ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಅಕ್ಷಯ ತೃತೀಯದಲ್ಲಿ (Akshaya Tritiya Fashion) ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್ ಬಂದಿವೆ. ನೋಡಲು ಕಿವಿಯ ಓಲೆ ಹಾಗೂ ಸ್ಟಡ್ಸ್‌ನಂತೆ ಕಾಣುವ ಈ ನೋಸ್ ರಿಂಗ್ಸ್ , ಡ್ಯಾಂಗಲ್ಸ್ ಅಥವಾ ಸ್ಟಡ್ಸ್ ಲೆಕ್ಕವಿಲ್ಲದಷ್ಟು ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಕಿವಿಗೆ ಧರಿಸುವ ಓಲೆಯಷ್ಟೇ ಮಹತ್ವವನ್ನು ಪಡೆದುಕೊಂಡಿವೆ.
ಯುವತಿಯರ ನೋಸ್ ಸ್ಟಡ್ಸ್ ಒಲವು
“ಮೂಗುತಿ ಎಂದರೇ ಚಿಕ್ಕದೊಂದು ನೋಸ್ ರಿಂಗ್ಸ್ ಅಥವಾ ಚಿಕ್ಕ ಚುಕ್ಕೆಯಂತಹ ಡಿಸೈನ್‌ನವು ಈ ಮೊದಲೆಲ್ಲಾ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ರೆಟ್ರೊ ಫ್ಯಾಷನ್‌ನಲ್ಲಿದ್ದವು, ಅದರಲ್ಲೂ ಹಳೆಯ ಸಿನಿಮಾಗಳಲ್ಲಿ ಪೌರಾಣಿಕ ಚಲನಚಿತ್ರಗಳಲ್ಲಿ ರಾಣಿ-ಮಹಾರಾಣಿಯರು, ದೇವಾನುದೇವತೆಗಳ ಪಾತ್ರಧಾರಿಗಳು ಧರಿಸುತ್ತಿದ್ದ ಬಿಗ್ ನೋಸ್ ರಿಂಗ್ ಅಥವಾ ಕಿವಿಯ ಓಲೆಯಂತೆ ಕಾಣುವ ಸ್ಟಡ್ಸ್ ಈ ಸೀಸನ್‌ನಲ್ಲಿ ಮರಳಿವೆ. ಮಾನಿನಿಯರ ಮುಖವನ್ನು ಎದ್ದು ಕಾಣುವಂತೆ ಮಾಡಬಲ್ಲ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಎಲ್ಲದಕ್ಕಿಂತ ಖುಷಿ ಪಡುವ ವಿಚಾರವೆಂದರೇ ಯುವತಿಯರು ಕೂಡ ಇದರತ್ತ ವಾಲತೊಡಗಿದ್ದಾರೆ. ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಜ್ಯುವೆಲರಿಗಳಲ್ಲಿ ಇವನ್ನು ಸೇರಿಸಿಕೊಂಡಿದ್ದಾರೆ. ಪರಿಣಾಮ, ಜ್ಯುವೆಲರಿ ವಿನ್ಯಾಸಕಾರರು ಈ ಬಿಗ್ ನೋಸ್ ಸ್ಟಡ್ಸ್ ಅನ್ನು ನಾನಾ ರೂಪದಲ್ಲಿ ಬಿಡುಗಡೆಗೊಳಿಸಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಮಣ ಆಚಾರ್ ಹಾಗೂ ಜಯಂತ್.
ಟ್ರೆಂಡಿಯಾಗಿರುವ ಡಿಸೈನ್‌ಗಳ್ಯಾವುವು?
ಫ್ಲೋರಲ್, ಹರಳಿನ, ಅಮೆರಿಕನ್ ಡೈಮಂಡ್‌ನ ನಾನಾ ಡಿಸೈನ್‌ನ ಸ್ಟಡ್ಸ್, ಒಂಭತ್ತು, ಏಳು, ಐದು ಕಲ್ಲಿನ ಹಳೆಯ ನಕ್ಷತ್ರದಂತಹ ವಿನ್ಯಾಸ, ಮುತ್ತಿನ ಮೂಗುತಿಗಳು, ಟ್ವಿಸ್ಟೆಡ್, ಡಾಂಗಲ್ಸ್, ಡ್ರಾಪ್ಸ್, ಮಹಾರಾಷ್ಟ್ರದ ಮಹಿಳೆಯರು ಧರಿಸುವ ನಾನಾ ಬಗೆಯ ನತ್ ಜೊತೆಗಿನ ಸ್ಟಡ್ಸ್, ಕಲರ್‌ಫುಲ್ ಸೆಮಿ ಪ್ರಿಶಿಯಸ್ ಸ್ಟೋನ್ಸ್ ಇರುವಂತಹ ಡಿಸೈನ್‌ನವು, ಫ್ಲೋರಲ್, ನವಿಲು ಸೇರಿದಂತೆ ನಾನಾ ಬಗೆಯ ಬಿಗ್ ನೋಸ್ ಸ್ಟಡ್ಸ್ ಡಿಸೈನ್‌ನವು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಅದರಲ್ಲೂ ಮೂಗುತಿ ಆಭರಣಗಳ ಕೆಟಗರಿಯಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಆಭರಣ ಮಾರಾಟಗಾರರು.
