ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅತ್ಯಾಕರ್ಷಕ ಹಾಥ್‌ಫೂಲ್ ಆಭರಣಗಳು (Hathphool jewel Fashion) ಜ್ಯುವೆಲರಿ ಲೋಕಕ್ಕೆ ಎಂಟ್ರಿ ನೀಡಿವೆ. ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ರಂಜಾನ್ ಸೀಸನ್‌ನಲ್ಲಿ ನಾನಾ ಬಗೆಯ ಜ್ಯುವೆಲರಿಗಳು ಮಾರುಕಟ್ಟೆಗೆ ಆಗಮಿಸಿದ್ದು, ಅವುಗಳಲ್ಲಿ ಕೈಗಳ ಸೌಂದರ್ಯ ಹೆಚ್ಚಿಸುವ ಹಾಥ್‌ಫೂಲ್ ಆಭರಣಗಳು ನಾನಾ ಡಿಸೈನ್‌ನಲ್ಲಿ ಲಗ್ಗೆ ಇಟ್ಟಿವೆ.
ಯುವತಿಯರನ್ನುಆಕರ್ಷಿಸಿದ ಜ್ಯುವೆಲರಿ
“ಮದುವೆಯಲ್ಲಿ ಕೈಗಳ ಅಂದವನ್ನು ಹೆಚ್ಚಿಸುವ ಕೈ ಸರಪಳಿ ಅಂದರೇ, ಹಾಥ್‌ಫೂಲ್ ಜ್ಯುವೆಲ್‌ಗಳು ಇದೀಗ ರಂಜಾನ್ ಸೀಸನ್‌ನಲ್ಲಿ ಮಾನಿನಿಯರ ಕೈಗಳನ್ನು ಸಿಂಗರಿಸಲು ಸಜ್ಜಾಗಿವೆ. ನೋಡಲು ಮನಮೋಹಕವಾದ ವಿನ್ಯಾಸಗಳಲ್ಲಿ ಲಗ್ಗೆ ಇಟ್ಟಿರುವ ಇವು, ಊಹೆಗೂ ಮೀರಿದ ಡಿಸೈನ್‌ನಲ್ಲಿ ಬಂದಿವೆ. ರಂಜಾನ್ ಫೆಸ್ಟೀವ್ ಸೀಸನ್‌ನಲ್ಲಿ ಆಭರಣಗಳ ಟಾಪ್ ಲಿಸ್ಟ್‌ನಲ್ಲಿ ಇವು ಸೇರಿವೆ. ಬಂಗಾರದವು ಮಾತ್ರವಲ್ಲ, ಕೃತಕ ಬಂಗಾರದವು ಹೆಚ್ಚು ಚಾಲ್ತಿಯಲ್ಲಿವೆ” ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಶಿ. ಅವರ ಪ್ರಕಾರ, ಹಾಥ್‌ಫೂಲ್ ಆಭರಣಗಳು ಇದೀಗ ಯುವತಿಯರನ್ನು ಹಾಗೂ ಹುಡುಗಿಯರನ್ನು ಸೆಳೆಯುತ್ತಿವೆ. ಅವರಿಗೆ ಹೊಂದುವಂತಹ ಡಿಸೈನ್‌ನಲ್ಲೂ ಬಿಡುಗಡೆಗೊಂಡಿವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಹಾಥ್‌ಫೂಲ್ ಜ್ಯುವೆಲರಿಗಳು
ಕ್ರಿಸ್ಟಲ್, ಕುಂದನ್, ಬೀಡ್ಸ್, ಮಲ್ಟಿ ಲೇಯರ್, ಅಮೆರಿಕನ್ ಡೈಮಂಡ್, ರಜಪೂತ್ ಡಿಸೈನ್ಸ್, ಬ್ರೈಡಲ್, ಸಿಲ್ವರ್, ಆಂಟಿಕ್ ಡಿಸೈನ್, ಪೋಲ್ಕಿ, ಆಕ್ಸಿಡೈಸ್ಡ್ ಸಿಲ್ವರ್, ಪಂಜಾಬಿ ಟ್ರೆಡಿಷನಲ್, ಪರ್ಲ್ ಲೇಯರ್, ರಾಯಲ್ ಡಿಸೈನ್ ಸೇರಿದಂತೆ ನಾನಾ ಶೈಲಿಯ ಹಾಥ್‌ಫೂಲ್ ಜ್ಯುವೆಲರಿಗಳು ಚಾಲ್ತಿಯಲ್ಲಿವೆ. ರಂಜಾನ್ ಸೀಸನ್‌ನಲ್ಲಿ ಗೋಲ್ಡ್ ಪ್ಲೇಟೆಡ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಇವು ಕೈಗೆಟಕುವ ದರದಲ್ಲಿ ದೊರಕುತ್ತಿರುವುದರಿಂದ ಮಾನಿನಿಯರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ನಿಶಾ.
