ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಣ್ಣಬಣ್ಣದ ಬೀಡ್ಸ್ ಬ್ರೇಸ್ಲೆಟ್ಸ್ (Beads Bracelet Fashion) ಬೇಸಿಗೆಯ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಲಗ್ಗೆ ಇಟ್ಟಿವೆ. ಕೈಗಳಿಗೆ ಧರಿಸಿದಾಗ ಆಕರ್ಷಕವಾಗಿ ಕಾಣುವ ಇವು ಕ್ರಿಸ್ಟಲ್, ಜೆಮ್ ರಿಪ್ಲಿಕಾ ಬೀಡ್ಸ್‌ನೊಂದಿಗೆ ಸಮಾಗಮಗೊಂಡು ನಾನಾ ಡಿಸೈನ್‌ಗಳಲ್ಲಿ ದೊರೆಯುತ್ತಿವೆ. ವಯಸ್ಸಿನ ಭೇದವಿಲ್ಲದೇ ಹುಡುಗಿಯರ, ಯುವತಿಯರ ಹಾಗೂ ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ.
ಟ್ರೆಂಡಿಯಾದ ಬೀಡ್ಸ್ ಬ್ರೇಸ್ಲೆಟ್ಸ್
“ಬೇಸಿಗೆ ಫ್ಯಾಷನ್‌ನಲ್ಲಿ ಆಕ್ಸೆಸರೀಸ್‌ಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಯಾವುದೇ ತಲೆಬಿಸಿಯಿಲ್ಲದೇ ಆರಾಮವಾಗಿ ಧರಿಸಬಹುದಾದ ಇವು ನಾನಾ ಕಲರ್‌ನಲ್ಲಿ ಕಾಲಿಟ್ಟಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ಒಂದೊಂದು ಬಗೆಯಲ್ಲಿ ದೊರೆಯುತ್ತಿರುವುದು ಹಾಗೂ ಉಡುಪಿನ ಮ್ಯಾಚಿಂಗ್‌ಗೆ ತಕ್ಕಂತೆ ಸಿಗುತ್ತಿರುವುದು ಟ್ರೆಂಡಿಯಾಗಲು ಕಾರಣವಾಗಿದೆ. ಯಾವುದೇ ಜಂಜಾಟವಿಲ್ಲದೇ, ಸುಲಭವಾಗಿ ಎಲಾಸ್ಟಿಕ್‌ನಲ್ಲಿ ಮಾಡಲ್ಪಟ್ಟಿರುವ ಈ ಬಣ್ಣಬಣ್ಣದ ಬೀಡ್ಸ್‌ಗಳನ್ನು ಯಾರಾದರೂ ಸುಲಭವಾಗಿ ಕೈಗಳಿಗೆ ಧರಿಸಬಹುದು. ಈ ಸೀಸನ್‌ನ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಸದ್ಯಕ್ಕೆ ಟಾಪ್ ಫೈವ್ ಲಿಸ್ಟ್‌ನಲ್ಲಿವೆ” ಎನ್ನುತ್ತಾರೆ ಆಕ್ಸೆಸರೀಸ್ ಸ್ಟೈಲಿಸ್ಟ್ ರಾಗ. ಅವರ ಪ್ರಕಾರ, ಯಾವುದೇ ವಯಸ್ಸಿನವರು ಧರಿಸಬಹುದಾದ ಈ ಬೀಡ್ಸ್ ಬ್ರೇಸ್ಲೆಟ್‌ಗಳು ಎಥ್ನಿಕ್ ಉಡುಪುಗಳಿಗೆ ಮಾತ್ರವಲ್ಲ, ವೆಸ್ಟರ್ನ್ ಔಟ್‌ಫಿಟ್‌ಗಗೂ ಮ್ಯಾಚ್ ಆಗುತ್ತವೆ ಎನ್ನುತ್ತಾರೆ.
