದ್ದು, ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಸಮಾನವಾಗಿ ಭಯ ಮತ್ತು ಆತಂಕಕ್ಕೆ ದಾರಿ ಮಾಡಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಸಂದೇಶಗಳ ಹಿಂದಿರುವ ಮೂಲ ಮತ್ತು ಅವರ ಉದ್ದೇಶಗಳನ್ನು ಪತ್ತೆಹಚ್ಚಿ, ಶಾಲೆಗಳು ಮತ್ತು ಸಾರ್ವಜನಿಕರ ಸುರಕ್ಷತೆಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಅಂಕಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಸವಾಲುಗಳು ಮತ್ತು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಬಗೆಯನ್ನು ಗಮನಿಸೋಣ.
ಸಂದೇಶದ ಮೂಲ ಪತ್ತೆಹಚ್ಚುವುದು, ಸೈಬರ್ ಭದ್ರತೆ ಹೆಚ್ಚಿಸುವುದು
ಇಂತಹ ಹುಸಿ ಬೆದರಿಕೆ ಒಡ್ಡುವ ಇಮೇಲ್‌ಗಳ ವಿರುದ್ಧ ಹೋರಾಡಲು ಇಡಬೇಕಾದ ಪ್ರಮುಖ ಹೆಜ್ಜೆಯೆಂದರೆ ಸೈಬರ್ ಸೆಕ್ಯುರಿಟಿ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿ, ಇಮೇಲ್ ಮತ್ತು ಅಂತರ್ಜಾಲ ಸೇವಾ ಪೂರೈಕೆದಾರರ ಮೇಲೆ ಹೆಚ್ಚಿನ ನಿಗಾ ಇಡುವುದು. ಐಪಿ ವಿಳಾಸವನ್ನು ಪತ್ತೆ ಹಚ್ಚುವುದರಿಂದ ಮತ್ತು ದುರುದ್ದೇಶ ಪೂರ್ವಕ ಸಂದೇಶ ಕಳುಹಿಸಿದವರನ್ನು ಪತ್ತೆಹಚ್ಚುವ ಮೂಲಕ ಪೊಲೀಸರು ಈ ಅಪರಾಧಿಗಳನ್ನು ಗುರುತಿಸಿ, ಅವರಿಗೆ ಶಿಕ್ಷೆ ವಿಧಿಸಬಹುದು. ತಂತ್ರಜ್ಞಾನ ತಜ್ಞರು ಮತ್ತು ಗುಪ್ತಚರ ಸಂಸ್ಥೆಗಳೊಡನೆ ಸಹಯೋಗ ಹೊಂದುವ ಮೂಲಕ, ಇಂತಹ ಕುಕೃತ್ಯಗಳನ್ನು ನಡೆಸುವವರನ್ನು ಪತ್ತೆಹಚ್ಚಿ, ಸೆರೆಹಿಡಿಯಲು, ಇದರ ಹಿಂದಿರುವ ಸಂಕೀರ್ಣ ಜಾಲವನ್ನು ಅಸ್ಥಿರಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಶಾಲೆಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಡನೆ ಸಮನ್ವಯ ಸಾಧಿಸುವುದು
ಪೊಲೀಸ್ ಇಲಾಖೆ ಶಾಲೆಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಡನೆ ಉತ್ತಮ ಸಮನ್ವಯ ಸಾಧಿಸಿ, ಇಂತಹ ಸನ್ನಿವೇಶಗಳನ್ನು ಎದುರಿಸಲು ಸೂಕ್ತ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಸಿದ್ಧಪಡಿಸಬೇಕು. ಶಾಲೆಗಳಲ್ಲೂ ತುರ್ತು ಪ್ರತಿಕ್ರಿಯಾ ತಂಡವನ್ನು ನಿರ್ಮಿಸಿ, ಅವರಿಗೆ ಸಂಭಾವ್ಯ ಹುಸಿ ಬೆದರಿಕೆಯನ್ನು ಗುರುತಿಸುವುದು ಹೇಗೆ ಎಂಬ ತರಬೇತಿ ನೀಡುವುದರಿಂದ, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಬರುವ ಇಮೇಲ್‌ಗಳ ಅಧಿಕೃತತೆಯನ್ನು ಗುರುತಿಸುವುದು, ಕಾನೂನು ಜಾರಿ ಸಂಸ್ಥೆಗಳಿಗೆ ವಿವರವನ್ನು ತಲುಪಿಸುವುದು, ಹಾಗೂ ಅಗತ್ಯ ಬಿದ್ದರೆ ಬೆದರಿಕೆ ಇರುವ ಸ್ಥಳವನ್ನು ಜನರಹಿತವನ್ನಾಗಿಸುವ ಕ್ರಮಗಳನ್ನು ಕೈಗೊಳ್ಳುವುದರಿಂದ, ಅಪಾಯದ ಸಾಧ್ಯತೆಗಳನ್ನು ಕಡಿಮೆಗೊಳಿಸಿ, ಮಕ್ಕಳು ಮತ್ತು ಪೋಷಕರಿಗೆ ಧೈರ್ಯ ತುಂಬಲು ಸಾಧ್ಯವಾಗುತ್ತದೆ. ನಿರಂತರವಾಗಿ ಅಣಕು ಕಾರ್ಯಾಚರಣೆಗಳನ್ನು ನಡೆಸುವುದರಿಂದ, ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕೆಂಬುದು ಅರಿವಿಗೆ ಬರುತ್ತದೆ.
