ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟ ಹಾಗೂ ಮಾಡೆಲ್ ಪ್ರತೀಕ್ ಬಬ್ಬರ್ (Prateek Babbar) ಬ್ಲ್ಯಾಕ್ ಕ್ರಾಪ್ ಟುಕ್ಸೆಡೊ/ಸೂಟ್‌ನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ, ರೆಡ್ ಕಾರ್ಪೆಟ್ ವಾಕ್ ಮಾಡಿದ್ದಾರೆ. ಪ್ರತೀಕ್‌ಗೆ ಪ್ರಶಂಸೆ: ಕಾನ್ ಫಿಲ್ಮ್ ಫೆಸ್ಟಿವಲ್ (Cannes Star Fashion) ಈ ಬಾರಿ ವಾಕ್ ಮಾಡಿದ ಭಾರತೀಯ ನಟರ ಪೈಕಿ ಪ್ರತೀಕ್, ಅತಿ ಹೆಚ್ಚು ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಫ್ಯಾಷನ್ ವಿಮರ್ಶಕರು. ಯಂಗ್ & ಎನರ್ಜಿಟಿಕ್ ಆಗಿರುವ ಪ್ರತೀಕ್ ಈ ಜನರೇಷನ್‌ನ ಹುಡುಗರನ್ನು ಪ್ರತಿಬಿಂಬಿಸಿದ್ದಾರೆ. ತೀರಾ ಸೀರಿಯಸ್ ಆಗಿಯೂ ಕಾಣಿಸದೇ, ತೀರಾ ಫಂಕಿಯಾಗಿಯೂ ಕಾಣಿಸದೇ, ಜಂಟಲ್‌ಮೆನ್ ಲುಕ್‌ನಲ್ಲಿ ಆಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ ಎಂದು ವಿಶ್ಲೇಶಿಸಿದ್ದಾರೆ.
ತಾಯಿ ಸ್ಮಿತಾ ಪಾಟೀಲ್‌ಗೆ ಅರ್ಪಣೆ
ಅಂದಹಾಗೆ, ಪ್ರತೀಕ್ ಬಬ್ಬರ್ ಅವರು ಇದೇ ಮೊತ್ತ ಮೊದಲ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಾಕ್ ಮಾಡಿದ್ದಾರೆ. ಮೊದಲ ಬಾರಿಯಲ್ಲೆ ಎಲ್ಲರ ಗಮನ ಸೆಳೆದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಾಯಿ ನಟಿ ಸ್ಮಿತಾ ಪಾಟೀಲ್ ಅವರಿಗೆ ಟ್ರಿಬ್ಯೂಟ್ ಅರ್ಪಿಸುವ ಸಲುವಾಗಿ ಬ್ಲ್ಯಾಕ್ ಕ್ರಾಪ್ ಟುಕ್ಸೆಡೊ ಅಂದರೇ, ಸೂಟ್ ಜೊತೆಗೆ ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ ಅವರ ಸ್ಟೈಲಿಸ್ಟ್ ರಾಹುಲ್ ವಿಜಯ್. ಅವರು ಹೇಳುವಂತೆ, ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ, ಈ ಬಾರಿ ಮತ್ತೊಮ್ಮೆ ಸ್ಕ್ರೀನ್ ಮಾಡಿದ ಸ್ಮಿತಾ ಪಾಟೀಲ್ ಅವರ ಹಳೆಯ ಚಿತ್ರ ಮನ್ನತ್ ಶೋಗಾಗಿ ಪುತ್ರ ಪ್ರತೀಕ್ ಈ ಕಾನ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಹಿರಿಯ ನಟ-ನಟಿಯರಾದ, ನಾಸಿರುದ್ದೀನ್ ಶಾ ಹಾಗೂ ನಟಿ ರತ್ನಾ ಪಾಠಕ್ ಕೂಡ ಸಿನಿಮಾದ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
ಪ್ರತೀಕ್ ಬ್ಲ್ಯಾಕ್ ಕ್ರಾಪ್ ಟುಕ್ಸೆಡೊ
ರೋಹಿತ್ ಗಾಂಧಿ & ರಾಹುಲ್ ಖನ್ನಾ ಜಂಟಿಯಾಗಿ ಡಿಸೈನ್ ಮಾಡಿರುವ ಈ ಕಸ್ಟಮೈಸ್ಡ್ ಟುಕ್ಸೆಡೊ ಅಥವಾ ಬ್ಲ್ಯಾಕ್ ಸೂಟ್, ಪ್ರತೀಕ್ ಅವರಿಗೆ ಸಖತ್ ಹ್ಯಾಂಡ್‌ಸಮ್ ಆಗಿ ಬಿಂಬಿಸಿದೆ. ಇನ್ನು, ಬೋ ಅಥವಾ ಟೈ ಬದಲು ಅವರು ಧರಿಸಿರುವ ವಿಂಟೇಜ್ ಸ್ಕಾರ್ಫ್ ಅವರ ಲುಕ್ಕನ್ನು ಮತ್ತಷ್ಟು ಡಿಫರೆಂಟ್ ಆಗಿಸಿದೆ. ಇತರರಿಗಿಂತ ವಿಭಿನ್ನವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್ ಔಟ್‌ಫಿಟ್ಸ್
ಪ್ರತೀಕ್ ಮೊದಲ ಕಾನ್ ವಾಕ್
“ಇದು ನನ್ನ ಮೊದಲ ಅಂತಾರಾಷ್ಟ್ರೀಯ ಮಟ್ಟದ ರೆಡ್ ಕಾರ್ಪೆಟ್ ವಾಕ್. ಹಾಗಾಗಿ ನಾನು ಆಕರ್ಷಕವಾಗಿ ಕಾಣಿಸುವುದರೊಂದಿಗೆ ನನ್ನ ತಾಯಿಗೆ ಟ್ರಿಬ್ಯೂಟ್ ಕೂಡ ಸಲ್ಲಿಸಬೇಕಿತ್ತು. ಹಾಗಾಗಿ ಕತ್ತಿಗೆ ವಿಂಟೇಜ್ ಸ್ಕಾರ್ಫ್ ಧರಿಸಿ, ಕಾಣಿಸಿಕೊಂಡೆ. ಇದು ಎಲ್ಲರಿಗೂ ಇಷ್ಟವಾಯಿತು” ಎಂದು ಪ್ರತೀಕ್ ಮಾಧ್ಯಮದವರೆದುರು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಈ ಬಾರಿಯ ಕಾನ್ ಫೆಸ್ಟಿವಲ್ ಮೂಲಕ ಭಾರತೀಯ ಮೆನ್ಸ್ ಫ್ಯಾಷನ್‌ನಲ್ಲಿ ಪ್ರತೀಕ್ ಕ್ರಾಪ್ ಟುಕ್ಸೆಡೊ ಟ್ರೆಂಡ್ ಹುಟ್ಟು ಹಾಕಿದ್ದಾರೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)