ಎಥ್ನಿಕ್ ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವ ಜ್ಯುವೆಲರಿಗಳು
ಈ ಹ್ಯಾಂಡ್ ಜ್ಯುವೆಲರಿಗಳು ಎಥ್ನಿಕ್ ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುತ್ತವೆ. ಅದರಲ್ಲೂ ಗ್ರ್ಯಾಂಡ್ ಸೀರೆ, ಗಾಗ್ರ, ಲೆಹೆಂಗಾ, ಶರಾರ, ಗರಾರ ಹೀಗೆ ಎಲ್ಲಾ ಬಗೆಯ ಎಥ್ನಿಕ್ ಔಟ್‌ಫಿಟ್‌ಗಳಿಗೆ ಇವು ಸಾಥ್ ನೀಡುತ್ತವೆ ಎನ್ನುತ್ತಾರೆ ಮಾಡೆಲ್ ರಜಿಯಾ ಖಾನ್.
ವೆಡ್ಡಿಂಗ್ ಫ್ಯಾಷನ್ ಜ್ಯುವೆಲರಿ
ಇನ್ನು, ವೆಡ್ಡಿಂಗ್ ಜ್ಯುವೆಲರಿ ಲಿಸ್ಟ್‌ನಲ್ಲಿ ಇವು ಅಗ್ರ ಸ್ಥಾನದಲ್ಲಿವೆ. ಇವುಗಳಿಲ್ಲದೇ ಬಹುತೇಕ ಮುಸಲ್ಮಾನರ ಮದುವೆಗಳಲ್ಲಿ ಮದುಮಗಳು ಕಾಣಿಸಿಕೊಳ್ಳುವುದೇ ಇಲ್ಲ! ಆ ಮಟ್ಟಿಗೆ ಇವು ವೆಡ್ಡಿಂಗ್ ಜ್ಯುವೆಲರಿಗಳಲ್ಲಿ ಸೇರಿ ಹೋಗಿವೆ.
- · ಸಿಂಗಲ್ ಹಾಥ್‌ಫೂಲ್ ಜ್ಯುವೆಲರಿಗಳು ಲಭ್ಯ.
- · ಜೆನ್ ಜಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್ನವು ದೊರೆಯುತ್ತಿವೆ.
- · ಕ್ರಿಸ್ಟಲ್ನವು ಅತ್ಯಾಕರ್ಷಕವಾಗಿ ಕಾಣುತ್ತವೆ.
- · ಈ ಸೀಸನ್‌ನಲ್ಲಿ ಕೊಂಡಲ್ಲಿ, ಸಾಕಷ್ಟು ಹೊಸ ವಿನ್ಯಾಸದವು ದೊರೆಯಬಹುದು.
ಇದನ್ನೂ ಓದಿ: Tooth Jewel Trend: ಹಲ್ಲಿನ ಸೌಂದರ್ಯಕ್ಕೆ ಸಾಥ್ ನೀಡುವ ಟೂತ್ ಜ್ಯುವೆಲರಿ