ಏನಿದು ಬೀಡ್ಸ್ ಬ್ರೇಸ್ಲೆಟ್ಸ್
ಬಣ್ಣ ಬಣ್ಣದ ಮಣಿಗಳಿಂದ ಮಾಡಲ್ಪಟ್ಟಿರುವ ಎಲಾಸ್ಟಿಕ್ ಇರುವಂತಹ ಬ್ರೇಸ್ಲೆಟ್‌ಗಳು. ಈ ಹಿಂದೆ ಇವು ಫ್ಯಾಷನ್‌ನಲ್ಲಿದ್ದಾಗ ಕೇವಲ ಕಾಲೇಜು ಹುಡುಗಿಯರು ಧರಿಸುತ್ತಿದ್ದರು. ಇಲ್ಲವೇ ಜಂಕ್ ಜ್ಯುವೆಲರಿ ಪ್ರೇಮಿಗಳು ಧರಿಸುತ್ತಿದ್ದರು. ಇದೀಗ ಇವು ನಾನಾ ಡಿಸೈನ್‌ಗಳಲ್ಲಿ ಅದರಲ್ಲೂ ಮಾನೋಕ್ರೋಮ್ ಹಾಗೂ ಮಿಕ್ಸ್ ಬೀಡ್ಸ್ ಶೇಡ್ಸ್‌ನಲ್ಲಿ ದೊರಕುತ್ತಿರುವುದು ಎಲ್ಲರೂ ಇಷ್ಟಪಡಲು ಕಾರಣವಾಗಿದೆ ಎನ್ನುತ್ತಾರೆ. ಗುಲಾಬಿ, ಲ್ಯಾವೆಂಡರ್, ತಿಳಿ ಕೆಂಪು, ಯೆಲ್ಲೋ, ಪಿಸ್ತಾ ಶೇಡ್, ಪೀಚ್, ಕೇಸರಿ, ಸಿಲ್ವರ್, ಗೋಲ್ಡ್ ಹೀಗೆ ಲೆಕ್ಕವಿಲ್ಲದಷ್ಟು ಕಲರ್‌ನಲ್ಲಿ ಇವು ದೊರಕುತ್ತಿವೆ. ಇವುಗಳ ಅಂಚಿನಲ್ಲಿ ನೇತಾಡುವ ಕಾಮಿಕ್ ಅಥವಾ ಕ್ರೌನ್‌ನಂತಹ ಮಿನಿ ಆಕ್ಸೆಸರೀಸ್‌ಗಳನ್ನು ಜೋಡಣೆ ಮಾಡಿರುವುದು ಹಾಗೂ ಮಿನುಗುವ ಕ್ರಿಸ್ಟಲ್ ಜೋಡಿಸಿರುವುದು ಈ ಬ್ರೇಸ್ಲೆಟ್‌ಗಳ ಸೌಂದರ್ಯಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕಾಲೇಜಿನ ಹುಡುಗಿಯರಾದ ರಾಶಿ ಹಾಗೂ ರಿಚಾ.
ಬೀಡ್ಸ್ ಬ್ರೇಸ್ಲೆಟ್ ಡಿಟೇಲ್ಸ್
- • ಸಿಂಪಲ್ ಆಗಿರುವಂತಹವು 50 ರೂ.ಗಳಿಗೆ ದೊರಕುತ್ತವೆ.
- • ಕೊಂಚ ಡಿಸೈನ್ ಇರುವಂತವು 100 ರೂ. ಗಳಿಗೆ ಲಭ್ಯ.
- • ಮಾನೋಕ್ರೋಮ್ ಶೇಡ್ನವು ಔಟ್ಫಿಟ್ಗೆ ಮ್ಯಾಚ್ ಮಾಡಬಹುದು.
- • ಬಿಂದಾಸ್ ಲುಕ್ಗೆ ಮೂರಕ್ಕಿಂತ ಹೆಚ್ಚನ್ನು ಒಂದೇ ಕೈಗಳಿಗೆ ಧರಿಸಬಹುದು.
- • ನೀರಿನಲ್ಲಿ ಅದ್ದಬೇಡಿ, ಬಣ್ಣ ಮಾಸಬಹುದು.
- • ತೆಗೆಯುವುದು ಹಾಕುವುದು ಅತಿ ಸುಲಭ.
- • ಶೈನಿಂಗ್ ಲೈಟ್ ಶೇಡ್ಸ್ನವು ಅತಿ ಹೆಚ್ಚು ಟ್ರೆಂಡ್ನಲ್ಲಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)