ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಫ್ಯಾಷನ್‌ನಲ್ಲಿ (Winter Fashion) ಪ್ಲೀಟೆಡ್ ಮಿಡಿ ಸ್ಕರ್ಟ್‌ಗಳು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಪರಿಣಾಮ, ಚಳಿಗಾಲದ ಲೇಯರ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಸದ್ಯಕ್ಕೆ ಕಾಲೇಜು ಹುಡುಗಿಯರನ್ನು ಸೆಳೆದಿರುವ ಈ ಸ್ಕರ್ಟ್‌ಗಳು ಮಿಕ್ಸ್ ಮ್ಯಾಚ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿವೆ.
“ಈ ಸೀಸನ್‌ನಲ್ಲಿ ಶಾರ್ಟ್ ಹಾಗೂ ಮಿನಿ ಸ್ಕರ್ಟ್ ಹಾಗೂ ಶಾರ್ಟ್ ಮಿಡಿಗಳು ಸೈಡಿಗೆ ಸರಿದಿವೆ. ಚಳಿಗೆ ಇವು ಟ್ರೆಂಡ್‌ನಿಂದ ಮರೆಯಾಗಿವೆ. ಇವುಗಳ ಬದಲಾಗಿ ದಪ್ಪನೆಯ ಫ್ಯಾಬ್ರಿಕ್‌ನ ನಾನಾ ಬಗೆಯ ಲಾಂಗ್ ಸ್ಕರ್ಟ್ ಹಾಗೂ ಮಿಡಿ ಸ್ಕರ್ಟ್‌ಗಳು ಸೀಸನ್‌ಗೆ ಎಂಟ್ರಿ ನೀಡಿವೆ. ಅವುಗಳಲ್ಲಿ ಇದೀಗ ಪ್ಲೀಟೆಡ್ ಮಿಡಿ ಸ್ಕರ್ಟ್‌ಗಳು ಲಗ್ಗೆ ಇಟ್ಟಿದ್ದು, ಸದ್ಯಕ್ಕೆ ಯುವತಿಯರ ಮನ ಗೆದ್ದಿವೆ. ಅಷ್ಟು ಮಾತ್ರವಲ್ಲ, ಈ ಸೀಸನ್‌ನ ಸ್ಟೈಲಿಂಗ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ ವರ್ಮಾ. ಅವರ ಪ್ರಕಾರ, ಈ ಪ್ಲೀಟೆಡ್ ಮಿಡಿ ಸ್ಕರ್ಟ್‌ಗಳು ನಾನಾ ಬಗೆಯ ಟಾಪ್ ಹಾಗೂ ಸ್ವೆಟರ್ ಟಾಪ್‌ಗಳೊಂದಿಗೆ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ.
ಟ್ರೆಂಡಿ ಪ್ಲೀಟೆಡ್ ಮಿಡಿ ಸ್ಕರ್ಟ್
ಅಂದಹಾಗೆ, ಈ ಪ್ಲೀಟೆಡ್‌ಮಿಡಿ ಸ್ಕರ್ಟ್ ಫ್ಯಾಷನ್ ಇಂದಿನದಲ್ಲ! ಈ ಹಿಂದೆಯೂ ರೆಟ್ರೋ ಸ್ಟೈಲಿಂಗ್‌ನಲ್ಲಿತ್ತು. ಇದೀಗ ಈ ಬಾರಿ ಒಂದಿಷ್ಟು ಬದಲಾವಣೆಯೊಂದಿಗೆ ಮರಳಿದೆ. ಅವುಗಳಲ್ಲಿ ಮಾನೋಕ್ರೋಮ್, ಪ್ರಿಂಟೆಡ್, ಟ್ರಾಪಿಕಲ್ ಹಾಗೂ ಫ್ಲೋರಲ್ ಪ್ರಿಂಟ್ಸ್ನವು, ಜೆಮೆಟ್ರಿಕಲ್ ಪ್ರಿಂಟ್ಸ್‌ನವು ಈ ಸೀಸನ್‌ಗೆ ಎಂಟ್ರಿ ನೀಡಿವೆ. ಲಾಂಗ್ ಲೆಂಥ್‌ನವು ಹೆಚ್ಚು ಪ್ರಚಲಿತದಲ್ಲಿವೆ.
ಮಿಕ್ಸ್ ಮ್ಯಾಚ್ ಹೇಗೆ?
ಪ್ಲೀಟೆಡ್ ಮಿಡಿ ಸ್ಕರ್ಟ್‌ಗಳನ್ನು ಟ್ರೆಂಡಿಯಾಗಿರುವ ಟಾಪ್‌ಗಳೊಂದಿಗೆ ಮ್ಯಾಚ್ ಮಾಡಬಹುದು. ಆದರೆ, ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಧರಿಸುವ ಸ್ಕರ್ಟ್‌ಗೆ ತಕ್ಕಂತೆ ಅದರಲ್ಲೂ ಶೇಡ್‌ಗೆ ಹೊಂದುವಂತೆ ಟಾಪ್ ಮ್ಯಾಚ್ ಮಾಡಬೇಕು. ತಿಳಿ ಬಣ್ಣದ ಸ್ಕರ್ಟ್‌ಗಾದಲ್ಲಿ ಕಾಂಟ್ರಾಸ್ಟ್ ಶೇಡ್ ಮ್ಯಾಚ್ ಮಾಡಬೇಕು. ಮಾನೋಕ್ರೋಮ್ ಲುಕ್ ಬೇಕಿದ್ದಲ್ಲಿ ಸ್ಕರ್ಟ್ ಹಾಗೂ ಟಾಪ್ ಎರಡೂ ಒಂದೇ ಬಣ್ಣದ್ದಾಗಿರಬೇಕು. ಇನ್ನು ಫ್ಲೋರಲ್, ಟ್ರಾಪಿಕಲ್ ಪ್ರಿಂಟ್ಸ್‌ನದ್ದಾದಲ್ಲಿ ಆದಷ್ಟೂ ಸಾದಾ ವರ್ಣದ ಟಾಪ್ ಸೆಲೆಕ್ಟ್ ಮಾಡಬೇಕು. ಇನ್ನು ಜೆಮೆಟ್ರಿಕಲ್ ಪ್ರಿಂಟ್ಸ್‌ನ ಸ್ಕರ್ಟ್‌ಗೆ ಸ್ಟ್ರಫ್ಸ್ ಅಥವಾ ಸ್ಕರ್ಟ್‌ನಲ್ಲಿರುವ ಶೇಡ್‌ನ ಬಣ್ಣದ ಟಾಪ್ ಧರಿಸಬೇಕು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ಜಾನ್ಹವಿ.
ಪ್ಲೀಟೆಡ್ ಮಿಡಿ ಸ್ಕರ್ಟ್ ಲುಕ್
- ಟ್ರೆಂಡ್ನಲ್ಲಿರುವ ಲಾಂಗ್ ಲೆಂಥ್ನದ್ದನ್ನು ಆಯ್ಕೆ ಮಾಡಿ.
- ಮಿಡಿ ಸ್ಕರ್ಟ್ ಜೊತೆ ವೆಲ್ವೆಟ್ ಬೂಟ್ಸ್ ಧರಿಸಿ.
- ಫಂಕಿ ಆಕ್ಸೆಸರೀಸ್ ಧರಿಸಿ.
- ಸಿಂಪಲ್ ಹೇರ್ಸ್ಟೈಲ್ ಇರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)