-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಂಗಳೂರಿನ ಫ್ಯಾಷನ್ ಜಗತ್ತಿನಲ್ಲಿ ಸುಮಾರು ೨೫ ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವವರ ಸಾಲಿನಲ್ಲಿ ವಿದ್ಯಾ ವಿವೇಕ್ ಕೂಡ ಸೇರುತ್ತಾರೆ. ಇವರು ವಿದ್ಯಾ ಫ್ಯಾಷನ್ ಅಕಾಡೆಮಿಯ ಸಂಸ್ಥಾಪಕರು ಮಾತ್ರವಲ್ಲ, ನಮ್ಮ ರಾಷ್ಟ್ರದಲ್ಲೆ ಮೊತ್ತ ಮೊದಲ ಬಾರಿಗೆ ಜಪಾನ್‌ನ ಒರಿಗಾಮಿ ಫ್ಯಾಷನ್ ಕಾನ್ಸೆಪ್ಟನ್ನು (Celebrity Fashion Corner) ಪರಿಚಯಿಸಿದವರು.
ಈ ಬಾರಿಯ ವಿಸ್ತಾರದ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್‌ನಲ್ಲಿ ತಮ್ಮ ಫ್ಯಾಷನ್ ಜರ್ನಿ ಹಾಗೂ ಫ್ಯಾಷನ್‌ನಲ್ಲಿ ತಂತ್ರಜ್ಞಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸುಮಾರು ೨೫ ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ತೊಡಗಿಸಿಕೊಂಡಿರುವ ನಿಮ್ಮ ಫ್ಯಾಷನ್ ಜರ್ನಿಯ ಬಗ್ಗೆ ಹೇಳಿ?
ವಿದೇಶದಲ್ಲಿ ಫ್ಯಾಷನ್ ವ್ಯಾಸಂಗ ಮಾಡಿದ ನಂತರ ಉದ್ಯಾನನಗರಿಯಲ್ಲಿ ಆರಂಭಿಸಿದ ವಿದ್ಯಾ ಫ್ಯಾಷನ್ ಅಕಾಡೆಮಿ ಮೂಲಕ ನಾವು ಇದುವರೆಗೂ ಸಾವಿರಾರು ಡಿಸೈನರ್‌ಗಳನ್ನು ಹುಟ್ಟುಹಾಕಿದ್ದೇವೆ. ಇದರೊಂದಿಗೆ ಸಾಕಷ್ಟು ವಿದೇಶಿ ಪ್ರಾಜೆಕ್ಟ್‌ಗಳಿಗೂ ಕಾರ್ಯ ನಿರ್ವಹಿಸಿದ್ದು, ವರ್ಕ್‌ಶಾಪ್ ಮೂಲಕ ಫ್ಯಾಷನ್ ಕುರಿತ ಲೆಕ್ಕವಿಲ್ಲದಷ್ಟು ಕಾರ್ಯಾಗಾರಗಳನ್ನು ಏರ್ಪಡಿಸಿ, ಹೊಸ ಕಾನ್ಸೆಪ್ಟ್‌ಗಳನ್ನು ಪರಿಚಯಿಸಿದ್ದೇವೆ.
ಇದನ್ನೂ ಓದಿ | Celebrity Fashion Corner | ಪೇಜೆಂಟ್‌ಗಳಲ್ಲಿ ವಿವಾಹಿತರಿಗೆ ಝೀರೊ ಸೈಝ್ ಅಗತ್ಯವಿಲ್ಲ : ಅಮೃತ್ ಕಲೇರ್
ಒರಿಗಾಮಿ ಫ್ಯಾಷನ್ ಡಿಸೈನಿಂಗ್ ಕಾನ್ಸೆಪ್ಟ್ ಮೊದಲ ಬಾರಿ ನಮ್ಮ ರಾಷ್ಟ್ರದಲ್ಲಿ ಪರಿಚಯಿಸಿದ ಕ್ರೆಡಿಟ್ ನಿಮಗೆ ಸಲ್ಲುತ್ತದೆ. ಈ ಬಗ್ಗೆ ತಿಳಿಸಿ.
ಹೌದು. ಇದುವರೆಗೂ ಆ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಜಪಾನ್‌ನಿಂದ ಒರಿಗಾಮಿ ಫ್ಯಾಷನ್ ತಜ್ಞ ಶಿಂಗೋಸ್ಯಾಟೋರನ್ನು ಕರೆಸಿ ವರ್ಕ್‌ಶಾಪ್ ಮಾಡಿಸಿದ್ದೇವೆ. ಅಷ್ಟು ಮಾತ್ರವಲ್ಲ, ಒರಿಗಾಮಿಯ ಡಿಸೈನ್‌ಗಳನ್ನು ನಾವು ಫ್ಯಾಷನ್ ಡಿಸೈನಿಂಗ್‌ನಲ್ಲಿ ಅಳವಡಿಸಿದ್ದೇವೆ. ನಾನಾ ಪ್ರಯೋಗಾತ್ಮಕ ಡಿಸೈನ್‌ಗಳನ್ನು ಸಿದ್ಧಪಡಿಸಿದ್ದೇವೆ. ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಇವುಗಳ ಪ್ರಯೋಗ ಕಾಲರ್, ಪಾಕೆಟ್, ಸೀರೆಯ ಬ್ಲೌಸ್ ಸ್ಲೀವ್‌ಗಳಲ್ಲೂ ಕಾಣಬಹುದು.
