-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಐಶ್ವರ್ಯ ರೈ ಕಂಗಳಂತೆ ನನ್ನ ಕಣ್ಣುಗಳು ಹೊಳೆಯಬೇಕು! ಹಾಲಿವುಡ್ ತಾರೆಯರ ಅತ್ಯಾಕರ್ಷಕವಾದ ಬೆಕ್ಕಿನ ಕಂಗಳು ನನ್ನದಾಗಬೇಕು! ಎಂದೆಲ್ಲಾ ಬಯಸುವ ಯುವತಿಯರು ಇತ್ತೀಚೆಗೆ ಕಂಗಳ ಸೌಂದರ್ಯಕ್ಕಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದು ಮೊದಲಿಗಿಂತ ಹೆಚ್ಚಾಗಿದೆ. ಬ್ಯೂಟಿ ಅಕಾಡೆಮಿಯ ಸಮೀಕ್ಷೆಯೊಂದರ ಪ್ರಕಾರ, ಮೊದಲಿನಂತೆ ಕೇವಲ ಸಿನಿಮಾ, ಮಾಡೆಲಿಂಗ್ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸಾಮಾನ್ಯ ಹುಡುಗಿಯರು ಅತಿ ಸುಲಭವಾಗಿ ಆನ್‌ಲೈನ್ ಮಾರುಕಟ್ಟೆಯಲ್ಲಿ, ಲಭ್ಯವಿರುವ ಕಾಂಟ್ಯಾಕ್ಟ್ ಲೆನ್ಸ್ ಕೊಂಡು ಬಳಸುವುದು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು, ಮದುವೆ ಹಾಗೂ ಫೋಟೋಶೂಟ್‌ಗಳಲ್ಲಿ, ಯುವತಿಯರು ತಮ್ಮ ವಿಶೇಷ ಲುಕ್‌ಗಾಗಿ ವೆರೈಟಿ ಕಾಂಟಕ್ಟ್ ಲೆನ್ಸ್ ಧರಿಸುತ್ತಾರಂತೆ.
ಸಿನಿಮಾ ನಟಿ ಜಾಸ್ಮಿನ್ ಬಾಸಿನ್ ಧರಿಸಿದ ಕಾಂಟ್ಯಾಕ್ಟ್ ಲೆನ್ಸ್‌ನಿಂದ ಆಗಿರುವ ಅನಾಹುತ ಇದೀಗ ಎಲ್ಲರಿಗೂ ಗೊತ್ತೇ ಇದೆ. ಹಾಗೆಂದು ಲೆನ್ಸ್ ಧರಿಸಲೇ ಬಾರದು ಎಂದಲ್ಲ! ಸೂಕ್ತ ಕಾರಣವಿಲ್ಲದೇ, ಪದೇ ಪದೇ ಧರಿಸುವುದು ಕಣ್ಣಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ! ಎನ್ನುತ್ತಾರೆ ಕಣ್ಣಿನ ಚಿಕಿತ್ಸಕರು. ಲೆನ್ಸ್ ಧರಿಸಲೇ ಬೇಕಿದ್ದವರು ಈ ಬಗ್ಗೆ ಒಂದಿಷ್ಟು ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಹೊಂದಿರವುದು ಅಗತ್ಯ ಎನ್ನುತ್ತಾರೆ. ಈ ಕುರಿತಂತೆ ಇಲ್ಲಿದೆ (Contact Lens Awareness) ಸಿಂಪಲ್ ಟಿಪ್ಸ್.
ಕಣ್ಣಿನ ವೈದ್ಯರ ಸಲಹೆಯಿಲ್ಲದೇ ಬಳಸಬೇಡಿ
ಕಣ್ಣಿನ ವೈದ್ಯರ ಸಲಹೆ ಮೇರೆಗೆ ಬಳಸಿ. ಕೆಲವರು ಕನ್ನಡಕದ ಬದಲು ಬಳಸುತ್ತಾರೆ. ಇದು ಅತ್ಯಗತ್ಯ. ಕಾರಣವಿಲ್ಲದೇ ಬಳಸುವವರು ಹಾಕುವ ವಿಧಾನದಿಂದ ಹಿಡಿದು ಲೆನ್ಸ್ ಸ್ವಚ್ಚತೆ ಕಾಪಾಡುವ ಬಗ್ಗೆಯೂ ತಿಳಿದುಕೊಂಡಿರಬೇಕು.
ಶೋಕಿಗಾಗಿ ಲೆನ್ಸ್ ಬಳಕೆ ಬೇಡ!
ಕೇವಲ ಶೋಕಿಗಾಗಿ ಕಣ್ಣಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಪದೇ ಪದೇ ಕಾಂಟಕ್ಟ್ ಲೆನ್ಸ್ ಬಳಸುತ್ತಿದ್ದಲ್ಲಿ ಆದಷ್ಟೂ ಕಡಿಮೆಗೊಳಿಸಿ. ಇಲ್ಲವೇ ತ್ಯಜಿಸಿ. ಅಭ್ಯಾಸ ಬರಬರುತ್ತಾ ಅಡಿಕ್ಷನ್ ಆದರೂ ಆಗಬಹುದು. ಒಬ್ಬರು ಧರಿಸಿದ್ದನ್ನೂ ಮತ್ತೊಬ್ಬರು ಬಳಸಲೇಕೂಡದು ಎಂಬುದು ನೆನಪಿರಲಿ!
ಪ್ರೊಫೆಷನ್‌ಗೆ ಅಗತ್ಯವಿದ್ದಲ್ಲಿ ಬಳಸಿ
ಸಿನಿಮಾ, ಮಾಡೆಲಿಂಗ್‌ನಂತಹ ಕ್ಷೇತ್ರದಲ್ಲಿ ಕಾಂಟಕ್ಟ್ ಲೆನ್ಸ್ ಧರಿಸುವುದು ಸಾಮಾನ್ಯ. ಹೆವಿ ಐ ಮೇಕಪ್ ಹಾಕಿ, ಧರಿಸಿದಾಗ ಕಿರಿಕಿರಿ ಉಂಟಾದಲ್ಲಿ ಲೆನ್ಸ್ ಕಳಚಿಡಿ. ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜದಿರಿ.
ಲೆನ್ಸ್ ಧರಿಸಿ ಮಲಗಬೇಡಿ
ಯಾವುದೇ ಕಾರಣಕ್ಕೂ ಲೆನ್ಸ್ ಧರಿಸಿ ಮರೆತು ಮಲಗಬೇಡಿ. ಸಾವಧಾನವಾಗಿ ತೆಗೆದು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದಲ್ಲಿ, ಇದು ಕಣ್ಣಿನ ಕಾರ್ನಿಯಾ ಡ್ಯಾಮೇಜ್ ಮಾಡಬಹುದು.
ಆನ್‌ಲೈನ್ ಲೆನ್ಸ್ ಶಾಪಿಂಗ್ ಬಗ್ಗೆ ಎಚ್ಚರ
ಇತ್ತೀಚೆಗೆ ಸಾಕಷ್ಟು ಮಂದಿ ಆನ್‌ಲೈನ್‌ನಲ್ಲೆ ಖರೀದಿಸುವುದು ಹೆಚ್ಚಾಗಿದೆ. ಗುಣಮಟ್ಟದ ಬ್ರಾಂಡೆಡ್ ಲೆನ್ಸ್ ಮಾತ್ರ ಖರೀದಿ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)