-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್ ಫ್ಯಾಷನ್! (Dogs Monsoon Fashion) ಅರರೆ., ಇದೇನಿದು ಶ್ವಾನಗಳಿಗೂ ಮಳೆಗಾಲದ ಫ್ಯಾಷನ್ ಎಂದು ಹುಬ್ಬೇರಿಸಬಹುದು. ಹೌದು, ಇದೀಗ ಶ್ವಾನಗಳ ಮಾನ್ಸೂನ್ ಡ್ರೆಸ್ ಹಾಗೂ ರೈನ್‌ಕೋಟ್, ಮತ್ತಿತರೇ ಆಕ್ಸೆಸರೀಸ್ ಪೆಟ್ ಲೋಕದಲ್ಲಿ ಕಾಲಿಟ್ಟಿವೆ. ಆಯಾ ಜಾತಿಯ ಮುದ್ದು ಶ್ವಾನಗಳಿಗೆ ಹೊಂದುವಂತಹ, ನಾನಾ ವೆರೈಟಿ ಮಾನ್ಸೂನ್ ಡ್ರೆಸ್‌ಗಳು ಹಾಗೂ ವಾಟರ್‌ಪ್ರೂಫ್ ರೈನ್‌ಕೋಟ್‌ಗಳು ನಾಯಿಮರಿಗಳನ್ನು ಅಲಂಕರಿಸುತ್ತಿವೆ.
ಮುದ್ದು ಶ್ವಾನಗಳಿಗೂ ಮಾನ್ಸೂನ್ ಫ್ಯಾಷನ್
“ಇಂದು ಕಾಲ ಬದಲಾಗಿದೆ. ಮನೆಯಲ್ಲಿ ಮುದ್ದು ಶ್ವಾನಗಳಿಗೂ ಮಕ್ಕಳ ಸ್ಥಾನ ಮಾನ ದೊರಕಿದೆ. ಪ್ರತಿಯೊಬ್ಬರು ಅವರು ಸಾಕಿದ ನಾಯಿಮರಿಗಳನ್ನು ಯಾವ ಮಟ್ಟಿಗೆ ಇಷ್ಟ ಪಡುತ್ತಾರೆಂದರೇ, ಅವಕ್ಕೆ ಇತ್ತೀಚೆಗೆ ನಾನಾ ಬಗೆಯಲ್ಲಿ ಸ್ಟೈಲಿಂಗ್ ಕೂಡ ಮಾಡುತ್ತಾರೆ. ಇನ್ನು, ಹಿರಿಯರು ಕಿರಿಯರೆನ್ನದೇ ಎಲ್ಲರೂ ವಾಕಿಂಗ್ ಹಾಗೂ ಜಾಕಿಂಗ್ ಸಮಯದಲ್ಲೂ ಶ್ವಾನಗಳನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಪೆಟ್ ಲೋಕದಲ್ಲೂ ನಾನಾ ಬಗೆಯ ಆಕ್ಸೆಸರೀಸ್‌ಗಳು ಹಾಗೂ ಉಡುಗೆಗಳು ಬಂದಿವೆ. ಆಯಾ ಸೀಸನ್‌ಗೆ ಮ್ಯಾಚ್ ಆಗುವಂತೆ ದೊರಕುತ್ತಿವೆ. ಅವುಗಳಲ್ಲಿ ಇದೀಗ ಮಾನ್ಸೂನ್ ಸೀಸನ್‌ಗೆ ಹೊಂದುವಂತಹ ಫ್ಯಾಷನ್ ಉಡುಗೆ ಹಾಗೂ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ” ಎನ್ನುತ್ತಾರೆ ಪೆಟ್ ಸ್ಪಾನ ಸ್ಟೈಲಿಂಗ್ ಎಕ್ಸ್‌ಫರ್ಟ್ ಜಾಕಿ. ಅವರ ಪ್ರಕಾರ, ಶ್ವಾನಗಳು ಇದೀಗ ಸ್ಟೈಲಿಶ್ ಆಗಿ ಕಾಣಿಸಲು ಈ ಆಕ್ಸೆಸರೀಸ್‌ಗಳು ಸಹಕರಿಸುತ್ತಿವೆಯಂತೆ.
ಮಾನ್ಸೂನ್‌ಗೆ ಮ್ಯಾಚಿಂಗ್
ಶ್ವಾನಗಳಿಗೆ ಬಂದಿರುವ ಕಲರ್‌ಫುಲ್ ಉಡುಗೆ ಹಾಗೂ ರೈನ್‌ಕೋಟ್ ಮತ್ತು ಅವುಗಳ ಕಾಲಿನ ಪಾದಗಳಿಗೆ ಹಾಕಬಹುದಾದ ಪೆಟ್ ವೆಲ್ಲೈಸ್, ರೈನ್ ಬೂಟ್ಸ್ ಹಾಗೂ ಟವೆಲ್ ಮತ್ತು ವೈಪ್ಸ್ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ಕಲರ್‌ಫುಲ್ ಡಾಗ್ಗಿ ರೈನ್ ಕೋಟ್ಸ್
ಪಿರಿ ಪಿರಿ ಸಣ್ಣ ಮಳೆಯಲ್ಲೂ ಡಾಗ್ಗಿಯಿಲ್ಲದೇ ವಾಕ್ ಮಾಡಲಾಗುವುದಿಲ್ಲ ಎನ್ನುವ ಶ್ವಾನಗಳ ಪೋಷಕರು, ಈ ಮಾನ್ಸೂನ್ ಡಾಗ್ ರೈನ್‌ಕೋಟ್ಸ್‌ಗಳ ಖರೀದಿ ಮಾಡತೊಡಗಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಸಿಂಥಟಿಕ್, ಪಾಲಿಸ್ಟರ್ ಸೇರಿದಂತೆ ವಾಟರ್ ಪ್ರೂಫ್ ಫ್ಯಾಬ್ರಿಕ್‌ನಲ್ಲಿ ಇವು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ.
ಪೆಟ್ಸ್ ರೈನ್ ಬೂಟ್ಸ್
ನಾಯಿ ಮರಿಗಳಿಗೆ ರಸ್ತೆಯ ಹಾಗೂ ನೆಲದ ಕೊಚ್ಚೆ, ಕೆಸರು ಹತ್ತದಂತೆ ಕಾಪಾಡಬಹುದಾದ ಪುಟ್ಟ ಪುಟ್ಟ ರೈನ್ ಬೂಟ್ಸ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಪೆಟ್ ಶಾಪ್‌ಗಳಿಗೆ ಬಂದಿವೆ. ಇನ್ನು, ಡಾಗ್ ಟವೆಲ್ಸ್ ಹಾಗೂ ವೈಪ್ಸ್ ಸೇರಿದಂತೆ, ಬೋ ಹಾಗೂ ಬೆಲ್ಟ್‌ಗಳು ಕೂಡ ಪೆಟ್ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion 2024: ಮಾನ್ಸೂನ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಡ್ರೆಸ್ ಕೋಡ್ಸ್