ಸಾರ್ವಜನಿಕರಲ್ಲಿ ಎಚ್ಚರಿಕೆ, ಅರಿವು ಮೂಡಿಸುವುದು
ಹುಸಿ ಇಮೇಲ್ ಬೆದರಿಕೆಗಳು ಮತ್ತೆ ಮತ್ತೆ ಮರುಕಳಿಸದಂತೆ ಮಾಡಲು ಸಾರ್ವಜನಿಕರಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮತ್ತು ಅರಿವು ರೂಪಿಸುವ ಅವಶ್ಯಕತೆಯಿದೆ. ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳು ಕೈಜೋಡಿಸಿ, ವಿದ್ಯಾರ್ಥಿಗಳಲ್ಲಿ ಇಂತಹ ಕೆಟ್ಟ ಹುಸಿ ಬೆದರಿಕೆಗಳ ಗಂಭೀರತೆಯ ಕುರಿತು ಅರಿವು ಮೂಡಿಸಬೇಕಿದೆ. ಇಂತಹ ಕುಕೃತ್ಯಗಳನ್ನು ನಡೆಸುವುದರಿಂದ, ಅದು ಸಾರ್ವಜನಿಕರ ಮೇಲೆ, ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದರಿಂದ, ಅವರು ಇಂತಹ ಕೃತ್ಯಗಳಲ್ಲಿ ತೊಡಗದಂತೆ ತಡೆಯಬಹುದು. ಜಾಗೃತಿ ಅಭಿಯಾನಗಳನ್ನು ಆಯೋಜಿಸುವುದು, ಕಾರ್ಯಾಗಾರಗಳನ್ನು ನಡೆಸುವುದು, ವಿಚಾರ ಸಂಕಿರಣಗಳನ್ನು ನಡೆಸುವುದರಿಂದ ಈ ಕುರಿತು ಹೆಚ್ಚಿನ ಅರಿವು, ಮಾಹಿತಿ ಮೂಡಿಸಲು ಸಾಧ್ಯವಾಗುತ್ತದೆ.
ಕಾನೂನು ಕ್ರಮಗಳು ಮತ್ತು ಶಿಕ್ಷೆ
ಸಂಭಾವ್ಯ ಅಪರಾಧಿಗಳು ಇಂತಹ ಕೃತ್ಯಗಳನ್ನು ನಡೆಸದಂತೆ ತಡೆಗಟ್ಟುವ ಸಲುವಾಗಿ ಇಂತಹ ಹುಸಿ ಇಮೇಲ್ ಬೆದರಿಕೆಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು. ಇಂತಹ ಕೆಲಸಗಳಿಂದ ಸಾರ್ವಜನಿಕರ ಜೀವನಕ್ಕೆ ತೊಂದರೆ ನೀಡಿ, ಜೀವಕ್ಕೆ ಅಪಾಯ ಉಂಟಾಗುವಂತೆ ಮಾಡುವವರಿಗೆ ಕಠಿಣ ದಂಡನೆ ವಿಧಿಸಬೇಕು. ಇಂತಹ ದಂಡನೆಗಳ ಮೂಲಕ, ಕಾನೂನು ಇಲಾಖೆ ಇಂತಹ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗುವವರನ್ನು ಭಯಪಡಿಸಿ, ಶಿಕ್ಷಣ ಸಂಸ್ಥೆಗಳ ಪಾವಿತ್ರ್ಯತೆ ರಕ್ಷಿಸಬಹುದು. ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಮತ್ತು ಈ ಕುರಿತು ಜ್ಞಾನ ಹೊಂದಿರುವವರ ನಡುವೆ ಸಹಯೋಗ ಸಾಧಿಸುವುದರಿಂದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು.
ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಸದ್ಬಳಕೆ
ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್ – ಎಐ) ಬಳಸಿಕೊಳ್ಳುವುದು ಇಂತಹ ಹುಸಿ ಬೆದರಿಕೆಗಳ ಸವಾಲು ಎದುರಿಸಲು ನೆರವು ನೀಡಬಲ್ಲದು. ಆಧುನಿಕ ಫಿಲ್ಟರಿಂಗ್ ವ್ಯವಸ್ಥೆಗಳನ್ನು ಅಳವಡಿಸಿ, ಅನುಮಾನಸ್ಪದ ಮಾದರಿಗಳು ಮತ್ತು ಕೀವರ್ಡ್‌ಗಳನ್ನು ಗುರುತಿಸಲು ಸಾಧ್ಯವಾಗುವುದರಿಂದ ಇಂತಹ ಹುಸಿ ಬೆದರಿಕೆಗಳ ಸಂದೇಶ ಹರಡದಂತೆ ತಡೆಯಲು ಸಾಧ್ಯವಾಗುತ್ತದೆ. ಅದರೊಡನೆ, ಮೆಷಿನ್ ಲರ್ನಿಂಗ್ ಆಲ್ಗಾರಿತಂಗಳನ್ನು ಬಳಸುವ ಮೂಲಕ ಹುಸಿ ಬೆದರಿಕೆ ಇಮೇಲ್‌ಗಳ ಅಪಾಯವನ್ನು ತಡೆಗಟ್ಟಲು, ಅದು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ.
ಸಮುದಾಯದ ಪಾಲ್ಗೊಳ್ಳುವಿಕೆ
ಒಂದು ಉತ್ತಮ, ಸದೃಢ, ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಇಂತಹ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಇಮೇಲ್‌ಗಳನ್ನು ಗುರುತಿಸಿ, ಪೊಲೀಸರಿಗೆ ವರದಿ ಮಾಡುವಂತೆ ಉತ್ತೇಜಿಸುವುದರಿಂದ ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ನಮ್ಮ ನೆರೆಹೊರೆಯನ್ನು ಗಮನಿಸುವಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸುವುದರಿಂದ, ಒಟ್ಟಾರೆ ಸಮಾಜದ ಎಲ್ಲ ಸಾರ್ವಜನಿಕರಲ್ಲೂ ಜವಾಬ್ದಾರಿಯ ಭಾವನೆ ಹೆಚ್ಚಿಸಿ, ಸಂಭಾವ್ಯ ಅಪಾಯಗಳನ್ನು ಗುರುತಿಸುವಂತೆ ಮಾಡಬಹುದು. ಸಾರ್ವಜನಿಕರು ಮತ್ತು ಪೊಲೀಸರು ಪರಸ್ಪರ ಸಹಕಾರ ನೀಡಿದರೆ, ಇಂತಹ ಹುಸಿ ಬೆದರಿಕೆ ಇಮೇಲ್‌ಗಳು ಹರಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬಹುದು.
ದುರದೃಷ್ಟವಶಾತ್, ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆಯ ಹುಸಿ ಇಮೇಲ್‌ಗಳು ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆಗಟ್ಟಲು ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಕ್ಷಿಪ್ರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಸೈಬರ್ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿ, ಶಾಲೆಗಳೊಡನೆ ಸಮನ್ವಯ ಸಾಧಿಸಿ, ಜನರಲ್ಲಿ ಜಾಗೃತಿ ಮೂಡಿಸಿ, ಕಠಿಣ ದಂಡಗಳನ್ನು ವಿಧಿಸಿ, ಮತ್ತು ನೂತನ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಕೆಗೆ ತರುವುದರಿಂದ ಅಧಿಕಾರಿಗಳು ಈ ಸಮಸ್ಯೆಯನ್ನು ಕೊನೆಗೊಳಿಸಬಹುದು. ಪೋಷಕರು ಮತ್ತು ಮಕ್ಕಳು ಎದುರಿಸುವ ಒತ್ತಡ, ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷಿತ ಮತ್ತು ಭದ್ರತೆಯ ವಾತಾವರಣ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಜನರೆಲ್ಲ ಜವಾಬ್ದಾರಿಯುತವಾಗಿ, ಒಗ್ಗಟ್ಟಿನಿಂದ ಕಾರ್ಯಾಚರಿಸಿದರಷ್ಟೇ ನಾವು ನಮ್ಮ ಶಿಕ್ಷಣ ಸಂಸ್ಥೆಗಳನ್ನು, ಸಮಾಜವನ್ನು ಇಂತಹ ಹುಸಿ ಬೆದರಿಕೆಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಸಾಧ್ಯ.
ಇದನ್ನೂ ಓದಿ: Bomb Threat : 48 ಶಾಲೆಗಳಿಗೆ ಬಂದ ಬೆದರಿಕೆ EMail ಮೂಲ ಪತ್ತೆ, ಏನಿದು ಜರ್ಮನಿ ಕನೆಕ್ಷನ್?