Site icon Vistara News

Wedding Mehendi Ideas: ಮೆಹೆಂದಿ ಶಾಸ್ತ್ರದಂದು ವಧು ಪಾಲಿಸಬೇಕಾದ 5 ಸಿಂಪಲ್ ಟಿಪ್ಸ್

Wedding Mehendi Ideas

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಮನೆಯಲ್ಲಿ ಮೆಹೆಂದಿ ಶಾಸ್ತ್ರ ಕೂಡ ಕುಟುಂಬದ ಸಂಭ್ರಮದ ಒಂದು ಭಾಗವಾಗಿದೆ. ಸಡಗರದೊಂದಿಗೆ ಆಚರಿಸುವ ಈ ದಿನದಂದು ವಧು ಯಾವುದೇ ಗೊಂದಲವಿಲ್ಲದೇ, ಹೆಚ್ಚು ಪ್ರಯಾಸವಿಲ್ಲದೇ ಕೈಗಳಿಗೆ ಸುಂದರವಾದ ಮೆಹೆಂದಿ ಚಿತ್ತಾರ ಮೂಡಿಸಿಕೊಳ್ಳುವುದು ಮುಖ್ಯ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಟಿಪ್ಸ್ (Wedding Mehendi Ideas) ಫಾಲೋ ಮಾಡಿದರೇ ಸಾಕು ಎನ್ನುವ ಮೆಹೆಂದಿ ವಿನ್ಯಾಸಕಾರರು ಈ ಕುರಿತಂತೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
“ ವಧು ಮಾತ್ರವಲ್ಲದೇ, ಆಕೆಯ ಕುಟುಂಬದ ಮಾನಿನಿಯರು, ಸ್ನೇಹಿತೆಯರು ಕೂಡ ಈ ಸಮಯದಲ್ಲಿ ಮದರಂಗಿ ಹಾಕಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ವಧುವಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ, ಸಮಯ ಮೀಸಲಿಡಬೇಕು. ನಂತರ ಉಳಿದವರಿಗೆ ಚಿತ್ತಾರ ಮೂಡಿಸಬೇಕು. ಸಿಗುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಸಮಯದಲ್ಲಿ, ಭಿನ್ನವಾಗಿ, ಫಟಾಫಟ್ ಆಗಿ ಹೇಗೆಲ್ಲಾ ಚಿತ್ತಾರ ಮೂಡಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ” ಎನ್ನುತ್ತಾರೆ ಮೆಹೆಂದಿ ವಿನ್ಯಾಸಕಿ ರೇಷ್ಮಾ ಖಾನ್.

ವಧುವಿಗೆ ಮೊದಲ ಪ್ರಾಶಸ್ತ್ಯ ನೀಡಿ

ಮೊದಲು ವಧುವಿನ ಮೆಹೆಂದಿ ಚಿತ್ತಾರಕ್ಕೆ ಪ್ರಾಮುಖ್ಯತೆ ನೀಡಬೇಕು. ಯಾಕೆಂದರೇ, ಕೈಗಳು-ಕಾಲುಗಳಿಗೆ ಹಚ್ಚಲು ಕಡಿಮೆ ಎಂದರೂ ಮೂರ್ನಾಲ್ಕು ಗಂಟೆ ಬೇಕಾಗುತ್ತದೆ. ಅಲ್ಲದೇ, ಡಿಸೈನ್‌ಗಳ ಫೋಟೋಶೂಟ್‌ಗೂ ಸಮಯ ಮೀಸಲಿಡಬೇಕಾಗುತ್ತದೆ.

