-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯೂ (Celebrities Rakhi Celebration) ಬಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಫ್ಯಾಷನ್‌ಕ್ಷೇತ್ರದ ಸೆಲೆಬ್ರೆಟಿ ಸಹೋದರ-ಸಹೋದರಿಯರು ರಾಖಿ ಹಬ್ಬವನ್ನು ಸಡಗರದಿಂದ ಸಂಭ್ರಮಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿನಿಮಾ ಹಾಗೂ ಸಿನಿಮಾಯೇತರ ಸೆಲೆಬ್ರೆಟಿಗಳು ರಾಖಿ ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಿದರು. ಕೆಲವು ಸೆಲೆಬ್ರೆಟಿಗಳು ಸಂದರ್ಭಕ್ಕೆ ತಕ್ಕಂತೆ ಎಥ್ನಿಕ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಇನ್ನು ಕೆಲವರು ಸೆಮಿ ಎಥ್ನಿಕ್‌ವೇರ್‌ನಲ್ಲಿ ಆಚರಿಸಿದರು. ಮತ್ತೆ ಕೆಲವರು ನಾನಾ ಕಾರಣಗಳಿಂದಾಗಿ ಸಾಮಾನ್ಯವಾದ ಕ್ಯಾಶುವಲ್‌ವೇರ್‌ನಲ್ಲೆ ಕಾಣಿಸಿಕೊಂಡು ಸಂಭ್ರಮಿಸಿದರು. ಹಾಗಾದಲ್ಲಿ, ಇಲ್ಲಿಯವರೆಗೆ ಯಾರ್ಯಾರು ಹೇಗೆಲ್ಲಾ ಕಾಣಿಸಿಕೊಂಡರು ಎಂಬುದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.
ಸ್ಯಾಂಡಲ್‌ವುಡ್ ತಾರೆಯರ ಸಂಭ್ರಮ
ಸ್ಯಾಂಡಲ್‌ವುಡ್‌ನಲ್ಲಿ ಮೊದಲಿನಿಂದಲೂ ಈ ಹಬ್ಬವನ್ನು ಆಚರಿಸುವವರು ಕೊಂಚ ಕಡಿಮೆಯೇ!
ಇನ್ನು, ಈ ಬಾರಿ ನಟ ಧನಂಜಯ ಅವರು ತಮ್ಮ ಸಹೋದರಿಯರೊಂದಿಗೆ ಆಚರಿಸಿದ್ದಾರೆ. ಸುಂದರವಾದ ಫೋಟೋವನ್ನು ಕೂಡ ಅಪ್‌ಲೋಡ್ ಮಾಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಕಾರ್ತೀಕ್, ತಂಗಿಯ ಜೊತೆ ಕಾಣಿಸಿಕೊಂಡಿದ್ದಾರೆ. ನಟಿ ರಕ್ಷಿತಾ ಪ್ರೇಮ್ ತಮ್ಮ ಸಹೋದರನೊಂದಿಗೆ ಆಚರಿಸಿದ್ದನ್ನು ಹೇಳಿಕೊಂಡಿದ್ದಾರೆ. ಎಂದಿನಂತೆ ನಟ ಯಶ್‌ಗೆ ಸಹೋದರಿಯ ರಾಖಿ ಈಗಾಗಲೇ ತಲುಪಿದೆಯಂತೆ. ಹೀಗೆ ಸೆಲೆಬ್ರೆಟಿಗಳೆಲ್ಲರೂ ನಾನಾ ಬಗೆಯಲ್ಲಿ ಆಚರಿಸಿಕೊಂಡಿದ್ದಾರೆ.
ವೆರೈಟಿ ಔಟ್‌ಫಿಟ್ಸ್‌ನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಆಚರಣೆ
ರಾಖಿ ಹಬ್ಬವನ್ನು ಕರಾರುವಕ್ಕಾಗಿ ಆಚರಿಸುವ ಬಾಲಿವುಡ್ ಸೆಲೆಬ್ರೆಟಿಗಳಲ್ಲಿ ಬಹುತೇಕರು ಎಥ್ನಿಕ್‌ವೇರ್‌ಗಳಲ್ಲೆ ಮಿಂಚಿದ್ದಾರೆ. ನಟ ಅರ್ಜುನ್ ಕಪೂರ್ ತನ್ನ ಮೂವರು ಸಹೋದರಿಯರ ಕೈಗಳಲ್ಲೂ ರಾಖಿ ಕಟ್ಟಿಸಿಕೊಂಡರೇ, ನಟಿ ಸಾರಾ ಅಲಿ ಖಾನ್ ಸನ್ ಕಲರ್‌ನ ಸಲ್ವಾರ್ ಸೆಟ್‌ನಲ್ಲಿ ಕಾಣಿಸಿಕೊಂಡು, ತಮ್ಮ ಮೂವರು ಸಹೋದರರಿಗೆ ರಾಖಿ ಕಟ್ಟಿದ್ದಾರೆ. ಇನ್ನುಳಿದಂತೆ, ನಟ ಕಪಿಲ್‌ಶರ್ಮಾ, ಸಲ್ಮಾನ್ ಖಾನ್ ತಂಗಿ ಅರ್ಪಿತಾ, ರಣಬೀರ್ ಕಪೂರ್ ಸಹೋದರಿ ರಿದಿಮ್ಮಾ, ನಟಿ ಶನಾಯಾ ಕಪೂರ್, ನಟ ಕುನಾಲ್ ಕಪೂರ್ ಸೇರಿದಂತೆ ಈಗಾಗಲೇ ನಾನಾ ಸೆಲೆಬ್ರೆಟಿಗಳು ಫೆಸ್ಟಿವ್ ಸೀಸನ್‌ನ ಎಥ್ನಿಕ್‌ವೇರ್ ಧರಿಸಿ ಆಚರಿಸಿದ್ದಾರೆ. ಹಿರಿಯ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಕೂಡ ಟ್ರೆಡಿಷನಲ್ ಆಗಿ ರಾಖಿ ಹಬ್ಬ ಸಂಭ್ರಮಿಸಿದ್ದಾರೆ. ಇದಕ್ಕೆ ಅವರು ಅಪ್‌ಲೋಡ್ ಮಾಡಿರುವ ವಿಡಿಯೋ ಹಾಗೂ ಫೋಟೋಗಳೇ ಸಾಕ್ಷಿ. ಇದೇ ರೀತಿ ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ಕೂಡ ತಮ್ಮ ಸಹೋದರ-ಸಹೋದರಿಯರೊಂದಿಗೆ ಟ್ರೆಂಡಿ ಡಿಸೈನರ್‌ವೇರ್ ಧರಿಸಿ ಆಚರಿಸಿದ್ದಾರೆ. ದೂರದ ಊರಿನಲ್ಲಿರುವವರು ಮಾತ್ರ ಹಳೆಯ ಫೋಟೋಗಳನ್ನು ಹಂಚಿಕೊಂಡು ನೆನಪಿಸಿಕೊಂಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)