ಇತ್ತೀಚೆಗೆ ವರ್ಚುವಲ್ ಡಿಸೈನ್ ಹಾಗೂ ಬೋಟಿಕ್ ಕಾನ್ಸೆಪ್ಟ್ ಎಂಟ್ರಿಯಾಗಿದೆಯಲ್ಲ! ಇದು ಸ್ಮಾರ್ಟ್ ಫ್ಯಾಷನ್‌ಗೆ ನಾಂದಿ ಹಾಡುತ್ತಿದೆಯೇ!
ಖಂಡಿತ. ಮಿಲಾನ್, ಪ್ಯಾರೀಸ್ ಎಲ್ಲೆಡೆ ಇದು ಯಶಸ್ವಿಯಾಗಿದೆ. ಇದೀಗ ನಮ್ಮಲ್ಲೂ ಈ ವರ್ಚುವಲ್ ಡಿಸೈನಿಂಗ್ ಹಾಗೂ ಬೋಟಿಕ್ ಕಾನ್ಸೆಪ್ಟ್ ಎಂಟ್ರಿ ನೀಡಿದೆ. ಹೇಗೆ ವರ್ಚುವಲ್ ಪೇಮೆಂಟ್ ಯಶಸ್ವಿಯಾಗಿದೆಯೋ ಹಾಗೆಯೇ ಮುಂದೊಮ್ಮೆ ಇದು ಕೂಡ ಟ್ರೆಂಡಿಯಾಗುತ್ತದೆ. ಕೊಂಚ ಸಮಯ ಬೇಕಷ್ಟೆ!
ಉದ್ಯಾನನಗರಿ ಮುಂಬರುವ ಫ್ಯಾಷನ್ ಹಬ್ ಲಿಸ್ಟ್‌ನಲ್ಲಿ ಸೇರಲಿದೆ ಎಂಬುದರ ಬಗ್ಗೆ ಏನು ಹೇಳುತ್ತೀರಾ?
ಖುಷಿಯಾಗುತ್ತದೆ. ದೂರದ ಮುಂಬೈ, ಚೆನ್ನೈಗೆ ಫ್ಯಾಷನ್ ವಿದ್ಯಾರ್ಥಿಗಳು ಭವಿಷ್ಯ ಕಲ್ಪಿಸಿಕೊಳ್ಳಲು ಹೋಗುವ ಬದಲು ಇಲ್ಲಿಯೇ ತಮ್ಮ ಕೆರಿಯರ್ ರೂಪಿಸಿಕೊಳ್ಳಬಹುದಲ್ಲ ಎಂಬುದರ ಬಗ್ಗೆ ಯೋಚಿಸಿದಾಗ ಖುಷಿಯಾಗುತ್ತದೆ.
ನೀವು ವಿಶೇಷ ಚೇತನ ಹೆಣ್ಣುಮಗಳೊಬ್ಬಳನ್ನು ಡಿಸೈನರ್ ಮಾಡಿ ಸ್ವಾವಲಂಬಿಯಾಗಿಸಿರುವುದು ಸಾಕಷ್ಟು ಪ್ರಶಂಸೆಗೊಳಗಾಗಿದೆ...
ಸಾಮಾನ್ಯರು ಡಿಸೈನಿಂಗ್ ಕಲಿಯುವುದು ಕಷ್ಟವಲ್ಲ! ಆದರೆ, ಕಿವಿ ಕೇಳದ, ಮಾತನಾಡಲು ಬಾರದ ದೀಕ್ಷಿತಾ ಎಂಬ ಹೆಣ್ಣುಮಗಳೊಬ್ಬಳು ಕಲಿತು ತಾನೇ ಡಿಸೈನಿಂಗ್ ಆರಂಭಿಸಿರುವುದು ಖುಷಿ ತಂದಿದೆ. ಇಂತಹ ಮಹಿಳಾ ಸಬಲೀಕರಣ ಕಾರ್ಯಗಳು ಕ್ಷೇತ್ರದಲ್ಲಿನ ಉತ್ಸಾಹ ಹೆಚ್ಚಿಸುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Kids Fashion | ಥೀಮ್‌ಗೆ ತಕ್ಕಂತೆ ಬದಲಾಗುವ ಇಂದಿನ ಮಕ್ಕಳ ಫ್ಯಾಷನ್