ಮೊದಲೇ ಡಿಸೈನ್‌ಗಳನ್ನು ಪ್ಲಾನ್ ಮಾಡಿ

ಮೆಹೆಂದಿ ಶಾಸ್ತ್ರದ ದಿನದಂದು ಗಡಿಬಿಡಿಯಲ್ಲಿ ವಿನ್ಯಾಸ ಹುಡುಕಕೂಡದು. ಮದುವೆಗೆ ಮುನ್ನವೇ ಒಂದಿಷ್ಟು ಅಂತರ್ಜಾಲದಲ್ಲಿ ಹೊಸ ಡಿಸೈನ್ಸ್ ನೋಡಿ, ಚಿತ್ತಾರ ಮೂಡಿಸುವವರ ಬಳಿ ಮಾತನಾಡಿ, ಡಿಸೈನ್‌ಗಳ ಆಯ್ಕೆ ಮಾಡಿಡಬೇಕು. ಕೊನೆ ಕ್ಷಣದಲ್ಲಿ ಗೊಂದಲ ಬೇಡ.

ಒಟ್ಟೊಟ್ಟಿಗೆ ಚಿತ್ತಾರ ಮಾಡಿಸಿ

ಒಬ್ಬರೇ ಒಂದೊಂದೇ ಕೈ ಹಾಗೂ ಪಾದಗಳಿಗೆ ಮೆಹೆಂದಿ ಬಿಡಿಸುವುದಾದಲ್ಲಿ ಲೇಟಾಗಬಹುದು . ಕುಳಿತು ಪ್ರಯಾಸವಾಗಬಹುದು. ಹಾಗಾಗಿ ಈ ರಿಸ್ಕ್ ಬೇಡ. ಬದಲಿಗೆ ಕೈಗಳ ಚಿತ್ತಾರ ಮೂಡಿಸಲು, ಪಾದಗಳ ಚಿತ್ತಾರ ಮೂಡಿಸಲು ಒಂದಿಬ್ಬರು ಕಲಾವಿದರನ್ನು ಆಯ್ಕೆ ಮಾಡಿ, ಮದರಂಗಿ ಹಾಕಿಸಿಕೊಳ್ಳಿ. ಸಮಯ ಉಳಿಯುತ್ತದೆ.

ಡಿಸೈನರ್ವೇರ್‌ಗೆ ತಗುಲದಂತೆ ಜಾಗ್ರತೆ ವಹಿಸಿ

ಮೆಹೆಂದಿ ಚಿತ್ತಾರ ಮೂಡಿಸುವಾಗ ಆದಷ್ಟೂ ಧರಿಸಿದ ದುಬಾರಿ ಡಿಸೈನರ್ವೇರ್‌ಗಳಿಗೆ ತಗುಲದಂತೆ, ಟವೆಲ್ ಅಥವಾ ಎಪ್ರಾನ್ ಧರಿಸಿ. ಇದಕ್ಕಾಗಿ ನಿಮ್ಮ ಸ್ನೇಹಿತೆ ಹಾಗೂ ಸಹೋದರಿಯ ಸಹಾಯ ಪಡೆದುಕೊಳ್ಳಿ. ಮಧ್ಯೆ ಮಧ್ಯೆ ಅಡಚಣೆ ಮಾಡುವುದು ಬೇಡ!

ಅಲಂಕಾರದ ನಂತರ ಮೆಹೆಂದಿ ಹಾಕಿಸಿಕೊಳ್ಳಿ

ಊಟ-ತಿಂಡಿಯನ್ನು ಮೊದಲೇ ಮುಗಿಸಿಕೊಳ್ಳಿ. ಮೇಕಪ್ ಹಾಗೂ ಅಲಂಕಾರವನ್ನು ಮುನ್ನವೇ ಮಾಡಿಕೊಳ್ಳಿ. ಹಚ್ಚಿದ ನಾಲ್ಕೈದು ಗಂಟೆ ಸುಮ್ಮನೆ ಕೂರಬೇಕಾದ ಅಗತ್ಯವಿರುವುದರಿಂದ ಮುಖ್ಯವಾದ ಕೆಲಸಗಳನ್ನು ಪೂರೈಸಿ ಕುಳಿತುಕೊಳ್ಳಿ. ಅಗತ್ಯ ಬಿದ್ದಲ್ಲಿ ಸಹಾಯಕರನ್ನು ಜೊತೆಗಿರಿಸಿಕೊಳ್ಳಿ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Model Fashion Life: ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ ಚಳಿಗಾಲದ ಟಿಪ್ಸ್‌ ಹೀಗಿದೆ

Exit mobile version