ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಶೋನಲ್ಲಿ ಹೆಣ್ಣು ಮಗುವಿನ ಭ್ರೂಣ ಹತ್ಯೆ ಕುರಿತಂತೆ ರ‍್ಯಾಂಪ್ ವಾಕ್ ಮಾಡಿ ಜಾಗೃತಿ ಮೂಡಿಸುವುದನ್ನು (Womens awareness Fashion) ನೋಡಿದ್ದೀರಾ! ತೀರಾ ಕಡಿಮೆ. ಆದರೆ, ಉದ್ಯಾನನಗರಿಯಲ್ಲಿ ಚಿತ್ರ ಕಲಾ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಫ್ಯಾಷನ್ ಶೋ ಮೂಲಕ ಈ ವಿಷಯವನ್ನು ಪ್ರೇಕ್ಷಕರಿಗೆ ಸರಳವಾಗಿ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವೇಕ್ ಹಾಗೂ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಉದ್ಯಮಿಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್ ಪ್ರತಿಭಾ ನೇತೃತ್ವ
ಮಿಸೆಸ್ ಇಂಡಿಯಾ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಪ್ರತಿಭಾ ಸಂಶಿಮಠ್ ಅವರ ನೇತೃತ್ವದಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ, ಪೇಜೆಂಟ್‌ನಲ್ಲಿ ವಿಜೇತರಾದವರು ಹಾಗೂ ಭಾಗವಹಿಸಿದ್ದವರು, ರ‍್ಯಾಂಪ್ ವಾಕ್ ಮಾಡಿದರು. ಭ್ರೂಣ ಹತ್ಯೆ ಕುರಿತಂತೆ ಒಂದಿಷ್ಟು ಸ್ಕೆಚ್ ಹಾಗೂ ಸಂದೇಶಗಳನ್ನು ಬರೆದ ಪ್ರತಿಗಳನ್ನು ಕೈಯಲ್ಲಿ ಹಿಡಿದು, ನೆರೆದಿದ್ದ ಜನರಿಗೆ ತೋರಿಸುತ್ತಾ ಕ್ಯಾಟ್ ವಾಕ್ ಮಾಡಿದರು.
ಪ್ರತಿಭಾ ಸಂಶಿಮಠ್ ಫ್ಯಾಷನ್ ಟಾಕ್
ಫ್ಯಾಷನ್ ಶೋಗಳಲ್ಲಿ ವಾಕ್ ಮಾಡುವುದು ನಮಗೆ ತೀರಾ ಕಾಮನ್ ಆದ ವಿಷಯ. ಆದರೆ, ಇಲ್ಲಿ ನಡೆದ ಮಹಿಳಾ ದಿನಾಚಾರಣೆಯಲ್ಲಿ ವಿಭಿನ್ನವಾಗಿ ಯೋಚಿಸುವ ಜಾಗೃತಿ ಮೂಡಿಸುವಂತಹ ವಿಷಯದ ಬಗ್ಗೆ ಮಾಡೆಲ್‌ಗಳು ವಾಕ್ ಮಾಡಿದ್ದು ಸಂತಸ ತಂದಿದೆ. ನಮ್ಮ ರ‍್ಯಾಂಪ್ ವಾಕ್‌ನಿಂದ ಸಮಾಜಕ್ಕೆ ಸಂದೇಶ ನೀಡಿರುವುದಕ್ಕೆ ಮನಸ್ಸಿಗೆ ತೃಪ್ತಿ ದೊರಕಿದೆ. ಹೆಣ್ಣು ಮಕ್ಕಳ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವಂತಹ ಸಾಮಾಜಿಕ ಕಾರ್ಯಕ್ರಮ ಇದಾಗಿರುವುದು ನಿಜಕ್ಕೂ ಪ್ರಶಂಸನೀಯ. ಇಂತಹ ಫ್ಯಾಷನ್ ಶೋಗಳು ಹೆಚ್ಚಾಗಬೇಕು. ಆಗಷ್ಟೇ, ಹೆಣ್ಣುಮಕ್ಕಳು ಮಾತ್ರವಲ್ಲ, ಎಲ್ಲರೂ ಎಚ್ಚೆತ್ತುಕೊಂಡು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುತ್ತಾರೆ. ಸಮಾಜದ ಒಳಿತಿಗಾಗಿ ಮುಂದಾಗುತ್ತಾರೆ ಎಂದು ಮಿಸೆಸ್ ಏಷಿಯಾ ಪೆಸಿಫಿಕ್ ಪ್ರತಿಭಾ ಸಂಶಿಮಠ್ ಕರೆ ನೀಡಿದರು.
ಮಿಸೆಸ್ ಇಂಡಿಯಾ ಕರ್ನಾಟಕ ಪೇಜೆಂಟ್ ಟೀಮ್
ಫ್ಯಾಷನ್ ಶೋನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ವಿಜೇತರಾದ ಸ್ನೇಹಾ ಶ್ರೀಧರ್, ಕಲಾವಿದೆ ಸ್ಮಿತಾ ಪ್ರಕಾಶ್, ನೀತು ಎಂಜೆ, ಅನುಷಾ ನಿತೀನ್, ಅಕ್ಷತಾ ಸೇಠ್, ಮಾನಿಶಿ ಸಿನ್ಹಾ ದಾಸ್, ಡಾ. ಸ್ವಾತಿ, ಪ್ರತಿಭಾ ಬಿ.ಜಿ, ಮಾಧುರಿ ಶಾಸ್ತ್ರಿ, ಜಯಾ ಮಂಜುನಾಥ್ ಭಾಗವಹಿಸಿದ್ದರು. ಡಿಸೈನರ್ ರಕ್ಷಾ ಅವರ ಎಸ್‌ಎನ್‌ಆರ್ ಲೆಬೆಲ್ ಡಿಸೈನರ್‌ವೇರ್‌ಗಳು ಮಾಡೆಲ್‌ಗಳನ್ನು ಸಿಂಗರಿಸಿದ್ದವು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bikers Fashion Week: ಬೈಕರ್ಸ್ & ಕಿಡ್ಸ್ ಫ್ಯಾಷನ್ ಶೋನಲ್ಲಿ ರೋಮಾಂಚನಗೊಳಿಸಿದ ರ‍್ಯಾಂಪ್ ವಾಕ್