-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್ ಅರಿಷಿನ (Ambani wedding fashion) ಶಾಸ್ತ್ರದ ಕಾರ್ಯಕ್ರಮದಲ್ಲಿ ವಧು ರಾಧಿಕಾ ಮರ್ಚೆಂಟ್ ಧರಿಸಿದ ದುಂಡು ಮಲ್ಲಿಗೆಯ ಡಿಸೈನರ್ ದುಪಟ್ಟಾ, ಮುಂಬರುವ ವೆಡ್ಡಿಂಗ್ ಫ್ಯಾಷನ್‌ನ ನ್ಯಾಚುರಲ್ ಫ್ಲೋರಲ್ ಡಿಸೈನರ್‌ವೇರ್ಸ್ ಟ್ರೆಂಡ್‌ಗೆ ನಾಂದಿ ಹಾಡಿದೆ. ಅಂದಹಾಗೆ, ನೀವು ಹೂವಿನ ಆಭರಣ ಧರಿಸಿರುತ್ತೀರಾ? ಯಾವತ್ತಾದರೂ ಹೂಗಳ ದುಪಟ್ಟಾವನ್ನು ಹೊದ್ದುಕೊಂಡಿದ್ದೀರಾ! ಖಂಡಿತಾ ಇರಲಿಕ್ಕಿಲ್ಲ! ಅಲ್ಲವೇ! ಯಾಕೆಂದರೇ ಇದುವರೆಗೂ ಯಾವುದೇ ವೆಡ್ಡಿಂಗ್ ಫ್ಯಾಷನ್‌ನ ಅರಿಷಿಣ ಶಾಸ್ತ್ರದಲ್ಲಿ ಈ ಕಾನ್ಸೆಪ್ಟ್ ಬಂದಿರಲಿಲ್ಲ. ಇದುವರೆಗೂ ನಾನಾ ಬಗೆಯ ಹೂವುಗಳಿಂದ ಸಿದ್ಧಪಡಿಸಿದ ನೈಜ ಆಭರಣಗಳನ್ನು ನೋಡಿರಬಹುದು. ಹೆಚ್ಚೆಂದರೆ, ಡ್ರೆಸ್ ಮೇಲೆ ಹೂವುಗಳನ್ನು ಸಿಕ್ಕಿಸಿ, ಡಿಸೈನ್ ಮಾಡಿರುವುದನ್ನು ಕಂಡಿರಬಹುದು. ಆದರೆ, ಮದುಮಗಳ ಕಾಸ್ಟ್ಯೂಮ್‌ಗೆ ಹೊಂದುವಂತೆ, ದುಂಡು ಮಲ್ಲಿಗೆಯ ದುಪಟ್ಟಾ ಧರಿಸಿರುವುದನ್ನು ಮೊದಲ ಬಾರಿ ನೋಡಿರುತ್ತೀರಿ! ಹೌದು, ಇದೇ ರಾಧಿಕಾ ಮರ್ಚೆಂಟ್ ಧರಿಸಿದ ಎಕ್ಸ್‌ಲ್ಯೂಸಿವ್ ನ್ಯಾಚುರಲ್ ಫ್ಲೋರಲ್ ಡಿಸೈನ್‌ನ ದುಪಟ್ಟಾ. ಈ ದುಪಟ್ಟಾ ಫ್ಯಾಷನ್, ರಾತ್ರಿ ಬೆಳಗಾಗುವುದರೊಳಗೆ ಮುಂಬರುವ ವೆಡ್ಡಿಂಗ್ ಫ್ಯಾಷನ್‌ನ ಡಿಸೈನರ್‌ವೇರ್‌ಗಳ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಟ್ರೆಂಡ್‌ಗೆ ನಾಂದಿಯಾಡಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಏನಿದು ದುಂಡು ಮಲ್ಲಿಗೆ ದುಪಟ್ಟಾ?
ಘಮಘಮ ಎನ್ನುವ ದುಂಡು ಮಲ್ಲಿಗೆಗಳನ್ನು ಜೋಡಿಸಿ, ಅತಿ ಸೂಕ್ಷ್ಮವಾಗಿ ಹೆಣೆದು, ದುಪಟ್ಟಾ ರೂಪ ನೀಡಲಾಗಿದೆ. ಎಲ್ಲಿಯೂ ದಾರಗಳು ಕಾಣದಂತೆ ಹೂಗಳ ತೊಟ್ಟಿನಿಂದಲೇ ಸೇರಿಸಿ, ಫಿನಿಶಿಂಗ್ ಟಚ್ ನೀಡಲಾಗಿದೆ.
ಅನಾಮಿಕಾ ಖನ್ನಾರ ಫೂಲೋಂಕಿ ಚಾದರ್
ಸೆಲೆಬ್ರೆಟಿ ಡಿಸೈನರ್ ಅನಾಮಿಕಾ ಖನ್ನಾ, ಈ ಹೊಸ ಪ್ರಯೋಗ ಮಾಡಿದ್ದು, ಹೂವಿನ ಆಭರಣಗಳೊಂದಿಗೆ ಫೂಲೋಂಕಿ ಚಾದರ್ ಹೆಸರಿನ ದುಂಡು ಮಲ್ಲಿಗೆ ಹೂಗಳ ಮಾರುದ್ದದ ದುಪಟ್ಟಾವನ್ನು ವಿನ್ಯಾಸಗೊಳಿಸಿದ್ದಾರೆ. ರಾಧಿಕಾ ಮರ್ಚೆಂಟ್‌ರ ಹಳದಿ ಲೆಹೆಂಗಾಗೆ ಇಳೆ ಬಿದ್ದಿರುವಂತೆ ಬಿಂಬಿಸುವ ದುಂಡು ಮಲ್ಲಿಗೆಗೆ ಪಾರದರ್ಶಕ ಲುಕ್ ನೀಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅರಿಷಿನ ಶಾಸ್ತ್ರದ ಫ್ಯಾಷನ್‌ನಲ್ಲಿ ಹೂವುಗಳು ಕೇವಲ ಆಭರಣಗಳನ್ನು ಸಿದ್ಧಪಡಿಸಲು ಮಾತ್ರ ಸೀಮಿತವಲ್ಲ! ಇದರಿಂದ ಡಿಸೈನರ್‌ವೇರ್‌ಗಳನ್ನು ರೂಪಿಸಬಹುದು ಎಂಬುದನ್ನು ಪ್ರೂವ್ ಮಾಡಿದ್ದಾರೆ. ಒಟ್ಟಿನಲ್ಲಿ, ಮುಂಬರುವ ರಾಯಲ್ ಮದುವೆಗಳಲ್ಲಿ ನೈಜ ಹೂಗಳ ನಾನಾ ಬಗೆಯ ಡಿಸೈನರ್‌ವೇರ್‌ಗಳನ್ನು ಕಾಣುವ ದಿನಗಳು ದೂರವಿಲ್ಲ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Ambani Wedding Fashion: ಅಂಬಾನಿ ಫ್ಯಾಮಿಲಿಯ ಅರಿಷಿನ ಶಾಸ್ತ್ರದಲ್ಲಿ ರಂಗು ರಂಗಾದ ಸೆಲೆಬ್ರೆಟಿಗಳು!