ಯಾರಿಗೆ ಯಾವುದು ಸೂಕ್ತ?
- ಅಗಲವಾದ ಮೂಗು ಹೊಂದಿರುವವರು ಆದಷ್ಟೂ ಉದ್ದನೆಯ ಡಿಸೈನ್ ಹೊಂದಿರುವಂತವು ಅಥವಾ ಡ್ಯಾಂಗಲ್ಸ್ ಚೂಸ್ ಮಾಡಬೇಕು.
- ಉದ್ದನಾದ ಮೂಗಿರುವವರಿಗೆ ಯಾವುದೇ ಡಿಸೈನ್‌ನ ನೋಸ್ ಸ್ಟಡ್ಸ್ ಆದರೂ ಓಕೆ. ಆಕರ್ಷಕವಾಗಿ ಕಾಣುತ್ತದೆ.
- ಪುಟ್ಟ ಮೂಗಿರುವವರು ಆದಷ್ಟೂ ಚಿಕ್ಕ ಸ್ಟೋನ್ಸ್ ಇರುವಂತಹ ಮಿನಿಯೇಚರ್ ಮೂಗುತಿಗಳನ್ನು ಆಯ್ಕೆ ಮಾಡುವುದು ಬೆಸ್ಟ್.
- ದಪ್ಪಗಿನ ಮೂಗಿರುವವರು ಡಾಂಗಲ್ಸ್ ಇಲ್ಲವೇ ಪುಟ್ಟ ಡ್ರಾಪ್ಸ್ ಇರುವಂತಹ ನೋಸ್ ರಿಂಗ್ ಧರಿಸಿದಾಗ ನೋಡಲು ಚೆನ್ನಾಗಿ ಕಾಣುತ್ತದೆ.
- ಮೂಗಿನ ಸ್ಟಡ್ಸ್ ಧರಿಸುವವರು ಆದಷ್ಟೂ ಇತರೇ ಆಭರಣಗಳನ್ನು ಮ್ಯಾಚ್ ಮಾಡುವ ಚಾಲಕಿತನ ಹೊಂದಿರಬೇಕು.
- ಆದಷ್ಟೂ ಲೈಟ್ವೈಟ್ ನೋಸ್ ಸ್ಟಡ್ಸ್ ಸೆಲೆಕ್ಟ್ ಮಾಡಿ, ಧರಿಸಿದಲ್ಲಿ ಹೆಚ್ಚು ಭಾರವೆನಿಸದು.
- ಸ್ಟೋನ್ಸ್ ಇರುವಂತಹ ಮೂಗುತಿಗಳು ಬೆಳಕಿನಲ್ಲಿ ಮಿನುಗುತ್ತವೆ. ಇಂತವು ಟ್ರೆಂಡಿಯಾಗಿವೆ.
- ಪ್ರತಿದಿನ ಅಗಲವಾದ ಮೂಗುತಿಗಳನ್ನು ಧರಿಸಬೇಡಿ. ಕಾರ್ಯಕ್ರಮಗಳಿಗೆ ಮಾತ್ರ ಧರಿಸಿ.
- ಅಗಲವಾದ ಪಿನ್ ಇರುವಂತವು ಮೂಗಿನ ತೂತನ್ನು ಮತ್ತಷ್ಟು ದೊಡ್ಡದಾಗಿಸಬಲ್ಲವು.
- ಉಡುಪಿಗೆ ತಕ್ಕಂತೆ ಮ್ಯಾಚಿಂಗ್ ಬಣ್ಣ ಬಣ್ಣದ ಹರಳಿನ ನೋಸ್ ಸ್ಟಡ್ಸ್ ಕೂಡ ಪ್ರಚಲಿತದಲ್ಲಿದ್ದು, ಎಲ್ಲರಿಗೂ ಆಕರ್ಷಕವಾಗಿ ಕಾಣಿಸುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್ ಜ್ಯುವೆಲರಿಗಳು!